ಡಿಫೆನ್ಸ್ ಎಕ್ಸ್​ಪೋ 2020: ರೈಫಲ್ ಹಿಡಿದು ‘ಡೆಮೋ’ ನೋಡಿದ ಮೋದಿ

  • TV9 Web Team
  • Published On - 9:46 AM, 6 Feb 2020
ಡಿಫೆನ್ಸ್ ಎಕ್ಸ್​ಪೋ 2020: ರೈಫಲ್ ಹಿಡಿದು ‘ಡೆಮೋ’ ನೋಡಿದ  ಮೋದಿ

ಲಕ್ನೋ: ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಬಲಾಢ್ಯ ಭಾರತದ ಸೇನೆ ವಿಶ್ವದಲ್ಲೇ ಪವರ್​ಫುಲ್. ಅಮೆರಿಕ, ರಷ್ಯಾ ಹಾಗೂ ಚೀನಾದಂತಹ ರಾಷ್ಟ್ರಗಳ ಎದುರು ಕೂಡ ಪೈಪೋಟಿ ನೀಡುವಷ್ಟು ಭಾರತದ ಸೇನೆ ಬಲಶಾಲಿಯಾಗಿದೆ. ಇದನ್ನ ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದು, ಡಿಫೆನ್ಸ್ ಎಕ್ಸ್​ಪೋದಲ್ಲಿ ಭಾರತದ ಸೇನಾ ಶಕ್ತಿ ಅನಾವರಣಗೊಂಡಿದೆ.

ಆಕಾಶದಲ್ಲಿ ಘರ್ಜಿಸ್ತಿರುವ ಭಾರತೀಯ ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳು. ಹಾಗೇ ಮತ್ತೊಂದು ಕಡೆ ಭಾರತೀಯ ಸೇನಾ ಪಡೆಯ ವೀರಯೋಧರಿಂದ ಬಲ ಪ್ರದರ್ಶನ. ಅಂದಹಾಗೆ ನಿನ್ನೆಯಿಂದ ಉತ್ತರ ಪ್ರದೇಶದ ಲಖನೌನಲ್ಲಿ ಆರಂಭವಾದ ‘ಡಿಫೆನ್ಸ್ ಎಕ್ಸ್​ಪೋ-2020’ ಝಲಕ್ ಇದು.

ರೈಫಲ್ ಹಿಡಿದು ‘ಡೆಮೋ’ ನೋಡಿದ ಪ್ರಧಾನಿ..!
ಯೆಸ್, ನಿನ್ನೆಯಿಂದ ಆರಂಭವಾಗಿರುವ 5 ದಿನಗಳ ಡಿಫೆನ್ಸ್ ಎಕ್ಸ್​ಪೋವನ್ನ ಪ್ರಧಾನಿ ಉದ್ಘಾಟಿಸಿದ್ರು. ಇನ್ನು ಪ್ರಧಾನಿ ಮೋದಿಯವರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಾಥ್ ನೀಡಿದ್ರು. ಈ ವೇಳೆ ಪಿಎಂ ಮೋದಿ ಖುದ್ದು ‘ಅಸಾಲ್ಟ್ ರೈಫಲ್’ ಹಿಡಿದು ಡೆಮೋ ನೋಡಿದ್ದು ಎಲ್ಲರ ಗಮನ ಸೆಳೆಯಿತು. ಭಾರತೀಯ ಸೇನೆಯ ಶಕ್ತಿಯನ್ನ ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಡಲು ‘ಡಿಫೆನ್ಸ್ ಎಕ್ಸ್​ಪೋ-ಟ್ವೆಂಟಿ ಟ್ವೆಂಟಿ’ ವೇದಿಕೆಯಾಗಿತ್ತು.

ಭಾರತದಲ್ಲೇ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು..!
ದಿನೇ ದಿನೇ ಭಾರತದಲ್ಲೂ ಶಸ್ತ್ರಾಸ್ತ್ರಗಳ ತಯಾರಿಕೆ ಹೆಚ್ಚಾಗುತ್ತಿದ್ದು, ಕಳೆದ ಕೆಲ ವರ್ಷಗಳಲ್ಲಿ ಡಿಫೆನ್ಸ್ ರಫ್ತಿನಲ್ಲಿ ದೊಡ್ಡ ಜಾದೂ ನಡೆದಿದೆ. 17 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗಿದೆ. ಇದೇ ರೀತಿ ಜಾಗತಿಕ ಡಿಫೆನ್ಸ್ ಮಾರುಕಟ್ಟೆಯಲ್ಲಿ ಭಾರತದ ಉತ್ಪಾದನಾ ವಲಯವನ್ನ ಬೆಳೆಸುವ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ರು. ಆ ಮೂಲಕ ‘ಮೇಕ್ ಇನ್ ಇಂಡಿಯಾ’ಗೆ ಮತ್ತಷ್ಟು ಒತ್ತು ನೀಡುವ ಭರವಸೆ ನೀಡಿದ್ರು.

ಒಟ್ನಲ್ಲಿ ‘ಡಿಫೆನ್ಸ್ ಎಕ್ಸ್​ಪೋ-ಟ್ವೆಂಟಿ ಟ್ವೆಂಟಿ’ ಭಾರತದ ಮಿತ್ರ ರಾಷ್ಟ್ರಗಳ ಕಣ್ಣು ಅರಳುವಂತೆ ಮಾಡಿದ್ರೆ, ಶತ್ರು ರಾಷ್ಟ್ರಗಳಿಗೆ ನಡುಕ ಉಂಟುಮಾಡಿದೆ. ಜಾಗತಿಕವಾಗಿ ಮಿಲಿಟರಿ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚುಹಣ ಹೂಡುತ್ತಿರುವ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದ್ದು, ಭವಿಷ್ಯದಲ್ಲಿ ಈ ವೆಚ್ಚ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.