World Ozone Day 2023: ವಿಶ್ವ ಓಝೋನ್ ದಿನವನ್ನು ಆಚರಿಸುವ ಹಿಂದಿನ ಕಾರಣವೇನು? ಇಲ್ಲಿದೆ ಮಾಹಿತಿ
ಓಝೋನ್ ಪದರವು ಸೂರ್ಯನಿಂದ ಹೊರಸೂಸುವ ನೇರಳಾತೀಕ ಕಿರಣಗಳನ್ನು ಹೀರಿಕೊಂಡು ಭೂಮಿಯಲ್ಲಿನ ಸಕಲ ಜೀವರಾಶಿಗಳನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ಓಝೋನ್ ಪದರವು ಸಾಕಷ್ಟು ಕ್ಷೀಣಿಸುತ್ತಿದೆ ಎಂಬ ವಿಚಾರವನ್ನು ನಾವೆಲ್ಲರೂ ಕೇಳಿರಬಹುದು. ಇದೇ ಕಾರಣದಿಂದ ಓಝೋನ್ ಪದರದ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ಓಝೋನ್ (Ozone) ಪದರವು ಮಾನವನ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯವಾದುದು. ಓಝೋನ್ ಪದರವು ವಾಯುಮಂಡಲದಲ್ಲಿನ ತೆಳುವಾದ ಪದರವಾಗಿದ್ದು, ಇದು ಸೂರ್ಯನ ನೆರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆಯುವ ಕಾರ್ಯವನ್ನು ಮಾಡುತ್ತದೆ. ಆದರೆ ಪ್ರಸ್ತುತ ಓಝೋನ್ ಪದರದಲ್ಲಿ ರಂಧ್ರಗಳು ಕಾಣಿಸಿಕೊಂಡು, ಅದು ಕ್ಷೀಣಿಸುತ್ತಿದೆ. ಕ್ಲೋರೋಫ್ಲೋರೋಕಾರ್ಬನ್, ಕಾರ್ಬನ್ ಟೆಟ್ರಾಕ್ಲೋರೈಡ್, ಹೈಡ್ರೋಫ್ಲೋರೋಕಾರ್ಬನ್ ಮತ್ತು ಮೀಥೈಲ್ ಕ್ಲೋರೋಫಾರ್ಮ್ಗಳು ಓಝೋನ್ ಪದರದ ಸವಕಳಿಗೆ ಕಾರಣವಾಗುವ ರಾಸಾಯನಿಕಗಳಾಗಿವೆ. ನಾವು ಬಳಸುವ ಏಸಿ ಹಾಗೂ ಫ್ರಿಡ್ಜ್ ಗಳಿಂದ ಹೊರಸೂಸುವ ಅನಿಲಗಳು ಓಝೋನ್ ಪದರಕ್ಕೆ ಹಾನಿಕಾರಕವಾಗಿದೆ. ಅಲ್ಲದೆ ಜ್ವಾಲಾಮುಖಿ ಸ್ಪೋಟಗಳಿಂದ ಬರುವ ಅನಿಲಗಳು ಕೂಡಾ ಓಝೋನ್ ಪದರವನ್ನು ಹಾನಿಗೊಳಿಸುತ್ತದೆ. ಕಾರ್ಖಾನೆಗಳಿಂದ ಹೊರಸೂಸುವ ಹಾನಿಕಾರಕ ಹೊಗೆಗಳಂತಹ ಹಲವಾರು ರೀತಿಯ ಮಾಲೀನ್ಯದ ಕಾರಣದಿಂದಾಗಿ ಇಂದು ಓಝೋನ್ ಪದರಗಳಲ್ಲಿ ರಂಧ್ರಗಳು ಕಾಣಿಸಿಕೊಂಡಿವೆ. ಹಾಗಾಗಿ ಓಝೋನ್ ಪದರವನ್ನು ರಕ್ಷಣೆ ಮಾಡಬೇಕೆನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ಓಝೋನ್ ಪದರ ಎಂದರೇನು?
ಓಝೋನ್ ಪದರವು ಭೂಮಿಯ ಮೇಲ್ಮೈಯಿಂದ 20 ರಿಂದ 30 ಕಿಮೀ ಎತ್ತರದಲ್ಲಿ ವಾತಾವರಣದ ವಾಯುಮಂಡಲದಲ್ಲಿ ಓಝೋನ್ ಅನಿಲದ ತೆಳುವಾದ ಪದರವಾಗಿದೆ. ಓಝೋನ್ ಪದರದ ಸಾಂದ್ರತೆಯು ಸುಮಾರು 10 ppm ಆಗಿದೆ. ಓಝೋನ್ ಪದರವು ಹಾನಿಕರಾಕ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪದಂತೆ ತಡೆಯುತ್ತದೆ. ಸೂರ್ಯನಿಂದ ಬರುವ ಎಲ್ಲಾ ನೇರಳಾತೀತ ಕಿರಣಗಳು ಭೂಮಿಯನ್ನು ತಲುಪಿದರೆ, ಭೂಮಿಯ ಮೇಲಿನ ಎಲ್ಲಾ ಜೀವಿಗಳು ಚರ್ಮದ ಕ್ಯಾನ್ಸರ್ ನಂತಹ ಗಂಭೀರ ರೋಗಗಳಿಗೆ ತುತ್ತಾಗುತ್ತವೆ ಮತ್ತು ಎಲ್ಲಾ ಮರಗಿಡಗಳು ನಾಶವಾಗುತ್ತವೆ ಅದಕ್ಕಾಗಿಯೇ ಓಝೋನ್ ಪದರವನ್ನು ರಕ್ಷಿಸುವುದು ಅಗತ್ಯವಾಗಿದೆ. ಓಝೋನ್ ಪದರ ಇರುವಿಕೆಯನ್ನು 1913 ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞರಾದ ಫ್ಯಾಬ್ರಿ ಚಾರ್ಲ್ಸ್ ಮತ್ತು ಹೆನ್ರಿ ಬುಸ್ಸನ್ ಕಂಡುಹಿಡಿದರು.
ವಿಶ್ವ ಓಝೋನ್ ದಿನದ ಆಚರಣೆಯ ಇತಿಹಾಸ:
ಓಝೋನ್ ಪದರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು , ಸೆಪ್ಟೆಂಬರ್ 16, 1987 ರಂದು ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಮೇಲೆ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಸಹಿ ಹಾಕಿದ್ದವು. ಇದರ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜನವರಿ 23, 1995 ರಂದು ವಿಶ್ವದಾದ್ಯಂತ ಓಝೋನ್ ಪದರದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸೆಪ್ಟೆಂಬರ್ 16 ನ್ನು ಅಂತರಾಷ್ಟ್ರೀಯ ಓಝೋನ್ ದಿನವನ್ನಾಗಿ ಆಚರಿಸಲು ನಿರ್ಣಯವನ್ನು ಅಂಗೀಕರಿಸಿತು. ಈ ದಿನವು 1987 ರಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ಗೆ ಸಹಿ ಮಾಡಿದ ದಿನವನ್ನು ನೆನಪಿಸುತ್ತದೆ. ಆ ಸಮಯದಲ್ಲಿ 2010 ರ ವೇಳೆಗೆ ಪ್ರಪಂಚದಾದ್ಯಂತ ಓಝೋನ್ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು, ಆದರೆ ಇಂದು ಗುರಿಯನ್ನು ತಲುಪಲಾಗಿಲ್ಲವಾದರೂ ಓಝೋನ್ ಪದರವನ್ನು ಉಳಿಸುವಲ್ಲಿ ಜಗತ್ತು ಗಮನಾರ್ಹವಾದ ಕೆಲಸವನ್ನು ಮಾಡುತ್ತಿದೆ. ಈ ಪ್ರಯತ್ನದ ಫಲವೇ ಇಂದು ಓಝೋನ್ ಸ್ನೇಹಿ ಫ್ರಿಡ್ಜ್, ಕೂಲರ್ ಇತ್ಯಾದಿಗಳು ಮಾರುಕಟ್ಟೆಗೆ ಬಂದಿವೆ.
ಓಝೋನ್ ದಿನದ ಆಚರಣೆಯ ಪ್ರಾಮುಖ್ಯತೆ:
ಓಝೋನ್ ಪದರವು ವಾಯುಮಂಡಲದ ಪದರವಾಗಿದ್ದು, ಸೂರ್ಯನಿಂದ ಬರುವ ನೇರಳಾತೀತ ವಿಕಿರಣದ ಹಾನಿಕಾರಕ ಅಡ್ಡಪರಿಣಾಮಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಆದರೆ ಓಝೋನ್ ಪದರ ಸಂಪೂರ್ಣವಾಗಿ ಕ್ಷೀಣಿಸಿದರೆ ಅದು ಭೂಮಿಯಲ್ಲಿನ ಜೀವಿಗಳು ಮತ್ತು ಸಸ್ಯರಾಶಿಗಳ ಮೇಲೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. ನಾವು ನೇರಳಾತೀತ ಕಿರಣಗಳೊಂದಿಗೆ ನೇರ ಸಂಪರ್ಕಕ್ಕೆ ಬಂದರೆ ಇದು ಚರ್ಮದ ಕ್ಯಾನ್ಸರ್ ನಂತಹ ಹಾನಿಕಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಕ್ಷೀಣಿಸುತ್ತಿರುವ ಓಝೋನ್ ಪದರದ ರಕ್ಷಣೆಗಾಗಿ ಜನರು ಏನು ಮಾಡಬೇಕು ಎಂಬುದರ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ