ಸ್ಟಿಂಗ್ ಆಪರೇಷನ್ ಪ್ರಕರಣ ತನಿಖೆಗೆ ಪಟ್ಟು: ಬೆಂಗಳೂರು ಕಮಿಷನರ್ ಕಚೇರಿ ಮೆಟ್ಟಿಲು ಮೇಲೆ ಕುಳಿತು ಕುಮಾರಸ್ವಾಮಿ ಧರಣಿ
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಆಗ್ರಹಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸಿದ್ದು, ಪ್ರಮುಖ ಆರೋಪಿಯ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ. ನಮಗೆ ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲ ಎಂದಿದ್ದಾರೆ. ಅಂತಿಮವಾಗಿ ಕುಮಾರಸ್ವಾಮಿ ಪ್ರತಿಭಟನೆ ಕೈಬಿಟ್ಟಿದ್ದು, ಸ್ಟಿಂಗ್ ಮಾಡಿದವರ ವಿರುದ್ಧ ಕ್ರಮ ಆಗದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 15: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ತನಿಖೆಗೆ ಆಗ್ರಹಿಸಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲುಗಳ ಮೇಳೆ ಕುಳಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಭಟನೆ ನಡೆಸಿದ್ದಾರೆ. ಕುಮಾರಸ್ವಾಮಿಯವರನ್ನು ಮನವೊಲಿಸಲು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಯತ್ನಿಸಿದ್ದು, ಪ್ರಕರಣದ ಪ್ರಮುಖ ವ್ಯಕ್ತಿಯನ್ನು ನೀವು ಇನ್ನೂ ಟಚ್ ಮಾಡಿಲ್ಲ. ಗೃಹ ಸಚಿವರ ಜೊತೆ ಅದೇನು ಮಾತನಾಡಿ ಹೇಳಿ ಎಂದು ಕೇಂದ್ರ ಸಚಿವರು ಪಟ್ಟು ಹಿಡಿದ ಪ್ರಸಂಗ ನಡೆದಿದೆ.
‘ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲ’
ನಮಗೆ ಭಯ ಹುಟ್ಟಿಸುತ್ತೇವೆ ಎಂದರೆ ನಾವು ಭಯ ಪಡುವುದಿಲ್ಲ. ಬೆಳಗ್ಗೆ ಏರುಧ್ವನಿಯಲ್ಲಿ ಮಾತನಾಡಿದೆ, ಅದು ಮನುಷ್ಯನ ಸಹಜ ಗುಣ. ಮನವರಿಕೆ ಆದಮೇಲೆ ನಾನು ನಾಡಿನ ಜನತೆಗೆ ಕ್ಷಮೆ ಕೇಳಿದ್ದೇನೆ. ಗೃಹ ಸಚಿವರಿಗೆ ಬರಲು ಹೇಳಿ, ಏನು ಮಾಡ್ತಾರೋ ನೋಡೋಣ. ಮಾಜಿ ಸಿಎಂ ವಿರುದ್ಧ ಅಪಪ್ರಚಾರ ಮಾಡಿದ ವ್ಯಕ್ತಿ ಕಾಪಾಡಿದ್ದು ಏಕೆ? ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದೇವೆ, ಆದ್ರೆ ಅವರೇ ಮೌನವಾಗಿದ್ದಾರೆ ಎಂದು ಧರಣಿ ಸ್ಥಳದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಹಾಗೂ ನನ್ನನ್ನೂ ವಿಚಾರಣೆಗೆ ಒಳಪಡಿಸುತ್ತಾರೆ ಎಂದರೂ ನಾವು ಸಿದ್ಧ. ಆದ್ರೆ ಮೂಲ ವ್ಯಕ್ತಿ ರಾಕೇಶ್ ಶೆಟ್ಟಿಯನ್ನು ಅರೆಸ್ಟ್ ಮಾಡಿ. ನಮ್ಮ ಯಾವ ಕಾರ್ಯಕರ್ತ ಮೇಲೆ ಅನುಮಾನ ಇದೆ ಹೇಳಿ ಕಳುಹಿಸುತ್ತವೆ. ಇಲ್ಲಾ ನಾನೇ ಬೇಕು ಅಂದರೂ ಬರುತ್ತೇನೆ. ಸರ್ಕಾರಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ಕೊಡುತ್ತೇನೆ. ಮೂಲ ವ್ಯಕ್ತಿಯ ಅರೆಸ್ಟ್ ಮಾಡಲಿಲ್ಲ ಅಂದರೆ ನಾವು ಹೋರಾಟ ಮಾಡ್ತೀವಿ, ರಾಜಿಯಾಗಲ್ಲ. ಎರಡು ದಿನದಲ್ಲಿ ಬಂಧನ ಆಗದಿದ್ದರೆ ದೊಡ್ಡ ಮಟ್ಟದಲ್ಲಿ ತೀರ್ಮಾನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್.ಡಿ. ಕುಮಾರಸ್ವಾಮಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
ಕಮಿಷನರ್ ಭರವಸೆ ಹಿನ್ನಲೆ ಧರಣಿ ಅಂತ್ಯ
ಪ್ರಕರಣ ಸಂಬಂಧ ನಾವು ಎಲ್ಲ ರೀತಿಯ ತನಿಖೆ ಮಾಡುತ್ತೇವೆ. ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರೆಲ್ಲರನ್ನೂ ತನಿಖೆಗೆ ಒಳಪಡಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ಅಂತಿಮವಾಗಿ ಕುಮಾರಸ್ವಾಮಿ ಪ್ರತಿಭಟನೆ ಕೈಬಿಟ್ಟಿದ್ದು, ಸ್ಟಿಂಗ್ ಮಾಡಿದವರ ವಿರುದ್ಧ ಕ್ರಮ ಆಗದೇ ಇದ್ದರೆ ಮತ್ತೆ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಕೇಸ್ನ ಪ್ರಮುಖ ವ್ಯಕ್ತಿ ಮಾಧ್ಯಮದ ಹೆಸರನ್ನು ದುರುಪಯೋಗ ಮಾಡಿಕೊಂಡು, ಮಾಧ್ಯಮಗಳ ಗೌರವ ಹಾಳು ಮಾಡಿದ್ದಾನೆ ಎಂದವರು ಕಿಡಿ ಕಾರಿದ್ದಾರೆ.
ಕುಮಾರಸ್ವಾಮಿಗೆ ಯತ್ನಾಳ್ ಬೆಂಬಲ
ಕಮಿಷನರ್ ಕಚೇರಿಗೆ ತೆರಳಿ ಕೇಂದ್ರ ಸಚಿವ ಕುಮಾರಸ್ವಾಮಿ ಹೋರಾಟಕ್ಕೆ ಶಾಸಕ ಯತ್ನಾಳ್ ಬೆಂಬಲ ನೀಡಿದ್ದು, ಸ್ಟಿಂಗ್ ಫ್ಯಾಕ್ಟರಿಗಳ ತನಿಖೆಗೆ ಕುಮಾರಸ್ವಾಮಿ ಧರಣಿ ಮಾಡ್ತಿದ್ದಾರೆ. ಈ ವಿಚಾರ ಗೊತ್ತಾಗಿ ನಾನು ಬಂದಿದ್ದೇನೆ. ಭ್ರಷ್ಟ ರಾಜಕಾರಣಿಗಳು ಈ ಸ್ಟಿಂಗ್ ಕೆಲಸ ಮಾಡ್ತಿದ್ದಾರೆ. ಸಿಡಿ ಫ್ಯಾಕ್ಟರಿ ನಡೆಸುವವರನ್ನು ಅರೆಸ್ಟ್ ಮಾಡಲು ಕುಮಾರಸ್ವಾಮಿ ಆಗ್ರಹಿಸಿದ್ದು, ತಾನೂ ಅದನ್ನು ಬೆಂಬಲಿಸೋದಾಗಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:16 pm, Thu, 15 October 26




