ದೇಶಾದ್ಯಂತ ಕೊರೊನಾ ಪಿಡುಗು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರ ಮಾನಸಿಕ ಆರೋಗ್ಯದ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾದ ಪರಿಸ್ಥಿತಿ ಬಂದಿದೆ. ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಇದು ಆದ್ಯತೆಯ ವಿಷಯವಾಗಬೇಕಿದೆ. ಕೊರೊನಾ ಪಿಡುಗಿನಿಂದ ಖಿನ್ನತೆ ಹೆಚ್ಚಾಗುತ್ತಿದೆಯೇ? ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುವರ ಸಂಖ್ಯೆ ಹೆಚ್ಚಾಗುತ್ತಿದೆಯೇ? ನಮ್ಮ ಮಿದುಳಿನ ಮೇಲೆ ವೈರಸ್‌ನ ಪ್ರಭಾವಕ್ಕಿಂತ ಹೆಚ್ಚಾಗಿ ನಾವು ಬದುಕುವ ವಿಧಾನದಲ್ಲಿ ಅಗುತ್ತಿರುವ ಬದಲಾವಣೆಗಳು ಮುಖ್ಯ ಕಾರಣವೇ?
ತಜ್ಞವೈದ್ಯರು ನೀಡಿರುವ ಉತ್ತರದ ಅಕ್ಷರ ರೂಪ ಇಲ್ಲಿದೆ…
ಕೊರೊನಾ ಪಿಡುಗು ಜಗತ್ತನ್ನು ಆವರಿಸುವ ಮೊದಲು ಮತ್ತು ಆವರಿಸಿದ ನಂತರ ಜಗತ್ತಿನ ಅತಿದೊಡ್ಡ ಸಮಸ್ಯೆ ಎನಿಸಿದ್ದು ಖಿನ್ನತೆ (ಡಿಪ್ರೆಷನ್). ಕೊವಿಡ್ನಿಂದಾಗಿ ಖಿನ್ನತೆ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಕೊವಿಡ್ ಮತ್ತು ಖಿನ್ನತೆ ನಡುವೆ ಇರುವ ನೇರ ಸಂಬಂಧದ ಬಗ್ಗೆ ಈವರೆಗೆ ಸಾಕಷ್ಟು ದತ್ತಾಂಶಗಳು ಲಭ್ಯವಾಗಿಲ್ಲ. ಈ ವಿದ್ಯಮಾನ ಅರ್ಥೈಸಲು ನಾವು ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ.
ಕೊವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರೂ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ಉದ್ವಿಗ್ನತೆ, ಅನಿಶ್ಚಿತತೆ, ಆರೋಗ್ಯ, ಹಣಕಾಸು ಪರಿಸ್ಥಿತಿ ಮತ್ತು ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಒತ್ತಡಗಳು ಕೊವಿಡ್ನಿಂದ ಹೆಚ್ಚಾದವು. ಸಾಕಷ್ಟು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ಕೊವಿಡ್ ಕಾರಣದಿಂದಾಗಿ ನಾವು ಮನೆಗಳಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ಬಂತು. ಸಾಮಾಜಿಕವಾಗಿ ಜನರೊಂದಿಗೆ ಬೆರೆಯುವುದೂ ಕಡಿಮೆಯಾಯಿತು. ಸ್ಕ್ರೀನ್ ಟೈಮ್ ಎಂದರೆ ಟಿವಿ, ಟ್ಯಾಬ್, ಮೊಬೈಲ್ ನೋಡುವುದು ಹೆಚ್ಚಾಯಿತು. ಇದು ಸಹ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು.
ಫೋರ್ಟಿಸ್ ಆಸ್ಪತ್ರೆಯ ಮನಃಶಾಸ್ತ್ರಜ್ಞ ಡಾ.ಸಮೀರ್ ಪರೀಖ್
ಕೆಲವರಿಗಂತೂ ಕೊವಿಡ್ ಎನ್ನುವುದು ದುಸ್ವಪ್ನಕ್ಕಿಂತ ಕಡಿಮೆ ಆಗಿರಲಿಲ್ಲ. ಕೊರೊನಾದಿಂದ ಹಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡರು. ಕೊವಿಡ್ ಸಂಬಂಧಿತ ಸಮಸ್ಯೆಗಳಿಂದ ಹತ್ತಾರು ರೀತಿಯ ತೊಂದರೆಗಳನ್ನು ಎದುರಿಸಿದರು. ತಾವು ಕೊವಿಡ್ ಸೋಂಕಿತರಾಗಿದ್ದಾಗಲೇ, ಕುಟುಂಬದ ಹಲವು ಸದಸ್ಯರು ಒಂದೇ ಸಲಕ್ಕೆ ಕೊರೊನಾ ಸಂಬಂಧಿತ ಆರೋಗ್ಯ ಸಮಸ್ಯೆ ಎದುರಿಸುವ ಸಂದರ್ಭ ಬಂದಾಗ ಪರಿಸ್ಥಿತಿ ಇನ್ನಷ್ಟು ವಿಕೋಪಕಕ್ಕೆ ಹೋಯಿತು.
ಹಲವು ಕುಟುಂಬಳಿಗೆ ಸಂಕಷ್ಟ ಪರಿಸ್ಥಿತಿ ಒಂದೆರೆಡು ದಿನಗಳಲ್ಲಿ ಪರಿಹಾರವಾಗಲಿಲ್ಲ. ಕ್ವಾರಂಟೈನ್, ಐಸೊಲೇಶನ್, ಚಿಕಿತ್ಸೆ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಮುಂದುವರಿಯುತ್ತಲೇ ಇತ್ತು. ಸಂಕಷ್ಟ ಪರಿಸ್ಥಿತಿ ಎದುರಿಸುವಾಗ ಸಹಜವಾಗಿಯೇ ಉದ್ವಿಗ್ನತೆ ಅಥವಾ ಖಿನ್ನತೆಯಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂಥ ಲಕ್ಷಣಗಳು ಬಹುಕಾಲ ಉಳಿದರೆ ಅಂಥವರನ್ನು ಗುರುತಿಸಿ, ಆಪ್ತ ಸಮಾಲೋಚನೆಯ ಸೌಲಭ್ಯ ದೊರೆಯುವಂತೆ ಮಾಡಬೇಕು.
ಇದನ್ನೂ ಓದಿ: Mental health: ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಆಹಾರದ ಕ್ರಮ ಹೀಗಿರಲಿ
ಇದನ್ನೂ ಓದಿ: Tips to Boost Mental Health: ಮಾನಸಿಕ ಒತ್ತಡದಿಂದ ಹೊರಬರಲು ಈ ಮೂರು ಕೆಲಸಗಳನ್ನು ಮಾಡಿ