New Novel: ಅಚ್ಚಿಗೂ ಮೊದಲು; ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಎಂಆರ್ ದತ್ತಾತ್ರಿ ಕಾದಂಬರಿ ಏ.17ಕ್ಕೆ ಬಿಡುಗಡೆ
M. R. Dattathri : ‘ಎಲ್ಲರ ಬೆಲೆ ನನಗೆ ತಿಳಿದಿದೆ’ ಎನ್ನುವ ಧಾರ್ಷ್ಟ್ಯ ಮಾತದು. ಆ ಮಾತಿರುವ ಕಾದಂಬರಿಯನ್ನು ಮಾರಿಯೋ ಪೂಝೊ ಬರೆದು 52 ವರ್ಷಗಳಾದವು. ಇದನ್ನೇ ಮಾರ್ಲನ್ ಬ್ರಾಂಡೋ ಸಿನಿಮಾದಲ್ಲಿ ನುಡಿದು, ನಟಿಸಿ, ನಲ್ವತ್ತೊಂಬತ್ತು ವರ್ಷಗಳು ಸಂದವು. ಆದರೂ, ಆ ಮಾತು ಈ ಕಾದಂಬರಿ ಬರವಣಿಗೆಯ ಉದ್ದಕ್ಕೂ ನನ್ನ ಕಿವಿಗಳಲ್ಲಿ ರಿಂಗಣಿಸಿದೆ.
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com
ಕೃತಿ: ಒಂದೊಂದು ತಲೆಗೂ ಒಂದೊಂದು ಬೆಲೆ (ಕಾದಂಬರಿ) ಲೇಖಕ : ಎಂ. ಆರ್. ದತ್ತಾತ್ರಿ ಪುಟ : 248 ಬೆಲೆ : ರೂ. 250 ಮುಖಪುಟ ವಿನ್ಯಾಸ: ಟಿ.ಎಫ್. ಹಾದಿಮನಿ ಪ್ರಕಾಶನ: ಅಂಕಿತ ಪುಸ್ತಕ, ಬೆಂಗಳೂರು
ಹಾಲಿವುಡ್‌ನ ಜನಪ್ರಿಯ ಸಿನಿಮಾ ‘ದ ಗಾಡ್‌ಫಾದರ್’ನಲ್ಲಿ ಬರುವ ದೃಶ್ಯ ವೊಂದು ನನ್ನನ್ನು ಸದಾ ಕಾಡುತ್ತದೆ. ಗುಲಾಬಿ ಸಿಕ್ಕಿಸಿದ ಕರಿಕೋಟನ್ನು ತೊಟ್ಟ ಅಮೆರಿಕದ ಭೂಗತಜಗತ್ತಿನ ದೊರೆ ಡಾನ್ ವಿಟೋ ಕಾರ್ಲಿವೋನೀ ತನ್ನ ಅರೆಮರೆಯ ಕೋಣೆಯಲ್ಲಿ ನಿಂತು, ಸಹಾಯ ಕೇಳಿ ಬಂದವನ ಆರ್ತ ಕಣ್ಣುಗಳನ್ನೇ ಅಳೆಯುವವನಂತೆ ನೋಡುತ್ತ, ಮುಖಚಹರೆಯಲ್ಲಿ ಯಾವ ಭಾವಗಳನ್ನೂ ಸುಲಭಕ್ಕೆ ಬಿಟ್ಟುಕೊಡದೆ, ತನ್ನ ಹುಟ್ಟುಹವ್ಯಾಸದಂತೆ ದಪ್ಪತುಟಿಗಳನ್ನು ಕೊಂಚವಷ್ಟೆ ಚಲಿಸಿ, ನ್ಯೂಯಾರ್ಕ್-ಸಿಸಿಲಿಯನ್ ಶೈಲಿಯ ಉಚ್ಚಾರಣೆಯಲ್ಲಿ, ‘ಐಯಾಮ್ ಗೊನಾ ಮೇಕ್ ಹಿಮ್ ಆನ್ ಆಫರ್ ಹಿ ಕ್ಯಾಂಟ್ ರೆಫ್ಯೂಸ್’ – ನಾನು ಮಾಡುವ ಪ್ರಸ್ತಾಪವನ್ನು ಅವನು ತಿರಸ್ಕರಿಸಲಾರ – ಎನ್ನುತ್ತಾನೆ. ‘ಎಲ್ಲರ ಬೆಲೆ ನನಗೆ ತಿಳಿದಿದೆ’ ಎನ್ನುವ ಧಾರ್ಷ್ಟ್ಯ ಮಾತದು. ಆ ಮಾತಿರುವ ಕಾದಂಬರಿಯನ್ನು ಮಾರಿಯೋ ಪೂಝೊ ಬರೆದು ಐವತ್ತೆರಡು ವರ್ಷಗಳಾದವು ಮತ್ತು ಅದ್ಭುತ ನಟ ಮಾರ್ಲನ್ ಬ್ರಾಂಡೋ ಸಿನಿಮಾದಲ್ಲಿ ನುಡಿದು, ನಟಿಸಿ, ನಲ್ವತ್ತೊಂಬತ್ತು ವರ್ಷಗಳು ಸಂದವು. ಆದರೂ, ಆ ಮಾತು ಈ ಕಾದಂಬರಿ ಬರವಣಿಗೆಯ ಉದ್ದಕ್ಕೂ ನನ್ನ ಕಿವಿಗಳಲ್ಲಿ ರಿಂಗಣಿಸಿದೆ. ಬದುಕಿನಲ್ಲಿ ಮಾಯೆಯು ನಾವು ಕೇವಲ ಮನುಷ್ಯರನ್ನು ಆವರಿಸಿಕೊಳ್ಳುವ ಪರಿಗೆ ರೂಪಕವಾಗಿ ಕಂಡಿದೆ. ಎಂ. ಆರ್. ದತ್ತಾತ್ರಿ, ಕಾದಂಬರಿಕಾರ
(ಆಯ್ದ ಭಾಗ)
ಹುಡುಗ ಕಾನ್ಫರೆನ್ಸ್ ರೂಮಿನ ಬಾಗಿಲು ತೋರಿಸಿ ಕ್ಷಣವೂ ನಿಲ್ಲದೆ ಹೊರಟುಹೋದ. ಶಿವಸ್ವಾಮಿ ಮೆಲ್ಲನೆ ಬಾಗಿಲು ತಟ್ಟಿದರು. ಒಳಗೆ ಮೂವರು ಕುಳಿತಿರುವುದು ಕಾಣುತ್ತಿತ್ತು. ಆ ಮೂವರಲ್ಲಿದ್ದ ಒಬ್ಬಳೇ ಹೆಂಗಸು ಇವರೆಡೆಗೆ ನೋಡಿ, “ಪ್ಲೀಸ್ ಕಮ್ ಇನ್” ಎಂದು ಹೇಳಿ ಕೈನಲ್ಲಿ ಸಂಜ್ಞೆಯನ್ನೂ ಮಾಡಿದರು. ಶಿವಸ್ವಾಮಿ ಮೆಲ್ಲಗೆ ಬಾಗಿಲು ದಬ್ಬಿ ಒಳಬಂದರು. ವಿಶಾಲವಾದ ಕಾನ್ಫರೆನ್ಸ್ ಕೋಣೆಯದು. ಚೌಕಾಕಾರದ ಟೇಬಲ್ಲಿನ ಸುತ್ತ ಕೊನೆಪಕ್ಷ ಮೂವತ್ತು ಜನರು ಕೂರಬಹುದು. ಇವರನ್ನು ಎದುರಿಸುವಂತೆ ಮೂವರು ಕುಳಿತಿದ್ದರು. ಇಷ್ಟು ವಯಸ್ಸಿನವರನ್ನು ಇಂಟರ್‌ವ್ಯೂಗೆ ನಿರೀಕ್ಷಿಸಿರಲಿಲ್ಲವೋ ಏನೋ, ಮೂವರೂ ತಮ್ಮ ಪರಿಚಯ ಮಾಡಿಕೊಳ್ಳಲು ಎದ್ದುನಿಂತರು. ಮೊದಲನೆಯವರಾಗಿ ತೆಳುಹಸಿರು ಚೂಡಿದಾರದಲ್ಲಿದ್ದ ಹೆಂಗಸು, ನಡುವಯಸ್ಸಿನವರಿರಬಹುದು, ಶಿವಸ್ವಾಮಿಯೆಡೆಗೆ ಕೈಚಾಚುತ್ತ, “ನಾನು ಶ್ಯಾಮಲಾ ಮೆನನ್. ಡಿಟಿ ಗ್ರೂಪ್ ಆಫ್ ಕಂಪನೀಸ್‍ಗೆ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದೇನೆ” ಎಂದರು.
ಅವರ ಪಕ್ಕದಲ್ಲಿದ್ದವನು, ಮೂವತ್ತೈದರಿಂದ ನಲ್ವತ್ತರೊಳಗಿರಬಹುದು, ಎತ್ತರ ಮತ್ತು ಗಾತ್ರದವನು, ಬ್ಯುಸಿನೆಸ್ ಸೂಟಿನಲ್ಲಿದ್ದವನು, ಧ್ವನಿಯೂ ಆಳ. ಕೈಚಾಚುತ್ತ “ನಾನು ರವಿರಾಜ್ ಥಕ್ಕರ್. ಡಿಟಿ ಗ್ರೂಪಿಗೆ ಸೇರಿದ ಈ ಸಾಫ್ಟವೇರ್ ಯೂನಿಟ್‌ಗೆ ಮುಖ್ಯಸ್ಥನಾಗಿದ್ದೇನೆ” ಎಂದು ಪರಿಚಯ ಮಾಡಿಕೊಂಡನು. ಅವನ ಪಕ್ಕದಲ್ಲಿದ್ದವನು ಕೂಡ ಸುಮಾರು ಅದೇ ವಯಸ್ಸಿನವನಂತೆ ಕಾಣುತ್ತಿದ್ದನಾದರೂ ಒಳ್ಳೆಯ ದೇಹದಾರ್ಢ್ಯತೆಯನ್ನು ಉಳ್ಳವನಾಗಿ, ಬಿಳಿಯ ಟೀಶರ್ಟ್ ಮತ್ತು ತೆಳು ನೀಲಿ ಜೀನ್ಸ್‌ಪ್ಯಾಂಟಿನಲ್ಲಿದ್ದವ ನಗುತ್ತ ಆತ್ಮೀಯವಾಗಿ ಕೈ ಚಾಚಿದ. ಆ ಮೂವರಲ್ಲಿ ನಕ್ಕಿದ್ದು ಅವನೇನೇ. “ನಾನು ಪ್ರಭುದಾಸ್. ನೀವು ಇಂಟರ್‌ವ್ಯೂಗೆ ಬಂದಿರುವ ಈ ಕಂಪನಿಯ ಸಾಫ್ಟವೇರ್ ಡೆಲವರಿಗೆ ವೈಸ್ ಪ್ರೆಸಿಡೆಂಟ್ ಆಗಿದ್ದೇನೆ. ನನ್ನ ಪಕ್ಕದ ಈ ವ್ಯಕ್ತಿ ಕಂಪನಿಗೆ ಪ್ರಭುವಾದರೂ ಇಲ್ಲಿ ಜನ ನನ್ನನ್ನು ಪ್ರಭು ಎಂದು ಕರೆಯುತ್ತಾರೆ” ಎಂದು ಹೇಳಿದ. ಅವನ ಮಾತಿಗೆ ಎಲ್ಲರೂ ನಕ್ಕರು. ಶಿವಸ್ವಾಮಿಗೆ ಪರಿಸ್ಥಿತಿ ಸ್ವಲ್ಪ ತಿಳಿಯಾಯಿತು.
ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ಶ್ರದ್ಧಾಳು, ತನ್ಮಯಿ, ಹಟಮಾರಿ, ಪ್ರತಿಭಾವಂತ, ನಿಸ್ವಾರ್ಥಿ ಚನ್ನಕೇಶವ
ಎಲ್ಲರೂ ಕುಳಿತ ಮೇಲೆ ಶ್ಯಾಮಲಾ ಮೆನನ್ ಶಿವಸ್ವಾಮಿಯವರನ್ನು ಪರಿಚಯ ಮಾಡಿಕೊಳ್ಳುವಂತೆ ಕೇಳಿಕೊಂಡರು.
“ನಾನು ಪಬ್ಲಿಕ್ ಸೆಕ್ಟರ್ ಕಂಪನಿ ಬಿಇಎಲ್‍ನಲ್ಲಿ ಮೂವತ್ತೈದು ವರ್ಷಗಳ ಕಾಲ ಕೆಲಸ ಮಾಡಿ ಈಗ ಎರಡು ವರ್ಷಗಳಿಂದ ನಿವೃತ್ತನಾಗಿದ್ದೇನೆ. ನಿವೃತ್ತನಾಗುವ ವೇಳೆಗೆ ನಾನು ಎಚ್ ಆರ್ ಡಿಪಾರ್ಟ್‍ಮೆಂಟಿಗೆ ಎಜಿಎಮ್ ಆಗಿದ್ದೆ. ನಾನು ನನ್ನ ಸರ್ವೀಸನ್ನು ಪೂರ್ತಿಯಾಗಿ ಘಾಝಿಯಾಬಾದ್‌ನಲ್ಲಿ ಮಾಡಿದೆನಾದರೂ ಮೂಲತಃ ಕರ್ನಾಟಕದವನೇ. ಕೋಲಾರ ಜಿಲ್ಲೆಯ ಮಾಸ್ತಿ ನನ್ನ ಸ್ವಂತ ಊರು. ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಪದವಿ ಪಡೆದಿದ್ದೇನೆ. ನಾನು ಕಂಪನಿಗೆ ಆಯ್ಕೆಯಾದ ವರ್ಷದಲ್ಲಿಯೇ ಸಂಸ್ಥೆಯು ಘಾಝಿಯಾಬಾದ್ ಶಾಖೆಯನ್ನು ಪ್ರಾರಂಭಿಸಿತಾಗಿ ನನ್ನ ಪೋಸ್ಟಿಂಗ್ ನೇರವಾಗಿ ಅಲ್ಲಿಗೇ ಆಯಿತು. ಸೇರಿದ ಮೊದಲ ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ವರ್ಗಬಯಸಿ ಕೋರಿಕೆ ಸಲ್ಲಿಸುತ್ತಿದ್ದೆನಾದರೂ ಕಂಪನಿಯು ಹಲವಾರು ಕಾರಣಗಳಿಂದ ಟ್ರಾನ್ಸಫರ್ ಕೊಡಲಿಲ್ಲ. ಹಾಗಾಗಿ ಅಲ್ಲಿಯೇ ಮುಂದುವರೆದೆ. ಮುಂದೆ ಮದುವೆಯಾಗಿ ಮಕ್ಕಳಾದ ಮೇಲೆ ಊರು ಬದಲಿಸುವುದು ಅಷ್ಟು ಸುಲಭವಲ್ಲ ನೋಡಿ, ಹಾಗಾಗಿ ಅಲ್ಲಿಯೇ ಉಳಿದುಬಿಟ್ಟೆವು. ಉಳಿದದ್ದಷ್ಟೇ ಆಲ್ಲ, ಅ ಊರನ್ನು ಬಹಳ ಇಷ್ಟಪಟ್ಟೆವು” ಎಂದು ಪೇಲವ ನಗೆಯನ್ನು ನಕ್ಕರು.
ತಾನೇಕೆ ಅವೆಲ್ಲ ಹೇಳಬೇಕಿತ್ತು ಎಂದು ತಿಳಿಯಲಿಲ್ಲ. ತುಂಬ ಮಾತನಾಡಿಬಿಟ್ಟೆ ಎನ್ನುವಂತೆ ಪೆಚ್ಚಾದರು. ಎದುರಿನ ಮೂವರ ಮುಖ ನೋಡಿದರು. ಹೆಂಗಸಿನ ಮುಖದಲ್ಲಿ ಕಂಡೂಕಾಣದಂತಹ ಅಸಹನೆಯಿತ್ತು. ಸೂಟಿನಲ್ಲಿದ್ದ ದಢೂತಿ ಮನುಷ್ಯ, ರವಿರಾಜ್ ಥಕ್ಕರ್ ಎಂದು ಪರಿಚಯ ಮಾಡಿಕೊಂಡವನು, ಇವರನ್ನು ಅಳೆಯುವವನಂತೆ ನೋಡುತ್ತಿದ್ದ. ಪ್ರಭುದಾಸನ ಮುಖದಲ್ಲಿ ನಗೆಯಿತ್ತು, ಆದರೆ ಅದು ಯಾವ ಬಗೆಯದು ಎಂದು ಸುಳಿವು ಸಿಗದಾಯ್ತು. ಸೂಟಿನವನು ತನ್ನ ತಲೆಬಗ್ಗಿಸಿ ಕಿರುಗಣ್ಣಿನಲ್ಲಿ ವಾಚುನೋಡಿಕೊಂಡ ಎಂದು ಅನ್ನಿಸಿದಾಗ ತಾನು ಇವರೆಲ್ಲರ ಸಮಯ ವ್ಯರ್ಥ ಮಾಡುತ್ತಿದ್ದೇನೇನೋ ಎಂದು ಮತ್ತೂ ಆವೇಗಕ್ಕೆ ಒಳಗಾದರು. ಆವೇಗಕ್ಕೆ ಒಳಗಾದರೆ ಶಿವಸ್ವಾಮಿಯ ಧ್ವನಿ ನಡುಗುತ್ತದೆ, ಮಾತು ವೇಗವಾಗುತ್ತದೆ. ಗಬಳೆ ಮಾತುಗಳು ಏನು ಮಾತನಾಡಬೇಕು ಎನ್ನುವ ಆಲೋಚನೆಗಳನ್ನು ದಿಕ್ಕುತಪ್ಪಿಸುತ್ತವೆ.
ಈವರೆಗೂ ಅವರು ಇಂಟರ್‌ವ್ಯೂ ಪ್ಯಾನಲ್‌ಗಳಲ್ಲಿ ಕುಳಿತು ಸಂದರ್ಶನ ತೆಗೆದುಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‌ನ ಕೊನೆಯ ಹಂತದ ಇಂಟರ್‌ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‌ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‌ನ ಸೀನಿಯರ್ ಮ್ಯಾನೇಜರ್‌ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‌ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್. ಹರ್ ಆಟಿಟ್ಯೂಡ್ ಇಸ್ ಓಕೆ” ಎಂದು ಒಂದೆರಡು ಕಾಮೆಂಟುಗಳನ್ನು ಬರೆದರೆ ಅವರ ಜವಾಬ್ದಾರಿ ಪೂರೈಸುತ್ತಿತ್ತು. ಆದರೆ ಕೆಲಸಕ್ಕಾಗಿ ಸಂದರ್ಶನವನ್ನು ಎದುರಿಸುತ್ತಿರುವುದು ಅವರ ಜೀವಮಾನದಲ್ಲಿ ಇದು ಎರಡನೇ ಬಾರಿ, ಅದೂ ಮೂವತ್ತೈದು ವರ್ಷಗಳ ಅಂತರದಲ್ಲಿ.
ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ‘ಮೌನದೊಳಗೊಂದು ಅಂತರ್ಧಾನ’ ನಾಗರೇಖಾ ಕಥಾಸಂಕಲನ ಏ.3ರಂದು ಬಿಡುಗಡೆ
ಅಷ್ಟೇ ಪರಿಚಯ! ಮೂವರೂ ಅವರಿಂದ ಮತ್ತೂ ನಿರೀಕ್ಷಿಸಿದ್ದವರಾಗಿ ಸುಮ್ಮನೆ ಕುಳಿತರು. ಶಿವಸ್ವಾಮಿಯೂ ಮೌನವಾಗಿಬಿಟ್ಟರು. ಅವರನ್ನು ಹಗುರಾಗಿಸುವವನಂತೆ ಪ್ರಭುವೇ, “ಸರ್, ಎಲ್ಲಿ ಅಂದಿರಿ? ಘಾಝಿಯಾಬಾದು ಡೆಲ್ಲಿ ಪಂಜಾಬ್ ಬಾರ್ಡರ್ ಅಲ್ಲವಾ?” ಎಂದು ಕೇಳಿದ. “ಅಲ್ಲ, ಡೆಲ್ಲಿ ಉತ್ತರ ಪ್ರದೇಶ್ ಬಾರ್ಡರ್. ನಿಜಕ್ಕೂ ಯೂಪಿಗೆ ಬರುತ್ತದೆ” ಎಂದರು. “ಸರ್, ನಿಮಗೆ ಎಷ್ಟು ಮಕ್ಕಳು? ಏನು ಮಾಡುತ್ತಿದ್ದಾರೆ? ನಿಮ್ಮ ಕುಟುಂಬದ ಬಗ್ಗೆ ಹೇಳಿ.” ಅವನ ‘ಸರ್’ ಪ್ರಯೋಗ ಶಿವಸ್ವಾಮಿಯ ಮೇಲೆ ಕೆಲಸ ಮಾಡಿತು ಎಂದು ಕಾಣುತ್ತದೆ. ಹಿಂದಿನ ಕಂಪನಿಯ ಸಂಸ್ಕೃತಿಗೆ ಹೊಂದಿಕೆಯಾಗುತ್ತಿತ್ತು. ಶಿವಸ್ವಾಮಿ ಕೊಂಚ ನಿರಾಳರಾದರು. “ಇಬ್ಬರು. ಇಬ್ಬರೂ ಈಗ ಅಮೆರಿಕದಲ್ಲಿದ್ದಾರೆ. ಮಗಳು ದೊಡ್ಡವಳು, ಸಂಜನಾ ಎಂದು ಹೆಸರು. ಬಿಎಸ್ಸಿ ಓದಿದ್ದಾಳೆ. ಎರಡು ವರ್ಷಗಳ ಹಿಂದೆ ಮದುವೆಯಾಯಿತು. ಈಗ ಗಂಡನೊಂದಿಗೆ ಕ್ಯಾಲಿಫೋರ್ನಿಯಾದಲ್ಲಿದ್ದಾಳೆ. ಮಗನ ಹೆಸರು ತೇಜಸ್. ಎನ್‍ಐಟಿ ಡೆಲ್ಲಿಯಲ್ಲಿ ಬಿಟೆಕ್ ಓದಿ ಯೂನಿವರ್ಸಿಟಿ ಆಫ್ ಟೆಕ್ಸಸ್ ಆಸ್ಟಿನ್‌ನಲ್ಲಿ ಎಂಎಸ್ ಮಾಡುತ್ತಿದ್ದಾನೆ. ನನ್ನ ಪತ್ನಿಯ ಹೆಸರು ರೇವತಿ” ಅವನು ಆಸ್ಟಿನ್‌ಗೆ ಹೋಗುವ ಮುಂಚೆ ಇಲ್ಲಿ ಬೆಂಗಳೂರಿನಲ್ಲಿ ಒಂದೂವರೆ ವರ್ಷಗಳು ಕೆಲಸ ಮಾಡಿದ್ದ ಎನ್ನುವುದನ್ನು ಬಿಟ್ಟೆನಲ್ಲ ಎನ್ನಿಸಿತು. ಹಾಗೆಯೇ, ರೇವತಿ ಹೌಸ್‌ವೈಫ್ ಎನ್ನುವುದನ್ನು ಸೇರಿಸಬೇಕಿತ್ತೇನೋ.
ಶಿವಸ್ವಾಮಿ ಮಾತು ನಿಲ್ಲಿಸುವುದನ್ನೇ ಕಾದವರಂತೆ ಶ್ಯಾಮಲಾ ಇಂಟರ್‌ವ್ಯೂನ ದಿಕ್ಕು ಬದಲಿಸಿದರು. ಅವರ ಉದ್ಯೋಗ ಕುರಿತಾದ ಪ್ರಶ್ನೆಗಳನ್ನು ಕೇಳಿದರು. ಬಿಇಎಲ್‌ನಲ್ಲಿ ಅವರು ಒಂದು ಟೀಮನ್ನು ಮ್ಯಾನೇಜ್ ಮಾಡುತ್ತಿದ್ದರಾ, ಅಲ್ಲಿ ಅವರ ದೈನಂದಿನ ಚಟುವಟಿಕೆಗಳು ಹೇಗಿದ್ದವು, ಮ್ಯಾನೇಜ್‌ಮೆಂಟಿಗೆ ಯಾವ ಬಗೆಯ ರಿಪೋರ್ಟುಗಳನ್ನು ಕೊಡುತ್ತಿದ್ದರು, ಯಾವ ಬಗೆಯ ಸ್ಟಾಂಡರ್ಡ್‌ಗಳನ್ನು ಅನುಸರಿಸುತ್ತಿದ್ದರು, ಹೀಗೆ. ಶಿವಸ್ವಾಮಿ ತಮ್ಮ ಅನುಭವದಿಂದ ಉತ್ತರಿಸಿದರಾದರೂ ತಮ್ಮ ಉತ್ತರಕ್ಕೂ ಈ ಸಾಫ್ಟವೇರ್ ಜಗತ್ತಿನ ನಿರೀಕ್ಷೆಗೂ ದೊಡ್ಡ ಕಂದಕವಿದೆ ಎನ್ನುವುದು ಆ ಮೂವರಿಂದ ಬರುತ್ತಿದ್ದ ಮರುಪ್ರಶ್ನೆಗಳಿಂದ ಮತ್ತು ಮುಖಭಾವಗಳಿಂದ ವ್ಯಕ್ತವಾಗಿ ಅವರ ತಿಳುವಳಿಕೆಗೆ ಬರುತ್ತಿತ್ತು. ಹಾಗೆ ತಿಳುವಳಿಕೆಗೆ ಬಂದಂತೆಲ್ಲ, ಶ್ಯಾಮಲಾ ಮೆನನ್‌ನ ಮುಖ ಗಂಟು ಹಾಕಿಕೊಂಡಂತೆಲ್ಲ, ಶಿವಸ್ವಾಮಿಯ ಮಾತುಗಳು ಮತ್ತೂ ತಡವರಿಸುತ್ತಿದ್ದವು.
ಕಾದಂಬರಿಯ ಖರೀದಿಗಾಗಿ ಸಂಪರ್ಕಿಸಿ : ಅಂಕಿತ ಪುಸ್ತಕ
ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ಜ.ನಾ. ತೇಜಶ್ರೀ ಕೃತಿ ‘ವೋಲೆ ಸೋಯಿಂಕಾ’ ವೈಷ್ಣವಿ ಪ್ರಕಾಶನದಿಂದ ಸದ್ಯದಲ್ಲೇ ಓದಿಗೆ
Published On - 3:08 pm, Thu, 14 April 22