ಮೈಸೂರು ದಸರಾ: ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ, ಚಾಮುಂಡಿ ಬೆಟ್ಟದಲ್ಲಿ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮತ್ತೊಂದೆಡೆ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ದಸರಾ ಸಡಗರ ನಡೆಯಲಿದ್ದು, ವಿವಿಧ ಸಾಂಪ್ರದಾಯಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.

ಮೈಸೂರು, ಅಕ್ಟೋಬರ್ 11: ಬೆಳಗ್ಗೆ 11.50ರಿಂದ 12.13ರ ನಡುವಿನ ಶುಭ ಧನುರ್ ಲಗ್ನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರನ್ನು ಚಾಮುಂಡಿಬೆಟ್ಟದಲ್ಲಿ ಗವಿಮಠದ ಸಿದ್ದೇಶ್ವರಶ್ರೀಗಳು ಇಂದು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಪರಮೇಶ್ವರ್, ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕ ಜಿ.ಟಿ.ದೇವೇಗೌಡ , ನೂರಾರು ಮಠಾಧೀಶರು, ಧರ್ಮಗುರುಗಳು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಮಧ್ಯಾಹ್ನದ ಬಳಿಕ ದರ್ಶನಕ್ಕೆ ಅವಕಾಶ ಇರಲಿದೆ.
ಪುಷ್ಪಾರ್ಚನೆ ಮೂಲಕ ಸಿಗಲಿದೆ ದಸರಾಗೆ ಚಾಲನೆ
ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಹಿನ್ನಲೆ, ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಅಂತಿಮಗೊಂಡಿದ್ದು, ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂರ್ಜಾ ಕಾರ್ಯಗಳು ನಡೆದಿವೆ. ಚಾಮುಂಡೇಶ್ವರಿಯ ಮಹಿಷಾಸುರ ಮರ್ಧಿನಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಬೆಳ್ಳಿ ಪಲ್ಲಕ್ಕಿಯಲ್ಲಿರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಗಣ್ಯರು ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ: ದಸರಾ ಮಹೋತ್ಸವ: ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ಸಡಗರ; ಈ ಬಾರಿಯ ವಿಶೇಷತೆಗಳೇನು?
ಅರಮನೆಯಲ್ಲಿ ರಾಜಪರಂಪರೆಯ ದಸರಾ ಸಡಗರ
ಮತ್ತೊಂದೆಡೆ ಮೈಸೂರು ಅರಮನೆಯಲ್ಲಿ ರಾಜಪರಂಪರೆಯ ದಸರಾ ಸಡಗರ ನಡೆಯಲಿದ್ದು, ಬೆಳಗ್ಗೆ 6 ಗಂಟೆಯಿಂದ 7.12 ಗಂಟೆ ಸಮಯದಲ್ಲಿ ರತ್ನಾಖಚಿತ ಸಿಂಹಾಸನಕ್ಕೆ ಸಿಂಹ ಮುಖ ಜೋಡಣೆ ನಡೆಯಲಿದೆ. 8.35 ರಿಂದ 9.05 ನಡುವೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣ ಧಾರಣೆ ನೆರವೇರಲಿದ್ದು, 11.45 ರಿಂದ 12.05 ರ ಶುಭ ಲಗ್ನದಲ್ಲಿ ಸಿಂಹಾಸನಾರೋಹಣ ನಡೆಯಲಿದೆ. ಬಳಿಕ ಪ್ರಮುಖ ದೇವಾಲಯಗಳಿಂದ ಬಂದ ತೀರ್ಥ ಪ್ರಸಾದ ಸ್ವೀಕಾರ ನಡೆದು, ಮಧ್ಯಾಹ್ನ 1.40 ಗಂಟೆಯಿಂದ 2.05 ವರೆಗೆ ಚಾಮುಂಡಿ ತಾಯಿಯನ್ನು ಚಾಮುಂಡೇಶ್ವರಿ ತೊಟ್ಟಿಯಿಂದ ಕನಕ ತೊಟ್ಟಿಗೆ ತಂದು ನವರಾತ್ರಿ ಪೂಜೆ ನೆರವೇರಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Sun, 11 October 26




