ಪ್ರೀತಿಯನ್ನು ಹೆಚ್ಚಿಸುವ, ಸಂಬಂಧವನ್ನು ಬಲಪಡಿಸುವ ಮಧುರ ಸುಳ್ಳುಗಳಿವು
ಯಾವುದೇ ಸಂಬಂಧದ ಅಡಿಪಾಯ ನಂಬಿಕೆ ಮತ್ತು ಪ್ರಾಮಾಣಿಕತೆಯ ಮೇಲೆ ನಿಂತಿದೆ. ಆದ್ದರಿಂದ ಜೀವನ ಸಂಗಾತಿಯ ಬಳಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು, ಸುಳ್ಳು ಹೇಳುವ ಅಭ್ಯಾಸ ಸಂಬಂಧವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಕೆಲವು ಮಧುರ ಸುಳ್ಳುಗಳು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದಂತೆ. ಹಾಗಿದ್ದರೆ ಸಂಬಂಧವನ್ನು ಬಲಪಡಿಸಲು ಸಂಗಾತಿಯ ಬಳಿ ಯಾವೆಲ್ಲಾ ಸುಳ್ಳುಗಳನ್ನು ಹೇಳಬೇಕು ಎಂಬುದನ್ನು ನೋಡೋಣ ಬನ್ನಿ.

ನಾವು ಯಾರಿಗೂ ಸುಳ್ಳು (lies) ಹೇಳಬಾರದು, ಸುಳ್ಳು ಹೇಳುವುದು ತಪ್ಪಿನ ಕೆಲಸ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಜೀವನ ಸಂಗಾತಿಯ ಬಳಿ ಯಾವುದೇ ರೀತಿಯ ಸುಳ್ಳುಗಳನ್ನು ಹೇಳಬಾರದು, ಅವರೊಂದಿಗೆ ಅತ್ಯಂತ ಪ್ರಾಮಾಣಿಕವಾಗಿರಬೇಕು. ಹೀಗಿದ್ದರೆ ಮಾತ್ರ ಸಂಬಂಧ ಶಾಶ್ವತವಾಗಿರಲು ಸಾಧ್ಯ, ಅದೇ ಒಂದು ಸುಳ್ಳು ಸುಂದರ ಸಂಬಂಧವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಏನು ಗೊತ್ತಾ ಈ ಕೆಲವೊಂದು ಸಿಹಿ ಸುಳ್ಳುಗಳು ಸಂಗಾತಿಗಳಿಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದಂತೆ. ಹೌದು ನೀವು ನಿಮ್ಮ ಸಂಗಾತಿಗೆ ಈ ಕೆಲವೊಂದು ಮಧುರ ಸುಳ್ಳುಗಳನ್ನು ಹೇಳುವ ಮೂಲಕ ನಿಮ್ಮ ಪ್ರೀತಿ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಅಷ್ಟಕ್ಕೂ ಸಂಬಂಧವನ್ನು ಬಲಪಡಿಸುವ ಆ ಸುಳ್ಳುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಂಬಂಧವನ್ನು ಬಲಪಡಿಸುವ ಸುಳ್ಳುಗಳಿವು:
ಉಡುಗೊರೆಗಳನ್ನು ಶ್ಲಾಘಿಸಿ: ನಿಮ್ಮ ಸಂಗಾತಿ ನಿಮಗಾಗಿ ಒಂದು ಉಡುಗೊರೆಯನ್ನು ತಂದಿದ್ದರೆ, ಅದಕ್ಕೆ ಪ್ರಶಂಸೆ ನೀಡಿ, ಅದು ನಿಮಗೆ ಇಷ್ಟವಾಗದಿದ್ದರೂ ಸಹ ಗಿಫ್ಟ್ ತುಂಬಾನೇ ಚೆನ್ನಾಗಿದೆ ಎಂದು ಹೊಗಳಿಕೆ ಮಾತುಗಳನ್ನಾಡಿ. ಈ ಸಣ್ಣ ಸುಳ್ಳು ನಿಮ್ಮ ಸಂಗಾತಿಯನ್ನು ಖುಷಿ ಪಡಿಸುತ್ತದೆ. ಹೀಗೆ ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಿ, ಇದು ಸಂಬಂಧವನ್ನು ಸಹ ಬಲಪಡಿಸುತ್ತದೆ.
ಪ್ರೋತ್ಸಾಹದಾಯಕ ಮಾತುಗಳನ್ನಾಡಿ: ದೈನಂದಿನ ಜವಾಬ್ದಾರಿಗಳು ಮತ್ತು ಕೆಲಸದ ಒತ್ತಡಗಳ ನಡುವೆ, ಕೆಲವೊಮ್ಮೆ ನಿಮ್ಮ ಸಂಗಾತಿಗೆ ನಿಮಗೆ ಸರಿಯಾಗಿ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ, ನಿಮಗಾಗಿ ಅತ್ಯುತ್ತಮವಾದುದನ್ನು ನೀಡಲು ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಚುಚ್ಚು ಮಾತುಗಳನ್ನಾಡುವ ಬದಲು ನೀನು ನನ್ನಷ್ಟು ಎಷ್ಟು ಪ್ರೀತಿಸುತ್ತೀಯಾ ನೋಡು, ನನಗಾಗಿ ತುಂಬಾ ಸಮಯ ಕೊಡುತ್ತೀಯಾ ಎಂಬ ಪ್ರೋತ್ಸಾಹದಾಯಕ ಮಾತುಗಳನ್ನಾಡಿ. ಇದು ಮನಸ್ತಾಮಗಳನ್ನು ತಪ್ಪಿಸುತ್ತದೆ, ಪ್ರೀತಿಯನ್ನು ಹೆಚ್ಚಿಸುತ್ತದೆ.
ಅಡುಗೆಯನ್ನು ಹೊಗಳಲು ಮರೆಯಬೇಡಿ: ನಿಮ್ಮ ಸಂಗಾತಿ ನಿಮಗಾಗಿ ಪ್ರೀತಿಯಿಂದ ಅಡುಗೆ ಮಾಡಿದ್ದರೆ, ಕೇವಲ ರುಚಿಯ ಮೇಲೆ ಮಾತ್ರ ಗಮನಹರಿಸಬೇಡಿ, ಅವರ ಪ್ರಯತ್ನ ಮತ್ತು ಭಾವನೆಗಳನ್ನು ಪ್ರಶಂಸಿಸಿ. ರುಚಿ ಚೆನ್ನಾಗಿಲ್ಲದಿದ್ದರೂ ಅಡುಗೆ ತುಂಬಾನೇ ಚೆನ್ನಾಗಿ ಮಾಡಿದ್ದೀರಿ ಎಂದು ಪ್ರಶಂಸೆಯ ಮಾತುಗಳನ್ನಾಡಿ. ನಿಮ್ಮಿಂದ ಬರುವ ಈ ಸಕಾರಾತ್ಮಕ ಪ್ರತಿಕ್ರಿಯೆ ಅವರನ್ನು ಇನ್ನಷ್ಟು ಸಂತೋಷಪಡಿಸುತ್ತದೆ.
ಇದನ್ನೂ ಓದಿ: ಈ ಉಡುಗೊರೆಗಳನ್ನು ನೀಡಿದ್ರೆ ಸಂಬಂಧದಲ್ಲಿ ಬಿರುಕು ಮೂಡೋದು ಗ್ಯಾರಂಟಿ
ಹೊಸ ಲುಕ್‌ಗಳನ್ನು ಬೆಂಬಲಿಸಿ: ನಿಮ್ಮ ಸಂಗಾತಿ ಹೊಸ ಕೇಶವಿನ್ಯಾಸ, ಉಡುಗೆ ಅಥವಾ ಹೊಸ ಲುಕ್ ಪ್ರಯತ್ನಿಸಿದಾಗ, ಅದನ್ನು ಅಪಹಾಸ್ಯ ಮಾಡುವ ಬದಲು ಪ್ರೋತ್ಸಾಹಿಸಿ. ಇದು ಅವರಿಗೆ ಒಳ್ಳೆಯ ಭಾವನೆ ಮೂಡಿಸುತ್ತದೆ ಮತ್ತು ಸಂಬಂಧದಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
‘ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಹೇಳಿ: ಪ್ರತಿ ಕ್ಷಣವೂ ಯಾರನ್ನಾದರೂ ಮಿಸ್ ಮಾಡಿಕೊಳ್ಳುವುದು ಅಸಾಧ್ಯವಾದ ಮಾತು. ಆದರೂ ನಿಮ್ಮ ಸಂಗಾತಿಗೆ ಅವರ ಉಪಸ್ಥಿತಿಯು ನಿಮಗೆ ಮುಖ್ಯ ಎಂಬುದನ್ನು ತಿಳಿಸಲು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಸಣ್ಣ ದಯೆಯ, ಪ್ರೀತಿಯ ಮಾತುಗಳು ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಇದು ಮಾತ್ರವಲ್ಲದೆ ಪ್ರೀತಿ, ಗೌರವ, ತಿಳುವಳಿಕೆ ಮತ್ತು ಭಾವನೆಗಳಿಗೆ ಬೆಲೆ ಕೊಡುವುದು ಕೂಡ ಸಂಬಂಧವನ್ನು ಬಲಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




