ಶಿವಮೊಗ್ಗ ಮೆಗ್ಗಾನ್ ವೈದ್ಯರ ಯಡವಟ್ಟು, ಆಕ್ಸಿಜನ್ ಸಿಗದೇ ರೋಗಿ ಸಾವು, ಮದುವೆಯಾಗಿ ಎರಡೇ ವರ್ಷಕ್ಕೆ ವಿಧಿವಶ
ಮೆಗ್ಗಾನ್ ಜಿಲ್ಲಾಸ್ಪತ್ರೆ ಅಂದ್ರೆ ಅದು ನಾಲ್ಕೈದು ಜಿಲ್ಲೆಯ ರೋಗಿಗಳ ಪಾಲಿನ ಸಂಜೀವಿನಿಯಾಗಿದೆ. ಬಡ ರೋಗಿಗಳು ಇಲ್ಲಿ ಜೀವ ಉಳಿಸಿಕೊಳ್ಳುವುದಕ್ಕಾಗಿ ದಾಖಲು ಆಗುತ್ತಾರೆ. ಆದ್ರೆ ಇದೇ ಹೈಟೆಕ್ ಆಸ್ಪತ್ರೆಯಲ್ಲಿ ರೋಗಿಗೆ ಸೂಕ್ತ ಸಮದಯಲ್ಲಿ ಆಕ್ಸಿಜನ್ ಪೂರೈಸದ ಹಿನ್ನೆಲೆಯಲ್ಲಿ 37 ವರ್ಷದ ರೋಗಿ ಮೃತಪಟ್ಟಿದ್ದಾನೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಆಡಳಿತ ವರ್ಗವು ಯಾರೆಲ್ಲಾ ರೋಗಿಯ ಸಾವಿಗೆ ಕಾರಣವಾಗಿದ್ದಾರೋ ಅವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ (Shivamogga McGANN hospital) ದಾಖಲಾಗಿದ್ದ ರೋಗಿಯು ವೈದ್ಯರ ನಿರ್ಲಕ್ಷ್ಯಕ್ಕೆ (doctor negligence) ಬಲಿಯಾಗಿದ್ದಾನೆ. ಸರಕಾರಿ ಅಸ್ಪತ್ರೆ ಅಂದ್ರೆ ಹೀಂಗೆ ಎನ್ನುವುದನ್ನು ಮತ್ತೊಮ್ಮೆ ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಾಬೀತು ಪಡಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳುತ್ತಿದ್ದ 37 ವರ್ಷ ರೋಗಿಯು ಆಕ್ಸಿಜನ್ ಸಿಗದೇ (Oxygen) ಮೃತಪಟ್ಟಿದ್ಧಾನೆ.. ಏನಿದು ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಯಡವಟ್ಟು (patient death) ಅಂತೀರಾ ಈ ಸ್ಟೋರಿ ನೋಡಿ..
ಶಿವಮೊಗ್ಗದ ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ. ಮೊನ್ನೆ ಬುಧವಾರ ಮಧ್ಯಾಹ್ನ ಭದ್ರಾವತಿ ತಾಲೂಕಿನ ಮಾರಶೆಟ್ಟಿಕೊಪ್ಪ ಗ್ರಾಮದ 37 ವರ್ಷದ ನಾಗರಾಜ್ ಉಸಿರಾಟ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲು ಆಗಿದ್ದರು. ಇಂದು ಬೆಳಗ್ಗೆ ವಾರ್ಡ್ ನಿಂದ ಸ್ಕ್ಯಾನಿಂಗ್ ಮಾಡಲು ನಾಗರಾಜ್ ನನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿದೆ. ಆತನ ಉಸಿರಾಟಕ್ಕೆ ತೊಂದರೆಯಾಗಿದೆ. ಈ ನಡುವೆ ಆತನಿಗೆ ಆಕ್ಸಿಜನ್ ಅಗತ್ಯವಿತ್ತು. ಆದ್ರೆ ಆ ಸಮಯದಲ್ಲಿ ಆತನಿಗೆ ಆಕ್ಸಿಜನ್ ಪೂರೈಕೆಯಾಗಿಲ್ಲ.
ಈ ನಡುವೆ ಮತ್ತೆ ರೋಗಿಯನ್ನು ವಾರ್ಡ್ ಗೆ ಕರೆದುಕೊಂಡು ಹೋಗಿ ಆಕ್ಸಿಜನ್ ವ್ಯವಸ್ಥೆ ಮಾಡಿ ನಂತರ ಸ್ಕ್ಯಾನಿಂಗ್ ಕರೆದುಕೊಂಡು ಹೋಗಿದ್ದಾರೆ. ಆಗ ಆತನ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಆತ ಮೃತಪಟ್ಟಿದ್ದಾನೆ. ಮೊದಲೇ ಆತನಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗದೇ ವೈದ್ಯರು ಮತ್ತು ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ.
Also Read: Daily Horoscope – ನಿಮ್ಮ ನಿಷ್ಕಾಳಜಿಯು ಅನೇಕ ವೈಷಮ್ಯಕ್ಕೆ ಕಾರಣವಾಗುವುದು
ಇವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ರೋಗಿ ನಾಗರಾಜ್ ಮೃತಪಟ್ಟಿದ್ದಾನೆ ಎನ್ನುವುದು ಕುಟುಂಬಸ್ಥರ ಆರೋಪವಾಗಿದೆ. ಉಸಿರಾಟ ಸಮಸ್ಯೆಯೆಂದು ಆಸ್ಪತ್ರೆಗೆ ದಾಖಲು ಆಗಿ ಒಂದೇ ದಿನದಲ್ಲಿ 37 ವರ್ಷದ ವ್ಯಕ್ತಿಯು ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ನಾಗರಾಜ್ ಗೆ ಮದುವೆಯಾಗಿ ಕೇವಲ ಎರಡು ವರ್ಷ ಆಗಿತ್ತು. ಟೇಲರಿಂಗ್ ಕೆಲಸ ಮಾಡಿಕೊಂಡು ಉಪಜೀವನ ಮಾಡಿಕೊಂಡಿದ್ದ ನಾಗರಾಜ್. ಈ ನಡುವೆ ನಿನ್ನೆ ಬೆಳಗ್ಗೆಯಿಂದ ಉಸಿರಾಟದ ಸಮಸ್ಯೆ ಶುರುವಾಗಿದೆ. ಕೆಮ್ಮು ಮತ್ತು ಕಫದಿಂದ ನಾಗರಾಜ್ ಬಳಲುತ್ತಿದ್ದನು. ಈ ಹಿನ್ನೆಲೆಯಲ್ಲಿ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ವೈದ್ಯರು ನೋಡಿ ಒಂದಿಷ್ಟು ಮಾತ್ರ ಔಷಧಿ ಇಂಜೆಕ್ಷನ್ ನೀಡಿದ್ದರು.
ಕೆಲ ಹೊತ್ತು ನಾಗರಾಜ್ ಗೆ ಆಕ್ಸಿಜನ್ ಕೂಡಾ ಪೂರೈಕೆ ಮಾಡಿದ್ದರು. ಇಂದು ಬೆಳಗ್ಗೆ ಉಸಿರಾಟದ ಸಮಸ್ಯೆ ಪತ್ತೆ ಮಾಡಲು ವೈದ್ಯರು ಸ್ಕ್ಯಾನಿಂಗ್ ಮಾಡಲು ಸೂಚನೆ ಕೊಟ್ಟಿದ್ದರು. ಅದರಂತೆ ಇಂದು ಬೆಳಗ್ಗೆ 11 ಘಂಟೆ ಸುಮಾರಿಗೆ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಆಗಿತ್ತು.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ರೋಗಿ ಎನ್ನುವುದು ಗೊತ್ತಿದ್ದೂ, ಆಕ್ಸಿಜನ್ ಇಲ್ಲದೇ ವಾರ್ಡ್ ನಿಂದ ಸ್ಕ್ಯಾನಿಂಗ್ ಕರೆದುಕೊಂಡು ಹೋಗಿದ್ದೇ ಇಲ್ಲಿ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಆಕ್ಸಿಜನ್ ಇಲ್ಲದ ಹಿನ್ನೆಲೆಯಲ್ಲಿ ನಾಗರಾಜ್ ಗೆ ಮತ್ತೆ ಉಸಿರಾಟದ ತೊಂದರೆ ಉಲ್ಬಣಗೊಂಡಿದೆ. ಯಾವಾಗ ರೋಗಿಯು ಉಸಿರಾಟ ಸಮಸ್ಯೆಯಿಂದ ಒದ್ದಾಡಲು ಶುರು ಮಾಡಿದ, ಬಳಿಕ ಸ್ಕ್ಯಾನಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದ ಸಿಬ್ಬಂದಿಗೆ ಎಚ್ಚರವಾಗಿದೆ.
ಆಗ ಅವರು ರೋಗಿಯನ್ನು ಮತ್ತೆ ವಾರ್ಡ್ ಗೆ ವಾಪಸ್ ಹೋಗಿ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡು ಸ್ಕ್ಯಾನಿಂಗ್ ಗೆ ಸಿಬ್ಬಂದಿ ತೆರಳಿದ್ದರು. ಈ ನಡುವೆ ಆರಂಭದಲ್ಲೇ ಆಕ್ಸಿಜನ್ ಸಿಗದ ಹಿನ್ನೆಲೆಯಲ್ಲಿ ರೋಗಿ ನಾಗರಾಜ್ ಮೃತಪಟ್ಟಿದ್ದಾನೆ ಎನ್ನುವುದು ಮೃತನ ಕುಟುಂಬಸ್ಥರ ನೇರ ಆರೋಪವಾಗಿದೆ. ಮೃತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದರು. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಾಗರಾಜ್ ಸಾವು ಅಗಿದೆ. ಸೂಕ್ತ ತನಿಖೆಯಾಗಬೇಕೆನ್ನುವುದು ಕುಟುಂಬಸ್ಥರ ಒತ್ತಾಯವಾಗಿದೆ. ಜಿಲ್ಲಾ ಸರ್ಜನ್ ಸಿದ್ದನಗೌಡ ಅವರು ಘಟನೆ ಕುರಿತು ತನಿಖೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ