ಹಾವೇರಿ ಜಿಲ್ಲೆಯಲ್ಲಿನ ಬಹುತೇಕ ರೈತರು ಮೆಕ್ಕೆ ಜೋಳವನ್ನು ಬೆಳೆಯುತ್ತಾರೆ. ಕಳೆದ ವರ್ಷ ಜಿಲ್ಲೆಯ ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬೆಳೆದಿದ್ದರು. ಅತಿವೃಷ್ಟಿ ಸಂಭವಿಸಿದರೂ ಅಳಿದುಳಿದ ಮೆಕ್ಕೆ ಜೋಳಕ್ಕೆ ಉತ್ತಮ ದರ ಸಿಗಬಹುದು ಎಂದು ರೈತರು ನಂಬಿದ್ದರು. ಆದರೆ ರೈತರಿಗೆ ಉತ್ತಮ ದರ ಸಿಗಲಿಲ್ಲ.
ಹಾಳಾಗುತ್ತಿದೆ ಮೆಕ್ಕೆ ಜೋಳ: ಮೆಕ್ಕೆ ಜೋಳಕ್ಕೆ ಉತ್ತಮ ಬೆಲೆ ಸಿಗದಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಮನೆಯಲ್ಲೇ ಮೆಕ್ಕೆ ಜೋಳವನ್ನು
ಸಂಗ್ರಹಿಸಿ ಇಟ್ಟಿದ್ದಾರೆ. ಇಂದಲ್ಲ ನಾಳೆ ಉತ್ತಮ ಬೆಲೆ ಸಿಗಬಹುದು ಎಂಬ ರೈತರ ನಿರೀಕ್ಷೆ ಈಗಲೂ ಹುಸಿಯಾಗಿಯೇ ಇದೆ. ಕ್ವಿಂಟಲ್ ಗೆ ಒಂದು ಸಾವಿರದಿಂದ ಒಂದೂವರೆ ಸಾವಿರ ರುಪಾಯಿಗೆ ಮಾತ್ರ ಮೆಕ್ಕೆ ಜೋಳ ಮಾರಾಟ ಆಗುತ್ತಿದೆ.
ಹೀಗಾಗಿ ರೈತರು ಇನ್ನೂ ಮನೆಯಲ್ಲೇ ಮೆಕ್ಕೆ ಜೋಳವನ್ನು ಚೀಲಗಳಲ್ಲಿ ತುಂಬಿ ಇಟ್ಟಿದ್ದಾರೆ. ಬಹಳ ದಿನಗಳ ಕಾಲ ಮೆಕ್ಕೆ ಜೋಳ ಸಂಗ್ರಹ ಆಗಿರುವುದರಿಂದ ಹುಳು, ನುಸಿ ಹತ್ತಿ ಮೆಕ್ಕೆ ಜೋಳ ಹಾಳಾಗುತ್ತಿದೆ. ಮತ್ತೊಂದೆಡೆ ಇಲಿ, ಹೆಗ್ಗಣಗಳ ಕಾಟದಿಂದ ಮೆಕ್ಕೆ ಜೋಳ ಮನೆಯಲ್ಲೇ ಹಾಳಾಗುತ್ತಿದೆ.
ಹುಸಿಯಾದ ಖರೀದಿ ಕೇಂದ್ರ: ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆಗೆ ಘೋಷಣೆ ಮಾಡಿ ಸರಕಾರ ಎಪಿಎಂಸಿಗಳ ಮೂಲಕ ಖರೀದಿ ಕೇಂದ್ರ ಆರಂಭ ಮಾಡುತ್ತಾರೆ ಎಂದು ರೈತರು ಕಾದು ಕುಳಿತಿದ್ದರು. ಆದರೆ ಎಪಿಎಂಸಿಗಳಲ್ಲಿ ಮೆಕ್ಕೆ ಜೋಳದ ಖರೀದಿ ಕೇಂದ್ರ ಮಾತ್ರ ಈವರೆಗೂ ಆರಂಭ ಆಗಲಿಲ್ಲ.
ಬೆಂಬಲ ಬೆಲೆಯಲ್ಲಿ ಕೆಲವೇ ಕೆಲವು ರೈತರ ಮೆಕ್ಕೆ ಜೋಳವನ್ನು ಕೆಎಂಎಫ್‌ನವರು ಖರೀದಿ ಮಾಡಿದ್ದರಿಂದ ಕೆಲವೆ ಕೆಲವು ರೈತರಿಗೆ ಅದರ ಲಾಭ ಸಿಕ್ಕಿತು. ಎಪಿಎಂಸಿಗಳ ಮೂಲಕ ಖರೀದಿ ಕೇಂದ್ರ ಆರಂಭಿಸಿದ್ದರೆ ಬಹುತೇಕ ರೈತರಿಗೆ ಲಾಭ ಸಿಗುತ್ತಿತ್ತು. ಆದರೆ ಆ ಕೆಲಸ ಆಗಲಿಲ್ಲ. ಹೀಗಾಗಿ ಮೆಕ್ಕೆ ಜೋಳ ಬೆಳೆದ ರೈತರು ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ.
ಕಳೆದ ವರ್ಷ ಮೆಕ್ಕೆ ಜೋಳ ಬೆಳೆದ ರೈತರು ಇಂದಲ್ಲ ನಾಳೆ ಉತ್ತಮ ದರ ಸಿಗಬಹುದು ಎಂದು ಮೆಕ್ಕೆ ಜೋಳ ಸಂಗ್ರಹ ಮಾಡಿಟ್ಟಿದ್ದಾರೆ. ಅದರಲ್ಲೂ ಬ್ಯಾಡಗಿ ತಾಲೂಕಿನ ಹಲವೆಡೆ ರೈತರು ಮೆಕ್ಕೆ ಜೋಳವನ್ನು ಮಾರುಕಟ್ಟೆಗೆ ಒಯ್ದಿಲ್ಲ.
ಈಗ ಮನೆಯಲ್ಲೇ ಇಟ್ಟು ಹುಳು, ನುಸಿ ತಿಂದು ಪುಡಿಯಾಗಿ ಹಾಳಾಗಿರುವ ಮೆಕ್ಕೆ ಜೋಳವನ್ನು ಜರಡಿ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಮೆಕ್ಕೆ ಜೋಳ ಬೆಳೆದ ರೈತರ ಅನುಕೂಲಕ್ಕೆಂದು ಸರಕಾರ ಐದು ಸಾವಿರ ರುಪಾಯಿ ಹಣ ನೀಡಿದ್ದು ಬಿಟ್ರೆ ಸೂಕ್ತ ಬೆಲೆ, ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಆರಂಭಿಸಿಲ್ಲ.
ಇದ್ರಿಂದ ಸಾವಿರಾರು ರುಪಾಯಿ ಖರ್ಚು ಮಾಡಿ ಕಷ್ಟಪಟ್ಟು ಬೆಳೆದು ಸಂಗ್ರಹ ಮಾಡಿಟ್ಟಿರುವ ಮೆಕ್ಕೆ ಜೋಳ ಹಾಳಾಗುತ್ತಿರುವುದಕ್ಕೆ ಅಕ್ಷರಶಃ ಕಂಗಾಲಾಗಿದ್ದಾರೆ. ಇನ್ನಾದರೂ ಸರಕಾರ ಮೆಕ್ಕೆ ಜೋಳ ಖರೀದಿಗೆ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ. -ಪ್ರಭುಗೌಡ ಎನ್. ಪಾಟೀಲ