Chanakya Niti :ಯಶಸ್ವಿಯಾಗಲು ಈ ನಾಲ್ಕು ವಿಚಾರದಲ್ಲಿ ಹಿಂಜರಿಕೆ ಪಡಬಾರದಂತೆ
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನ ಸಾಧಿಸಲು ಬಯಸುತ್ತಾನೆ. ಆದರೆ ಕೆಲವರು ತಮ್ಮ ಜೀವನದಲ್ಲಿ ಮಾಡುವ ಈ ತಪ್ಪುಗಳಿಂದ ಯಶಸ್ಸು ಎನ್ನುವುದು ದೂರದ ಮಾತಾಗಿ ಬಿಡುತ್ತದೆ. ಚಾಣಕ್ಯ ಹೇಳುವಂತೆ ಈ ನಾಲ್ಕು ವಿಚಾರದಲ್ಲಿ ವ್ಯಕ್ತಿಯೂ ಯಾವುದೇ ಹಿಂಜರಿಕೆ ಅಥವಾ ನಾಚಿಕೆಯನ್ನು ಪಟ್ಟುಕೊಳ್ಳಬಾರದಂತೆ. ಒಂದು ವೇಳೆ ಹಿಂಜರಿದರೆ ಆತನು ಅಂದುಕೊಂಡಂತೆ ಬದುಕಲು ಸಾಧ್ಯವಿಲ್ಲವಂತೆ. ಹಾಗಾದ್ರೆ ಚಾಣಕ್ಯ ಹೇಳುವ ಆ ನಾಲ್ಕು ವಿಚಾರಗಳಾವುವು? ಎನ್ನುವುದರ ಮಾಹಿತಿ ಇಲ್ಲಿದೆ.
ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತದೆ. ಕೆಲವರು ತಮಗಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಹೊಂದಿದ್ದರೆ, ಇನ್ನು ಕೆಲವರು ಹಿಂದೇಟು ಹಾಕುತ್ತಾರೆ. ಆದರೆ ಆಚಾರ್ಯ ಚಾಣಕ್ಯನು ಈ ಕೆಲವು ಸೂಕ್ಷ್ಮ ವಿಚಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾನೆ. ವ್ಯಕ್ತಿಯ ಸ್ವಭಾವವು ಹೇಗೆಯೇ ಇರಲಿ, ಆದರೆ ಈ ನಾಲ್ಕು ಸ್ಥಳಗಳಲ್ಲಿ ಅಥವಾ ವಿಚಾರದಲ್ಲಿ ಹಿಂಜರಿಕೆಯನ್ನು ಪಡಬಾರದು. ಈ ಕೆಲವು ವಿಷಯಗಳನ್ನು ನೇರವಾಗಿ ಹೇಳುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದಿದ್ದಾನೆ.
- ಹಣದ ವಿಚಾರದಲ್ಲಿ ನಾಚಿಕೆಪಡಬೇಡಿ : ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಸಂಪತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಂದಿಗೂ ನಾಚಿಕೆಪಡಬಾರದು. ಯಾರಾದರೂ ನಿಮ್ಮಿಂದ ಹಣವನ್ನು ಸಾಲವಾಗಿ ಪಡೆದಿದ್ದರೆ, ಅದನ್ನು ಮರಳಿ ಕೇಳಲು ಹಿಂಜರಿಯಬೇಡಿ. ನಿಮ್ಮ ಹಣವನ್ನು ನೀವು ಕೇಳಲು ಹಿಂಜರಿಯುತ್ತಿದ್ದರೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಯಾರೊಂದಿಗಾದರೂ ವ್ಯಾಪಾರ ಮಾಡುತ್ತಿದ್ದರೆ, ಅವರೊಂದಿಗೆ ಸ್ಪಷ್ಟವಾಗಿ ವ್ಯವಹರಿಸುವುದನ್ನು ಕಲಿಯಿರಿ. ಇಲ್ಲದೇ ಹೋದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾನೆ.
- ಆಹಾರ ಸೇವನೆಯಲ್ಲಿ ಹಿಂಜರಿಕೆ ಬೇಡ : ವ್ಯಕ್ತಿಯು ಆಹಾರ ಸೇವನೆಯಲ್ಲಿ ನಾಚಿಕೆಪಡಬಾರದು. ಹಿಂಜರಿಕೆಯನ್ನು ಹೊಂದಿದ ವ್ಯಕ್ತಿಗಳು ಹಸಿವಿನಿಂದಲೇ ಇರಬೇಕಾಗುತ್ತದೆ. ಹೀಗಾಗಿ ಎಷ್ಟು ಅಗತ್ಯವಿದೆಯೋ ಅಷ್ಟು ಆಹಾರವನ್ನು ಸೇವಿಸಬೇಕು. ಏನು ತಿನ್ನದೇ ಇರುವ ವ್ಯಕ್ತಿಯು ತನ್ನ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅದಲ್ಲದೇ, ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಅವನ ಸಾಮರ್ಥ್ಯವೂ ಕಡಿಮೆಯಾಗುತ್ತದೆ.
- ಶಿಕ್ಷಣ ಪಡೆಯುವಲ್ಲಿ ನಾಚಿಕೆ ಬೇಡ : ಜ್ಞಾನವನ್ನು ಪಡೆಯಲು ಎಂದಿಗೂ ಹಿಂಜರಿಕೆ ಪಡೆಯಬಾರದು ಎಂದು ಚಾಣಕ್ಯ ಹೇಳುತ್ತಾನೆ. ಜ್ಞಾನ ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಒಂದೊಳ್ಳೆ ಬದುಕು ಕಟ್ಟಿ ಕೊಳ್ಳಲು ಸಾಧ್ಯ. ಉತ್ತಮ ಶಿಕ್ಷಣ ಸಿಗುತ್ತದೆಯೋ ಅಲ್ಲಿಯೇ ಮೊದಲು ಕಲಿಯಬೇಕು. ಶಿಕ್ಷಣವನ್ನು ಪಡೆಯುವಾಗ ಏನಾದರೂ ಸಂದೇಹಗಳಿದ್ದರೆ, ಹಿಂಜರಿಕೆ ಪಡದೇ ಪ್ರಶ್ನೆ ಕೇಳುವವನು ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ.
- ಅಭಿಪ್ರಾಯವನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯಬೇಡಿ : ಕೆಲವರು ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ತಿಳಿದಿರುತ್ತಾರೆ. ಆದರೆ ಆ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಅಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕು, ಯಾವುದೇ ರೀತಿಯಲ್ಲಿ ಹಿಂಜರಿಯಬಾರದು. ಚಾಣಕ್ಯ ನೀತಿಯ ಪ್ರಕಾರ, ಸಂಕೋಚದಿಂದ ತಮ್ಮ ಆಲೋಚನೆಗಳನ್ನು ನಿಗ್ರಹಿಸುವವರು ಜೀವನದಲ್ಲಿ ಎಂದಿಗೂ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾನೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ