ನಿಟ್ಟೂರು: ಮನೆಯಲ್ಲಿನ ದುಃಸ್ಥಿತಿಯಿಂದಾಗಿ ಶಾಲೆಯಲ್ಲಿ ಮೌನಿಯಾಗಿರುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಗೆ ಚಿಕ್ಕ ಮನೆ ಕಟ್ಟಿಕೊಟ್ಟರು!
House as gift:: ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂದಿರುವ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲ; ಶಿಕ್ಷಕ ವರ್ಗ, ದಾನಿಗಳೂ ಸದಾ ಶಿಕ್ಷಣಕ್ಕೆ ನೀರೆರೆದು ಉತ್ತೇಜಿಸುತ್ತಾರೆ ಎಂಬುದಕ್ಕೆ ಅದೇ ಜಿಲ್ಲೆಯಿಂದ ಮತ್ತೊಂದು ಉದಾಹರಣೆ ಸಿಕ್ಕಿದೆ.

ಆತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಇಡೀ ಶಾಲೆಯಲ್ಲಿ ಗುರುತಿಸಿಕೊಂಡಿದ್ದ. ಸದಾ ಮೌನಿಯಾಗಿಯೇ ಇರುತ್ತಿದ್ದ ವಿದ್ಯಾರ್ಥಿಯ ಮೌನದ ಹಿಂದಿನ ಅಸಲಿಯತ್ತು ಅರಿಯುವ ಪ್ರಯತ್ನ ಮಾಡಿತ್ತು ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ. ಸದ್ಯ ಆ ವಿದ್ಯಾರ್ಥಿಯ ಮುಖದಲ್ಲಿ ಮಂದಹಾಸ ಕಾಣುತ್ತಿದೆ, ವಿಷಯ ಏನು ಅಂತೀರಾ ಈ ಸ್ಟೋರಿ ನೋಡಿ.
House as gift: ಹೌದು ಶಿಕ್ಷಣ ಎಂದಾಕ್ಷಣ ಎಲ್ಲಾ ಮರೆತು, ಎಲ್ಲರೂ ಒಂದಾಗಿ, ಒಂದೇ ಸೂರಿನಡಿ ಕುಳಿತು ಓದಿ ನಲಿಯುವ ವ್ಯವಸ್ಥೆ. ಈತ ಉಡುಪಿಯ ಕರಂಬಳ್ಳಿಯ ನಿವಾಸಿ ದೀಕ್ಷಿತ್, ನಿಟ್ಟೂರು ಪ್ರೌಢಶಾಲೆಯ (Nittur high school) 10 ನೇ ತರಗತಿ ವಿದ್ಯಾರ್ಥಿ. ಶಾಲೆಯ ಪ್ರಾರಂಭದಿಂದಲೂ ತನ್ನ ಚುರುಕುತನದಿಂದಲೇ ಗುರುತಿಸಿಕೊಂಡಿದ್ದ ವಿದ್ಯಾರ್ಥಿ (Student) ದೀಕ್ಷಿತ್. ತಂದೆ ರಮೇಶ್ ನಾಯ್ಕ್, ತಾಯಿ ಇಂದಿರಾ ಮತ್ತು ಅಕ್ಕ ರಕ್ಷಿತಾ ಜೊತೆ ವಾಸವಾಗಿದ್ದ ದೀಕ್ಷಿತ್ ಗೆ ಮನೆ ವಿಚಾರವಾಗಿ ನೋವಿತ್ತು. ಈ ವಿಚಾರ ಎಲ್ಲಿಯೂ ಕೂಡ ಬಾಯಿ ಬಿಡದ ದೀಕ್ಷಿತ್, ಸದಾ ಮೌನಿಯಾಗಿಯೇ ಇರುತ್ತಿದ್ದ. ಆದರೆ ಶಾಲೆಯ ಪೋಷಕರ ಸಭೆಯ ವೇಳೆ ದೀಕ್ಷಿತ್ ಮನೆಯ ಪರಿಸ್ಥಿತಿಯನ್ನು ಆತನ ತಾಯಿ (Mother) ತಿಳಿಸಿ ಕಣ್ಣೀರು ಹಾಕಿದ್ದರು.
ಒಂದೇ ರೂಮಿನ ಶೀಟಿನ ಮನೆಯಲ್ಲಿದ್ದ ದೀಕ್ಷಿತ್ ಗೆ ಕತ್ತಲೆಯಲ್ಲಿಯೇ ಓದಿಕೊಳ್ಳಬೇಕಿತ್ತು. ಗಾರೆಕೆಲಸದ ಮೇಸ್ತ್ರಿಯಾಗಿದ್ದ ತಂದೆಗೆ ಬರುವ ಅಲ್ಪ ಆದಾಯದಲ್ಲೆ ನಾಲ್ಕು ಜನರ ಜೀವನ ನಡೆಯಬೇಕಾದ ಪರಿಸ್ಥಿತಿ ಇತ್ತು. ಈ ವಿಚಾರ ಪೊಷಕರ ಸಭೆಯಲ್ಲಿ ಹೊರಬಿದ್ದ ತಕ್ಷಣ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘವು ದೀಕ್ಷಿತ್ ಗಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದೆ.
ಇದನ್ನು ಓದಿ: ಒಬ್ಬ ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!
ನಿಟ್ಟೂರು ಶಾಲೆಗೆ 1 ಕೋಟಿ ನೆರವು ನೀಡಿರುವ ಉದ್ಯಮಿ ಎಚ್ ಎಸ್ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಕೈಗೆತ್ತಿಕೊಂಡ ಮನೆಯ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ನಿರ್ಮಿಸಿ ಹಸ್ತಾಂತರ ಮಾಡಿದ್ದಾರೆ. ಮನೆಯ ಬಹುತೇಕ ಕೆಲಸಗಳು ಶಾಲೆಯ ಹಳೆ ವಿದ್ಯಾರ್ಥಿಗಳು ಉಚಿತವಾಗಿ ಮಾಡಿದ್ದಾರೆ. ಮನೆಯ ಗಾರೆ, ಮತ್ತಿತರ ಕೆಲಸಗಳನ್ನು ದೀಕ್ಷಿತ್ ತಂದೆಯೇ ಮಾಡುವ ಮೂಲಕ ಕಡಿಮೆ ವೆಚ್ಚದಲ್ಲಿ ಉತ್ತಮ ಮನೆ ಸಿದ್ದವಾಗಿದೆ.
ಸದ್ಯ ಹೊಸ ಮನೆಯ ನಿರ್ಮಾಣದ ಬಳಿಕ ದೀಕ್ಷಿತ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮುಂದೆ ಶಿಕ್ಷಣ ಪಡೆದು ಇದೇ ಶಾಲೆಗೆ ತಾನು ಪಡೆದ ಸಹಾಯವನ್ನು ಮಗ ಮರಳಿ ನೀಡಬೇಕು ಎನ್ನುವುದು ದೀಕ್ಷಿತ್ ತಾಯಿಯವರ ಕನಸಾಗಿದೆ. ಒಟ್ಟಾರೆಯಾಗಿ ಇಂತಹ ಮಾದರಿ ಕೆಲಸಗಳು ಇನ್ನಷ್ಟು ಜನರಿಗೆ ಮಾದರಿಯಾಗಲಿ ಎನ್ನುವುದು ನಮ್ಮ ಆಶಯ. (ವರದಿ: ದಿನೇಶ್ ಯಲ್ಲಾಪುರ್, ಟಿವಿ 9, ಉಡುಪಿ)
ಶಿಕ್ಷಣ ಕುರಿತಾದ ಹೆಚ್ಚಿನ ವರದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Thu, 8 December 22