Literature: ನೆರೆನಾಡ ನುಡಿಯೊಳಗಾಡಿ; ಬ್ಯಾಂಡ್ ಬಿರುಸಾಯಿತು, ನೃತ್ಯ ಮಾಡುತ್ತಿದ್ದವರ ಪದಗತಿ ಬಿರುಸುಗೊಂಡಿತು
Short Story of N.S. Madhavan : ‘ಯಾವತ್ತಾದರೂ ಸಮಯ ಸಿಕ್ಕಿದಾಗ ನನ್ನ ಕೋಣೆಗೆ ಬಾ. ಇಂಟರ್‌ನೆಟ್ಟಿನ ಬ್ಲಾಗ್ ಸೈಟಲ್ಲಿ ನನ್ನ ಲಘು ಜೀವನ ಚರಿತ್ರೆ ಕೊಟ್ಟಿದ್ದೇನೆ. ನಾನು ಯಾರೂಂತ ಗೊತ್ತಾಗದಿರಲೆಂದು ಸ್ವಲ್ಪ ಸುಳ್ಳುಗಳನ್ನು ಹೇಳಿದ್ದರೂ ಹೆಚ್ಚು ಕಡಿಮೆ ಸರೀನೇ ಇದೆ’.
ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಇರಾಕಿಗೆ ಮಿಲಿಟರಿ ಪ್ರವೇಶಿಸುವುದಕ್ಕಿಂತ ಮೊದಲನೆಯ ದಿನ ಕ್ಯಾಂಪಿನಲ್ಲಿ ಭಾರೀ ಔತಣ ಏರ್ಪಾಡಾಗಿತ್ತು. ಕುವೈಟಿನ ಒಂದು ಹೋಟೆಲಿನಿಂದ ಬ್ಯಾಂಡಿನವರು ಬಂದಿದ್ದರು. ಮಿಲಿಟರಿಯವರು ಸೆಲ್‌ಫೋನಿನ ಮೂಲಕವೂ ಸೆಟ್‌ಲೈಟ್ ಫೋನಿನ ಮೂಲಕವೂ ಅವರ ಮನೆಯವರೊಂದಿಗೂ ನಲ್ಲನಲ್ಲೆಯರೊಂದಿಗೂ ದೀರ್ಘ ಕಾಲ ಮಾತನಾಡಿದರು. ಪಾಡಿಗೆ ಅವರು ಹೇಳುವುದೆಲ್ಲ ಅರ್ಥವಾಗತೊಡಗಿತ್ತು. ಸದ್ಯದಲ್ಲೇ ತಾವು ಅಗಲಿದವರನ್ನು ಮತ್ತೆ ಸೇರುವೆವೆಂಬ ರೀತಿಯಲ್ಲಾಗಿತ್ತು ಅವರೆಲ್ಲರ ಮಾತುಕತೆ. ರೋಜರ್, ಪಾಡಿಯನ್ನು ಜೊತೆಗೆ ಕುಳಿತು ಊಟ ಮಾಡೋಣವೆಂದು ಕರೆದ. ಆತನ ಜೊತೆಗೆ ಆಸ್ಕರ್ ಮಾರ್ಗನ್‌ಸ್ಟೆನ್ ಎಂಬ ಹೆಸರಿನ, ಕೃಶನಾದ, ಹೆಚ್ಚು ಎತ್ತರವಿಲ್ಲದ, ನೀಲಿ ಕಣ್ಣುಗಳ ಒಬ್ಬಾತ ಗೂಢಚಾರ ಬಿಳಿಯರವನೂ ಇದ್ದ. ‘ಪಾಡಿ’ ರೋಜರ್ ಹೇಳಿದ, ‘ನೀನೂ ನಾನೂ ತಲೆಕೂದಲನ್ನು ಕುಂಬಾರನ ಆವೆ ಮಣ್ಣಿನಂತೆ ಕಾಣುವವರು. ನಾವು ಕಲಾವಿದರು, ಕೇಶ ವಿನ್ಯಾಸಕಾರರು. ಹಾಗಿದ್ದೂ ಸೈನ್ಯದ ಶಿಸ್ತಿನಿಂದ ನಾವು ಕೂದಲು ಕತ್ತರಿಸುತ್ತೇವೆ. ನಮ್ಮ ಕಲೆಯನ್ನು ನಾವು ಅತ್ಯಾಚಾರಕ್ಕೊಳಪಡಿಸುತ್ತಿದ್ದೇವೆ.’ ರೋಜರ್ ಸ್ವಲ್ಪ ಹೊತ್ತು ನಿಶ್ಶಬ್ದವಾಗಿ ಕುಳಿತ. ಆಸ್ಕರ್ ಆತನ ಕೆನ್ನೆಗೆ ಮುತ್ತಿಟ್ಟ.
ಕಥೆ : ಕ್ಷೌರಿಕ | ಮಲಯಾಳಂ : ಎನ್.ಎಸ್. ಮಾಧವನ್ | ಕನ್ನಡಕ್ಕೆ : ನಾ ದಾಮೋದರ ಶೆಟ್ಟಿ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ
(ಭಾಗ 3)
‘ರೋಜರ್, ವಿಮಾನಗಳು ಇರಾಕಿನ ಮೇಲೆ ಕ್ವಿಂಟಲ್ ಲೆಕ್ಕದಲ್ಲಿ ಬಾಂಬ್ ಸುರಿಸುತ್ತವೆ. ನಾಳೆ ನಾವು ಆ ಕಡೆ ದಾಟಿದರೆ ಮತ್ತೂ ಅವರನ್ನು ಸಾಲಾಗಿ ನಿಲ್ಲಿಸಿ ಕೂದಲು ಕತ್ತರಿಸ್ಬೇಕಾ?’ ಪಾಡಿ ಕೇಳಿದ.
‘ತುಂಬ ಕತ್ತರಿಸಬೇಕಾಗಿ ಬರ‍್ಲಿಕ್ಕಿಲ್ಲ. ಹೆಚ್ಚಿನದೂ ಅತ್ಯಾಚಾರ’
‘ಅತ್ಯಾಚಾರ? ಹಾಗಂದ್ರೆ?’
‘ಕೂದಲು ಕತ್ತರಿಸುವ ಕೆಲಸ ಕಡಿಮೆ. ಗಾಯಗೊಂಡ ಸೈನಿಕರ ಶರೀರ ಭಾಗಗಳನ್ನು ಶಸ್ತ್ರಕ್ರಿಯೆಗಿಂತ ಮೊದಲು ಶೇವ್ ಮಾಡಬೇಕಾಗುತ್ತದೆ. ಕೆಲವೊಮ್ಮೆ…’
‘ಕೆಲವೊಮ್ಮೆ?’
‘ಏನಿಲ್ಲ’ ರೋಜರ್ ಹೇಳಿದ.
‘ಕೆಲವೊಮ್ಮೆ’
‘ಕೆಲವೊಮ್ಮೆ, ಹಾಗಾಗುವ ಸಾಧ್ಯತೆ ಇರಬೇಕೆಂದಿಲ್ಲ. ಇದೊಂದು ಪುಟ್ಟ ಯುದ್ಧ. ಹಾಗಿದ್ದರೂ ಕೆಲವೊಮ್ಮೆ ಯುದ್ಧದಲ್ಲಿ ಸತ್ತವರ ದೇಹಗಳನ್ನು ಮರಳಿ ಅಮೇರಿಕಾಕ್ಕೆ ಕಳುಹಿಸುವುದಕ್ಕೆ ಮುನ್ನ ಶೇವ್ ಮಾಡಿಯೂ ಕೂದಲು ಬಾಚಿಯೂ ಚಂದ ಮಾಡಬೇಕಾಗಿಯೂ ಬಂದೀತು’.
ರೋಜರ್ ಆಸ್ಕರನ ತೋಳಿನಲ್ಲಿ ತಲೆಯಿಟ್ಟ. ಆಸ್ಕರ್ ಆತನ ತುಟಿಗಳನ್ನು ಚುಂಬಿಸಿದ. ಚುಂಬನ ದೀರ್ಘವಾದಾಗ ಪಾಡಿ ಗಾಬರಿಗೊಂಡ. ಆತ ಕರೋಣ ಬಿಯರಿನ ಕುಪ್ಪಿಯ ಕತ್ತಿನಲ್ಲಿ ಒಂದು ತುಂಡು ನಿಂಬೆಹಣ್ಣನ್ನು ಇಳಿಬಿಟ್ಟ ಬಳಿಕ, ಕುಡಿಯುತ್ತಾ ಹೇಳಿದ, ‘ನಾನೂ ಮಾಡಿದ್ದೇನೆ’.
‘ಏನು?’ ಕೇಳಿದ್ದು ಆಸ್ಕರ್.
‘ಶವದ ಶೇವ್.’
ಬ್ಯಾಂಡ್ ಬಿರುಸಾಯಿತು. ನೃತ್ಯ ಮಾಡುತ್ತಿದ್ದವರ ಪದಗತಿ ಬಿರುಸುಗೊಂಡಿತು. ಅಮೇರಿಕನ್ ಸೈನ್ಯದಲ್ಲಿನ ಹೆಂಗಸರ ಸಂಖ್ಯೆ ಪಾಡಿಗೆ ಅಚ್ಚರಿ ತಂದಿತು. ಒಮ್ಮೆಲೆ ಬೆಳಕು ನಂದಿತು. ಕುವೈಟಿನ ಗಡಿಯಲ್ಲಿ ವಿಮಾನ ಭೇದಕ ತೋಪುಗಳು ಸಿಡಿಯತೊಡಗಿದುವು. ದೂರದ ಬಾಂಬುಗಳ ಶಬ್ದ ಮಾಲೆ ಪಟಾಕಿಯದ್ದೆಂಬಂತ್ತಿತ್ತು. ಬೆಳಕು ಬಂದಾಗ ಸೈನಿಕರ ಮುಖವೆಲ್ಲ ಬಿಳಚಿಹೋಗಿತ್ತು.
ಇದನ್ನೂ ಓದಿ : Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ
ಬಸ್ರಾದ ತೆಂಕು ದಿಕ್ಕಿನಲ್ಲೆಲ್ಲೊ ಪಾಡಿಯ ಯೂನಿಟ್ಟು ಒಂದು ಶಾಲಾಕಟ್ಟಡದಲ್ಲಿ ಟೆಂಟು ಹಾಕಿತು. ನಾಗರಿಕರಾಗಿದ್ದುದರಿಂದ ಪಾಡಿಯೂ ರೋಜರೂ ಶ್ರೀಲಂಕಾದವರಾದ ಅಡುಗೆಯವರ ಟೆಂಟಿನ ಹತ್ತಿರದಲ್ಲಿ ಒಂದು ಚಿಕ್ಕ ಟೆಂಟಿನಲ್ಲಿ ವಾಸ್ತವ್ಯ ಹೂಡಿದ್ದರು. ಶಾಲೆಯ ಮೂತ್ರದೊಡ್ಡಿಯ ಗೋಡೆಯಲ್ಲಿ ಮಾರ್ಕರ್ ಪೆನ್ನಿನಿಂದ ಬರೆದ ಎರಡು ಅರಬಿ ಪದಗಳು, ಅದರ ನಡುವೆಯಿದ್ದ ಹೆಚ್ಚುವರಿ ಚಿಹ್ನೆಗಳನ್ನು ಪಾಡಿ ಹಲಸಲ ನೋಡಿನಿಂತ. ಸ್ವಲ್ಪ ಕಳೆದ ಮೇಲೆ ಪಾಡಿ ಆ ಪದಗಳನ್ನು ಆಯೇಷಾ ಎಂದೂ ಸುಲೈಮಾನ್ ಎಂದೂ ಅರ್ಥ ಮಾಡಿಕೊಂಡ. ಹತ್ತಿರದಿಂದ ಒಂದೊಂದು ಗುಂಡಿನ ಸದ್ದು ಕೇಳಿಬರುವಾಗಲೂ ಆತ ಈ ಯುವ ಮಿಥುನಗಳ ಬಗ್ಗೆ ಹಪಹಪಿಸಿದ.
ರೋಜರಿಗೂ ಪಾಡಿಗೂ ಮೊದಮೊದಲ ದಿವಸಗಳಲ್ಲಿ ಕೆಲಸವೇನೂ ಇರಲಿಲ್ಲ. ಗೂಢಚಾರ ಆಸ್ಕರ್, ಹಮ್‌ವೀ ವಾಹನದಲ್ಲಿ ಹೊರಗೆ ಹೋದರೆ ರೋಜರ್ ಮೌನವಾಗುವನು, ಒಂದು ಗುನುಗುವಿಕೆ ಕೂಡ ಇರುವುದಿಲ್ಲ. ಆಗೆಲ್ಲ ಆತನೊಂದಿಗೆ ಮಾತನಾಡುವುದಕ್ಕೆ ಪಾಡಿಗೆ ಭಯವಾಗುತ್ತಿತ್ತು. ಆಸ್ಕರ್ ಮರಳಿದ ಕೂಡಲೆ ಅವರ ಟೆಂಟಿಗೆ ಬರುವನು. ರೋಜರ್ ಅಡುಗೆ ಮನೆಯಿಂದ ಹ್ಯಾಂರ‍್ಗೂ ಕೋಕೂ ತರುವನು. ಬಳಿಕ ಕೈಕೈ ಹಿಡಿದು ಆಸ್ಕರೂ ರೋಜರೂ ಗುಸುಗುಸು ಮಾತನಾಡುವರು.
ಗೂಢಚಾರ ಜೋ ಹಂಫ್ರಿಯೂ ಗೂಢಚಾರ ಫಸ್ಟ್ಕ್ಲಾಸ್ ಬಣ್ಣಿ ಬ್ಯಾನರ್ಜಿಯೂ ತಡವಾಗಿ ಕ್ಯಾಂಪಿಗೆ ಬಂದವರಾಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ರೋಜರಿಗೂ ಪಾಡಿಗೂ ಕೂದಲು ತೆಗೆಸುವುದಕ್ಕೆ ಜನ ಸಿಕ್ಕಿದರು. ರೋಜರ್ ಬಟ್ಟೆಯಲ್ಲಿ ಹೊದೆಸುವುದರೆಡೆಯಲ್ಲಿ ಜೋ ಹಂಫ್ರಿ ಹೇಳಿದ : ‘ಮಿಸ್ಟರ್ ರೋಜರ್ ಡಿಕ್ಸನ್, ಲೋಕದಲ್ಲಿರುವವರೆಲ್ಲ ಲೋಫರ್‌ಗಳು. ಲಂಡನ್ನಿನಲ್ಲಿ ತಂದೆಯಿಲ್ದವರೆಲ್ಲ ಗುಂಪು ಸೇರಿ ಬೀದಿಗಿಳಿದು ಯುದ್ಧ ವಿರೋಧ ಮೆರವಣಿಗೆ ನಡೆಸುತ್ತಿದ್ದಾರೆ’.
‘ನಾನೂ ಟೀವಿಯಲ್ಲಿ ನೋಡಿದೆ ಲೋಕವಿಡೀ ಈ ವೈರಸ್ ಹರಡ್ತಿದೆ. ಹೆದರಿಕೆಯಾಯ್ತು. ನಾವು ಮರಳಿ ಹೋದರೆ ಕಲ್ಲೇಟು ತಿನ್ಬೇಕಾದೀತಾ?’ ರೋಜರ್ ಕೇಳಿದ.
‘ಹುಚ್ಚಾ? ನಿಶ್ಶಬ್ದರಾದ ಬಹು ಸಂಖ್ಯಾತರು ನಮ್ಮ ಜೊತೆಯಿದ್ದಾರೆ. ಈ ಯುದ್ಧ ನನ್ನ ದೃಷ್ಟಿಯಲ್ಲಿ ವ್ಯಕ್ತಿಪರವಾದದ್ದು. ಮಿಸ್ಟರ್ ಸದ್ದಾಂ, ನಿನ್ನ ಹತ್ರ ನನಗೆ ಕೆಲವು ಲೆಕ್ಕ ಚುಕ್ತಾ ಮಾಡ್ಲಿಕ್ಕಿದೆ. ನಾನು ಯುದ್ಧ ಮಾಡುತ್ತಿರುವುದು ಅಮೇರಿಕನ್ ಬದುಕಿನ ರೀತಿಗಾಗಿ ಅಲ್ಲ. ಅಮೇರಿಕಾದ ಕನಸುಗಳಿಗಾಗಿಯೂ ಅಲ್ಲ; ನಮ್ಮ ಹಂಫ್ರಿಗಳಿಗೆ ಬೇಕಾಗಿ ಮಾತ್ರ. ನನ್ನ ತಮ್ಮನಿಗೆ ಬೇಕಾಗಿ. ಅವ ಸಾಯುವುದಕ್ಕೆ ಮುನ್ನ ಒಂದು ವಾರಕಾಲ ವರ್ಲ್ಡ್ ಟ್ರೇಡ್ ಸೆಂಟರಿನಲ್ಲಿ ಸಿಕ್ಕಿ ಬಿದ್ದಿದ್ದ’. ಜೋನ ಶಬ್ದ ತಡವರಿಸುತ್ತಿತ್ತು.
‘ಬೇಗ ಕತ್ತರಿಸು’ ಬಣ್ಣಿ ಬ್ಯಾನರ್ಜಿ ಪಾಡಿಗೆ ಹೇಳಿದ. ಆತನಿಗೆ ತನ್ನ ಮಡಿಲಲ್ಲಿಟ್ಟಿದ್ದ ವಾಕ್‌ಮನ್‌ನ ಹೆಡ್‌ಸೆಟ್ಟನ್ನು ಕಿವಿಗಿಡುವುದಕ್ಕೆ ಅವಸರವಾಯಿತು.
‘ಬಣ್ಣಿ, ನಿನಗೆ ಹಾಡು ಕೇಳ್ಬೇಕಾ? ಲೋಕದ ಅತ್ಯಂತ ಸುಂದರ ಹಾಡು?’
ಜೋ ಕೇಳಿದ. ಆತ ಗಟ್ಟಿಯಾಗಿ ಹಾಡತೊಡಗಿದ: ‘ಸ್ಟಾರ್ ಸ್ಪಾಂಗ್‌ಲ್ಡ್ ಬ್ಯಾನರ್…’
‘ಭಾರತೀಯ ವಂಶಜನೇ?’ ಪಾಡಿ ಬಣ್ಣಿಯನ್ನು ಕೇಳಿದ.
‘ಹೌದು’
‘ಬಂಗಾಳಿ?’
‘ಅನ್ಸೋದಿಲ್ವ?’
‘ಹುಟ್ಟಿದ್ದು ಅಮೇರಿಕಾದಲ್ಲೆ?’
‘ಅಲ್ಲ’
‘ಮತ್ತೆ?’
‘ಯಾವತ್ತಾದರೂ ಸಮಯ ಸಿಕ್ಕಿದಾಗ ನನ್ನ ಕೋಣೆಗೆ ಬಾ. ಇಂಟರ್‌ನೆಟ್ಟಿನ ಬ್ಲಾಗ್ ಸೈಟಲ್ಲಿ ನನ್ನ ಲಘು ಜೀವನ ಚರಿತ್ರೆ ಕೊಟ್ಟಿದ್ದೇನೆ. ನಾನು ಯಾರೂಂತ ಗೊತ್ತಾಗದಿರಲೆಂದು ಸ್ವಲ್ಪ ಸುಳ್ಳುಗಳನ್ನು ಹೇಳಿದ್ದರೂ ಹೆಚ್ಚು ಕಡಿಮೆ ಸರೀನೇ ಇದೆ’.
ಇದನ್ನೂ ಓದಿ : Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ’
ಮುಂದಿನ ಒಂದು ದಿನ ಪಾಡಿಯ ಯೂನಿಟ್ಟಿನಲ್ಲಿ ಮೊದಲ ಅವಘಡ ಸಂಭವಿಸಿತು. ಒಂದು ಕೈಬಾಂಬ್ ಬಿದ್ದು ಓರ್ವ ಮಿಲಿಟರಿಯಾತನ ತೊಡೆಯಲ್ಲಿ ಗಾಯವಾಯಿತು. ಶಸ್ತçಕ್ರಿಯೆಗೆ ಮೊದಲು ಆತನ ತೊಡೆಯ ರೋಮ ಶೇವ್ ಮಾಡಲೆಂದು ಪಾಡಿ ಹೋದ. ಮಿಲಿಟರಿಯಾತ – ಸಾರ್ಜಂಟ್ ಶೂಲ್ಸ್ – ಆವೇಶಗೊಂಡವನಂತೆ ಡಾಕ್ಟರೊಂದಿಗೆ ಮಾತನಾಡುತ್ತಿದ್ದ.
‘ಗ್ರೇನೆಡ್ ಲಾಂಚರಿನೊಂದಿಗೆ ನಿಂತಿದ್ದ ಓರ್ವ ಚಿಕ್ಕ ಹೆಣ್ಣು ಮಗು – ಸುಮಾರು ಹನ್ನೆರಡು ವರ್ಷ ವಯಸ್ಸಿರಬಹುದು – ಕಂಡಾಗ ನಾನು ಸ್ತಬ್ದನಾಗಿ ಒಂದು ನಿಮಿಷ ಕೋವಿಯ ಕುದರೆ ಎಳೀಲಿಲ್ಲ. ಅಷ್ಟರಲ್ಲಿ ಆಕೆ ಕೈಬಾಂಬನ್ನು ಲಾಂಚ್ ಮಾಡಿದ್ದಳು. ಕೈಗಳು ದುರ್ಬಲವಾಗಿದ್ದುದರಿಂದ ಅವಳ ಗುರಿತಪ್ಪಿತು. ನಾ ಸತ್ತಿಲ್ಲ.’ ಶೂಲ್ಸ್ ವಿವರಿಸಿದ.
‘ಆಮೇಲೆ?’ ಡಾಕ್ಟರುಗಳಲ್ಲಿ ಒಬ್ಬಾತ ಕೇಳಿದ.
‘ಜೊತೆಗಿದ್ದ ಒಬ್ಬಾತ ಹುಡುಗಿಯನ್ನು ಕೊಂದುಬಿಟ್ಟ. ಊರವರು ಆ ಶವದ ಸುತ್ತ ಸೇರಿ ಗೋಳಿಟ್ಟರು. ನಾವು ಆಕಾಶದ ಕಡೆಗೆ ಗುಂಡು ಹಾರಿಸಿದಾಗ ಅವರು ಚದರಿದರು. ಅವರು ಹುಡುಗಿಯ ಹೆಸರನ್ನು ಕೂಗಿ ಹೇಳುತ್ತಿದ್ದರು. ‘ಸಾರ್ಜಂಟ್, ಏನಾಗಿತ್ತು ಆ ಹುಡುಗಿಯ ಹೆಸರು?’ ಪಾಡಿ ಕೇಳಿದ.
‘ಆಯೇಷಾ’
ಕೆಲ ದಿನ ಕಳೆದಾಗ ಪಾಡಿಯ ಯೂನಿಟ್ ಬಾಗ್ದಾದಿನ ಹತ್ತಿರದ ಒಂದು ಜಾಗದಲ್ಲಿ, ಸದ್ದಾಂ ಹುಸೇನನ ಒಬ್ಬ ಸಂಬಂಧಿಕರ ದೊಡ್ಡ ಬಂಗಲೆಯಲ್ಲಿ, ರಿಕಾಣಿ ಹೂಡಿತು. ಈ ಸಲ ಪಾಡಿಯೂ ರೋಜರೂ ಸೈನಿಕರೊಂದಿಗೆ ಬಾರಕ್‌ನಲ್ಲೇ ನೆಲೆಸಿದರು. ಅವರಲ್ಲದೆ ಬಣ್ಣಿಯೂ ಆಸ್ಕರೂ ಆ ಕೋಣೆಯಲ್ಲಿದ್ದರು. ಯುದ್ಧಕ್ಕೆ ಹೋಗುವವರೊಂದಿಗೆ ‘ಅಮೇರಿಕಾವನ್ನು ದೇವರು ರಕ್ಷಿಸಲಿ’ ಎಂದು ಹೇಳುವುದಕ್ಕೆ ಮರೆಯದ ಜೋ ಹಂಫ್ರಿಯೂ ಅದೇ ಕೋಣೆಯಲ್ಲಿದ್ದ. ಮತ್ತೆ ಮ್ಯಾಕ್, ಮೈಕಲ್ ಎಂಬ ಅವಳಿ ಸೋದರರು. ಯಾವಾಗಲೂ ಗಿಟಾರ್ ನುಡಿಸುತ್ತಲೇ ಇರುವ ಜಾನ್ ಲೋಪೆಜ್ ಕೋಣೆಯ ಏಳನೆಯ ವ್ಯಕ್ತಿಯಾಗಿದ್ದ.
ಆ ಕೋಣೆಯಲ್ಲಿ ವಾಸ್ತವ್ಯ ಪ್ರಾರಂಭಿಸಿದಲ್ಲಿಂದ ಪಾಡಿ ಅಮ್ಮನಿಗೂ ಅಣ್ಣಂದಿರಿಗೂ ಬಣ್ಣಿಯ ಲ್ಯಾಪ್‌ಟಾಪಿನಿಂದ ನಿತ್ಯವೂ ಈ ಮೇಲ್ ಮಾಡತೊಡಗಿದ. ಅವರ ಉತ್ತರಗಳಿಂದ ಪಾಡಿಗೆ ಯುದ್ಧದ ಬಗೆಗಿನ ಉತ್ಕಂಠತೆ ಮೊತ್ತಮೊದಲಿಗೆ ಪ್ರಾರಂಭವಾದದ್ದು. ಆ ಬಳಿಕ ಅವಳಿ ಸಹೋದರರಾದ ಮ್ಯಾಕ್ ಹಾಗೂ ಮೈಕಲ್‌ರ ಮುಖದ ಕಳಂಕರಹಿತ ಭೀತಿ. ಅವರಿಬ್ಬರನ್ನು ಜೊತೆಯಾಗಿ ಒಮ್ಮೆಯೂ ಯುದ್ಧಕ್ಕೆ ಕಳುಹಿಸಿರಲಿಲ್ಲ. ಇಬ್ಬರಿಗೂ ಬೇರೆ ಬೇರೆ ವಿಶ್ರಾಂತಿ ಸಮಯ ನೀಡುತ್ತಿದ್ದುದರಿಂದ ಅವರ ಭೇಟಿ ಕೂಡ ವಿರಳವಾಯಿತು. ಇಬ್ಬರೂ ಅಷ್ಟೆ ; ಚಿಕ್ಕ ಸದ್ದು ಕೇಳಿದರೂ ಸಾಕು, ಕಂಪಿಸುತ್ತಿದ್ದರು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ ಅನುವಾದಿಸಿದ ಸಿಂಗರ್ನ ‘ಮಳ್ಳ ಗಿಂಪೆಲ್’ ಕಥೆ
ಜಾನ್ ಲೋಪೆಜ್ ಗಿಟಾರಿನಲ್ಲಿ ಬೆರಳೋಡಿಸತೊಡಗಿದ ದಿನದಿಂದ ಹಳೆಯ ಹಾಡುಗಳನ್ನಷ್ಟೆ ಹಾಡುತ್ತಿದ್ದ. ಅಬ್ಬ, ಲೆಡ್ ಝೆಪೆಲಿನ್, ಬೀ ಗೀಸ್, ಡೋರ್, ಪಿಂಕ್ ಫ್ಲಾಯ್ಡ್. ಆತನ ಕಿವಿಯ ವಾಕ್‌ಮನ್‌ನಲ್ಲಿ ಮೈಲ್ಸ್ ಡೇವಿಸನ್‌ನ ಜಾಸ್. ಆತ ಗೋಡೆಯಲ್ಲಿ ಲಿಯೋನಾರ್ಡ ಕೋಹನ್‌ನ ಹಾಡನ್ನು ಪೋಸ್ಟರ್ ರೂಪದಲ್ಲಿ ಅಂಟಿಸಿದ. ನೀರಿನ ಮೇಲೆ ನಡೆದಾಗ ಏಸು ಒಬ್ಬ ನಾವಿಕನಾಗಿದ್ದ…
ಮುಳುಗಿ ಸಾಯುವವರಿಗೆ ಮಾತ್ರ ಅವನನ್ನು ಕಾಣುವುದು ಸಾಧ್ಯ.
ಯೇಸು ಹೇಳಿದ : ಸಮುದ್ರ ವಿಮೋಚನೆ ನೀಡುವ ತನಕ ಎಲ್ಲ ಮನುಷ್ಯರೂ ನಾವಿಕರಾಗಿರುವರು. ಹಲವು ಬಾರಿ ಜಾನ್ ಲೋಪಸ್ ಎಲ್ಲರನ್ನೂ ನೋಡುತ್ತ ಹೇಳಿದ: ‘ನಾನು ನನ್ನ ತಂದೆ ತಾಯಂದಿರ ನೆನಪನ್ನು ಅವರು ಇಷ್ಟಪಡುವ ಸಂಗೀತದ ಮೂಲಕ ಇಟ್ಟುಕೊಂಡಿದ್ದೇನೆ. ಅಲ್ಲದಿದ್ದರೂ ನಮ್ಮ ಜೀನ್ಸ್ಗಳ ಮೂಲಕ ಹರಿದು ಬಂದು, ನಮಗೆ ಸಿಕ್ಕಿರೋದು ಸಂಗೀತ ಮಾತ್ರ. ಆದ್ದರಿಂದ ನೀವು ನನ್ನ ಸಂಗೀತವನ್ನು ದೂಷಿಸಿದರೆ, ಅದು ನನ್ನ ಹಿರಿಯರನ್ನು ದೂಷಿಸಿದಂತೆ.’
ರೋಜರ್ ಆತನ ಮಂಚದ ಹತ್ತಿರದ ಗೋಡೆಗೆ ಅಂಟಿಸಿಟ್ಟಿದ್ದ ಅರ್ಧ ನಗ್ನ ಕೇಟ್ ಮೋಸ್‌ನ ಚಿತ್ರವನ್ನು ಎಳೆದು ಹರಿದು ಹಾಕಿದ. ಬದಲಿಗೆ ಶ್ರೀಕುಟುಂಬದ ಚಿತ್ರ ಇರಿಸಿದ. ಆಸ್ಕರ್ ಹೊರಗೆ ಹೋದ ಬಳಿಕ ಆತ ಅದರ ಮುಂದೆ ನಿಂತು ಪ್ರಾರ್ಥನೆ ಮಾಡತೊಡಗಿದ. ಬಣ್ಣಿ ಆತನ ಲ್ಯಾಪ್‌ಟಾಪಿನಲ್ಲಿ ಯಾವತ್ತೂ ತನ್ನ ಇಂಟರ್‌ನೆಟ್ ಬ್ಲಾಗ್ ಬರೆಯುತ್ತಿದ್ದ. ಬಣ್ಣೆಯ ಕಿರು ಜೀವನ ಚರಿತ್ರೆಯನ್ನು ಇಂಟರ್‌ನೆಟ್ಟಿನಿಂದ ಪಾಡಿ ಓದಿದ.
ತಿಯೋಫಿಲಸ್ (1980)
ನಾನು ಶಾಂತಿನಿಕೇತನದಲ್ಲಿ ಜನಿಸಿದೆ. ನನ್ನ ತಂದೆ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದು, ಅಲ್ಲಿ ಅಧ್ಯಾಪಕರಾಗಿದ್ದರು. 1981ರಲ್ಲಿ ಅವರು ಕೆಲವು ಕಛೇರಿಗಳನ್ನು ನೀಡುವುದಕ್ಕೆಂದು ಅಮೇರಿಕಾಕ್ಕೆ ಹೋದರು. ಮತ್ತೆ ಅವರು ಹಿಂದಿರುಗಿ ಬರಲಿಲ್ಲ. ಲಾಸ್ ಏಂಜಲಿಸ್‌ನಲ್ಲಿ ಒಂದು ಸಂಗೀತ ವಿದ್ಯಾಲಯ ಪ್ರಾರಂಭಿಸಿದರು. ನಾನೂ ಅಮ್ಮನೂ ಕಲ್ಕತ್ತೆಗೆ ಸ್ಥಳ ಬದಲಾಯಿಸಿದೆವು. 1984ರಲ್ಲಿ ನನ್ನ ಅಮ್ಮ, ನಮ್ಮ ಅಡುಗೆಯವನಾದ ಶಂಭುವಿನೊಂದಿಗೆ ಕದ್ದೋಡಿಹೋದರು. ಅಮ್ಮನದ್ದು ತಪ್ಪೆಂದು ಹೇಳುವ ಹಾಗಿಲ್ಲ. ಶಂಭುವಿನ ಕಟುಕಕಾಯಿ ಅರೆದು ಹಾಕಿದ ರೋಹು ಮೀನಿನ ಪದಾರ್ಥ ಮತ್ತು ಹಿಡಿಸುತ್ತಿತ್ತು. ಅಪ್ಪ ನನ್ನನ್ನು ಲಾಸ್ ಏಂಜಲಿಸ್‌ಗೆ ಕರೆದುಕೊಂಡು ಬಂದರು. ನಾನು ಅಲ್ಲೇ ಕಲಿತು ಬೆಳೆದೆ. ಈಗ ನಾನು ಯು.ಎಸ್. ಏರ್ಫೋರ್ಸ್ನಲ್ಲಿ ಪೈಲೆಟ್ ಆಗಿದ್ದೇನೆ. ಯಾತ್ರೆ ಮಾಡುವುದೆಂದರೆ ನನಗೆ ಬಹಳ ಇಷ್ಟ. ಅಪ್ಪನಿಂದ ನನಗೆ ಸಂಗೀತವೂ ಸಿಕ್ಕಿದೆ. ಸ್ವಲ್ಪಕಾಲ ಒಂದು ನೈಟ್ ಕ್ಲಬ್ಬಿನ ಬ್ಯಾಂಡಿನಲಿ ಹಾಡಿದ್ದೆ. ಆದರೆ ನನ್ನ ಯಥಾರ್ಥ ಬದುಕು ಈ ದಾರಿಯದ್ದಾಗಿತ್ತು. ನಾನು ಹಗಲನ್ನು ಇಡಿಯಾಗಿ ಬದುಕುತ್ತೇನೆ. ರಾತ್ರಿ ಅದನ್ನು ಮಾತುಗಳಾಗಿ ಪರಿವರ್ತಿಸುತ್ತೇನೆ. ನನ್ನ ಮಾತುಗಳು ಅನಾಕರ್ಷಣೀಯವಾಗಬಾರದೆಂದು ನನ್ನ ಬದುಕನ್ನು ಒಂದು ನೂಲುಸೇತುವೆಯಂತೆ ತೂಗುಹಾಕುತ್ತೇನೆ. ನನಗೊಬ್ಬಳು ಪ್ರೇಯಸಿಯಿದ್ದಾಳೆ – ಜಿ. ಅವಳು ಕಪ್ಪು ಸುಂದರಿ. ನನ್ನಪ್ಪನಿಗೆ, ನಾನು ಅವರ ದಾರಿ ಹಿಡಿಯದ್ದಕ್ಕೆ ನಿರಾಸೆಯಿದೆ. ನನ್ನ ಅಮ್ಮನ ಹೊರತಾಗಿ, ಒಂದರ ಹಿಂದೆ ಒಂದರAತೆ ಬಂದ ಮೂವರು ಪತ್ನಿಯರೂ ಬಿಳಿಯರಾಗಿದ್ದರು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕೆಎಸ್ ವೈಶಾಲಿ ಅನುವಾದಿಸಿದ ರುಕಿಯಾ ಶೆಖಾವತ್ ಹುಸೇನ್ ಕಥೆ ‘ಸುಲ್ತಾನಳ ಕನಸು’
‘ಏರ್ಫೋರ್ಸ್ನ ಪೈಲಟ್ಟೂ ಲಾಸ್ ಎಂಜಲಿಸ್ಸಿನ ಕಲಿಕೆಯೂ ಸುಳ್ಳೆಂಬುದು ಗೊತ್ತು, ಆಮೇಲೆ?’ ಪಾಡಿ ಕೇಳಿದ. ‘ನನ್ನ ಅಪ್ಪ ಸಿತಾರ್ ವಾದಕರಲ್ಲ. ಹಾಡುಗಾರರಾಗಿದ್ದರು – ದೇವಬ್ರತ ಬ್ಯಾನರ್ಜಿ. ಅವರು ಶಾಂತಿನಿಕೇತನದಲ್ಲಿ ಕಲಿಸಿರಲಿಲ್ಲ’ ಬಣ್ಣಿ ಹೇಳಿದ.
‘ಇನ್ನೂ ಒಂದು ಸುಳ್ಳಿದೆ. ಜನರು ನಂಬಲಾರರು ಎಂದು ಭಾವಿಸಿ ಹೇಳಿರಲಿಲ್ಲ. ನನ್ನ ಅಪ್ಪನಿಗೆ ನಾಲ್ವರು ಬಿಳಿಜನಾಂಗದ ಪತ್ನಿಯರಿದ್ದಾರೆ. ಈಗಿನ ಹೆಂಡತಿ ನನಗಿಂತ ಪ್ರಾಯದಲ್ಲಿ ಚಿಕ್ಕವಳಿರಬಹುದು. ಅಪ್ಪನ ಹಾಡು ಶಂಭುವಿನ ಮೀನು ಪದಾರ್ಥದ ಹಾಗೆ. ಹೆಂಗಸರು ಕಾಮಾತುರರಾಗಿ ಬಿಡುತ್ತಿದ್ದರು. ನಾನು ಸತ್ತರೆ ಈಗ ಅಳುವುದಕ್ಕೆ ಐವರು ತಾಯಂದಿರಿದ್ದಾರೆ!’
ಮೊದಲು ಸತ್ತದ್ದು ಜೋ ಹಂಫ್ರಿಯಾಗಿದ್ದ. ಆತ ಪ್ರಯಾಣಿಸುತ್ತಿದ್ದ ವಾಹನ ಒಂದು ಲ್ಯಾಂಡ್ ಮೈನ್‌ಗೆ ತಾಗಿ ಸಿಡಿದು ರಟ್ಟಿ ಸತ್ತು ಹೋದ. ರೋಜರ್ ಪಾಡಿಗೆ ಹೇಳಿದ: ‘ಮುಖ ತುಸು ವಿಕಾರವಾಗಿದೆ. ಕುಂಡೆಯ ಎಡಭಾಗವೇ ಇಲ್ಲ. ಮೃತಶರೀರವನ್ನು ನಾನು ಅಲಂಕರಿಸುತ್ತೇನೆ ನೀ ಬರ‍್ಬೇಡ.’
ಭಾನುವಾರ. ಜೋ ಹಂಫ್ರಿಯ ಮೃತದೇಹವನ್ನು ಅಮೇರಿಕಾಕ್ಕೆ ಕಳುಹಿಸುವ ದಿವಸ, ಸೈನ್ಯದ ಚಾಪ್ಲೆನ್ ಚಿಕ್ಕದೊಂದು ಚರಮ ಭಾಷಣ ಮಾಡಿದ: ‘ಜೋನ್ ಹಂಫ್ರಿ, ಗೂಢಚಾರ, ಯು.ಎ.ಎಸ್. ಆರ್ಮಿ, ಹೋಗಿರುವ ಸ್ವರ್ಗದ ಆಕಾಶದ ಬಣ್ಣ ದಟ್ಟ ನೀಲಿ. ಅದರಲ್ಲಿ ಐವತ್ತು ಜ್ವಲಿಸುವ ನಕ್ಷತ್ರಗಳಿವೆ. ಅದರಲ್ಲಿನ ಕಾಮನಬಿಲ್ಲಿಗೆ ಎರಡು ಬಣ್ಣಗಳಷ್ಟೇ ಇರುವುದು… ಕೆಂಪೂ ಬಿಳಿಯೂ. ಆ ಸ್ವರ್ಗದ ಹೆಸರೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ. ಅಮೇರಿಕಾವನ್ನು ದೇವರು ಕಾಪಾಡಲಿ.’
(ಭಾಗ 4 : ಕ್ಲಿಕ್ ಮಾಡಿ)
ಈ ಕಥೆಯ ಎಲ್ಲಾ ಭಾಗಗಳನ್ನು, ಇತರೆ ಅನುವಾದಿತ ಕಥೆಗಳನ್ನು ಓದಲು ಕ್ಲಿಕ್ ಮಾಡಿ
ಪ್ರತಿಕ್ರಿಯೆಗಾಗಿ : tv9kannadadigital@gmail.com
Published On - 12:45 pm, Fri, 3 June 22