ವಿದ್ಯಾಗಮ ಪುನರಾರಂಭ: ಓಕಳಿ ವಠಾರ ಶಾಲೆಯಲ್ಲಿ ತಯಾರಿ ಹೇಗಿದೆ ಗೊತ್ತಾ?
ಕಲಬುರಗಿ ಜಿಲ್ಲೆಯಲ್ಲಿಯೇ ವಿದ್ಯಾಮಗಕ್ಕೆ ಹೋದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಹೆಚ್ಚಿನ ಪಾಲಕರು ವಿದ್ಯಾಗಮಕ್ಕೆ ಕಳುಹಿಸುವುದಿಲ್ಲಾ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಮತ್ತೆ ವಿದ್ಯಾಗಮ ಪ್ರಾರಂಭವಾಗುತ್ತಿರುವುದರಿಂದ ಪಾಲಕರು ಮತ್ತು ಮಕ್ಕಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ.
ಕಲಬುರಗಿ: ರಾಜ್ಯದಲ್ಲಿ ವಿದ್ಯಾಗಮ ಪ್ರಾರಂಭವಾಗುವುದಕ್ಕೂ ಮತ್ತು ವಿದ್ಯಾಗಮ ಸ್ಥಗಿತವಾಗುವುದಕ್ಕೂ ಕಲಬುರಗಿ ಜಿಲ್ಲೆಯೇ ಕಾರಣ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲಾ. ಹೌದು ರಾಜ್ಯದಲ್ಲಿ ವಿದ್ಯಾಗಮ ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ಪ್ರೇರಣೆ ನೀಡಿದ್ದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಗ್ರಾಮದಲ್ಲಿನ ಶಿಕ್ಷಕರು ಪ್ರಾರಂಭಿಸಿದ ವಠಾರ ಶಾಲೆ.
ಮತ್ತೊಂದಡೆ ಈ ಯೋಜನೆಯನ್ನು ಸ್ಥಗಿತ ಮಾಡಿದ್ದು, ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ್ ಗ್ರಾಮದಲ್ಲಿ ವಿದ್ಯಾಗಮಕ್ಕೆ ಹೋದ ನಾಲ್ವರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಕಾರಣವಾಗಿದೆ. ಇದೀಗ ರಾಜ್ಯ ಸರ್ಕಾರ ಮತ್ತೆ ವಿದ್ಯಾಗಮವನ್ನು ಪ್ರಾರಂಭಿಸಲು ಮುಂದಾಗಿದೆ. ಹೀಗಾಗಿ ಜಿಲ್ಲೆಯ ಅಧಿಕಾರಿಗಳು ಮತ್ತು ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದ್ದು, ಕಲಬುರಗಿಯಿಂದ ಯಾವುದೇ ಕಳಂಕ ಈ ಯೋಜನೆಗೆ ತಾಗದಿರಲಿ ಎನ್ನುವ ಕಳಕಳಿ ಹೆಚ್ಚಾಗಿದೆ.
ಜನವರಿ 1 ರಿಂದ ರಾಜ್ಯದಲ್ಲಿ 6 ರಿಂದ 9ನೇ ತರಗತಿಯ ಮಕ್ಕಳಿಗೆ ವಿದ್ಯಾಗಮದಡಿ ತರಗತಿ ಪ್ರಾರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಇದರ ಅನುಭವದ ಆಧಾರದ ಮೇಲೆ ಒಂದರಿಂದ 5ನೇ ತರಗತಿ ಮಕ್ಕಳಿಗೆ ಕೂಡ ಜನವರಿ 15 ರಿಂದ ವಿದ್ಯಾಗಮ ಪ್ರಾರಂಭಿಸಬಹುದು ಎಂದು ಹೇಳಿದೆ. ವಿದ್ಯಾಗಮವನ್ನು ಹೇಗೆ ನಡೆಸಬೇಕು ಎಂದು ಈಗಾಗಲೇ ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ್ದು, ಅದರಂತೆ ಈ ಯೋಜನೆಯನ್ನು ಪ್ರಾರಂಭಿಸಲು ಜಿಲ್ಲೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ಶಿಕ್ಷಕರು ಮತ್ತು ಅಧಿಕಾರಿಗಳ ಮೇಲೆ ಹೆಚ್ಚಿದ ಜವಾಬ್ದಾರಿ: ಹೌದು ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆ ಹಿಂದುಳಿದ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಇನ್ನು ಕಳಚಿಕೊಂಡಿಲ್ಲ. ಹೀಗಾಗಿ ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಮೆಟ್ಟಿ ನಿಂತು ಇದೀಗ ಮಕ್ಕಳಿಗೆ ತೊಂದರೆಯಾಗದಂತೆ ವಿದ್ಯಾಗಮ ಮತ್ತು 10 ಹಾಗೂ 12ನೇ ತರಗತಿಗಳನ್ನು ಪ್ರಾರಂಭಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಮೇಲೆ ಇದೆ.
ಕಲಬುರಗಿ ಜಿಲ್ಲೆಯಲ್ಲಿಯೇ ವಿದ್ಯಾಮಗಕ್ಕೆ ಹೋದ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಹೆಚ್ಚಿನ ಪಾಲಕರು ವಿದ್ಯಾಗಮಕ್ಕೆ ಕಳುಹಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಮತ್ತೆ ವಿದ್ಯಾಗಮ ಪ್ರಾರಂಭವಾಗುತ್ತಿರುವುದರಿಂದ ಪಾಲಕರು ಮತ್ತು ಮಕ್ಕಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ಅವರನ್ನು ಮತ್ತೆ ಶಾಲೆಗೆ ಕರೆತರುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ. ಗ್ರಾಮೀಣ ಭಾಗದಲ್ಲಿನ ಹೆಚ್ಚಿನ ಪಾಲಕರಲ್ಲಿ ಇನ್ನು ಕೂಡ ಕೊರೊನಾದ ಭಯ ದೂರವಾಗಿಲ್ಲ. ಹೀಗಾಗಿ ಅವರ ಮನಸ್ಸನ್ನು ಹೇಗೆ ಶಿಕ್ಷಕರು ಮತ್ತು ಅಧಿಕಾರಿಗಳು ಬದಲಾಯಿಸುತ್ತಾರೆ ಎನ್ನುವ ಪ್ರಶ್ನೆ ಸದ್ಯ ಸೃಷ್ಟಿಯಾಗಿದೆ.
ಮೂಲಭೂತ ಸೌಲಭ್ಯಗಳ ಕೊರತೆ: ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇನ್ನು ಕೂಡ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿವೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ಕೋಣೆಗಳಿಲ್ಲ. ಇನ್ನು ಈ ಹಿಂದೆ ನಿರ್ಮಾಣವಾಗಿದ್ದ ಶಾಲಾ ಕಟ್ಟಡಗಳು ಬೀಳುವ ಹಂತಕ್ಕೆ ಬಂದಿದ್ದರಿಂದ ಅವುಗಳಲ್ಲಿ ಕುಳಿತುಕೊಳ್ಳದೆ ಮರದ ಕೆಳಗೆ ಮಕ್ಕಳು ಕುಳಿತು ಪಾಠ ಕೇಳುವ ಸ್ಥಿತಿ ಇದೆ. ಮತ್ತೊಂದಡೆ ಮೈಸೂರು ಭಾಗಕ್ಕೆ ಹೋಲಿಸಿದರೆ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸರಿಸಾರಿ ಅನುಪಾತದಲ್ಲಿ ಸಾಕಷ್ಟು ವ್ಯತ್ಯಾಸವಿದೆ.
ಈ ಭಾಗದಲ್ಲಿ ಶಿಕ್ಷಕರ ಕೊರತೆ ದೊಡ್ಡಮಟ್ಟಿಗೆ ಇದೆ ಎನ್ನುವುದು ನಿಜ, ಹೀಗಾಗಿ ಮಕ್ಕಳ ಗುಂಪುಗಳನ್ನು ಮಾಡಿದ್ದು, ಅನೇಕ ಗುಂಪುಗಳಿಗೆ ಪಾಠ ಮಾಡುವುದು ಶಿಕ್ಷಕರ ಮೇಲೆ ಹೆಚ್ಚು ಹೊರೆ ಹಾಕಿದಂತಾಗುತ್ತದೆ. ಇನ್ನು ಅನೇಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯವು ಕೂಡ ಇಲ್ಲ. ಸರ್ಕಾರ ಪ್ರತಿ ಶಾಲೆಯಲ್ಲಿ ಕೈತೊಳೆಯಲು ಸೋಪು ಮತ್ತು ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಜಿಲ್ಲೆಯ ಕೆಲ ಶಾಲೆಗಳಲ್ಲಿ ಕುಡಿಯಲು ಸಹ ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಹೇಗೆ ನೀರಿನ ವ್ಯವಸ್ಥೆ ಮಾಡುತ್ತಾರೆ ಎನ್ನುವುದು ವಿಪರ್ಯಾಸಕರ ಸಂಗತಿಯಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾಗಮ ಜೊತೆಗೆ 10 ಮತ್ತು 12ನೇ ತರಗತಿಯನ್ನು ಪ್ರಾರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಯಾವುದೇ ಮಗುವಿಗೆ ಸಮಸ್ಯೆಯಾಗದಂತೆ ಸರ್ಕಾರ ನೀಡಿರುವ ಮಾರ್ಗದರ್ಶಿಗಳ ಅಡಿಯಲ್ಲಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಶಿಕ್ಷಕರಿಗೆ ಕಡ್ಡಾಯ ಕೊರೊನಾ ಟೆಸ್ಟ್ ಮಾಡಲಿದ್ದು, ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಗುಂಪು ಗುಂಪಾಗಿ ಪಾಠ ಮಾಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಕಲಬುರಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ರಾಜಾ ಹೇಳಿದ್ದಾರೆ.
ಅನೇಕ ಸಮಸ್ಯೆಗಳ ನಡುವೆಯೇ ಇದೀಗ ಶಿಕ್ಷಣ ಇಲಾಖೆ ವಿದ್ಯಾಗಮ ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಮಕ್ಕಳ ಶೈಕ್ಷಣಿಕ ಬದುಕು ಮೊಟಕಾಗಬಾರದು ಎನ್ನುವುದು ಸರ್ಕಾರದ ಉದ್ದೇಶ. ಆದರೆ ಇದು ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎನ್ನುವುದು ಪ್ರಾರಂಭವಾದ ಮೇಲೆಯೇ ತಿಳಿಯಬೇಕಾಗಿದೆ.
Published On - 12:30 pm, Tue, 29 December 20