ರಂಗೇರಿದೆ ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ ಅಖಾಡ; ಕಾಂಗ್ರೆಸ್​ಗೆ ಬಂಡಾಯದ ಬಿಸಿ, ಬಿಜೆಪಿಗೆ ಗೆಲ್ಲೋ ತವಕ

ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಹಾಗೂ ಸುನೀಲ ಗೌಡ ಪಾಟೀಲ್ ಹಾಲಿ ಸದಸ್ಯರಾಗಿದ್ದಾರೆ. ಇವರ ಅಧಿಕಾರಾವಧಿ ಜನವರಿ 5ಕ್ಕೆ ಮುಕ್ತಾಯವಾಗಲಿದೆ. ಅಧಿಕಾರಾವಧಿ ಮುಕ್ತಾಯವಾಗುವುದರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಮುಗಿಸಲು ಚುನಾವಣಾ ಆಯೋಗ ಮುಂದಾಗಿದೆ.

ರಂಗೇರಿದೆ ವಿಜಯಪುರ- ಬಾಗಲಕೋಟೆ ಪರಿಷತ್ ಚುನಾವಣೆ ಅಖಾಡ; ಕಾಂಗ್ರೆಸ್​ಗೆ ಬಂಡಾಯದ ಬಿಸಿ, ಬಿಜೆಪಿಗೆ ಗೆಲ್ಲೋ ತವಕ
ಸಾಂದರ್ಭಿಕ ಚಿತ್ರ

ವಿಜಯಪುರ: ಮುಂಬರುವ 2022ರ ಜನವರಿ 5ರಂದು ಹಾಲಿ ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗುತ್ತಿರುವ ಕಾರಣದಿಂದ ಭಾರತೀಯ ಚುನಾವಣಾ ಆಯೋಗ ಪರಿಷತ್ ಚುನಾವಣೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ವಿಜಯಪುರ- ಬಾಗಲಕೋಟೆ ದ್ವಿಸದಸ್ಯ ಸ್ಥಾನಗಳಿಗೂ ಚುನಾವಣೆ ಘೋಷಣೆಯಾಗಿದೆ. ಎರಡೂ ಸ್ಥಾನಗಳಲ್ಲಿ ಸದ್ಯ ಕಾಂಗ್ರೆಸ್ ಸದಸ್ಯರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಹಾಗೂ ಸುನೀಲ ಗೌಡ ಪಾಟೀಲ್ ಹಾಲಿ ಸದಸ್ಯರಾಗಿದ್ದಾರೆ. ಇವರ ಅಧಿಕಾರಾವಧಿ ಜನವರಿ 5ಕ್ಕೆ ಮುಕ್ತಾಯವಾಗಲಿದೆ. ಅಧಿಕಾರಾವಧಿ ಮುಕ್ತಾಯವಾಗುವುದರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಮುಗಿಸಲು ಚುನಾವಣಾ ಆಯೋಗ ಮುಂದಾಗಿದೆ.

ಕಳೆದ 2015ರಲ್ಲಿ ಪರಿಷತ್​ಗೆ ಚುನಾವಣೆ ನಡೆದಿತ್ತು. ಆಗ ಕಾಂಗ್ರೆಸ್ ಆಭ್ಯರ್ಥಿ ಎಸ್.ಆರ್. ಪಾಟೀಲ್, ಬಿಜೆಪಿಯಿಂದ ಜಿ.ಎಸ್. ನ್ಯಾಮಗೌಡ ಸ್ಪರ್ದೆ ಮಾಡಿದ್ದರು. ಆದರೆ, ಆ ವೇಳೆ ಬಿಜೆಪಿಗೆ ಬಸನಗೌಡ ಪಾಟೀಲ್ ಯತ್ನಾಳ್ ಬಿಸಿ ತುಪ್ಪವಾಗಿ ಬಿಟ್ಟಿದ್ದರು. ಬಿಜೆಪಿಯಿಂದ ಪರಿಷತ್ ಚುನಾವಣೆಗೆ ಸ್ಪರ್ದಿಸಲು ಟಿಕೆಟ್ ಸಿಗದ ಕಾರಣ ಬಂಡಾಯ ಬಿಜೆಪಿ ಆಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಯತ್ನಾಳ್ ಅವರ ನಾಮಪತ್ರ ಹಿಂಪಡೆಯುವಂತೆ ಪ್ರಯತ್ನ ಮಾಡಿದ್ದರೂ ಸಹ ಅದು ಫಲ ನೀಡಲಿಲ್ಲ. ಈ ಕಾರಣದಿಂದ ಪಕ್ಷದಿಂದ ಮತ್ತೆ ಯತ್ನಾಳ್ ಉಚ್ಛಾಟನೆ ಶಿಕ್ಷೆಗೆ ಈಡಾಗಿದ್ದರು. ಪರಿಣಾಮ ಪರಿಷತ್ ಚುನಾವಣೆ ಕಾವು ಪಡೆದುಕೊಂಡಿತ್ತು. 2015 ಡಿಸೆಂಬರ್ 2ರಿಂದ 9ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಡಿಸೆಂಬರ್ 10ಕ್ಕೆ ನಾಮಪತ್ರ ಪರಿಶೀಲನೆ ಮಾಡಲಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 12 ಅಂತಿಮ ದಿನವಾಗಿತ್ತು. ಬಳಿಕ ಡಿಸೆಂಬರ್ 27ರಂದು ಮತದಾನ ನಡೆದಿದ್ದರೆ ಅದೇ ಡಿಸೆಂಬರ್ 30ರಂದು ಮತ ಎಣಿಕಾ ಕಾರ್ಯ ಹಾಗೂ ಫಲಿತಾಂಶ ಪ್ರಕಟವಾಗಿತ್ತು.

ಬಿಜೆಪಿ ಅಭ್ಯರ್ಥಿಯಾಗಿ ಜಿ.ಎಸ್ ನ್ಯಾಮಗೌಡ, ಕಾಂಗ್ರೆಸ್​ನಿಂದ ಎಸ್.ಆರ್. ಪಾಟೀಲ್, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷೇತರ ಐವರು ಅಭ್ಯರ್ಥಿಗಳು ಸೇರಿ ಒಟ್ಟು 8 ಹುರಿಯಾಳುಗಳು ಚುನಾವಣಾ ಅಖಾಡದಲ್ಲಿದ್ದರು. ಅವಳಿ ಜಿಲ್ಲೆಗಳಲ್ಲಿ ಒಟ್ಟು 8,180 ಮತದಾರರಿದ್ದರು. ವಿಜಯಪುರ ಜಿಲ್ಲೆಯಲ್ಲಿ 4,362 ಮತದಾರರು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 3,818 ಮತದಾರರು ಮತದಾನದ ಹಕ್ಕು ಪಡೆದಿದ್ದರು. ಮತದಾನ ದಿನದಂದು ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗಳಲ್ಲಿ ಒಟ್ಟು 440 ಮತಗಟ್ಟೆಗಳಲ್ಲಿ ಮತದಾನ ನಡೆದಿದಿತ್ತು. ಒಟ್ಟು 8087 ಮತದಾರರ ಈ ಪೈಕಿ 8073 ಮತದಾರರು ಮತ ಚಲಾಯಿಸಿದ್ದರು. ಮತ ಎಣಿಕೆ ನಡೆದು ಕಾಂಗ್ರೆಸ್​ನ ಎಸ್ ಆರ್ ಪಾಟೀಲ್ 3362 ಮತಗಳನ್ನು ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ 4040 ಮತಗಳನ್ನು ಪಡೆದು ಗೆದ್ದು ಬೀಗಿದ್ದರು. ಬಿಜೆಪಿ ಅಭ್ಯರ್ಥಿ ಜಿ.ಎಸ್ ನ್ಯಾಮಗೌಡ 2182 ಮತಗಳನ್ನು ಮಾತ್ರ ಪಡೆದು ಸೋಲುಂಡಿದ್ದರು. ಇನ್ನು ಐವರು ಪಕ್ಷೇತರರು ಠೇವಣಿ ಕಳೆದುಕೊಂಡು ಮನೆಯತ್ತ ಮುಖ ಮಾಡಿದ್ದರು.

ಬದಲಾದ ರಾಜಕೀಯದಲ್ಲಿ ಪರಿಷತ್​ಗೆ ಉಪ ಚುನಾವಣೆ: 2015ರಲ್ಲಿ ಬಿಜೆಪಿ ರೆಬೆಲ್ ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಶಿಕ್ಷೆಯಿಂದ ಪಾರಾಗಿ ವಾಪಸ್ ಮಾತೃ ಪಕ್ಷಕ್ಕೆ ಆಗಮಿಸಿದ್ದರು. 2018ರ ವಿಧಾನಸಭಾ ಚುನಾವಣೆಗೆ ವಿಜಯಪುರ ನಗರದಿಂದ ಸ್ಪರ್ದೆ ಮಾಡಲು ಕೇಸರಿ ಪಡೆಯ ವರಿಷ್ಟರು ಅವಕಾಶ ನೀಡಿದರು. 2018ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡೋ ಮುಂಚೆಯೇ ಯತ್ನಾಳ್ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಟ್ಟಿದ್ದರು. ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಪರಿಷತ್​ಗೆ ರಾಜೀನಾಮೆ ನೀಡಬೇಕಿತ್ತು. ಒಂದುವೇಳೆ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೆ ಯತ್ನಾಳ್ ರಾಜಕೀಯ ಭವಿಷ್ಯವೇ ಅಂತ್ಯವಾಗುತ್ತದೆ ಎಂದು ಆಗ ರಾಜಕೀಯ ಮೊಗಸಾಲೆಯಲ್ಲಿ ಆಗ ಜೋರಾದ ಮಾತುಗಳು ಕೇಳಿ ಬಂದಿದ್ದವು. ಆದರೆ, ರಿಸ್ಕ್ ತೆಗೆದುಕೊಂಡು ಗೆಲ್ಲುವ ಛಲ ಹಾಗೂ ಭರವಸೆಯಿಂದಿಗೆ ಯತ್ನಾಳ್ ರಾಜೀನಾಮೆ ನೀಡಿದ್ದರು. ಜೊತೆಗೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಸ್ಪರ್ಧಿಸಿ ಗೆದ್ದು ಬೀಗಿದ್ದರು. ಯತ್ನಾಳ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರವಾಗಿದ್ದ ಕಾರಣ 2018ರಲ್ಲಿ ಪರಿಷತ್ ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಎದುರಿಸುವಂತಾಗಿತ್ತು.

ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ : 2018ರಲ್ಲಿ ಉಳಿದ ಅವಧಿಗಾಗಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಗೂಳಪ್ಪ ಶೆಟಗಾರ ಅವರಿಗೆ ಟಿಕೆಟ್ ನೀಡಿತ್ತು. ಕಾಂಗ್ರೆಸ್ ಹೊಸ ಮುಖಕ್ಕೆ ಮಣೆ ಹಾಕಿತ್ತು. ಆಗಿನ ನೀರಾವರಿ ಸಚಿವ ಎಂ ಬಿ ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ಗೆ ಅವಕಾಶ ನೀಡಿತ್ತು. ಪಕ್ಷೇತರ ಐವರು ಅಭ್ಯರ್ಥಿಗಳು ಕಣದಲ್ಲಿದ್ದರು. 2018 ರ ಸೆಪ್ಟೆಂಬರ್ 6 ರಂದು ಮತದಾನ ನಡೆದಿತ್ತು. ಚುನಾವಣೆಯ ಮತದಾನದಲ್ಲಿ ಚಲಾವಣೆಯಾದ 8111 ಮತಗಳಲ್ಲಿ ಸುನೀಲಗೌಡ ಪಾಟೀಲ್ 4819 ಮತಗಳನ್ನು ಪಡೆದು ಪ್ರತಿಸ್ಪರ್ದಿ ಬಿಜೆಪಿಯ ಗೂಳಪ್ಪ ಶೆಟಗಾರ್ ಗೆ 2040 ಮತಗಳ ಅಂತರದ ಸೋಲುಣಿಸಿದ್ದರು. ಬಿಜೆಪಿಯ ಗೂಳಪ್ಪ ಶೆಟಗಾರ 2779 ಮತಗಳನ್ನು ಮಾತ್ರ ಪಡೆದು ಸೋಲುಂಡಿದ್ದರು. ಕಣದಲ್ಲಿದ್ದ ಇತರ ಐವರು ಒಟ್ಟು ಸೇರಿ ಕೇವಲ 59 ಮತಗಳನ್ನಷ್ಟೇ ಪಡೆದಿದ್ದರೆ 454 ಮತಗಳು ರಿಜೆಕ್ಟ್ ಆಗಿದ್ದವು. ಇದೀಗಾ ಪರಿಷತ್ ಸದಸ್ಯರ ಆಧಿಕಾರಾವಧಿ ಮುಕ್ತಾಯವಾದ ಕಾರಣ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ.

ಕಾಂಗ್ರೆಸ್​ಗೆ ಬಂಡಾಯದ ಬಿಸಿ: 2015ರಲ್ಲಿನ ಪರಿಷತ್ ಚುನಾವಣೆಯಲ್ಲಿ ಹಾಗೂ 2018ರ ವಿಧಾನ ಪರಿಷತ್​ನ ಉಪ ಚುನಾವಣೆಯಲ್ಲಿ ಸೋಲಿನ ಪಾಠ ಕಲಿತ ಬಿಜೆಪಿ ಈ ಬಾರಿ ಎಚ್ಚರಿಕೆ ಹೆಜ್ಜೆಯನ್ನು ಇಟ್ಟಿದೆ. ವಿಜಯಪುರ ಬಾಗಲಕೋಟ ದ್ವಿಸದಸ್ಯ ಸ್ಥಾನಗಿದ್ದರೂ ಓರ್ವ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿ ಗೆದ್ದೇ ಗೆಲ್ಲಿವ ಪ್ಲ್ಯಾನ್ ಹಾಕಿದೆ. ಬಿಜೆಪಿ ಬಾಗಲಕೋಟೆ ಮೂಲದ ಪಿ ಎಚ್ ಪೂಜಾರ ಅವರಿಗೆ ಟಿಕೆಟ್ ನೀಡಿ ಪ್ರಚಾರಕ್ಕೆ ಅಣಿಯಾಗಿದೆ. ಇತ್ತ ಕಾಂಗ್ರೆಸ್ ಸಹ ಓರ್ವ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದು ಬಿಜೆಪಿಯ ತಂತ್ರವನ್ನೇ ಅನುಸರಿಸಿದೆ. ಹಾಲಿ ಸದಸ್ಯ ಸುನೀಲ ಗೌಡ ಪಾಟೀಲ್ ಗೆ ಟಿಕೆಟ್ ನೀಡಿದೆ. ಆದರೆ ಈ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದ ಪರಿಷತ್ ವಿರೋಧ ಪಕ್ಷದ ನಾಯಕ ಹಾಳಿ ಪರಿಷತ್ ಸದಸ್ಯ ಎಸ್ ಆರ್ ಪಾಟೀಲ್ ಗೆ ಟಿಕೆಟ್ ಕೈ ತಪ್ಪಿದೆ. ಇದು ಸಹಜವಾಗಿಯೇ ಎಸ್ ಆರ್ ಪಾಟೀಲ್ ಗೆ ನಿರಾಸೆ ತಂದಿದೆ. ಕೆಲವಡೆ ಎಸ್ ಆರ್ ಪಾಟೀಲ್ ಈ ಕುರಿತು ಅಸಮಾಧಾನವನ್ನೂ ಪರೋಕ್ಷವಾಗಿ ಹೊರ ಹಾಕಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. 45 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಗೆ ಬಂಡಾಯದ ಬಿಸಿಯೂ ತಾಗಿದೆ.

ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಲೋಣಿ ಬಂಡಾಯ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದಾರೆ. ನನ್ನ ನಾಮಪತ್ರ ಹಿಂಪಡೆಯುವಂತೆ ಬಿಜೆಪಿ ಕಾಂಗ್ರೆಸ್ ಘಟಾನುಘಟಿ ನಾಯಕರು ಪ್ರಯತ್ನ ಮಾಡಿದರು. ನಾನು ನಾಮಪತ್ರ ಹಿಂಪಡೆಯಲ್ಲ. ನನಗೆ ಬಿಜೆಪಿ ಕಾಂಗ್ರೆಸ್ ನಿಂದ ಜೀವ ಭಯವಿದೆ. ನನಗೆ ರಕ್ಷಣೆ ಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಮಲ್ಲಿಕಾರ್ಜುನ ಲೋಣಿ ಸ್ಪರ್ಧೆ ಕಾಂಗ್ರೆಸ್ ಗೆ ಬಂಡಾವಾಗಿದ್ದರೂ ಸಹ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿದ್ದು ಸುಳ್ಳಲ್ಲ.

ವಿಜಯಪುರ, ಬಾಗಲಕೋಟೆ ದ್ವಿಸದಸ್ಯ ಸ್ಥಾನಗಳ ಪರಿಷತ್ ಚುನಾವಣೆಗೆ ಈ ಬಾರಿ ವಿಜಯಪುರ ಮಹಾನಗರ ಪಾಲಿಕೆ, ಅವಳಿ ಜಿಲ್ಲೆಗಳ 2 ಜಿಲ್ಲಾ ಪಂಚಾಯತಿಗಳ, 10 ತಾಲೂಕ್ ಪಂಚಾಯತಿಗಳ ಸದಸ್ಯರು ಮತದಾನ ಹಕ್ಕು ಹೊಂದಿಲ್ಲಾ. ವಿಜಯಪುರ ಮಹಾನಗರ ಪಾಲಿಕೆ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಎರಡು ಜಿಲ್ಲಾ ಪಂಚಾಯತಿಗಳಿಗೆ ಹಾಗೂ ಅವಳಿ ಜಿಲ್ಲೆಯ 10 ತಾಲೂಕ್ ಪಂಚಾಯತಿಗಳ ಸದಸ್ಯರ ಆಧಿಕಾರಾವಧಿ ಮುಕ್ತಾಯವಾಗಿದ್ದರೂ ಇನ್ನೂ ಹಲವಾರು ಕಾರಣಗಳಿಂದ ಚುನಾವಣೆ ನಡೆದಿಲ್ಲ. ಈ ಕಾರಣದಿಂದ ಇವರೆಲ್ಲರಿಗೆ ಈ ಬಾರಿ ನಡೆಯಲಿರೋ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಮಾಡೋ ಹಕ್ಕು ಇಲ್ಲದಂತಾಗಿದೆ.

2021ರ ಪರಿಷತ್ ಚುನಾವಣೆಯ ಸ್ಥಳಿಯ ಸಂಸ್ಥೆಗಳ ಮತದಾನ ಹಕ್ಕು ಪಡೆದವರು : ಪ್ರಸಕ್ತ ವಿಜಯಪುರ ಬಾಗಲಕೋಟೆ ದ್ವಿಸದಸ್ಯ ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ವಿಜಯಪುರ ಬಾಗಲಕೋಟೆಯ ಸ್ಥಳಿಯ ಸಂಸ್ಥೆಗಳ ಒಟ್ಟು 7390 ಮತದಾರರು ಮತದಾನ ಮಾಡುವ ಹಕ್ಕನ್ನು ಹೊಂದಿದ್ಧಾರೆ. ಇದರಲ್ಲಿ ಅವಳಿ ಜಿಲ್ಲೆಗಗಳ ತಲಾ 5 ರಂತೆ ಒಟ್ಟು 10 ನಗರ ಸಭೆಗಳ ಸದಸ್ಯರು, ವಿಜಯಪುರ ಜಿಲ್ಲೆಯ 202 ಗ್ರಾಮ ಪಂಚಾಯತಿ ಹಾಗೂ ಬಾಗಲಕೋಟೆಯ 191 ಗ್ರಾಮ ಪಂಚಾಯತಿಯ ಸದಸ್ಯರು ಮತ ಚಲಾವಣೆ ಮಾಡಲಿದ್ದಾರೆ. ಎರಡೂ ಜಿಲ್ಲೆಯ ಇಬ್ಬರು ಸಂಸದರು, 15 ಶಾಸಕರು, 2 ಪರಿಷತ್ ಸದಸ್ಯರು ಸಹ ಮತದಾನದ ಹಕ್ಕು ಪಡೆದಿದ್ದಾರೆ.

ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 3940 ಮತದಾರರು ಮತದಾನ ಮಾಡಲಿದ್ದಾರೆ. ಈ ಪೈಕಿ 1864 ಪುರುಷರು ಹಾಗೂ 2076 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 3450 ಮತದಾರರು ವೋಟಿಂಗ್ ಪವರ್ ಹೊಂದಿದ್ದಾರೆ. ಅದರಲ್ಲಿ 1674 ಪುರುಷರು ಹಾಗೂ 1776 ಮಹಿಳಾ ಸ್ಥಳಿಯ ಜನಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಇದೇ ಡಿಸೆಂಬರ್ 10ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಬಳಿಕ ಡಿಸೆಂಬರ್ 14ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ. ಅಂದು ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು ವಿಧಾನ ಪರಿಷತ್ ಗೆ ಯಾರಿಬ್ಬರನ್ನು ಕಳುಹಿಸಲಿದ್ದಾರೆ ಎಂಬುದು ಗೊತ್ತಾಗಲಿದೆ.

ವಿಶೇಷ ವರದಿ: ಅಶೋಕ ಯಡಳ್ಳಿ

ಇದನ್ನೂ ಓದಿ: ಪರಿಷತ್ ಚುನಾವಣೆ ಟಿಕೆಟ್ ಕೈತಪ್ಪಿದ ವಿಚಾರ: ಪಕ್ಷದ ನಿರ್ಣಯ ಗೌರವಿಸುವೆ, ಸ್ವಾಗತಿಸುವೆ ಎಂದ ಎಸ್​ಆರ್ ಪಾಟೀಲ್

ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ; ಜೆಡಿಎಸ್​ನಲ್ಲಿ ದೇವೇಗೌಡರ ಕುಟುಂಬದ್ದೇ ದರ್ಬಾರ್

Click on your DTH Provider to Add TV9 Kannada