ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್
ರಾಯಚೂರಿನ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಜಮೀನಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಉದ್ಯೋಗದ ನೆಪದಲ್ಲಿ ಮಹಿಳೆಯರನ್ನು ದಂಧೆಗೆ ತಳ್ಳುತ್ತಿದ್ದ ಕಿಂಗ್‌ಪಿನ್ ತಾಯಪ್ಪ ಸೇರಿ 11 ಮಂದಿಯನ್ನು ಬಂಧಿಸಿ, ಇಬ್ಬರು ಸಂತ್ರಸ್ತೆಯರನ್ನು ರಕ್ಷಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ರಾಯಚೂರು, ಏಪ್ರಿಲ್ 28: ಉದ್ಯೋಗ ನೀಡುವ ನೆಪದಲ್ಲಿ ನಿರುದ್ಯೋಗಿ ಮಹಿಳೆಯರನ್ನು ದಂಧೆಗೆ ಇಳಿಸುತ್ತಿದ್ದ ಜಾಲವನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೊಲೀಸರು ಭೇದಿಸಿದ್ದಾರೆ. ಹಿರೇಕೊಟ್ನೆಕಲ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ (Prostitution) ದಂಧೆಯ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕಿಂಗ್‌ಪಿನ್ ತಾಯಪ್ಪ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಸ್ಟರ್ ಮೈಂಡ್ ತಾಯಪ್ಪ!
ಮಾನ್ವಿ ಪಟ್ಟಣದ ಇಂದಿರಾನಗರದ ನಿವಾಸಿಯಾದ ತಾಯಪ್ಪ ಈ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದು, ಆಂಧ್ರಪ್ರದೇಶ, ತೆಲಂಗಾಣ, ಬೆಳಗಾವಿ ಹಾಗೂ ಮಹಾರಾಷ್ಟ್ರದ ನಿರುದ್ಯೋಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ. ಅವರಿಗೆ ಉತ್ತಮ ಕೆಲಸ ಕೊಡಿಸುವುದಾಗಿ ನಂಬಿಸಿ ಕರೆತಂದು, ನಂತರ ಬಲವಂತವಾಗಿ ದಂಧೆಗೆ ತಳ್ಳುತ್ತಿದ್ದ ಎನ್ನಲಾಗಿದೆ. ಹಿರೇಕೊಟ್ನೆಕಲ್ ಗ್ರಾಮದ ಹೊರವಲಯದ ಜಮೀನುಗಳನ್ನು ಈ ಅಕ್ರಮ ಚಟುವಟಿಕೆಗೆ ಅಡ್ಡೆಯನ್ನಾಗಿ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ ಮನೆ, ಸ್ಪಾಗಳಲ್ಲಿ ವೇಶ್ಯಾವಾಟಿಕೆ: ನಾಲ್ವರು ಆರೋಪಿಗಳ ಬಂಧನ, 6 ಮಹಿಳೆಯರ ರಕ್ಷಣೆ
ಆರೋಪಿಗಳು ಸೆರೆ
ವಿಷಯ ತಿಳಿದ ಮಾನ್ವಿ ಪೊಲೀಸರು ಜಮೀನಿನ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಕಿಂಗ್‌ಪಿನ್ ತಾಯಪ್ಪ, ಅಮರೇಶ್, ಹುಸೇನಪ್ಪ, ಪ್ರಕಾಶ್, ಆದೇಶ್, ವಿಜಯಕುಮಾರ್, ಶರಣಬಸವ ಹಾಗೂ ಮಲ್ಲಿಕಾರ್ಜುನ ಸೇರಿದಂತೆ 11 ಮಂದಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



