ಉರಗ ಸಂರಕ್ಷಣೆಯನ್ನೇ ಕಾಯಕವಾಗಿಸಿಕೊಂಡ ಸ್ನೇಕ್ ಹರೀಶ್.. ‘ಹಾವು ಹಿಡಿಯುವುದು ಕಲೆ’ ಎನ್ನುತ್ತಾರೆ!

ಒಮ್ಮೇ ಸ್ನೇಹಿತ ಕಿರಣ ಎಂಬುವವರ ಮನೆಗೆ ನಾಗರಹಾವು ಬಂದಿತ್ತು. ಅದನ್ನು ಹಿಡಿದ ಹರೀಶ್ ಆ ನಂತರದಲ್ಲಿ ಅದನ್ನೇ ಕಾಯಕ ಮಾಡಿಕೊಂಡರು. ಇದುವರೆಗೂ ಸುಮಾರು 2500 ಹಾವುಗಳನ್ನ ಹಿಡಿದಿದ್ದಾರೆ. ಇನ್ನು ಹಾವುಗಳನ್ನ ಹಿಡಿಯುವುದು ಸಹ ಒಂದು ಕಲೆಯಾಗಿದೆ ಎನ್ನುತ್ತಾರೆ

ಉರಗ ಸಂರಕ್ಷಣೆಯನ್ನೇ ಕಾಯಕವಾಗಿಸಿಕೊಂಡ ಸ್ನೇಕ್ ಹರೀಶ್.. ‘ಹಾವು ಹಿಡಿಯುವುದು ಕಲೆ’ ಎನ್ನುತ್ತಾರೆ!
ಸ್ನೇಕ್ ಹರೀಶ್
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 08, 2021 | 5:03 PM

ರಾಮನಗರ: ಕಲ್ಲು ನಾಗರ ಕಂಡರೆ ಹಾಲೆರೆವ ನಮ್ಮ ಜನರು, ನಿಜವಾದ ನಾಗರಹಾವು ಕಂಡರೆ ಬೆಚ್ಚಿ ಓಡುತ್ತಾರೆ. ಇಲ್ಲವೇ ಕಲ್ಲು ಬೀರುತ್ತಾರೆ. ಆದರೆ, ಇಲ್ಲೊಬ್ಬರು ತಮಗೆ ಯಾವುದೇ ಬಗೆಯ ಹಾವು ಕಂಡರೂ ಅವುಗಳನ್ನು ಹಿಡಿದು ಸಂರಕ್ಷಿಸಿ ಕಾಡಿಗೆ ಬಿಟ್ಟು ಕಾಪಾಡುತ್ತಾರೆ.

ಹೌದು ತಮ್ಮ ಕಾಯಕದ ಮೂಲಕ ಸಮಾಜಮುಖಿ ಸೇವೆ ಮಾಡುತ್ತಿರುವ ಸ್ನೇಕ್ ಹರೀಶ್ ಹಾವು ಕಂಡರೆ ಹೆದರಿ ನಡುಗುವವರ ಪಾಲಿನ ಅಪ್ತಮಿತ್ರನಾಗಿದ್ದಾರೆ. ರಾಮನಗರ ಜಿಲ್ಲೆಯ ಗ್ರಾಮ, ಪಟ್ಟಣ, ನಗರ ಪ್ರದೇಶದ ಮನೆಗಳಾಗಬಹುದು, ಕಚೇರಿ, ಬೃಹತ್ ಕಟ್ಟಡ, ಶಾಲಾ-ಕಾಲೇಜು, ಉಗ್ರಾಣ, ಊರಿನ ಹೊರಗೆ ಕಟ್ಟಿಕೊಂಡ ತೋಟದ ಮನೆಗಳಿರಬಹುದು. ಎಲ್ಲೆಂದರಲ್ಲಿ ಒಮ್ಮೊಮ್ಮೆ ಹಾವುಗಳು ಕಾಣಿಸಿಕೊಳ್ಳುತ್ತದೆ. ಆಗ ಒಂದು ಮೊಬೈಲ್ ಕರೆ ಮಾಡಿದರೆ ಸಾಕು ಉರಗ ತಜ್ಞ ಹರೀಶ್ ಸಕಾಲಕ್ಕೆ ಆಗಮಿಸಿ, ಅಲ್ಲಿ ಕಾಣಿಸಿಕೊಂಡ ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡುತ್ತಾರೆ.

ಅಂದ ಹಾಗೆ ರಾಮನಗರದ ವಿಜಯನಗರ ನಿವಾಸಿಯಾದ ಸ್ನೇಕ್ ಹರೀಶ್ ಅವರು ಮೂಲತಃ ಆಟೋ ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅದರ ಜೊತೆಗೆ ಹಾವು ಹಿಡಿಯುವ ಕಾಯಕವನ್ನು ಶ್ರದ್ಧೆಯಿಂದ ಮೈಗೂಡಿಸಿಕೊಂಡಿದ್ದಾರೆ. 8ನೇ ತರಗತಿವರೆಗೆ ಓದಲಷ್ಟೇ ತಮಗೆ ಸಾಧ್ಯವಾಯಿತು. ತುತ್ತಿನ ಚೀಲ ತುಂಬಿಸುವ ಸಲುವಾಗಿ ಚಿಕ್ಕ ವಯಸ್ಸಿನಲ್ಲೇ ಕಾಯಕ ಮಾಡುವ ಅನಿವಾರ್ಯತೆ ಬದುಕಿನಲ್ಲಿ ಒದಗಿ ಬಂತು.

ಈ ನಿಟ್ಟಿನಲ್ಲಿ ತಮ್ಮ ಓದು ಮೊಟಕಾದ ಬಗ್ಗೆ ಬೇಸರ ವ್ಯಕ್ತಪಡಿಸುವ ಸ್ನೇಕ್ ಹರೀಶ್ ಅವರು ಆಟೋ ಚಾಲನೆಯ ಜೊತೆಗೆ, ನನಗೆ ಬದುಕು ಕೊಟ್ಟಿರುವ ಸಮಾಜಕ್ಕೆ ಏನಾದರೂ ಪ್ರತಿಯಾಗಿ ನೀಡಬೇಕು ಎಂಬ ಮನೋಭಾವ ಬೆಳೆಸಿಕೊಂಡು ಕಳೆದ ಹತ್ತು ವರ್ಷಗಳಿಂದಲೂ ಹಾವು ಹಿಡಿಯುವ ಕಾಯಕವನ್ನು ಮಾಡುತ್ತಿದ್ದಾರೆ.

ಹಾವುಗಳನ್ನು ಹಿಡಿಯುತ್ತಿರುವ ಉರಗ ತಜ್ಞ ಹರೀಶ್

ಒಮ್ಮೆ ಸ್ನೇಹಿತ ಕಿರಣ ಎಂಬುವವರ ಮನೆಗೆ ನಾಗರಹಾವು ಬಂದಿತ್ತು. ಅದನ್ನು ಹಿಡಿದ ಹರೀಶ್ ಆ ನಂತರದಲ್ಲಿ ಅದನ್ನೇ ಕಾಯಕ ಮಾಡಿಕೊಂಡರು. ಇದುವರೆಗೂ ಸುಮಾರು 2,500 ಹಾವುಗಳನ್ನ ಹಿಡಿದಿದ್ದಾರೆ. ಇನ್ನು ಹಾವುಗಳನ್ನ ಹಿಡಿಯುವುದು ಸಹ ಒಂದು ಕಲೆಯಾಗಿದೆ. ಹೀಗಾಗಿ ನಾನಾ ಬಗೆಯ ಹಾವುಗಳನ್ನ ಹಿಡಿದು ಪೋಷಣೆ ಮಾಡಿ ಆ ನಂತರ ಕಾಡಿಗೆ ಬಿಡುತ್ತಾರೆ.

ಯಾವುದೇ ಫಲಾಪೇಕ್ಷೆ ಇಲ್ಲದೆ ಹಾವುಗಳನ್ನ ಹಿಡಿಯುತ್ತಿರುವ ಹರೀಶ್, ಇದುವರೆಗೂ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅರಣ್ಯ ಇಲಾಖೆಯಿಂದ ಆರೋಗ್ಯ ಕಾರ್ಡ್ ಹಾಗೂ ಆರ್ಥಿಕವಾಗಿ ಸಹಾಯ ಸಿಕ್ಕರೇ ಮತ್ತಷ್ಟು ಹಾವುಗಳನ್ನ ಹಿಡಿಯಲು ಅನುಕೂಲವಾಗಲಿದೆ.

ಕಾಡು ಉಳಿದರೆ ನಾಡು ಎನ್ನುತ್ತಾರೆ. ಇದರ ಜೊತೆಗೆ ಕಾಡು ಪ್ರಾಣಿಗಳು, ಪಕ್ಷಿಗಳು, ಕ್ರಿಮಿಕೀಟಗಳು, ಉರಗಗಳು ಉಳಿದಾಗ ಮಾತ್ರ ಕಾಡು ಶೋಭಾನಮಾಯವಾಗಿರುತ್ತದೆ. ಈ ದಿಕ್ಕಿನಲ್ಲಿ ಉರಗಗಳ ಸಂರಕ್ಷಣೆ ಮಾಡುವ ಕಾಯಕವನ್ನು ನನಗೆ ಗೊತ್ತಾದ ರೀತಿಯಲ್ಲಿ ಮಾಡುತ್ತಿದ್ದೇನೆ ಎನ್ನುತ್ತಾರೆ ಸ್ನೇಕ್ ಹರೀಶ್ .

ಮೈಸೂರು‌ ಜಿಲ್ಲಾಧಿಕಾರಿ ಗಾರ್ಡೆನ್​ ಹುತ್ತದಲ್ಲಿ ನಾಗರಹಾವು!