ಕನ್ನಡಕ್ಕೆ ಅನ್ಯಾಯವೇ? ಮಿಟ್ಟಲಕೋಡ್ ‘ನ್ಯಾಯಾಂಗ ಸಾಹಿತ್ಯ’ ಕನ್ನಡವ ಪೊರೆಯುತಿದೆ!

  • TV9 Web Team
  • Published On - 21:45 PM, 31 Oct 2020
ಕನ್ನಡಕ್ಕೆ ಅನ್ಯಾಯವೇ? ಮಿಟ್ಟಲಕೋಡ್ ‘ನ್ಯಾಯಾಂಗ ಸಾಹಿತ್ಯ’ ಕನ್ನಡವ ಪೊರೆಯುತಿದೆ!

ಆಡಳಿತದಲ್ಲಿ ಕನ್ನಡ ಭಾಷೆ ಇರಲಿ ಎಂಬ ಮಾತು ಹಳೆಯದು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದರೂ ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇನ್ನು ನ್ಯಾಯಾಂಗದ ವಿಚಾರಕ್ಕೆ ಬಂದರೆ ಈ ಮಾತು ಇನ್ನಷ್ಟು ಜಟಿಲವಾಗುತ್ತೆ. ಆದರೆ ಧಾರವಾಡದ ನಿವೃತ್ತ ನ್ಯಾಯಾಧೀಶರೊಬ್ಬರು ತಮ್ಮ ಕಾಲಾವಧಿಯಲ್ಲೇ ಅತಿ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ಇಂದಿಗೂ ಕನ್ನಡ ಉಳಿಸಲು ನಿರಂತರವಾಗಿ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಸಾಮಾನ್ಯವಾಗಿ ನ್ಯಾಯಾಧೀಶರು ಅಂದರೆ ಗಂಭೀರತೆ ಅನ್ನೋ ಶಬ್ದ ಜೊತೆಜೊತೆಗೆ ಬಂದು ಬಿಡುತ್ತದೆ. ಆದರೆ ಇವರ ವಿಚಾರದಲ್ಲಿ ಕನ್ನಡ ಭಾಷೆಯನ್ನು ಉಳಿಸೋ ಮಾತು ಜೊತೆಗೆ ಬರುತ್ತದೆ.

ಜಡ್ಜ್​​ ಮಿಟ್ಟಲಕೋಡ್ ನ್ಯಾಯಾಂಗ ಸಾಹಿತ್ಯದಿಂದ ಕನ್ನಡಕ್ಕೆ ಕೋಡು!
ಕನ್ನಡ ಭಾಷೆಯ ಉಳಿವು, ಅಳಿವಿನ ಬಗೆಗಿನ ಮಾತುಗಳು ನವೆಂಬರ್ ಬರುತ್ತಲೇ ಸಾಕಷ್ಟು ಚುರುಕುಗೊಳ್ಳುತ್ತವೆ. ಆದರೆ, ಅವನ್ನು ಕಾರ್ಯರೂಪಕ್ಕೆ ತರುವವರು ಮಾತ್ರ ತೀರಾನೇ ಕಡಿಮೆ. ಅದರಲ್ಲೂ ಇಂಗ್ಲೀಷ್ ಹಾವಳಿ ನ್ಯಾಯಾಂಗದ ಮೇಲಂತೂ ಸಾಕಷ್ಟು ಆಗಿ, ನ್ಯಾಯಾಂಗ ಇಲಾಖೆಯಲ್ಲಿ ಕನ್ನಡ ಮೂಲೆಗೆ ಸರಿಯುವ ಹಂತಕ್ಕೆ ಬಂದಾಗಿದೆ. ಇಂಥ ವೇಳೆ ಧಾರವಾಡದ ನಿವೃತ್ತ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ್ ಸಾಕಷ್ಟು ಗಮನ ಸೆಳೆಯುತ್ತಾರೆ.

ಮಿಟ್ಟಲಕೋಡ್ ಅವರು ಕನ್ನಡದಲ್ಲೇ 2,000ಕ್ಕೂ ಹೆಚ್ಚು ತೀರ್ಪುಗಳನ್ನು ಬರೆದಿದ್ದಾರೆ. ಆ ಮೂಲಕ ಇತರ ನ್ಯಾಯಾಧೀಶರಿಗೆ ಮಾದರಿಯಾಗಿದ್ದಾರೆ. ಅನೇಕ ಕನ್ನಡ ಪುಸ್ತಕಗಳನ್ನು ರಚಿಸಿರೋ ಅವರು ಕಾನೂನಿನ ಪ್ರಾಥಮಿಕ ಮಾಹಿತಿ ಜನಸಾಮಾನ್ಯರಿಗೆ ದೊರಕಲಿ ಅನ್ನೋ ಉದ್ದೇಶದಿಂದ ‘ನ್ಯಾಯಾಂಗ ದೀಪಿಕೆ’ ಅನ್ನೋ ಕೃತಿಯನ್ನ ಸಾಹಿತ್ಯ ಪರಿಷತ್ತಿನ ನೆರವಿನೊಂದಿಗೆ ರಚಿಸಿದ್ದಾರೆ. ಇತರೆ ಮೂರು ಕವನ ಸಂಕಲನಗಳು ಕೂಡಾ ಅವರ ಲೇಖನಿಯಿಂದ ಮೂಡಿ ಬಂದಿವೆ. 2013 ರಲ್ಲಿ ನಿವೃತ್ತರಾಗಿ, ಸಧ್ಯ ಧಾರವಾಡದ ಸಂಪಿಗೆ ನಗರದಲ್ಲಿ ನಿವೃತ್ತ ಜೀವನ ಸಾಗಿಸುತ್ತಿರೋ ಅವರು ನ್ಯಾಯಾಂಗ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬರಬೇಕು ಅಂತಾರೆ.

ರಾಜ್ಯದಾದ್ಯಂತ ಕನ್ನಡದ ಕಂಪು ಪಸರಿಸಿದ ಅಸಾಮಾನ್ಯ ಕನ್ನಡ ಪ್ರೀತಿ
ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿ ಮಿಟ್ಟಲಕೋಡ್ ಅವರು ಎಲ್ಲೆಡೆಯೂ ಕನ್ನಡ ಪ್ರೀತಿಯನ್ನೇ ಮೆರೆದವರು. ಧಾರವಾಡದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲೂ ನ್ಯಾಯಾಧೀಶರಾಗಿದ್ದ ಅವರು, ಸಾಂಸ್ಕೃತಿಕ ನೆಲದಲ್ಲೂ ಕನ್ನಡದಲ್ಲಿ ತೀರ್ಪು ಬರೆದಿದ್ದಾರೆ. ರಾಯಚೂರು, ಬೆಂಗಳೂರು, ತುಮಕೂರು ಹೀಗೆ ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿದಲ್ಲೆಲ್ಲಾ ಇವರು ಆ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಕನ್ನಡದತ್ತ ಒಲವು ಹೊಂದಿದ್ದ ಮಿಟ್ಟಲಕೋಡ ಅವರು ಆ ನಿಟ್ಟಿನಲ್ಲಿ ವಕೀಲಿ ಪದವಿ ಪಡೆದ ನಂತರವೂ ಕಾರ್ಯ ಪ್ರವೃತ್ತರಾದರು. ನ್ಯಾಯಾಂಗದ ಮಾಹಿತಿಯ ಪುಸ್ತಕಗಳೆಲ್ಲಾ ಆಂಗ್ಲಭಾಷೆಯಲ್ಲಿವೆ.

ಈ ಕ್ಷೇತ್ರದಲ್ಲಿ ಕನ್ನಡ ಚಾಲ್ತಿಗೆ ಬರೋಕೆ ಅಡ್ಡಿಯಾಗಿದೆ ಅಂತಾ ಬೇಸರ ವ್ಯಕ್ತಪಡಿಸೋ ಮಿಟ್ಟಲಕೋಡ ಅವರು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರೋದಾಗಿಯೂ ಹೇಳುತ್ತಾರೆ. ಇನ್ನು ಇವರು ತಮ್ಮ ಈ ವಿಶಿಷ್ಟ ಕನ್ನಡ ಪ್ರೇಮದಿಂದ ಇತರ ಎಲ್ಲರಿಗೂ ಮಾದರಿಯಾಗಿದ್ದು, ಸಧ್ಯಕ್ಕೆ ಧಾರವಾಡ ಪರಿಸರದಲ್ಲಿ ತಮ್ಮ ಕನ್ನಡ ಪ್ರೇಮ ವಕೀಲಿಕೆಯಿಂದಾಗಿಯೇ ಖ್ಯಾತರಾಗಿದ್ದಾರೆ.

ನ್ಯಾಯಾಧೀಶ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ.. ಇಂದಿಗೂ ಯುವಕರಿಗೆ ತರಬೇತಿ
ಇಂದಿಗೂ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹೋಗಿ, ಅಲ್ಲಿನ ವಕೀಲರ ಸಂಘವನ್ನು ಸಂಪರ್ಕಿಸಿ, ನ್ಯಾಯಾಂಗದಲ್ಲಿ ಕನ್ನಡ ಭಾಷೆಯನ್ನು ಬಳಸಿದರೆ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನು ನ್ಯಾಯಾಧೀಶ ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯೋ ಯುವಕರಿಗೆ ತರಬೇತಿಯನ್ನೂ ನೀಡುತ್ತಾರೆ. ಆದರೆ ಇದೆಲ್ಲವನ್ನು ಅವರು ಉಚಿತವಾಗಿಯೇ ಮಾಡಿಕೊಂಡು ಬಂದಿರೋದು ವಿಶಿಷ್ಟ.

67 ವರ್ಷದ ಮಿಟ್ಟಲಕೋಡ್ ಅವರು ಒಳ್ಳೆಯ ಕವಿಯೂ ಹೌದು. ಈಗಾಗಲೇ ಅವರ ಹಲವಾರು ಕವನ ಸಂಕಲನಗಳೂ ಬಂದಿವೆ. ಕನ್ನಡ ಕನ್ನಡ ಅಂತಾ ನಮ್ಮ ಭಾಷೆಯ ಹೆಸರಿನಲ್ಲಿ ಅದೆಷ್ಟೋ ವ್ಯಕ್ತಿಗಳು ಹಾಗೂ ಸಂಘಟನೆಗಳು ಹೋರಾಟಕ್ಕಿಳಿದಿವೆ. ಆದರೆ, ಸರಿಯಾದ ಕನ್ನಡ ಅವರಿಗೇ ಗೊತ್ತಿರಲ್ಲ. ಆದರೆ ಉನ್ನತ ಹುದ್ದೆಯಲ್ಲಿದ್ದು ಆಂಗ್ಲ ಭಾಷೆಯ ಹಿಡಿತವನ್ನ ತಮ್ಮ ಲೇಖನಿ ಮೂಲಕ ಸಡಿಲಗೊಳಿಸುತ್ತಿದ್ದಾರೆ. ಕನ್ನಡ ಪ್ರೇಮಕ್ಕೆ ಇಂಥವರು ನಿಜಕ್ಕೂ ಮಾದರಿಯೇ ಸರಿ.
-ನರಸಿಂಹಮೂರ್ತಿ ಪ್ಯಾಟಿ