ಉಡುಪಿ: ವಾಲಿಬಾಲ್ ಆಡುತ್ತಿದ್ದ 34 ವರ್ಷದ ವ್ಯಕ್ತಿ ಕುಸಿದು ಬಿದ್ದು ಸಾವು
ಕುಕ್ಕುಂದೂರಿನ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶನಿವಾರ ಸಂಜೆ 6.20ಕ್ಕೆ ವಾಲಿಬಾಲ್ ಆಡುತ್ತಿದ್ದಾಗ ಸಂತೋಷ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಉಡುಪಿ: ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ವಾಲಿಬಾಲ್(volleyball) ಆಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರನ್ನು ಕುಕ್ಕುಂದೂರಿನ ನಿವಾಸಿ ಸಂತೋಷ್ (34) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಂತೋಷ್ ಕೆಲಸ ಮಾಡುತ್ತಿದ್ದಾಗ ಕೂಡ ಹೃದಯಾಘಾತವಾಗಿ(Heart Attack) ಚಿಕಿತ್ಸೆ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಕುಕ್ಕುಂದೂರಿನ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶನಿವಾರ ಸಂಜೆ 6.20ಕ್ಕೆ ವಾಲಿಬಾಲ್ ಆಡುತ್ತಿದ್ದಾಗ ಸಂತೋಷ್ ಕುಸಿದು ಬಿದಿದ್ದಾರೆ. ಅವರ ಜೊತೆ ಆಟ ಆಡುತ್ತಿದ್ದ ಸ್ನೇಹಿತರು ತಕ್ಷಣವೇ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದ್ರೆ ಸಂಜೆ 6.35ಕ್ಕೆ ಸಂತೋಷ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಅವರ ಸಹೋದರ ಹರೀಶ್ ನೀಡಿದ ದೂರಿನ ಆಧಾರದ ಮೇಲೆ ಕಾರ್ಕಳ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ತನ್ನ ಸಹೋದರನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಾವು ಕಡಿತಕ್ಕೆ ಇಂಜೆಕ್ಷನ್ ಸಿಗದೆ ವ್ಯಕ್ತಿ ಸಾವು
ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರಿನಲ್ಲಿ ಸೈಯದ್ ಸಮೀ ಉಲ್ಲಾ (38) ಎಂಬ ವ್ಯಕ್ತಿ ಹಾವು ಕಡಿತಕ್ಕೆ ಮೃತಪಟ್ಟಿದ್ದಾರೆ. ಸೋಲೂರಿನ ಲೇಔಟ್ ಒಂದರಲ್ಲಿ ವಾಕ್ ಮಾಡುವಾಗ ಹಾವು ಕಚ್ಚಿದೆ. ಬಳಿಕ ಸೋಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಇಂಜೆಕ್ಷನ್ ಲಭ್ಯವಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ನಂತರ ಸೈಯದ್ನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದು ಈ ವೇಳೆ 108 ಆಂಬುಲೆನ್ಸ್‌ಗೆ ಕರೆ ಮಾಡಿದರೆ ಸ್ಥಳಕ್ಕೆ ಬರಲು ವಿಳಂಬವಾಗಿದೆ. ಕೊನೆಗೆ ಬೇರೆ ವಾಹನದಲ್ಲೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸುವಾಗ ಮಾರ್ಗಮದ್ಯೆ ಸೈಯದ್ ಮೃತಪಟ್ಟಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:59 am, Mon, 27 February 23