ಗುರುದ್ವಾರ ಶ್ರೀ ಬಾಂಗ್ಲಾ ಸಾಹಿಬ್‌ನಲ್ಲಿ ಪಾವಿತ್ರ್ಯತೆಗೆ ಧಕ್ಕೆ; ಅರವಿಂದ್ ಕೇಜ್ರಿವಾಲ್, ಆಪ್ ಕಾರ್ಯಕರ್ತರ ವಿರುದ್ಧ ದೂರು ದಾಖಲು
ದೆಹಲಿಯ ಪ್ರಸಿದ್ಧ ಗುರುದ್ವಾರ ಶ್ರೀ ಬಾಂಗ್ಲಾ ಸಾಹಿಬ್ ಆವರಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ, ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆಪ್ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ್ ಕಮಿಟಿ ಇಂದು ದೆಹಲಿ ಪೊಲೀಸರಿಗೆ ಅಧಿಕೃತ ದೂರು ನೀಡಿದೆ. ಡಿಎಸ್‌ಜಿಎಂಸಿ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ ಅವರು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಡಿಸಿಪಿ ಕಚೇರಿಯಲ್ಲಿ ಈ ದೂರನ್ನು ದಾಖಲಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ವೇಳೆ, ಆಪ್ ಕಾರ್ಯಕರ್ತರು ಪ್ರತಿಭಟನಾಕಾರರಂತೆ ನಟಿಸಿ ಗುರುದ್ವಾರದ ಆವರಣಕ್ಕೆ ಪ್ರವೇಶಿಸಿ ಪೋಸ್ಟರ್, ಬ್ಯಾನರ್‌ಗಳನ್ನು ಪ್ರದರ್ಶಿಸಿ ರಾಜಕೀಯ ಘೋಷಣೆಗಳನ್ನು ಕೂಗಿದ್ದಾರೆ ಎಂದು ಕಲ್ಕಾ ಆರೋಪಿಸಿದ್ದಾರೆ.

ನವದೆಹಲಿ, ಅಕ್ಟೋಬರ್ 11: ದೆಹಲಿಯ ಐತಿಹಾಸಿಕ ಗುರುದ್ವಾರ ಶ್ರೀ ಬಾಂಗ್ಲಾ ಸಾಹಿಬ್ ಆವರಣದಲ್ಲಿ ಪ್ರತಿಭಟನೆಯ ನೆಪದಲ್ಲಿ ಗೊಂದಲ ಸೃಷ್ಟಿಸಿ, ಧಾರ್ಮಿಕ ಸ್ಥಳದ ಪವಿತ್ರತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಆಪ್ ಶಾಸಕರು ಮತ್ತು ಕಾರ್ಯಕರ್ತರ ವಿರುದ್ಧ ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ್ ಕಮಿಟಿ ದೆಹಲಿ ಪೊಲೀಸರಿಗೆ ದೂರು ನೀಡಿದೆ.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಆಪ್ ಕಾರ್ಯಕರ್ತರು ಗುರುದ್ವಾರದ ಆವರಣಕ್ಕೆ ಪ್ರವೇಶಿಸಿ ರಾಜಕೀಯ ಘೋಷಣೆಗಳನ್ನು ಕೂಗಿದ್ದಾರೆ ಮತ್ತು ಧಾರ್ಮಿಕ ಸ್ಥಳವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಸಾರ್ವಜನಿಕ ಶಿಸ್ತು ಹಾಗೂ ಶಾಂತಿಗೆ ಧಕ್ಕೆ ತಂದಿದ್ದಾರೆ ಎಂದು ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ್ ಕಮಿಟಿ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಆಕ್ಷೇಪಾರ್ಹ ಫೋಟೋ ಶೇರ್ ಮಾಡಿದ ಆರೋಪ; ಸಿಜೆಪಿ ನಾಯಕರಿಗೆ ದೆಹಲಿ ಪೊಲೀಸರಿಂದ ನೋಟಿಸ್
ಗುರುದ್ವಾರದ ಮರ್ಯಾದೆ ಮತ್ತು ಪವಿತ್ರ ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಚಟುವಟಿಕೆ ನಡೆಸಿರುವುದು ಪ್ರಪಂಚದಾದ್ಯಂತ ಇರುವ ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Delhi Sikh Gurdwara Management Committee files a complaint with the Delhi Police against AAP convenor Arvind Kejriwal, AAP MLAs/workers others regarding the incident at the premises of Gurdwara Sri Bangla Sahib during the protests. https://t.co/oy4ZzMwCxm
— Press Trust of India (@PTI_News) October 11, 2026
ಸುಳ್ಳು ವದಂತಿ ಹಾಗೂ ವಿಡಿಯೋ ಹರಡಿದ ಆರೋಪ:
ಪೊಲೀಸರು ಗುರುದ್ವಾರದೊಳಗೆ ಬೂಟುಗಳನ್ನು ಧರಿಸಿ ಬಂದಿದ್ದಾರೆ ಎಂಬಂತೆ ಸುಳ್ಳು ಹಾಗೂ ತಪ್ಪುದಾರಿಗೆಳೆಯುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಿಖ್ ಸಮುದಾಯವನ್ನು ಪ್ರಚೋದಿಸಲು ಯತ್ನಿಸಲಾಗಿದೆ. ಈ ಭ್ರಮೆಯನ್ನು ಹರಡುವಲ್ಲಿ ಕೇಜ್ರಿವಾಲ್ ಹಾಗೂ ಆಪ್ ನಾಯಕರು ನೇರ ಹೊಣೆ ಎಂದು ಕಮಿಟಿ ದೂರಿದೆ. ಈ ದೂರನ್ನು ಸ್ವೀಕರಿಸಿರುವ ದೆಹಲಿ ಪೊಲೀಸರು, ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




