ಕುಂದಾಪುರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜಟಾಪಟಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರಿನಲ್ಲೇ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಕಾರ್ಯಕರ್ತರೊಬ್ಬರು, ಇವತ್ತು ಬೂತ್ನಲ್ಲಿ ಒಬ್ಬ ಕಾರ್ಯಕರ್ತ ಇದ್ದಾನೋ ಸತ್ತಿಸದ್ದಾನೋ ಎಂಬುದನ್ನು ನಾಯಕರು ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿದ್ದ ಅಷ್ಟೂ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
ಕುಂದಾಪುರ, ಜನವರಿ 27: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ಭಾಗವಹಿಸಿದ ಸಭೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು (Congress Workers) ಪಕ್ಷದ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕುಂದಾಪುರ (Kundapura) ತಾಲೂಕಿನಲ್ಲಿ ಶನಿವಾರ ನಡೆದಿದೆ. ಲಕ್ಷ್ಮೀ ಹೆಬ್ಬಾಳ್ಕರ್, ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಭಾಗಿಯಾಗಿದ್ದ ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮುಜುಗರ ತಪ್ಪಿಸಲು ಕಾಂಗ್ರೆಸ್ ಮುಖಂಡರು ಪತ್ರಕರ್ತರನ್ನು ಸಭೆಯಿಂದ ಹೊರ ನಡೆಯುವಂತೆ ಮನವಿ ಮಾಡಿದ್ದಾರೆ. ಆದರೂ ವಿಡಿಯೋ ಮಾಡುತ್ತಿದ್ದ ಕ್ಯಾಮರಾಮನ್ಗಳನ್ನು ಹಾಗೂ ವರದಿಗಾರರನ್ನು ಸಭೆಯಿಂದ ಹೊರದಬ್ಬಲಾಗಿದೆ.
ಸಭೆಯಲ್ಲಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ಚುನಾವಣೆ ಸಮಯದಲ್ಲಿ ಮಾತ್ರ ನಿಮಗೆ ಕಾರ್ಯಕರ್ತರ ನೆನಪಾಗುತ್ತದೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದೇ ಕಾರಣ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಮತ್ತೆ ಮತ್ತೆ ಸೋಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವೇದಿಕೆಯಲ್ಲಿದ್ದ ಸಚಿವೆ ಹೆಬ್ಬಾಳ್ಕರ್ ಮೌನವಾಗಿ ಕುಳಿತಿರುವ ದೃಶ್ಯ ಕಂಡುಬಂದಿದೆ.
ಕಾರ್ಯಕರ್ತರು ಹೇಳಿದ್ದೇನು?
ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಕಾರ್ಯಕರ್ತರೊಬ್ಬರು, ಇವತ್ತು ಬೂತ್ನಲ್ಲಿ ಒಬ್ಬ ಕಾರ್ಯಕರ್ತ ಇದ್ದಾನೋ ಸತ್ತಿಸದ್ದಾನೋ ಎಂಬುದನ್ನು ನಾಯಕರು ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿದ್ದ ಅಷ್ಟೂ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.
‘ಮಂಗಳೂರಿನಲ್ಲಿ ಸಮಾವೇಶ ಇದೆ, ಚುನಾವಣೆ ಹತ್ತಿರಬರುತ್ತಿದೆ. ನಾವು ಕಾರ್ಯಕರ್ತರು ಕೆಲಸ ಮಾಡಬೇಕು. ಇವತ್ತು ನಿಮ್ಮ ಅನುದಾನ ಬೇಕಿಲ್ಲ ನಮಗೆ. ಯಾವುದೋ ಊರಿನಲ್ಲಿದ್ದ ಪಿಡಿಒಗಳನ್ನು ವರ್ಗಾವಣೆ ಮಾಡಿ ನಮ್ಮ ಪಂಚಾಯತ್ಗೆ ಹಾಕುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕರ್ತರ ನೋವು-ನಲಿವುಗಳನ್ನು ನೀವು ನಾಯಕರಾದವರು ಕೇಳುತ್ತಿಲ್ಲ. ಕುಂದಾಪುರದಲ್ಲಿರುವ ಎಲ್ಲ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮ ವಹಿಸಿ ದುಡಿದಿದ್ದೇವೆ. ಇಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ’ ಎಂದು ಕಾರ್ಯಕರ್ತ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಇಷ್ಟೆಲ್ಲ ಆಗುತ್ತಿರುವಂತೆ ಮಾಧ್ಯಮ ಪ್ರತಿನಿಧಿಗಳ ಬಳಿ ಬಂದ ಕೆಲವು ಮುಖಂಡರು, ಇದು ಕಾರ್ಯಕರ್ತರ ಸಭೆ. ದಯವಿಟ್ಟು ಹೊರಗೆ ಹೋಗಿ ಎಂದು ವಿನಂತಿಸಿದ್ದಾರೆ. ಆದರೂ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರನ್ನು ಬಲವಂತದಿಂದ ಹೊರಗೆ ದಬ್ಬಲು ಮುಂದಾಗಿದ್ದಾರೆ. ಅಷ್ಟರಲ್ಲಿ ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಇಷ್ಟೆಲ್ಲ ಆಗುತ್ತಿರುವಾಗ ಸಚಿವೆ ಹೆಬ್ಬಾಳ್ಕರ್ ಅವರು ಮೌನವಾಗಿ ವೇದಿಕೆ ಮೇಲೆ ಕುಳಿತು ಈ ಎಲ್ಲ ಬೆಳವಣಿಗೆಗೆ ಸಾಕ್ಷಿಯಾದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Sat, 27 January 24