Chennaveera Kanavi Death: ‘ಗದ್ಯವನ್ನು ನಾನು ಆಮೆಗತಿಯಲ್ಲಿ ಬರೆಯಲು ಶುರು ಮಾಡಿದ್ದೇನೆ’ ಎಂದಿದ್ದರು ಚೆನ್ನವೀರ ಕಣವಿ
Chennaveera Kanavi Passes Away : ‘ಕವಿಯ ಹೊಟ್ಟೆಯಲ್ಲಿ ವಿಮರ್ಶಕ ಇರುತ್ತಾನೆ. ಇದು ಸ್ವಂತ ಕಾವ್ಯ ವಿಮರ್ಶೆಗೆ ಅವಶ್ಯಕ. ಇದರಿಂದಾಗಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕಾವ್ಯ ಯಾವುದೇ ಪ್ರಕಾರವಾಗಿದ್ದರೂ ಜನಸಾಮಾನ್ಯರಿಂದ ದೂರವಿರಬಾರದು ಎನ್ನುತ್ತಿದ್ದರು.’ ನರಸಿಂಹಮೂರ್ತಿ ಪ್ಯಾಟಿ
ಚೆನ್ನವೀರ ಕಣವಿ | Chennaveera Kanavi : ನಿಸರ್ಗವನ್ನು ನವೋದಯ ಕವಿಗಳು ನಾನಾ ಸೃಷ್ಟಿ, ದೃಷ್ಟಿಯಲ್ಲಿ ನೋಡಬಯಸಿದರು. ಎಲ್ಲರಿಗೂ ನಿಸರ್ಗ ಶಕ್ತಿಯನ್ನು ನೀಡುತ್ತದೆ ಎಂದು ಪ್ರತಿಪಾದಿಸುತ್ತಿದ್ದ ಕಣವಿ ಅವರ ಮನಸ್ಸಿನಲ್ಲಿ ಯಾವಾಗಲೂ ತುಡಿಯುವ ವಸ್ತುವೆಂದರೆ ಅದು ಕಾಲ. ಬದಲಾವಣೆ ಸಹಜವಾಗಿ ಬಂದು ಬಿಡುತ್ತದೆ. ಅದು ನಮಗಾಗಿ ಯಾವತ್ತೂ ಕಾಯುವುದಿಲ್ಲ ಅನ್ನೋದು ಅವರ ಅಭಿಪ್ರಾಯವಾಗಿತ್ತು. ಅವರ ಹೆಚ್ಚಿನ ಕವಿತೆಗಳು ಭಾವಗೀತೆಗಳೆಂದೇ ಪ್ರಸಿದ್ಧಿ ಪಡೆದಿವೆ. ಮನುಷ್ಯನಿಗೆ ಭಾವ ಇರುವವರೆಗೆ ಭಾವಗೀತೆ ಇದ್ದೇ ಇರುತ್ತದೆ. ಕೆಲವರು ಭಾವಗೀತೆಯಲ್ಲಿಯೇ ಆಧ್ಯಾತ್ಮವನ್ನು ಅರಸುತ್ತಾರೆ. ಕಣವಿ ಅವರು ಕೂಡ ಭಾವಗೀತೆಗಳಲ್ಲಿಯೇ ಹೆಚ್ಚು ಖುಷಿಪಟ್ಟರು ಅನ್ನುವುದನ್ನು ಅವರ ಕವಿತೆಗಳನ್ನು ಓದಿದರೆ ಅರ್ಥವಾಗುತ್ತದೆ. ಆಧುನಿಕ ಕನ್ನಡ ಕಾವ್ಯದ ಮುಖ್ಯ ವಸ್ತುಗಳಾದ ಕಾಲ, ನಿಸರ್ಗ, ಕಾಮ, ಆಧ್ಯಾತ್ಮ – ಇವೆಲ್ಲವನ್ನೂ ಕಣವಿ ಅವರ ಕಾವ್ಯದಲ್ಲಿ ಕಾಣಬಹುದು. ಇವರ ಕವಿತೆಗಳಲ್ಲಿ ಅಖಂಡ ದರ್ಶನವಾಗುತ್ತದೆ. ಅದರೊಂದಿಗೆ ವೈವಿಧ್ಯತೆಯನ್ನು ಕೂಡ ಕಾಣುತ್ತೇವೆ. ನರಸಿಂಹಮೂರ್ತಿ ಪ್ಯಾಟಿ, ಪತ್ರಕರ್ತ
*
(ಭಾಗ 4)
ಕವಿಗಳಿಗೆ ನಿರಂತರವಾಗಿ ಪ್ರೇರಣೆ ನೀಡುತ್ತಾ ಬಂದವರು ಚೆನ್ನವೀರ ಕಣವಿ. ಅವರ ಒಂದು ಪದ್ಯದಲ್ಲಿ ಕವಿತೆ ಎಷ್ಟು ಮುಖ್ಯ ಅನ್ನುವುದು ತಿಳಿದು ಬರುತ್ತದೆ :
ಎಷ್ಟು ಹಣತೆಗಳಿಂದ ಕತ್ತಲೆಯೂ ಕರಗುವುದು ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು ಒಂದಿದ್ದರೂ ಸಾಕು ಮನೆಗೆ ಬೆಳಕಾಗುವುದು ಒಂದು ಕವಿತೆಗೂ ಕೂಡ ಮನ ಕರಗಬಹುದು
ಇನ್ನು ಕಣವಿ ಅವರಿಗೆ ಕವಿತೆಯಲ್ಲಿ ಪ್ರಧಾನ ಆಸಕ್ತಿ ಇದ್ದರೂ ಗದ್ಯದ ಬರವಣಿಗೆಯಲ್ಲಿಯೂ ವಿಶೇಷವಾದ ಸಾಧನೆ ಮಾಡಿದವರು. ಅವರು ಬರೆದ ವಿಮರ್ಶೆ, ವ್ಯಕ್ತಿ ಚಿತ್ರಣ, ಪ್ರಬಂಧ, ಮುನ್ನುಡಿಗಳನ್ನು ಗಮನಿಸಿದಾಗ ಅಚ್ಚರಿ ಮೂಡುತ್ತದೆ. ಕಣವಿ ಅವರನ್ನು ಎಲ್ಲರೂ ಕವಿಗಳೆಂದೇ ಗುರುತಿಸುತ್ತಾರೆ. ಆದರೆ ಗದ್ಯವನ್ನು ನೋಡಿದಾಗ ಅವರ ವ್ಯಕ್ತಿತ್ವದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅವರ ಅನೇಕ ಗದ್ಯ ಕೃತಿಗಳು ಬಂದವು. ಇತ್ತೀಚಿಗೆ ಅವರು “ಗದ್ಯವನ್ನು ನಾನು ಆಮೆಗತಿಯಲ್ಲಿ ಬರೆಯಲು ಶುರು ಮಾಡಿದ್ದೇನೆ” ಎಂದು ಹೇಳಿದ್ದರು. ಅವರ 12 ಸಂಕಲನಗಳು ಗದ್ಯದಲ್ಲಿ ಬಂದಿವೆ. ಇತ್ತೀಚಿಗೆ “ಕಣವಿ ಸಮಗ್ರ ಗದ್ಯ” ಅನ್ನೋ ಪುಸ್ತಕವೂ ಪ್ರಕಟವಾಗಿದೆ.
ಇನ್ನು ವಿಮರ್ಶೆಯ ಬಗ್ಗೆ ಅವರದ್ದೇ ಆದ ಒಂದು ನೋಟವಿತ್ತು. ಅವರ ವಿಮರ್ಶೆಯನ್ನು ನೋಡಿದಾಗ ವಾಗ್ವಾದಕ್ಕೆ ಒಳಗಾಗದೇ ಮುತುವರ್ಜಿಯಿಂದ ಸಮತೋಲನ ಕಾಯ್ದುಕೊಂಡಿದ್ದಾರೆ ಅನ್ನುವಂತಿವೆ. ಚನ್ನವೀರ ಕಣವಿಯವರು ವಿಮರ್ಶೆಯನ್ನು ಬರೆದಿದ್ದರಾದರೂ ಪ್ರಧಾನವಾಗಿ ಅವರು ಕವಿ ಅನ್ನುವುದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಕವಿಯ ಹೊಟ್ಟೆಯಲ್ಲಿ ವಿಮರ್ಶಕ ಇರುತ್ತಾನೆ ಅನ್ನುತ್ತಾರೆ ಅವರು. ಸ್ವಂತ ಕಾವ್ಯ ವಿಮರ್ಶೆಗೆ ಅವಶ್ಯಕ. ಇದರಿಂದಾಗಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕಾವ್ಯ ಜನಸಾಮಾನ್ಯರಿಂದ ದೂರವಿರಬಾರದು. ಅದು ಯಾವುದೇ ಪ್ರಕಾರವಿರಲಿ, ಜನರೊಂದಿಗೆ ಇರಬೇಕು ಅನ್ನುವುದು ಅವರ ಅಭಿಪ್ರಾಯವಾಗಿತ್ತು. ಇತ್ತೀಚಿನ ಕೆಲವು ಕವಿಗಳನ್ನು ನೋಡಿದರೆ, ಕಾವ್ಯ ಬದಲಾವಣೆಯ ಹಂತದಲ್ಲಿದೆ ಅನ್ನಿಸುತ್ತದೆ. ಇದು ಸ್ವಾಗತಾರ್ಹ. ಅನೇಕ ಹೊಸ ಹುಡುಗರು ಬರೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅನ್ನೋ ಸಮಾಧಾನವೂ ಅವರಲ್ಲಿತ್ತು.
ಚೆನ್ನವೀರ ಕಣವಿ ಅವರು ಸ್ವಾತ್ರಂತ್ರ್ಯೋತ್ತರದ ಪ್ರಮುಖ ಕವಿಯೂ ಹೌದು. ಸ್ವಾತಂತ್ರದ ನಂತರ ದೇಶ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ವಿಷಯಗಳಿಗೆ ಸ್ಪಂದಿಸುವ ರೀತಿಯಲ್ಲಿ ಅವರ ಅನೇಕ ಕಾವ್ಯಗಳಿವೆ. ಜಾರಿಯಾಗದ ನದಿ ಜೋಡಣೆ ಯೋಜನೆ, ಮುಗಿಯದ ನದಿ ವಿವಾದಗಳು, ಅಂತ್ಯ ಕಾಣದ ಗಡಿ ವಿವಾದ, ನಿಲ್ಲದ ರೈತರ ಆತ್ಮಹತ್ಯೆಗಳು ಅವರಿಗೆ ಸಾಕಷ್ಟು ನೋವನ್ನುಂಟು ಮಾಡುತ್ತಿದ್ದವು. ಈ ಸಮಸ್ಯೆಗಳ ಬಗ್ಗೆ ಅವರಿಗೆ ಸಾಕಷ್ಟು ಅಸಮಾಧಾನವಿತ್ತು. ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಕನ್ನಡವನ್ನು ಉಳಿಸೋ ಬಗೆ ಮತ್ತು ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನದ ಬಗ್ಗೆ ಅವರ ಪ್ರತಿಕ್ರಿಯೆ ಈ ರೀತಿಯಾಗಿತ್ತು: “ಕನ್ನಡ ಭಾಷೆಗೆ ಕುತ್ತು ಬಂದಿದೆ, ಭಾಷೆಗೆ ಮನ್ನಣೆ ಸಿಗುತ್ತಿಲ್ಲ. ಎಲ್ಲ ಕಡೆಗೆ ಇಂಗ್ಲಿಷ್ ಭಾಷೆಗೆ ಪುರಸ್ಕಾರ ಸಿಗುತ್ತಿದೆ. ಈ ಭಾಷೆಯಿಂದ ಸ್ಥಳೀಯ ಭಾಷೆಗಳಿಗೆ ಕುತ್ತು ಬಂದಿದೆ. ನಾಲ್ಕನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕು. ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುವುದು, ಕನ್ನಡ ಚಿತ್ರ ನೋಡುವುದು, ಕನ್ನಡ ಪುಸ್ತಕ ಖರೀದಿಸಿ ಓದುವುದರಿಂದ ಕನ್ನಡವನ್ನು ಉಳಿಸಿಕೊಳ್ಳಬಹುದು. ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಿದರೆ ಉತ್ತಮ ಎಂದು ಗಾಂಧೀಜಿಯಿಂದ ಹಿಡಿದು ಅನೇಕರು ಹೇಳಿದ್ದಾರೆ. ಅದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಇನ್ನು ಪುಸ್ತಕಗಳು ಎದುರಿಗಿದ್ದರೆ ಓದಲು ಮನಸ್ಸು ಬಂದೇ ಬರುತ್ತದೆ. ಹೀಗಾಗಿ ಪ್ರಾಥಮಿಕ, ಹೈಸ್ಕೂಲ್ಗಳಲ್ಲಿ ಗ್ರಂಥಾಲಯ ಇರಲೇಬೇಕು. ಅಂದಾಗ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ.”
ಭಾಗ 3 : Chennaveera Kanavi Death: ಲಂಬಾಣಿ ಭಾಷೆ, ಕುಣಿತದ ಮೋಡಿಗೆ ಒಳಗಾಗಿದ್ದ ಕವಿ ಕಣವಿ ಮನಸ್ಸು