ಮಕ್ಕಳ ದತ್ತು ಪ್ರಕ್ರಿಯೆ ಏಕಿಷ್ಟು ಕಠಿಣ? ಏನೇನಿವೆ ನಿಯಮಗಳು?

ಮಗುವಿಗೆ ಶಿಕ್ಷಣ, ಉತ್ತಮ ಆಹಾರ ಸೇರಿದಂತೆ ಉತ್ತಮ ಜೀವನ ಕೊಡಿಸುವುದಾಗಿ ಹೇಳಿ ಪೋಷಕರ ಒಪ್ಪಿಗೆ ಪಡೆದು ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಮಗುವೊಂದನ್ನು ಪಡೆದುಕೊಂಡಿದ್ದರು. ಆದರೆ ಆಕೆಯನ್ನು ಪೊಲೀಸರು ಬಂಧಿಸಿದ್ದರು. ಹಾಗಿದ್ದರೆ ದತ್ತು ನಿಯಮಗಳು ಅಷ್ಟು ಕಠಿಣವೇ? ಮಕ್ಕಳ ದತ್ತು ಪಡೆಯಲು ಇರುವ ನಿಯಮಗಳೇನು? ನಿಯಮಗಳು ಕಠಿಣವಾಗಿರಲು ಕಾರಣವೇನು? ಇಲ್ಲಿದೆ ಪೂರ್ಣ ಮಾಹಿತಿ.

ಮಕ್ಕಳ ದತ್ತು ಪ್ರಕ್ರಿಯೆ ಏಕಿಷ್ಟು ಕಠಿಣ? ಏನೇನಿವೆ ನಿಯಮಗಳು?
Child Adoption law in India
Follow us
ಮಂಜುನಾಥ ಸಿ.
|

Updated on:Apr 25, 2024 | 12:03 PM

ಕೂಲಿ ಕೆಲಸಕ್ಕೆ ಉತ್ತರ ಕರ್ನಾಟಕದ ಹಳ್ಳಿಯೊಂದರಿಂದ ಬೆಂಗಳೂರಿಗೆ ಬಂದಿದ್ದ ದಂಪತಿಯ ಹೆಣ್ಣು ಮಗುವೊಂದನ್ನು ತಾವು ಸಾಕುವುದಾಗಿ ಹೇಳಿ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಗೌಡ ತಮ್ಮ ಬಳಿ ಇರಿಸಿಕೊಂಡಿದ್ದರು. ವಿಡಿಯೋ ಒಂದರಲ್ಲಿ ಪುಟ್ಟ ಬಾಲಕಿಯನ್ನು ತೋರಿಸಿ, ಈ ಮಗುವನ್ನು ತಾವೇ ಸಾಕುವುದಾಗಿ ಸೋನು ಹೇಳಿಕೊಂಡಿದ್ದರು. ವಿಡಿಯೋ ಗಮನಿಸಿದ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಯೊಬ್ಬರು ಸೋನು ಗೌಡ ವಿರುದ್ಧ ದೂರು ದಾಖಲಿಸಿದರು. ದೂರಿನನ್ವಯ ಸೋನು ಗೌಡ ಅವರನ್ನು ಪೊಲೀಸರು ಬಂಧಿಸಿದರು. 15 ದಿನಗಳ ಜೈಲು ವಾಸದ ಬಳಿಕ ಜಾಮೀನಿನ ಮೇಲೆ ಸೋನು ಹೊರಬಂದಿದ್ದಾರೆ.

ಸೋನು ಗೌಡ ಬಂಧನವಾದಾಗ ಹಲವು ಪ್ರಶ್ನೆಗಳು ಎದ್ದಿದ್ದವು. ಮಗುವನ್ನು ಚೆನ್ನಾಗಿ ನೋಡಿಕೊಂಡು, ಅದಕ್ಕೊಂದು ಒಳ್ಳೆಯ ಜೀವನ ನೀಡುವ ಉದ್ದೇಶದಿಂದಲೇ ಸೋನು ಗೌಡ, ಪೋಷಕರ ಒಪ್ಪಿಗೆ ಪಡೆದೇ ಮಗುವನ್ನು ಪಡೆದುಕೊಂಡಿದ್ದರು. ಎಷ್ಟೋ ಮಂದಿ ಬಡಕುಟುಂಬದಲ್ಲಿ ಜನಿಸಿದ ಮಕ್ಕಳು ಒಳ್ಳೆಯ ಆಹಾರ, ಶಿಕ್ಷಣ ಸಿಗದೆ ವಂಚಿತರಾಗುತ್ತಿದ್ದಾರೆ. ಹಣವುಳ್ಳವರು ಅವರಿಗೆ ಒಳ್ಳೆಯ ಜೀವನ ಕೊಡುವುದಾದರೆ ತಪ್ಪೇನು? ಎಂದು ಕೆಲವರು ಪ್ರಶ್ನಿಸಿದ್ದರು. ಅದು ಸಹಜವೂ ಹೌದು. ಮಕ್ಕಳಿಗೆ ಉತ್ತಮ ಜೀವನ ಸಿಗಬೇಕೆಂಬುದು ಸರ್ಕಾರ ಸೇರಿದಂತೆ ಎಲ್ಲರ ಆಶಯವೂ ಹೌದು. ಹಾಗೆಂದ ಮಾತ್ರಕ್ಕೆ ಬಡವರ ಮಕ್ಕಳನ್ನು ಶ್ರೀಮಂತರಿಗೆ ಕೊಟ್ಟುಬಿಡಲಾಗುವುದಿಲ್ಲ. ಭಾರತದಲ್ಲಿ ದತ್ತು ಪ್ರಕ್ರಿಯೆಗೆ ನಿರ್ದಿಷ್ಟ ಕಾನೂನು, ನಿಯಮಗಳು ಇವೆ. ಮಗುವಿಗೆ ಉತ್ತಮ ಜೀವನ ನೀಡುವ ಜೊತೆಗೆ ಮಗುವಿನ ಭಾವನೆಗಳ ಬಗ್ಗೆ, ಮಗು ಬೆಳೆಯಲಿರುವ ವಾತಾವರಣ, ಮಗುವಿಗೆ ಎದುರಾಗಬಹುದಾದ ಸವಾಲುಗಳು, ಮಕ್ಕಳ ಹಕ್ಕು ಇನ್ನೂ ಹಲವು ಅಂಶಗಳನ್ನು ಈ ನಿಯಮಗಳು ಒಳಗೊಂಡಿವೆ.

ದತ್ತು ಪ್ರಕ್ರಿಯೆಗೆ ಭಾರತದಲ್ಲಿ ಕೆಲವು ಕಾಯ್ದೆಗಳು, ನಿಯಮಗಳೂ ಇವೆ. 1990 ರಲ್ಲಿ ಸ್ಥಾಪನೆಯಾದ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಟಿ-CARA) ಭಾರತದಲ್ಲಿ ಈ ದತ್ತು ಪ್ರಕ್ರಿಯೆಗಳ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತದೆ. ಇದೊಂದು ಶಾಸನಬದ್ಧ ಸಂಸ್ಥೆಯಾಗಿದೆ. ಇದರ ಅಂಗಸಂಸ್ಥೆಯಾದ (SARA) ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರವು ರಾಜ್ಯವಾರು ದತ್ತು ಪ್ರಕ್ರಿಯೆಗಳನ್ನು ಕಾಯ್ದೆ ಹಾಗೂ ನಿಯಮಗಳಿಗೆ ಒಳಪಟ್ಟು ಉಸ್ತುವಾರಿ ಮಾಡುತ್ತವೆ.

ಯಾವುದೇ ಒಬ್ಬ ಮಹಿಳೆ/ಪುರುಷ ಅಥವಾ ದಂಪತಿ ದತ್ತು ಪಡೆಯಲು ಪ್ರಸ್ತುತ ಭಾರತದಲ್ಲಿ ಹಲವು ಕಠಿಣ ನಿಯಮಗಳಿವೆ. ಈ ನಿಯಮಗಳು ಮಗುವಿನ ಒಳಿತಾಗಿಯೇ ಮಾಡಲಾಗಿವೆ. ದತ್ತು ಪಡೆಯುವ ಕ್ರಮವನ್ನು ಇದೀಗ ಆನ್​ಲೈನ್ ಮಾಡಲಾಗಿದ್ದು, ಆನ್​ಲೈನ್ ಮೂಲಕವೇ ಪೋಷಕರು ಅರ್ಜಿಗಳನ್ನು ಸಲ್ಲಿಸಿ, ರಾಜ್ಯ ದತ್ತು ಸಂಪನ್ಮೂಲ ಪ್ರಾಧಿಕಾರ ಹಾಗೂ ಮಕ್ಕಳ ಹಕ್ಕು ರಕ್ಷಣಾ ಇಲಾಖೆಯ ತನಿಖೆ, ವಿಚಾರಣೆಗಳನ್ನು ಎದುರಿಸಿದ ಬಳಿಕವಷ್ಟೆ ಮಗುವನ್ನು ದತ್ತು ಪಡೆಯಬಹುದಾಗಿದೆ. ಭಾರತದಲ್ಲಿ ಪ್ರಸ್ತುತ ಎರಡು ಕಾಯ್ದೆಗಳ ಅಡಿಯಲ್ಲಿ ದತ್ತು ಪ್ರಕ್ರಿಯೆ ನಡೆಯುತ್ತದೆ. ಮೊದಲನೆಯದು ಹಿಂದು ಅಡಾಪ್ಷನ್ ಮೇಂಟೆನೆನ್ಸ್ ಆಕ್ಟ್ ಎರಡನೇಯದ್ದು ಬಾಲ ನ್ಯಾಯ ಕಾಯ್ದೆ (ಜ್ಯುವಿನೈಲ್ ಜಸ್ಟಿಸ್ ಆಕ್ಟ್) ದತ್ತು ನಿಯಮಗಳ ಅಡಿಯಲ್ಲಿ ಮಗುವನ್ನು ದತ್ತು ಪಡೆಯಬಹುದಾಗಿದೆ.

ಹಿಂದು ಅಡಾಪ್ಷನ್ ಕಾಯ್ದೆಯಲ್ಲಿ ಹಿಂದೂ ಮಗುವನ್ನು ಹಿಂದೂ ಕುಟುಂಬಕ್ಕೆ ಮಾತ್ರವೇ ದತ್ತು ನೀಡಬಹುದಾಗಿದೆ. ಇದರಲ್ಲಿ ಕರಾರು ಪತ್ರಗಳ ನೊಂದಣಿ ಮೂಲಕ ಈ ದತ್ತು ಪ್ರಕ್ರಿಯೆ ನಡೆಯುತ್ತದೆ. ಬಾಲ ನ್ಯಾಯ ಕಾಯಿದೆಯಡಿ ಅನಾಥ, ಪೋಷಕರಿಂದ ತ್ಯಜಿಸಲ್ಪಟ್ಟ ಮತ್ತು ನೀಡಲಾದ (orphan, abandoned, surrendered) ಮಕ್ಕಳನ್ನು ದತ್ತು ಪಡೆಯಬಹುದಾಗಿದೆ. ಪೋಷಕರ ಮರಣದಿಂದ ಅನಾಥರಾದ ಮಕ್ಕಳು, ತಾಯಿ ಅಥವಾ ದಂಪತಿಯಿಂದ ತ್ಯಜಿಸಲ್ಪಟ್ಟ ಮಕ್ಕಳು ಹಾಗೂ ಪೋಷಕರು ತಮ್ಮ ಆರ್ಥಿಕ, ಮಾನಸಿಕ, ಆರೋಗ್ಯ ಸ್ಥಿತಿಯ ಕಾರಣದಿಂದ ಮಕ್ಕಳನ್ನು ಸಾಕಲು ಸಾಧ್ಯವಾಗುತ್ತಿಲ್ಲವೆಂದು ಹೇಳಿ ದತ್ತು ನೀಡಲು ಒಪ್ಪಿಸಿದ ಮಕ್ಕಳನ್ನು ಶಾಸನಬದ್ಧ ಸಂಸ್ಥೆಗಳ ಮೂಲಕ ಆಸಕ್ತ ಮತ್ತು ಅರ್ಹ ಪೋಷಕರಿಗೆ ದತ್ತು ನೀಡಲಾಗುತ್ತದೆ. ಈ ಪ್ರಕ್ರಿಯೆಯು ಕೆಲವು ಕಠಿಣ ನಿಯಮಗಳು, ತನಿಖೆ, ವಿಚಾರಣೆಗಳನ್ನು ಒಳಗೊಂಡಿದೆ.

ಮಗುವನ್ನು ದತ್ತು ಪಡೆಯಲು ಇಚ್ಛಿಸುವ ಪುರುಷ/ಮಹಿಳೆ ಅಥವಾ ದಂಪತಿಗಳು ಕರ್ನಾಟಕದಲ್ಲಿ ಜಿಲ್ಲಾವಾರು ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯಲ್ಲಿ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಾನ, ದೈಹಿಕ ಹಾಗೂ ಮಾನಸಿಕ ಆರೋಗ್ಯ, ವೃತ್ತಿ, ದತ್ತು ಪಡೆಯುವ ಉದ್ದೇಶ, ವಿಳಾಸ, ದಾಂಪತ್ಯ ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅದಾದ ಬಳಿಕ ಆಯ್ಕೆಯಾದ ದಂಪತಿ ಅಥವಾ ವ್ಯಕ್ತಿಯ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆಯ ಸದಸ್ಯರು ಅರ್ಜಿದಾರರ ಮನೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿದಾರರ ಸುದೀರ್ಘ ವಿಚಾರಣೆ ನಡೆಸುತ್ತಾರೆ. ಮಗು ಬೆಳೆಯಲು ಸೂಕ್ತ ವಾತಾವರಣ ಆ ಮನೆಯಲ್ಲಿ ಇದೆಯೇ ಎಂಬುದನ್ನು ಖುದ್ದಾಗಿ ನೋಡಿ ದಾಖಲಿಸಿಕೊಳ್ಳುತ್ತಾರೆ. ಅರ್ಜಿದಾರರು ಅರ್ಜಿಯಲ್ಲಿ ನೀಡಿರುವ ಉತ್ತರಗಳು, ಸಲ್ಲಿಸಿರುವ ದಾಖಲೆಗಳು ಸರಿಯಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. ಪ್ರಶ್ನೋತ್ತರಗಳ ಮೂಲಕ ಅರ್ಜಿದಾರರ ಮಾನಸಿಕ ಆರೋಗ್ಯ ಸರಿಯಿದೆಯೇ? ದತ್ತು ಪಡೆಯಲು ಅವರು ನೀಡುತ್ತಿರುವ ಕಾರಣ ಸೂಕ್ತವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಆ ಬಳಿಕ ಅರ್ಜಿದಾರರ ನೆರೆ-ಹೊರೆಯವರು, ಸಂಬಂಧಿಗಳ ವಿಚಾರಣೆ ನಡೆಸುತ್ತಾರೆ. ಅರ್ಜಿದಾರರ ಮೇಲೆ ಯಾವುದಾದರೂ ಕ್ರಿಮಿನಲ್ ಮೊಕದ್ದಮೆಗಳು ಇವೆಯೇ ಎಂಬುದರ ತನಿಖೆ ಮಾಡುತ್ತಾರೆ. ಇದೆಲ್ಲದರ ಬಳಿಕ ವಿವರವಾದ ‘ಹೋಮ್ ಸ್ಟಡಿ ರಿಪೋರ್ಟ್’ ಒಂದನ್ನು ತಯಾರು ಮಾಡಿ ಮಕ್ಕಳ ಹಕ್ಕು ರಕ್ಷಣಾ ಸಮಿತಿಗೆ ಸಲ್ಲಿಸುತ್ತಾರೆ. ಅದರ ಆಧಾರದ ಮೇಲೆ ಮಕ್ಕಳ ರಕ್ಷಣಾ ಸಮಿತಿಯು ಮಗುವನ್ನು ದತ್ತು ನೀಡಬಹುದೇ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

ಮಗುವನ್ನು ದತ್ತು ನೀಡಿದ ಬಳಿಕವೂ ಸಹ ಆರಂಭದ ಎರಡು ವರ್ಷಗಳ ಕಾಲ ಮಗುವಿನ ಯೋಗಕ್ಷೇಮವನ್ನು ಪ್ರತಿ ಮೂರು ತಿಂಗಳಿಗೆ, ಆರು ತಿಂಗಳಿಗೊಮ್ಮೆ ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆಯ ಸದಸ್ಯರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುತ್ತಾರೆ. ಮಗುವನ್ನು ದತ್ತು ಪಡೆದ ಪೋಷಕರು ಬೇರೆ ಸ್ಥಳಗಳಿಗೆ ಹೋಗಬೇಕೆಂದರೆ ಸಂಬಂಧಪಟ್ಟ ಇಲಾಖೆಯ ಅನುಪತಿ ಪಡೆದೇ ಹೋಗಬೇಕಾಗುತ್ತದೆ. ಐದು ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಮಕ್ಕಳನ್ನು ದತ್ತು ನೀಡುವಾಗ ಅವರ ಒಪ್ಪಿಗೆಯನ್ನು ಕೇಳಲಾಗುತ್ತದೆ. ಮಗುವಿಗೆ ಭಾಷೆಯ ಸಮಸ್ಯೆ ಬಾರದಂತೆ, ವಾತಾವರಣದ ಸಮಸ್ಯೆ ಬಾರದಂತೆ ಮಗುವಿನ ಮಾನಸಿಕ, ದೈಹಿಕ ಬೆಳವಣಿಗೆಗೆ ತೊಡಕಾಗಬಹುದಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ದತ್ತು ಪ್ರಕ್ರಿಯೆಯನ್ನು ಸಾರಾ (SARA) ಹಾಗೂ ಇತರೆ ಸಂಬಂಧಿತ ಸಂಸ್ಥೆಗಳು ನಡೆಸುತ್ತವೆ.

ಹಿಂದೂ ದತ್ತು ಕಾಯ್ದೆ ಹಾಗೂ ಬಾಲ ನ್ಯಾಯ ಕಾಯ್ದೆಯ ಅನಾಥ, ಪೋಷಕರಿಂದ ತ್ಯಜಿಸಲ್ಪಟ್ಟ, ಶರಣು ನೀಡಲಾದ ಮಕ್ಕಳನ್ನು ದತ್ತು ನೀಡುವ ಜೊತೆಗೆ ಇನ್ನೂ ಎರಡು ಮಾದರಿಯ ದತ್ತು ಪ್ರಕ್ರಿಯೆಗಳು ಇವೆ. ಸಂಬಂಧಿಗಳು ದತ್ತು ಪಡೆಯುವುದು ಹಾಗೂ ಮಲಪೋಷಕರು (ಸ್ಟೆಪ್ ಪೇರೆಂಟ್) ದತ್ತು ಪಡೆಯುವುದು. ಕೋವಿಡ್ ಸಮಯದಲ್ಲಿ ಹಲವು ಮಕ್ಕಳು, ಪೋಷಕರನ್ನು ಕಳೆದುಕೊಂಡರು. ಆ ಸಂದರ್ಭದಲ್ಲಿ ಅವರ ಸಂಬಂಧಿಗಳೇ ಮಕ್ಕಳನ್ನು ದತ್ತು ಪಡೆದುಕೊಂಡರು. ಈ ದತ್ತು ಪ್ರಕ್ರಿಯೆಯು ಸಹ ನೊಂದಾವಣಿಗೆ ಒಳಪಡಬೇಕಿರುತ್ತದೆ. ಇನ್ನು ಸ್ಟೆಪ್ ಪೇರೆಂಟ್ ಅಡಾಪ್ಷನ್​ನಲ್ಲಿ ಯಾವುದೇ ಮಗುವಿನ ತಂದೆಯ ಎರಡನೇ ಪತ್ನಿ ಅಥವಾ ತಾಯಿಯ ಎರಡನೇ ಪತಿ ಮಗುವನ್ನು ದತ್ತು ಪಡೆಯುವುದಕ್ಕೆ ಸ್ಟೆಪ್ ಪೇರೆಂಟ್ ಅಡಾಪ್ಷನ್ ಎನ್ನಲಾಗುತ್ತದೆ. ಇದರಲ್ಲಿಯೂ ಸಹ ಕೆಲವು ನಿಯಮಗಳಿವೆ. ಮದುವೆಯಾಗದ ಪುರುಷರು ಕೇವಲ ಗಂಡು ಮಗುವನ್ನಷ್ಟೆ ದತ್ತು ಪಡೆಯಬಲ್ಲರು, ಮದುವೆಯಾಗದ ಮಹಿಳೆ ಗಂಡು ಅಥವಾ ಹೆಣ್ಣು ಯಾವುದೇ ಮಗುವನ್ನು ದತ್ತು ಪಡೆಯಬಹುದಾಗಿದೆ.

ಕರ್ನಾಟಕದ ಸಾರಾ (SARA) ಸಂಸ್ಥೆಯ ಹಿರಿಯ ಸಲಹೆಗಾರ್ತಿ ಗರಿಮಾ ಹೇಳುವಂತೆ, ಕರ್ನಾಟಕದಲ್ಲಿ ಜಿಲ್ಲಾವಾರು ಅರ್ಜಿಗಳನ್ನು ಸಲ್ಲಿಸುವ ವ್ಯವಸ್ಥೆ ಇದ್ದು ಈಗ ಸರಿ ಸುಮಾರು 1500 ಕ್ಕೂ ಹೆಚ್ಚು ಜನರು ಅಥವಾ ಪೋಷಕರು ಮಕ್ಕಳನ್ನು ದತ್ತು ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದು, ಅವರಿಗೆ ಇನ್ನೂ ಮಕ್ಕಳು ಲಭಿಸಿಲ್ಲ. ಅರ್ಜಿದಾರರು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಒಂದೇ ಮಾನದಂಡದಿಂದ ಮಕ್ಕಳನ್ನು ದತ್ತು ನೀಡಲಾಗುವುದಿಲ್ಲ. ಮಗುವಿನ ಹಕ್ಕು ರಕ್ಷಣೆ, ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದತ್ತು ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇದರ ಜೊತೆಗೆ ದತ್ತು ನೀಡಲು ಮಕ್ಕಳು ಅಗತ್ಯ ಸಂಖ್ಯೆಯಲ್ಲಿ ಇಲ್ಲದೇ ಇರುವುದು ಹಾಗೂ ದತ್ತು ಪಡೆಯುವವರಿಗೆ ನಿರ್ದಿಷ್ಟ ಗುಣಗಳು, ಅಂಶಗಳುಳ್ಳ ಮಕ್ಕಳೇ ಬೇಕೆಂಬ ಆಕಾಂಕ್ಷೆಗಳ ಕಾರಣದಿಂದಲೂ ಸಹ ಹೆಚ್ಚಿನ ಸಂಖ್ಯೆಯ ಅರ್ಜಿದಾರರಿಗೆ ಮಕ್ಕಳು ಲಭಿಸಿಲ್ಲ ಎನ್ನುತ್ತಾರೆ.

ಇದಕ್ಕೆ ವೈರುಧ್ಯವಾಗಿ ಮತ್ತೊಂದು ಅಂಶದ ಮೇಲೂ ಬೆಳಕು ಚೆಲ್ಲಿದ ಅಧಿಕಾರಿ ಗರಿಮಾ, ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವ ಪೋಷಕರಷ್ಟೆ ಮಕ್ಕಳನ್ನು ದತ್ತು ನೀಡಲು ಸಹ ಪೋಷಕರು ಅರ್ಜಿ ಸಲ್ಲಿಸಿದ್ದಾರೆ. ಅವರ ಸಂಖ್ಯೆ ಬಹಳ ದೊಡ್ಡದಿಲ್ಲವಾದರೂ ಗಮನಾರ್ಹ ಸಂಖ್ಯೆ ಇದೆ. ಆದರೆ ಅಲ್ಲಿಯೂ ಸಹ ಅರ್ಜಿದಾರರ ನಿಜ ಉದ್ದೇಶ, ಪರಿಸ್ಥಿತಿಗಳನ್ನು ಸಮಗ್ರ ತನಿಖೆ ನಡೆಸಿಯೇ ಮಕ್ಕಳನ್ನು ದತ್ತಿಗಾಗಿ ಸ್ವೀಕರಿಸಬೇಕಾಗುತ್ತದೆ. ಮಕ್ಕಳು ಪೋಷಕರೊಟ್ಟಿಗೆ ಬೆಳೆಯುವುದು ಸಹ ಅವರ ಹಕ್ಕು ಹಾಗಾಗಿ ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತದೆ, ಹಲವು ಅರ್ಜಿದಾರರು ಎರಡು ವರ್ಷದಿಂದಲೂ ಅರ್ಜಿ ಹಾಕಿ ಕಾಯುತ್ತಿದ್ದಾರೆ ಎಂದಿದ್ದಾರೆ.

Published On - 12:59 pm, Wed, 24 April 24

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು