Climate Change: ದೆಹಲಿಯಲ್ಲಿ ದಾಖಲೆ ಬಿಸಿಲು, ಮುಂದಿನ ದಿನಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆ ಮುನ್ಸೂಚನೆ
ಬಿಸಿಗಾಳಿಯಿಂದ ವಾರಾಂತ್ಯದಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ದೆಹಲಿ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯನ ಆಗಮನದಿಂದ ಭೂಮಿ ತುಸು ತಂಪಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿ (Delhi Weather) ಮಾತ್ರ ಬಿಸಿಲಿನಿಂದ ಬೆಂದುಹೋಗಿದೆ. ದೆಹಲಿಯಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿ, ದಾಖಲೆ ಬರೆದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಿಸಿಗಾಳಿಯಿಂದ ವಾರಾಂತ್ಯದಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ದೆಹಲಿ ಪರಿಸ್ಥಿಯನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಹವಾಮಾನ ಕುರಿತು ಮತ್ತಷ್ಟು ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮಧ್ಯಾಹ್ನದ ಹೊತ್ತು ಜನರು ಮನೆಗಳಿಂದ ಹೊರಗೆ ಬರುತ್ತಲೇ ಇಲ್ಲ. ಬಂದರೂ ತಲೆಗಳ ದುಪ್ಪಟ್ಟಾ ಅಥವಾ ಟವೆಲ್ ಹೊದ್ದು ಬರುತ್ತಿದ್ದಾರೆ. ಪ್ರತಿವರ್ಷ ಸಾಮಾನ್ಯವಾಗಿ ಈ ದಿನಗಳಲ್ಲಿ ಇರುವ ಉಷ್ಣಾಂಶದ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷ ಉಷ್ಣಾಂಶ ಪ್ರಮಾಣ 6 ಡಿಗ್ರಿಯಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯಂಥ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಸಿಗಾಳಿಯ ಬಗ್ಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಬಿಸಿಗಾಳಿಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮತ್ತು ಉಷ್ಣಾಂಶ ಏರಿಕೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
good morning delhi weather is so bad that it makes me angry for the smallest thing ever i HATE hate hate summers
— shikha (@dyingoomf) May 12, 2022
ಮಾರ್ಚ್ ತಿಂಗಳಲ್ಲಿ ಒಮ್ಮೆ, ಏಪ್ರಿಲ್ನಲ್ಲಿ ಮೂರು ಬಾರಿ ಬಿಸಿಗಾಳಿಯ ಆತಂಕ ಎದುರಾಗಿತ್ತು. ಮೇ ತಿಂಗಳಲ್ಲಿ ಎರಡು ಬಾರಿ ಅಲರ್ಟ್ ಘೋಷಿಸಿದ್ದು ಸೇರಿದರೆ ಇದು ಈ ವರ್ಷದ 5ನೇ ಬಿಸಿಗಾಳಿ ಪರಿಸ್ಥಿತಿ ಎನಿಸಿದೆ. ಕುಂಠಿತ ಮಳೆ, ಕೃಷಿ ತ್ಯಾಜ್ಯ ಸುಡುವುದು, ಕಾಡ್ಗಿಚ್ಚು, ಜಾಗತಿಕ ಹವಾಮಾನ ವ್ಯತ್ಯಯದಿಂದ ದೆಹಲಿಯಲ್ಲಿ ಉಷ್ಣಾಂಶ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. 1951ರ ನಂತರ ಇದು ದೆಹಲಿಯಲ್ಲಿ ಏಪ್ರಿಲ್ ತಿಂಗಳಲ್ಲಿ ದಾಖಲಾದ ಅತಿಹೆಚ್ಚಿನ ಪ್ರಮಾಣದ ಉಷ್ಣಾಂಶ ಎನಿಸಿದೆ.
ಏಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ 12.2 ಮಿಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಕೇವಲ 0.3 ಮಿಮೀ ಮಳೆಯಾಗಿದೆ. ಮಾರ್ಚ್ ತಿಂಗಳಲ್ಲಿ ವಾಡಿಕೆಯಂತೆ 15.9 ಮಿಮೀ ಮಳೆಯಾಗಬೇಕಿತ್ತು. ಆದರೆ ಒಂದು ಹನಿಯೂ ಮಳೆ ಬಿದ್ದಿಲ್ಲ. ಈ ತಿಂಗಳುದ್ದಕ್ಕೂ ಹವಾಮಾನ ಹೀಗೆಯೇ ಇರಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
1995-2014ರ ಉಷ್ಣಾಂಶದ ಪ್ರಮಾಣಕ್ಕೆ ಹೋಲಿಸಿದರೆ 2080-2099ರ ಹೊತ್ತಿಗೆ ದೆಹಲಿ ಮತ್ತು ಮುಂಬೈಗಳ ಸರಾಸರಿ ಉಷ್ಣಾಂಶ 5 ಡಿಗ್ರಿಯಷ್ಟು ಹೆಚ್ಚಾಗಬಹುದು. ಕೆಲವು ವರ್ಷಗಳಲ್ಲಿ ಉಷ್ಣಾಂಶ ಪ್ರಮಾಣ 48.19 ಡಿಗ್ರಿ ಸೆಂಟಿಗ್ರೇಡ್ ಮುಟ್ಟಬಹುದು ಎಂದು ಗ್ರೀನ್ಪೀಸ್ ವರದಿಯು ವಿಶ್ಲೇಷಿಸಿದೆ. 2050ರ ಹೊತ್ತಿಗೆ ವಿಶ್ವದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ದುಪ್ಪಟ್ಟಾಗುವ ಸಾಧ್ಯತೆಯಿದೆ ಎಂದು ವರದಿಯು ಎಚ್ಚರಿಸಿದೆ.
Published On - 9:00 am, Sun, 15 May 22