ಗೋಕರ್ಣದ ಕಡಲಿಗಿಳಿದು ತುರಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ಪ್ರವಾಸಿಗರು; ಕಾರಣವೇನು ಗೊತ್ತಾ?
ಈ ಜೆಲ್ಲಿ ಫಿಶ್ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ಸಾಮಾನ್ಯವಾಗಿ ಈ ಜೆಲ್ಲಿ ಫಿಶ್ಗಳು ಕಡಲತೀರದಲ್ಲಿ ಸತ್ತು ಬಿದ್ದಿರುವುದು ಕಂಡುಬರುತ್ತವೆ.
ಉತ್ತರ ಕನ್ನಡ: ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದು ಕಡಲಿಗೆ ಇಳಿದವರು ಮೈಯೆಲ್ಲ ತುರಿಕೆಯಾಗಿ ಆಸ್ಪತ್ರೆ ಸೇರುತ್ತಿರುವ ಘಟನೆಗಳು ನಡೆಯುತ್ತಿದೆ. ಗೋಕರ್ಣ ಹೇಳಿಕೇಳಿ ಪ್ರಸಿದ್ಧ ಪ್ರವಾಸಿ ತಾಣ(Tourist place). ಇಲ್ಲಿಗೆ ದಿನಂಪ್ರತಿ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವೂ ಆಗಿರುವ ಕಾರಣ ಇಲ್ಲಿನ ಆತ್ಮಲಿಂಗದ ದರ್ಶನಕ್ಕೂ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿದವರು ಸಮೀಪದ ಮೇನ್ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ಗಳಿಗೆ ಭೇಟಿ ನೀಡಿಯೇ ತೆರಳುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸಮುದ್ರಕ್ಕೆ ಆಟವಾಡಲು ಇಳಿದವರು ತುರಿಕೆ, ಉರಿ (ಅಲರ್ಜಿ) ಯಿಂದ ಬಳಲುತ್ತ, ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಬಹುತೇಕ ಪ್ರವಾಸಿಗರು ಈ ತುರಿಕೆ, ಉರಿಯಿಂದಾಗಿ ಆತಂಕಕ್ಕೊಳಗಾಗುತ್ತಿದ್ದಾರೆ.
ಸದ್ಯ ಗೋಕರ್ಣದ ಕಡಲತೀರದಲ್ಲಿ ಜೆಲ್ಲಿ ಫಿಶ್ಗಳು ಕಾಣಸಿಗಲಾರಂಭಿಸಿದೆ. ಮೀನುಗಾರರಿಗೂ ಹೇರಳ ಪ್ರಮಾಣದಲ್ಲಿ ಇವು ಬಲೆಗೆ ಬೀಳುತ್ತಿವೆ. ಪ್ರವಾಸಿಗರಿಗೆ ಈ ಜೆಲ್ಲಿ ಫಿಶ್ಗಳ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಪ್ರವಾಸಿಗರು ಆತಂಕಕ್ಕೊಳಗಾಗುತ್ತಿದ್ದಾರೆ.
ಹಿಂದೂ ಮಹಾಸಾಗರ ಹಾಗೂ ಶಾಂತ ಸಾಗರದಲ್ಲಿ ಹೆಚ್ಚಾಗಿ ಕಂಡುಬರುವ ಈ ಜೆಲ್ಲಿ ಫಿಶ್ಗಳು ಇತ್ತೀಚೆಗೆ ಉತ್ತರ ಕನ್ನಡದ ಕರಾವಳಿ ತೀರಗಳಲ್ಲೂ ಕಂಡುಬರುತ್ತಿವೆ. ನವೆಂಬರ್- ಡಿಸೆಂಬರ್ ಹೆಚ್ಚು ಶೀತ ತಿಂಗಳುಗಳು. ಈ ಸಂದರ್ಭದಲ್ಲಿ ಸಮುದ್ರ ಕೂಡ ತಂಪಾಗಿರುತ್ತವೆ. ಈ ಜೆಲ್ಲಿ ಫಿಶ್ಗಳು ಕೂಡ ತಂಪು ನೀರಿನಲ್ಲೇ ಹೆಚ್ಚು ಕಂಡುಬರುತ್ತವೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.
ಜೆಲ್ಲಿ ಫಿಶ್ಗಳಲ್ಲಿ ಸೂಜಿ ಥರನಾದ ಅತಿ ಸೂಕ್ಷ್ಮ ಮುಳ್ಳುಗಳಿರುತ್ತವೆ. ಅವು ನೀರಿನಲ್ಲಿ ಬಿದ್ದು ಹೋಗಿರುತ್ತವೆ. ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿದರೆ ಅದು ಚರ್ಮಕ್ಕೆ ತಾಗಿ ತುರಿಕೆಯನ್ನುಂಟು ಮಾಡುತ್ತದೆ. ನಮ್ಮಲ್ಲಿ ಕಂಡುಬರುವ ಜೆಲ್ಲಿ ಫಿಶ್ಗಳು ಜೀವಕ್ಕೆ ಹೆಚ್ಚು ಅಪಾಯಕಾರಿಯಲ್ಲ. ಆದರೆ ಆಸ್ಟ್ರೇಲಿಯಾದ ಕಡಲಿನಲ್ಲಿ ಕಂಡುಬರುವ ಬಾಕ್ಸ್ ಜೆಲ್ಲಿ ಫಿಶ್ಗಳು ತಾಗಿ ಅದರಿಂದ ಸಾವು ಉಂಟಾಗಿರುವುದು ಕೂಡ ಇದೆ ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ತಿಳಿಸಿದ್ದಾರೆ.
ಈ ಜೆಲ್ಲಿ ಫಿಶ್ಗಳಿಂದಾಗಿ ಉಂಟಾಗುವ ತುರಿಕೆಯನ್ನು ತಡೆದುಕೊಳ್ಳುವ ಶಕ್ತಿ ಮೀನುಗಾರರಿಗಿದೆ. ಅವರಿಗೆ ಇದು ಅಭ್ಯಾಸವಾಗಿದೆ. ಬಂಗುಡೆ ಬಳ್ಳಿ ಅಥವಾ ರೇತಿಯನ್ನು ಬಳಸಿಕೊಂಡು ತುರಿಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ಸಾಮಾನ್ಯ ಜನರಿಗೆ, ಪ್ರವಾಸಿಗರಿಗೆ ಇದು ಹೊಸತು. ಸಾಮಾನ್ಯವಾಗಿ ಈ ಜೆಲ್ಲಿ ಫಿಶ್ಗಳು ಕಡಲತೀರದಲ್ಲಿ ಸತ್ತು ಬಿದ್ದಿರುವುದು ಕಂಡುಬರುತ್ತವೆ. ನಮ್ಮ ಜಿಲ್ಲೆಯ ಎಲ್ಲಾ ಕಡಲತೀರಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಕೂಡ ಇದ್ದಾರೆ. ಹೀಗೆ ತೀರದಲ್ಲಿ ಜೆಲ್ಲಿ ಫಿಶ್ಗಳು ಕಂಡುಬಂದಾಗ ಜೀವ ರಕ್ಷಕ ಸಿಬ್ಬಂದಿ ಪ್ರವಾಸಿಗರು ಕಡಲಿಗೆ ಇಳಿಯುವುದನ್ನು ತಡೆದರೆ ಒಳ್ಳೆಯದು ಎಂದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ ಹೇಳಿದ್ದಾರೆ.
ಇದನ್ನೂ ಓದಿ: ಗೋಕರ್ಣ ಆತ್ಮಲಿಂಗ ದರ್ಶನ; ಭಕ್ತರಿಗೆ ಅಡ್ಡಿಪಡಿಸದಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಸೂಚನೆ
Published On - 3:47 pm, Wed, 10 November 21