ಯಾದಗಿರಿ: ಕಲುಷಿತ ನೀರು ಸೇವಿಸಿ ವಾಂತಿ ಭೇಧಿಯಿಂದ ಆಸ್ಪತ್ರೆ ಸೇರಿದ 50 ಕ್ಕೂ ಅಧಿಕ ಗ್ರಾಮಸ್ಥರು; ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಯೇ ಕಾರಣವಂತೆ
ಆ ಗ್ರಾಮದ ಜನ ವರ್ಷಗಳಿಂದ ಅದೆ ನೀರಿನ ಟ್ಯಾಂಕ್ನಿಂದ ಸರಬರಾಜು ಆಗುವ ನೀರು ಸೇವನೆ ಮಾಡುತ್ತಿದ್ದಾರು. ಆದ್ರೆ ಕಳೆದ ಒಂದು ವಾರದಿಂದ ಅದೇ ನೀರನ್ನ ಕುಡಿಯಲು ಹೆದರುವಂತಾಗಿದೆ. ಗ್ರಾಮದಲ್ಲಿ ಪೈಪ್ಗಳು ಒಡೆದು ಹೋಗಿದ್ದರಿಂದ ಚರಂಡಿ ನೀರು ಸೇರಿಕೊಂಡು ಕುಡಿಯುವ ನೀರು ಕಲುಷಿತ ಆಗಿರುವ ಶಂಕೆ ವ್ಯಕ್ತವಾಗಿದೆ. ಇದೆ ಕಾರಣಕ್ಕೆ ಕಳೆದ ಒಂದು ವಾರದಿಂದ 50 ಕ್ಕೂ ಅಧಿಕ ಜನ ವಾಂತಿ ಭೇದಿಯಿಂದ ಆಸ್ಪತ್ರೆಗೆ ಸೇರಿದ್ದು ಗ್ರಾಮದಲ್ಲಿ ಈಗ ಭಯದ ವಾತವರಣ ಶುರುವಾಗಿದೆ.
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಕಲುಷಿತ ನೀರು ಸೇವನೆ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ಅದು ಅಲ್ಲದೆ ಕಳೆದ ಕೆಲ ದಿನಗಳ ಹಿಂದೆ ಇದೆ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 3 ಜನ ಪ್ರಾಣ ಕಳೆದುಕೊಂಡಿದ್ದರು. 80 ಕ್ಕೂ ಅಧಿಕ ಜನರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಈ ಘಟನೆ ಮರೆಯುವ ಮುನ್ನವೆ ಮತ್ತೆ ಇದೆ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಪ್ರಕರಣಗಳು ಪತ್ತೆಯಾಗುತ್ತಿವೆ. ಗ್ರಾಮದಲ್ಲಿ ಕಳೆದ 10 ದಿನಗಳಿಂದ ವಾಂತಿ ಭೇದಿ ಪ್ರಕರಣಗಳು ಪತ್ತೆಯಾಗುತ್ತಿವೆ. ಇಲ್ಲಿವರೆಗೆ ಸುಮಾರು 50 ಅಧಿಕ ಜನರಲ್ಲಿ ವಾಂತಿ ಭೇದಿ ಕಂಡು ಬಂದಿದೆ. ಹೀಗಾಗಿ ಗ್ರಾಮದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಕೂಡಲೇ ಪ್ರಾಥಮಿಕವಾಗಿ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದಾರೆ. ಬಳಿಕ ಯಾದಗಿರಿ ಜಿಲ್ಲಾಸ್ಪತ್ರೆ ಸೇರಿದಂತೆ ನಾನಾ ಕಡೆ ಕಳುಹಿಸಿ ಕೊಡುತ್ತಿದ್ದಾರೆ. ಸದ್ಯ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 7, ರಾಯಚೂರಿನ ರಿಮ್ಸ್ ನಲ್ಲಿ 3, ಗುರುಮಠಕಲ್ ಸಮೂದಾಯ ಆರೋಗ್ಯ ಕೇಂದ್ರದಲ್ಲಿ 3 ಹಾಗೂ ಯಾದಗಿರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ 4 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಬೇರೆ ಕಡೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಸೇರಿದ್ದಾರೆ. ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಉಲ್ಬಣವಾಗುವುದ್ದಕ್ಕೆ ಕಾರಣವೇ ಗ್ರಾಮದಲ್ಲಿ ನಡೆಯುತ್ತಿರುವ ಜಲ ಜೀವನ ಮಿಷನ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ:ವಿಜಯನಗರ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, ಹಲವರು ಅಸ್ವಸ್ಥ
ಇನ್ನು ಗ್ರಾಮದ ಪ್ರತಿ ಮನೆಗೆ ಬೋರವೆಲ್ ನೀರು ಕುಡಿಯಲು ಸರಬರಾಜು ಆಗುತ್ತಿವೆ. ಕಳೆದ 30 ರಿಂದ 35 ವರ್ಷದಿಂದ ಬೋರವೆಲ್ ನೀರು ಗ್ರಾಮದಲ್ಲಿರುವ ಎರಡು ಓವರ್ ಹೆಡ್ ಟ್ಯಾಂಕ್ಗೆ ಲಿಫ್ಟ್ ಮಾಡಲಾಗುತ್ತಿದೆ. ಬಳಿಕ ಪೈಪ್ ಲೈನ್ ಮೂಲಕ ಪ್ರತಿ ಮನೆಗಳಲ್ಲಿರುವ ನಲ್ಲಿಗಳಿಗೆ ಗ್ರಾಮ ಪಂಚಾಯತಿಯಿಂದ ಸರಬರಾಜು ಮಾಡಲಾಗುತ್ತಿದೆ. ಆದರೆ ಇಲ್ಲಿಯವರೆಗೂ ಕಲುಷಿತ ನೀರು ಸೇವನೆಯಂತ ಯಾವುದೇ ಪ್ರಕರಣಗಳು ಕಂಡು ಬಂದಿರಲಿಲ್ಲ. ಆದರೆ ಕಳೆದ ವಾರದಿಂದ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಗ್ರಾಮದಲ್ಲಿ ವಾಂತಿ ಭೇದಿ ಆರಂಭವಾಗಿದೆ.
ಇನ್ನು ಇದಕ್ಕೆ ಕಾರಣ, ಸರ್ಕಾರದಿಂದ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭವಾಗಿದೆ. ಜೆಜೆಎಂ ಯೋಜನೆಯ ಪೈಪ್ ಲೈನ್ ಕೆಲಸ ಮಾಡುವಾಗ ಓವರ್ ಹೆಡ್ ಟ್ಯಾಂಕ್ಗೆ ಲಿಂಕ್ ಇರುವ ಪೈಪ್ ಲೈನ್ ಡ್ಯಾಮೇಜ್ ಮಾಡಲಾಗಿದೆ. ಇದೆ ಕಾರಣಕ್ಕೆ ಚರಂಡಿ ನೀರು ಹಳೆ ಪೈಪ್ ಗಳಲ್ಲಿ ಸೇರಿಕೊಂಡಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಇದರ ಜೊತೆಗೆ ಕಳೆದ ಕೆಲ ದಿನಗಳ ಹಿಂದೆ ಮುಂಬೈನಿಂದ ಕೆಲವರು ಬಂದಿದ್ರು ಹೀಗಾಗಿ ಅವರಲ್ಲಿಯೂ ಸಹ ವಾಂತಿ ಭೇದಿ ಕಂಡು ಬಂದಿದ್ದೆ. ವಾಂತಿ ಭೇದಿ ಕಂಡು ಬಂದ ಕೂಡಲೇ ವೈದ್ಯರ ತಂಡ ಗ್ರಾಮದಲ್ಲಿ ಬಿಡು ಬಿಟ್ಟಿದೆ. ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರ ಸಹಕಾರದಿಂದ ವಾಂತಿ ಭೇದಿ ಪ್ರಕರಣಗಳು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆ ಸೇರಿದಂತೆ ನಾನಾ ಕಡೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಸರಬರಾಜು ಆಗುವ ನೀರಿನ ಸ್ಯಾಂಪಲ್ ಟೆಸ್ಟ್ಗಾಗಿ ಕಳುಹಿಸಲಾಗಿದೆ ಅಂತಾರೆ ಯಾದಗಿರಿ ಡಿಎಚ್ಒ.
ಇದನ್ನೂ ಓದಿ:Phalguni river: 11 ಗ್ರಾಮಗಳಿಗೆ ಕೊಳಚೆ ನೀರು ಪೂರೈಕೆ, ಮಂಗಳೂರಿನ ಫಲ್ಗುಣಿ ನದಿ ಸೇರುತ್ತಿದೆ ಕಲುಷಿತ ನೀರು
ಒಟ್ಟಿನಲ್ಲಿ ಅನಪುರ ಗ್ರಾಮದಲ್ಲಿ ಇದೆ ರೀತಿ ಕಲುಷಿತ ನೀರು ಸೇವನೆಯಿಂದಾಗೆ ಮೂರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಚಿನ್ನಕಾರ ಗ್ರಾಮದಲ್ಲಿ ಪರಸ್ಥಿತಿ ತೀರ ಬಿಗಡಾಯಿಸಿಲ್ಲ, ಆದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಉಲ್ಭಣವಾಗಿರುವ ವಾಂತಿ ಭೇದಿಯನ್ನ ಕಂಟ್ರೋಲ್ಗೆ ತಂದು ಜನರಲ್ಲಿ ಆವರಿಸಿಕೊಂಡ ಭಯ ಹೋಗಲಾಡಿಸಬೇಕಾಗಿದೆ.
ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ