Alemane Jaggery: ಆಲೆಮನೆ ಬೆಲ್ಲ ಖರೀದಿದಾರರಿಗೆ ಸಿಹಿ, ಬೆಳೆಗಾರರಿಗೆ ಕಹಿ
ಆಲೆಮನೆ ಬೆಲ್ಲ ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ.
ಆಲೆಮನೆ ಬೆಲ್ಲ(Alemane Jaggery) ಎಂದರೆ ನೈಸರ್ಗಿಕವಾಗಿ ಕಬ್ಬಿನ ರಸದಿಂದ ತಯಾರಿಸಿದಂತಹ ಬೆಲ್ಲ ಉತ್ತರ ಕನ್ನಡದ ಆಲೆಮನೆ ಬೆಲ್ಲ ಕರ್ನಾಟಕದಲ್ಲಿ ಅತ್ಯಂತ ಖ್ಯಾತಿಗೆ ಒಳಗಾಗಿದೆ. ಏಕೆಂದರೆ ನೈಸರ್ಗಿಕ ಆಲೆಮನೆ ಬೆಲ್ಲ ದಿನನಿತ್ಯದ ಸೇವನೆಯಿಂದ ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಅದು ಕೂಡ ಔಷಧ ತೆಗೆದುಕೊಂಡು ಹೆಚ್ಚಾಗದೇ ಸಹಜ ನೈಸರ್ಗಿಕ ಆಹಾರದಿಂದಲೇ ಹೆಚ್ಚಾಗುವಂತೆ ಆಲೆಮನೆ ಬೆಲ್ಲ ಸಹಾಯಮಾಡುತ್ತದೆ ಇದನ್ನೇ ಅಡಿಗೆಮನೆಯಲ್ಲಿ ಧನ್ವಂತರಿ ಯೂಟ್ಯೂಬ್ ಸರಣಿಯಲ್ಲಿ ಮಾಹಿತಿ ನೀಡಿದ್ದು ಇದರಿಂದ ಹಿಮೋಗ್ಲೋಬಿನ್ ಹೆಚ್ಚಾದ ಶ್ರೋತೃಗಳು ಹಲವರು ಈಗಾಗಲೇ ನನಗೆ ಮಾಹಿತಿ ನೀಡಿರುತ್ತಾರೆ. ಆಲೆಮನೆ ಬೆಲ್ಲ ಮಕ್ಕಳಿಗೆ ಅಚ್ಚುಮೆಚ್ಚು.
ಕೋಣನಕುಂಟೆ, ಸೇವ ಕಬ್ಬು ಮುಂತಾದವುಗಳಿಂದ ಆಲೆಮನೆ ಬೆಲ್ಲವನ್ನು ತಯಾರಿಸಲಾಗುತ್ತದೆ. ಕೋಣನಕುಂಟೆ ಜಾತಿಯ ಕಬ್ಬಿನಿಂದ ತಯಾರಿಸಲಾದ ಆಲೆಮನೆ ಬೆಲ್ಲ ಮಾತ್ರ ಹೆಚ್ಚಿಗೆ ಪ್ರಸಿದ್ಧಿಯನ್ನು ಪಡೆದಿದೆ. ಕಬ್ಬು ಬೆಳೆದ ರೈತ ಅತ್ಯಂತ ವ್ಯವಸ್ಥಿತವಾಗಿ ಬೆಲ್ಲವನ್ನು ತಯಾರಿಸಿದ್ದೇ ಆದಲ್ಲಿ ಮೂರು ವರ್ಷಗಳ ಕಾಲ ಸುರಕ್ಷಿತವಾಗಿ ಉಪಯೋಗಿಸಬಹುದಾಗಿದೆ. ಈ ಮೇಲಿನ ಹೆಡ್ಡಿಂಗ್ ಯಾಕೆ ಎಂದು ಹಲವರಲ್ಲಿ ಪ್ರಶ್ನೆ ಇರಬಹುದು. ಕಬ್ಬು ಹನ್ನೊಂದು ತಿಂಗಳ ಬೆಳೆ . ಮೊದಲು ಗದ್ದೆಯನ್ನು ಹೊಡಿ,ಆಮೇಲೆ ಬೀಜವನ್ನು ಹಾಕಿ ,ಪ್ರಾಣಿಗಳನ್ನು ಸಂರಕ್ಷಿಸಿ, ಕಳೆಯನ್ನು ತೆಗೆದು ನೀರು ಹಾಯಿಸಿ , ಎಲೆಯನ್ನು ಸುತ್ತಿ,ಇವೇ ಮುಂತಾದ ಕಬ್ಬಿನಗದ್ದೆ ಕೆಲಸಗಳು ನಿಗದಿತ ವೇಳೆಗೆ ಮಾಡಲೇಬೇಕಾಗುತ್ತದೆ. ಕೆಲಸದವರು ಸಿಗಲಿ ಬಿಡಲಿ ಮನೆಯವರು ಮಾಡಲೇಬೇಕಾಗುತ್ತದೆ. ದಿನಕ್ಕೆ ಒಮ್ಮೆಯಾದರೂ ಕಬ್ಬಿನ ಗದ್ದೆಗೆ ಒಂದು ಸುತ್ತು ಹಾಕಿ ಬರಲೇಬೇಕು. ಅಲ್ಲಿಗೆ ಬಂತು 330 ಆಳಿನ ಲೆಕ್ಕ. ಅಲ್ಲದೆ ಮೇಲೆ ಹೇಳಿದ ವಿವಿಧ ಕೆಲಸಗಳಿಗೆ ವಿವಿಧ ನುರಿತ ಕೆಲಸದವರು ಬೇಕೇಬೇಕು. ಕಬ್ಬು ಬೆಳೆದ ನಂತರ ಕಬ್ಬು ಕಡಿಯಲು, ಕಡಿದ ಕಬ್ಬನ್ನು ಹೊರೆ ಮಾಡಿ ಆಲೆಮನೆ ಸ್ಥಳಕ್ಕೆ ತರಲು ಕೆಲಸಗಾರರ ಅವಶ್ಯಕತೆ ಉಂಟೆ ಉಂಟು.
ಆಲೆಮನೆ ಸ್ಥಳವನ್ನು ಸ್ವಚ್ಚಗೊಳಿಸಿ ಸಗಣಿಯಿಂದ ಸಾರಿಸಿ ಶುಚಿಯಾಗಿ ಇಟ್ಟು ಅದಕ್ಕೆ ಮೇಲೊಂದು ಚಪ್ಪರ ಕಟ್ಟುವ ಅವಶ್ಯಕತೆ ಇದೆ. ಇಷ್ಟರ ಮಧ್ಯದಲ್ಲಿ ಆಲೆಮನೆಗೆ ಬೇಕಾಗುವ ಉರುವಲು ಕಟ್ಟಿಗೆಯನ್ನು ತಯಾರಿಸಿಟ್ಟುಕೊಳ್ಳಬೇಕು ಅಲ್ಲದೆ ಆಲೆಮನೆಯ ವಲೆಯನ್ನು ಪ್ರತಿವರ್ಷ ಅದರ ನಿರ್ವಹಣೆ ಮಾಡಬೇಕಾಗುತ್ತದೆ ವರ್ಷಗಳ ನಂತರ ಹೊಸದಾಗಿ ರಚಿಸಬೇಕಾಗುತ್ತದೆ. ಇಷ್ಟೆಲ್ಲಾ ಆದ ನಂತರ ಕಬ್ಬಿನ ಹಾಲನ್ನು ತೆಗೆಯುವಂತಹ ಯಂತ್ರ ಇಲ್ಲಿಯ ಭಾಷೆಯಲ್ಲಿ ಕಣೆ ಎಂದು ಹೇಳುತ್ತಾರೆ . ಇದು ಇರುವ ವ್ಯಕ್ತಿಯ ಜೊತೆ ಮಾತುಕತೆ ಮಾಡಿಕೊಳ್ಳಬೇಕು..ಕಣೆ ಹಾಗೂ ಅದರ ನಿರ್ವಹಣೆಗೆ ದೊಡ್ಡ ಮೊತ್ತ ವ್ಯಯಿಸಿ ಬೇಕಾಗುತ್ತದೆ. ಆನಂತರ ಆಲೆಮನೆ ಪ್ರಾರಂಭವಾದಾಗಿನಿಂದ 24 ಗಂಟೆ ಸರಿ ಸುಮಾರು ಮೂರರಿಂದ ನಾಲ್ಕು ಜನರ ತಂಡ 24ಗಂಟೆ ಎಲ್ಲ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಅಲ್ಲದೆ ರಾತ್ರಿ ಕಾವಲಿಗೆ ,ಬೆಲ್ಲದ ನಿರ್ವಹಣೆಗೆ ಹೆಚ್ಚಿನ ಜನರು ಬೇಕಾಗುತ್ತದೆ.
ಇದನ್ನೂ ಓದಿ: ಉಡುಪಿಯ ಸ್ಪೆಷಲ್ ಚಟ್ಟಂಬಡೆ ರೆಸಿಪಿ ಇಲ್ಲಿದೆ
ಬೆಲ್ಲದ ನಿರ್ವಹಣೆ ಸ್ವಲ್ಪವೂ ವೇಳೆಯಲ್ಲಿ ಹೆಚ್ಚುಕಡಿಮೆಯಾದರೂ ತಯಾರಿಸಿದ ಬೆಲ್ಲದ ಎಲ್ಲ ಪ್ರಮಾಣ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಸಾರಿ ಬೆಂಕಿಗಾಹುತಿಯಾಗಬಹುದು. ಅಲ್ಲದೆ ತಯಾರಾದ ಬೆಲ್ಲವನ್ನು ತುಂಬುವ ವ್ಯವಸ್ಥೆ ಡಬ್ಬಿಗಳನ್ನು ಸಂಗ್ರಹಿಸಿದ ಬೇಕಾಗುತ್ತದೆ. ಹೀಗೆ ಕೆಲಸದ ನುರಿತ ಕಾರ್ಮಿಕರಿಂದಲೇ ಉತ್ತಮ ಬೆಲ್ಲದ ತಯಾರಿಕೆ ಆಗುತ್ತದೆ. ಆ ಕಾರಣಕ್ಕೆ ಎಲ್ಲ ಕಾರ್ಯಾಚರಣೆಗೆ ಕಾರ್ಮಿಕರ ಸಹಾಯ,ಸಹಕಾರ ಅತ್ಯಂತ ಹೆಚ್ಚಿಗೆ ಅವಶ್ಯಕತೆ ಇದೆ. ಈ ರೀತಿಯಾಗಿ ತಯಾರ ಆದಂತಹ ಆಲೆಮನೆ ಬೆಲ್ಲ ತಿನ್ನುವಾಗ ಅತ್ಯಂತ ಸಿಹಿಯೇ ಇರುತ್ತದೆ.
ಇಷ್ಟೆಲ್ಲಾ ಹನ್ನೊಂದು ತಿಂಗಳ ಕಾಲ ಕಾದು ತಯಾರಿಸಿದ ಬೆಲ್ಲಕ್ಕೆ ಈಗ ಸರಿ ಸುಮಾರು 1800 ರೂಪಾಯಿ ಯಿಂದ 2000 ರೂಪಾಯಿವರೆಗಿನ ದರ ಪ್ರಸ್ತುತ ಮಾರುಕಟ್ಟೆಯಲ್ಲಿ ಇದೆ. ಆದರೆ ಮೇಲೆ ಹೇಳಿದ ಎಲ್ಲ ನಿರ್ವಹಣೆಗಳ ಖರ್ಚುವೆಚ್ಚಗಳನ್ನು ಅಂದಾಜಿಸಿ ,ತಿಳಿದು ಬೆಳೆಗಾರರಲ್ಲಿ ಮಾತನಾಡಿದಾಗ ಅವರವರ ಕುಟುಂಬದ ಸದಸ್ಯರು ನಿರ್ವಹಿಸಿದ ಕೆಲಸ ಯೋಚಿಸಿ ವಿಚಾರಮಾಡಿದರೆ ಅದಕ್ಕೆ ಕನಿಷ್ಠ 2500-3000 ಸಾವಿರ ರೂಪಾಯಿ ದರ ಬಂದರೆ ಕಬ್ಬು ಬೆಳೆಗಾರ ರೈತನು ಮಾಡಿದ್ದ ಖರ್ಚಿಗೆ ಸರಿ ಹೊಂದಬಹುದೇನೋ ಎಂಬ ಅಂಬೋಣ ಹಲವು ಕಬ್ಬುಬೆಳೆಗಾರರದ್ದು.
ಇದನ್ನೂ ಓದಿ: ಸಕ್ಕರೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕುತೂಹಲಕಾರಿ ವಿಷಯ ಇಲ್ಲಿದೆ, ಯಾವ ಸಕ್ಕರೆ ಆರೋಗ್ಯಕ್ಕೆ ಉತ್ತಮ
3000 ಸಾವಿರ ರೂಪಾಯಿ ಮೇಲಿನ ದರ ಬಂದರೆ ಅದು ಖಚಿತವಾಗಿಯೂ ಲಾಭದ ಮೊತ್ತ ವಾಗುವುದು ಎಂದು ಹಲವು ಕಬ್ಬುಬೆಳೆಗಾರರ ಆಲೆಮನೆ ಬೆಲ್ಲ ತಯಾರಕ ರೈತರದ್ದು. ಬೆಲ್ಲದ ದರದಲ್ಲಿ ಕಡಿಮೆ ಇದ್ದಾಗ ಅಂದರೆ ಈಗ ನಡೆಯುತ್ತಿರುವ ಮಾರುಕಟ್ಟೆ ದರ ಇದ್ದಾಗ ಹಲವು ಬೆಳೆಗಾರರು ಮನೆವರೆಗೂ ತಲುಪಿಸುವಂತಹ ಕೆಲಸವನ್ನು ಮಾಡುತ್ತಾರೆ ಇದರಿಂದ ವಾರ್ಷಿಕವಾಗಿ ನಿರಂತರವಾಗಿ ನಿಗದಿತ ಕಬ್ಬುಬೆಳೆಗಾರರ ನಲ್ಲಿಖರೀದಿಸುವ ಗ್ರಾಹಕರು ಮನೆ ಬಾಗಿಲಿಗೆ ಬಂದು ಕೊಡುವ ರೈತರಿಂದ ಪಡೆದುಕೊಳ್ಳುವುದರಿಂದ ನಿಗದಿತ ಗ್ರಾಹಕರು ತಪ್ಪುವ ಸಾಧ್ಯತೆ ಹೆಚ್ಚಿದೆ.
ಇವೆಲ್ಲ ಕಾರಣಕ್ಕೆ ಮೇಲೆ ಬರೆದಂತಹ ಶೀರ್ಷಿಕೆ. ಖರೀದಿಸುವಾಗ ನೇರವಾಗಿ ರೈತನಿಂದಲೇ ಖರೀದಿಸುತ್ತೀರಿ ಎಂದಾದರೆ ಒಮ್ಮೆ ಯೋಚಿಸಿ ಸಿಹಿಗೆ ಗೌರವಯುತ ಸೂಕ್ತ ಹಣ ನೀಡಿ. ಅಂದರೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ನೀವೇ ಯೋಚಿಸಿ ನೀಡಿದರೆ ನಿಮಗೆ ವರ್ಷ ಇಡೀ ಸಿಹಿಯಾದ ಬೆಲ್ಲವನ್ನು ತಯಾರಿಸಿ ತಲುಪಿಸಿದ ರೈತನು ಹೆಚ್ಚಿನ ದರ ಲಭಿಸಿದ ಸಿಹಿ ನೆನಪಿನಲ್ಲಿ ವರ್ಷವಿಡಿ ಕಳೆದು ಮುಂದಿನ ವರ್ಷವೂ ಕೂಡ ಕಬ್ಬು ಬೆಳೆಗೆ ಅಣಿಯಾಗುತ್ತಾನೆ ಹಾಗೂ ಉತ್ತಮ ಬೆಲ್ಲ ನಿಮಗೆ ಸಿಗುವಂತೆ ನಿರಂತರವಾಗಿ ಆಗುತ್ತದೆ. ಇಲ್ಲವಾದಲ್ಲಿ ಮುಂದೊಂದು ದಿನ ಆಲೆಮನೆ ಬೆಲ್ಲ ತಯಾರಿಸುತ್ತಿದ್ದರು ಎಂಬ ಇತಿಹಾಸವನ್ನು ಹೇಳುವ ಸಂದರ್ಭಗಳು ಎದುರಾಗಬಹುದು.
– ಡಾ ರವಿಕಿರಣ ಪಟವರ್ಧನ ಶಿರಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:51 pm, Thu, 19 January 23