ನನ್ನ ಕಾಲದಲ್ಲಿ ಪರ್ಸೆಂಟೇಜ್ ವಿಷಯವೇ ಇರಲಿಲ್ಲ: ದೇವೇಗೌಡ
ದೇವೇಗೌಡರ ಕಾಲದಲ್ಲಿ ಪರ್ಸೆಂಟೇಜ್ ವಿಷಯವೇ ಇರಲಿಲ್ಲ ಎಂದ ಅವರು, ನಿಮಗೆ ಅನುಮಾನವಿದ್ದರೆ ಯಾರನ್ನು ಬೇಕಾದರೂ ಕೇಳಿ ಎಂದರು
ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಪರ್ಸೆಂಟೇಜ್ ವಿಚಾರದ ಬಗ್ಗೆ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಬುಧವಾರ ನಗರದಲ್ಲಿ ಪ್ರತಿಕ್ರಿಯಿಸಿದರು. ದೇವೇಗೌಡರ ಕಾಲದಲ್ಲಿ ಪರ್ಸೆಂಟೇಜ್ ವಿಷಯವೇ ಇರಲಿಲ್ಲ ಎಂದ ಅವರು, ನಿಮಗೆ ಅನುಮಾನವಿದ್ದರೆ ಯಾರನ್ನು ಬೇಕಾದರೂ ಕೇಳಿ ಎಂದರು. ಯಾರ ಕಾಲದಲ್ಲಿ ಎಷ್ಟು ಪರ್ಸೆಂಟೇಜ್ ಇತ್ತು? ಯಾವ ಕಾಲದಲ್ಲಿ ಪರ್ಸೆಂಟೇಜ್ ಹೆಚ್ಚಾಯ್ತು ಎಂಬ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಾವ್ಯಾವ ನೀರಾವರಿ ಮಂತ್ರಿಗಳ ಅವಧಿಯಲ್ಲಿ ಏನೇನು ಆಯ್ತು ಎಂಬುದೂ ನನಗೆ ಬೇಡ. ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ, ಯಾವುದೇ ಅಧಿಕಾರಿಯನ್ನು ಕೇಳಿನೋಡಿ, ನಂತರವೇ ನಂಬಿ ಎಂದು ನುಡಿದರು. ಬೇರೆಯವರ ಭ್ರಷ್ಟಾಚಾರದ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರ ಕುರಿತು ಸಲಿಂ ಹಾಗೂ ಉಗ್ರಪ್ಪ ನಡುವಿನ ಮಾತುಕತೆ ವಿಚಾರಕ್ಕೆ ದೇವೇಗೌಡರು ಹೀಗೆ ಪ್ರತಿಕ್ರಿಯಿಸಿದರು.
JDS ಮುಗಿಸಲು 2 ರಾಷ್ಟ್ರೀಯ ಪಕ್ಷಗಳು ಪ್ರಯತ್ನ ಪಟ್ಟವು. ಆದರೆ ಯಾರಿಂದಲೂ ಸಾಧ್ಯವಾಗಲಿಲ್ಲ. ಪ್ರಾದೇಶಿಕ ಪಕ್ಷವನ್ನು ಮುಗಿಸಲು 2 ಪಕ್ಷಗಳು ಪ್ರಯತ್ನಿಸುತ್ತಿವೆ. 2023ರ ಚುನಾವಣೆಗೆ ನಾನು ಇಡೀ ರಾಜ್ಯವನ್ನು ಸುತ್ತುತ್ತೇನೆ. ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ. ಯಾವ ಪಕ್ಷದ ಜೊತೆಗೂ ಚುನಾವಣೆಯಲ್ಲಿ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಎಚ್ಡಿಕೆ ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಧ್ಯಮಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಎಚ್.ಡಿ.ಕುಮಾರಸ್ವಾಮಿ, ನಿಮ್ಮ ರಾಜಕಾರಣ ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ನವರ ಮನೆಗೆ ಬೆಂಕಿ ಇಡೋದೆ ಸಿದ್ದರಾಮಯ್ಯ ಎಂದು ದೂರಿದರು. ಮೈತ್ರಿ ಸರ್ಕಾರದ ನಂತರ ಹೋಟೆಲ್ನಲ್ಲಿ ಯಾರಿಗೂ ಸಿಗದೆ ಇದ್ದೆ ಎಂದರು. ನಾನು ಮಜಾ ಮಾಡಿಕೊಂಡು ಇರಲಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೂ ಕೃಷ್ಣದಲ್ಲಿದ್ದು ಕೆಲಸ ಮಾಡಿದ್ದೇನೆ. ಸಹಿ ಮಾಡಲು ಇಸ್ಪೀಟ್ ಕಾರ್ಡ್ ರೀತಿ ಪತ್ರಗಳನ್ನು ಕಾಂಗ್ರೆಸ್ ಶಾಸಕರು ಬಿಸಾಡುತ್ತಿದ್ದರು. ಅದೆಲ್ಲಾ ಮರೆತು ಹೋಯಿತೆ? ಮಾತಿನ ಮೇಲೆ ನಿಗಾ ಇರಬೇಕು ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾಗ ನಾನು ಸರ್ಕಾರ ಬೀಳ್ತಿದೆ ಎಂದು ಕರೆ ಮಾಡಿದ್ದೆ ಎಂದಿದ್ದರು. ಅಂದು ಪರಮೇಶ್ವರ್ ಗೆ ಕರೆ ಮಾಡಿದ್ರೆ ಏನು ಸಮಸ್ಯೆ ಇಲ್ಲ ಅಂದ್ರು. ಸರ್ಕಾರ ತೆಗೆಯೋ ನಿಮ್ಮ ಯೋಚನೆ ನನಗೆ ಗೊತ್ತಿತ್ತು. ನನಗೂ ಈ ಸರ್ಕಾರ ಮುಂದುವರೆಸೊ ಆಸಕ್ತಿ ಇರಲಿಲ್ಲ. ಸರ್ಕಾರ ತೆಗೆಯಲು ಸಿದ್ದವನದಲ್ಲಿ ಸಂಚು ಮಾಡಿದ್ರಿ. ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು ಎಂಟಿಬಿ. ಹಾಗಿದ್ರು ಅವರು ಯಾಕೆ ಹೋದ್ರು. ನಿಮ್ಮ ಮನೆಯಿಂದಲೇ ಹೋಗಿದ್ದಲ್ವಾ ಎಂದು ಪ್ರಶ್ನಿಸಿದರು.