ನಾಳೆ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ: ಬಿಜೆಪಿ, ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ
ವಿಜಯಪುರ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಜನವರಿ 26 ರಂದು ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದ್ದು, ಫಲಿತಾಂಶ ಪ್ರಕಟಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಜನವರಿ 29 ರಂದು ಅಥವಾ ಹೈಕೋರ್ಟ್ ಆದೇಶದ ನಂತರವಷ್ಟೇ ಫಲಿತಾಂಶ ಹೊರ ಬರಲಿದೆ.
ವಿಜಯಪುರ, ಜನವರಿ 26: ನಗರದ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆ (Mayor Election) ನಾಳೆ ನಡೆಯಲಿದೆ. ನಗರ ಸಭೆಯಿಂದ ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿದ ಬಳಿಕ ಕಾಂಗ್ರೆಸ್ ಪಕ್ಷವೇ ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿದುಕೊಂಡು ಬಂದಿದೆ. ಬಿಜೆಪಿಯ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದರೂ ಅಧಿಕಾರ ಮಾತ್ರ ಬಿಜೆಪಿ ಪಾಳಯಕ್ಕೇ ಗಗನ ಕುಸುಮವೇ ಆಗಿದೆ. ಈ ಬಾರಿಯಾದರೂ ಪಾಲಿಕೆ ಚುಕ್ಕಾಣಿ ತಮ್ಮ ಕೈಗೆ ತೆಗೆದುಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದೆ. ಇತ್ತ ಕಾಂಗ್ರೆಸ್ ಅಧಿಕಾರ ಬಿಟ್ಟು ಕೊಡಲ್ಲಾ ಎನ್ನುತ್ತಿದ್ದಾರೆ. ಇದರ ಮಧ್ಯೆ ಫಲಿತಾಂಶ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆಯೂ ಇದ್ದು, ನಾಳೆ ಮತದಾನ ಮಾತ್ರ ನಡೆಯಲಿದೆ.
ವಿಜಯಪುರ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮತದಾನ ಮಾತ್ರ ನಡೆಯಲಿದೆ. ನಂತರ ಕಲಬುರಗಿ ಹೈಕೋರ್ಟ್ ಯಾವಾಗ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟ ಮಾಡಲು ಆದೇಶ ನೀಡುತ್ತದೆಯೋ ಆಗ ಮತ ಎಣಿಕೆ ಫಲಿತಾಂಶ ಪ್ರಕಟವಾಗಲಿದೆ. ಹಿಂದುಳಿದ ವರ್ಗ ಎ ಗೆ ಮೀಸಲಾಗಿರುವ ಮೇಯರ್ ಸ್ಥಾನ ಹಾಗೂ ಸಾಮಾನ್ಯ ಮಹಿಳಾ ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಾಗಿದೆ. ಒಟ್ಟು 35 ಪಾಲಿಕೆ ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಪಕ್ಷೇತರ 5, ಎಂಐಎಂ 2, ಜೆಡಿಎಸ್ 1 ಸ್ಥಾನ ಪಾಲಿಕೆ ಹೊಂದಿವೆ.
ಇದನ್ನೂ ಓದಿ: ಅರಮನೆ ಮೈದಾನ ಬಳಕೆಗೆ ಸರ್ಕಾರ ಸುಗ್ರೀವಾಜ್ಞೆ ಅಸ್ತ್ರ: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
11 ಜನ ಶಾಸಕರು, ಸಂಸದರು ಸೇರಿ 46 ಜನ ಮತದಾನಕ್ಕೆ ಹಕ್ಕು ಹೊಂದಿದ್ದಾರೆ. ಇನ್ನು ಬಿಜೆಪಿಯ 17 ಸದಸ್ಯರ ಜೊತೆಗೆ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಹಾಗೂ ಕೇಶವ್ ಪ್ರಸಾದ್ ಮತದಾನ ಅಧಿಕಾರ ಹೊಂದಿದ್ದಾರೆ. ಇತ್ತ ಕಾಂಗ್ರೆಸ್ನ 10 ಜನ ಸದ್ಯರು ಹಾಗೂ ಸಚಿವ ಎಂ.ಬಿ ಪಾಟೀಲ್, ಶಾಸಕ ವಿಠಲಕಟಕದೊಂಡ ವಿಧಾನ ಪರಿಷತ್ ಸದಸ್ಯ ಸುನೀಲ್ ಗೌಡ ಪಾಟೀಲ್, ತಿಪ್ಪಣ್ಣ ಕಮಕನೂರ, ಜಗದೇವ ಗುತ್ತಿಗೆದಾರ್ ಬಾಕಲಿಶ ಬಾನು ಹಾಗೂ ಎ. ವಸಂತಕುಮಾರ್ ಸೇರಿ 17 ಜನ ಮತದಾನ ಅಧಿಕಾರ ಹೊಂದಿದ್ದಾರೆ.
ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಚುನಾವಣೆ ತುರುಸಿನಿಂದ ಕೂಡಿದೆ. ನಗರ ಸಭೆಯಿಂದ ಪಾಲಿಕೆಯ ಬಡ್ತಿ ಪಡೆದ ಬಳಿಕ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲಾ. ಈ ಬಾರಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ವಶಕ್ಕೆ ಬಿಜೆಪಿ ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಶಾಸಕ ಯತ್ನಾಳ್ ಹಾಗೂ ಸಂಸದ ಜಿಗಜಿಗಣಿ ಮತಳೊಂದಿಗೆ ಪರಿಷತ್ ಸದಸ್ಯತರಾದ ಎನ್ ರವಿಕುಮಾರ ಹಾಗೂ ಕೇಶವ್ ಪ್ರಸಾದ್ ಮತಗಳ ಬಲವನ್ನು ನೆಚ್ಚಿಕೊಂಡಿವೆ. 17 ಸದಸ್ಯರ ಮತಗಳು ಹಾಗೂ ಶಾಸಕರ ಸಂಸದರ 4 ಮತಗಳು ಸೇರಿ ಒಟ್ಟು 21 ಮತಗಳು ನಮ್ಮಲ್ಲಿ ಇವೆ ಎಂಬುದು ಬಿಜೆಪಿಗರ ಮಾತಾಗಿದೆ.
ಇತ್ತ ಕಾಂಗ್ರೆಸ್ ಸಹ ಚುನಾವಣಾ ಚಾಣಾಕ್ಷತನ ಮೆರೆದಿದೆ. ತನ್ನ 10 ಜನ ಸದಸ್ಯರು ಸಚಿವ ಎಂ ಬಿ ಪಾಟೀಲ್, ಶಾಸಕ ವಿಠಲ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ತಿಪ್ಪಣ್ಣ ಕಮಕನೂರ, ಜಗದೇವ ಗುತ್ತಿಗೆದಾರ್ ಬಾಕಲಿಶ ಬಾನು ಹಾಗೂ ಎ ವಸಂತಕುಮಾರ್ ಮತಗಳ ಬಲ ನಮಗಿದೆ. ಜೊತೆಗೆ ಪಕ್ಷೇತರ 5, ಎಂಐಎಂ 2, ಜೆಡಿಎಸ್ 1 ಸದಸ್ಯರ ಬೆಂಬಲ ನಮಗಿದೆ. ಒಟ್ಟು 26 ಮತಳ ಬಲ ನಮಗಿದೆ, ನಾವೇ ಅಧಿಕಾರ ಹಿಡಿಯುತ್ತೇವೆಂಬ ಲೆಕ್ಕಾಚಾರ ಹೊಂದಿದೆ.
ಹೈಕೋರ್ಟ್ ಮೊರೆ
ಈ ನಡುವೆ ಬಿಜೆಪಿಯ ಕೆಲ ಸದಸ್ಯರು ಪಾಲಿಕೆಗೆ 2002 ರಲ್ಲಿ ಚುನಾವಣೆ ನಡೆದಿದ್ದು ಆಗ ಯಾವುದೇ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿಲ್ಲಾ. ಆಯ್ಕೆಯಾಗಿ ಒಂದು ತಿಂಗಳಲ್ಲಿ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲವೆಂದು ಒಂದು ಪಿಟಿಷನ್ ಹಾಕಿದ್ದಾರೆ. ಮತ್ತೊಂದು ಪಿಟಿಷನ್ನಲ್ಲಿ ಕಾಂಗ್ರೆಸ್ನ ಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರ, ಜಗದೇವ ಗುತ್ತಿಗೆದಾರ್ ಬಾಕಲಿಶ ಬಾನು ಹಾಗೂ ಎ ವಸಂತಕುಮಾರ್ ಹೆಸರುಗಳು ಕಾನೂನು ಬಾಹೀರವಾಗಿ ಮತದಾನ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ, ಕಾರಣ ಮತದಾನ ಮಾಡುವುದನ್ನು ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅವರು ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದರೂ ಸಹ ಎಣಿಕೆಗೆ ಪರಿಗಣಿಸಬಾರದು. ನ್ಯಾಯಾಲಯದ ಆದೇಶ ಘೋಷಣೆ ಮಾಡುವರೆಗೂ ಚುನಾವಣಾ ಫಲಿತಾಂಶ ಘೋಷಣೆ ಮಾಡಬಾರದು ಎಂದು ಮನವಿ ಸಲ್ಲಿಕೆಯಾಗಿದೆ. ಈ ಕುರಿತು ಹೈಕೋರ್ಟ್ನಲ್ಲಿ ಜನವರಿ 29 ರಂದು ವಿಚಾರಣೆ ನಡೆದು ತೀರ್ಪು ಹೊರ ಬರಲಿದೆ. ಒಂದು ವೇಳೆ ತೀರ್ಪು ಬಾರದಿದ್ದಲ್ಲಿ ಮತ್ತು ಎಂದೂ ತೀರ್ಪು ಹೊರ ಬರುತ್ತದೆಯೋ ಅಂದೇ ಮತ ಎಣಿಕೆ ಹಾಗೂ ಫಲತಾಂಶ ಪ್ರಕಟವಾಗಲಿದೆ.
ಎಂ.ಬಿ ಪಾಟೀಲ್, ಶಾಸಕ ಯತ್ನಾಳ್ ಹೇಳಿದ್ದಿಷ್ಟು
ಈ ಕುರಿತು ನಗರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್, ನಾಳೆ ಚುನಾವಣೆ ನಡೆಯುತ್ತದೆ. ಹೈಕೋರ್ಟ್ನಲ್ಲಿ ಪಿಟಿಷನ್ ಇದೆ. ಹೈಕೋರ್ಟ್ ಆದೇಶ ಪಾಲನೆ ಮಾಡುತ್ತೇವೆಂದರು. ಇನ್ನು ಈ ಕುರಿತು ಮಾತನಾಡಿದ ಶಾಸಕ ಯತ್ನಾಳ್, ಕಾಂಗ್ರೆಸ್ಸಿನ ನಾಲ್ಕು ಪರಿಷತ್ ಸದಸ್ಯರಿಗೆ ಮತ ಹಾಕೋ ಅನುಮತಿ ನೀಡಿದ್ಧಾರೆ. ಆದರೆ ಮತ ಎಣಿಕೆ ಮಾಡಲು ಪರಿಗಣಿಸಲ್ಲಾ. ನಂತರ ಮುಂದಿನ 29 ರಂದು ಹೈಕೋರ್ಟ್ ಆದೇಶ ಬಂದ ನಂತರ ಫಲಿತಾಂಶ ಪ್ರಕಟವಾಗುತ್ತದೆ. ಯಾರು ಮೇಯರ್, ಉಪ ಮೇಯರ್ ಆಯ್ಕೆಯಾಗುತ್ತಾರೆ ಎಂದು ಹೇಳಲ್ಲಾ. ಹಿಂದೆ ಬಿಜೆಪಿ ಶಾಸಕರಿದ್ದವರು ಪಾಲಿಕೆಯಲ್ಲಿ ನಗರ ಸಭೆಯಲ್ಲಿ ಬಿಜೆಪಿ ಸೋಲಿಸಲು ಸಾಥ್ ನೀಡುತ್ತಿದ್ದರು. ಈಗಾ ನಮ್ಮಲ್ಲಿ ಒಕ್ಕಟ್ಟಿದೆ. ಯಾವುದೇ ಜಗಳ ಇಲ್ಲಾ. ನಾವು 17 ಸದಸ್ಯರು ಸೇರಿದಂತೆ ಶಾಸಕರು ಸಂಸದರ ಮತ ಹಿಡಿದು 21 ಮತಗಳು ಇದೆ ನೋಡೋಣವೆಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿಗೆ ಆದ್ಯತೆ ನೀಡಿ: ನಿರ್ಮಲಾ ಸೀತಾರಾಮನ್ಗೆ ಡಿಕೆ ಶಿವಕುಮಾರ್ ಪತ್ರ
ಸದ್ಯ ಮಹಾನಗರ ಪಾಲಿಕೆಯ ಅಧಿಕಾರ ಚುಕ್ಕಾಣಿಗಾಗಿ ತೀವ್ರ ಹಣಾಹಣಿ ನಡೆದಿದೆ. ಶತಾಯಗತಾಯ ಮಾಡಿಯಾದರೂ ಪಾಲಿಕೆಯನ್ನು ಕೇಶರಿ ವಶಕ್ಕೆ ಪಡೆಯಲು ಬಿಜೆಪಿ ಮುಂದಾಗಿದೆ. ಇದಕ್ಕೆ ಕಾಂಗ್ರೆಸ್ ಸಹ ಪ್ರತ್ಯುತ್ತರ ಹೆಣೆದಿದೆ. ನಾಳೆ ಚುನಾವಣೆ ಮಾತ್ರ ನಡೆಯಲಿದ್ದು ನಂತರ ಜನವರಿ 29 ರಂದು ಅಥವಾ ಮುಂದಿನ ಹೈಕೋರ್ಟ್ ಆದೇಶದ ಬಳಿಕ ಪಾಲಿಕೆಯ 22 ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ಮತ ಎಣಿಕೆ ಹಾಗೂ ಫಲಿತಾಂಶ ಹೊರ ಬರಲಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.