
ಮತದಾರರ ಪಟ್ಟಿ ಪರಿಷ್ಕರಣೆಯ ವಿಚಾರವಾಗಿ ಭಾರತದಾದ್ಯಂತ ವಿಪಕ್ಷಗಳು ಹೋರಾಟ ನಡೆಸುತ್ತಿವೆ. ಎಸ್ಐಆರ್ ಹೆಸರಲ್ಲಿ ಮತಗಳವು ನಡೆಯುತ್ತಿದ್ದು, ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಪರ ಕೆಲಸ ಮಾಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅಷ್ಟಕ್ಕೂ ದೇಶದ ಚುನಾವಣಾ ಇತಿಹಾಸವನ್ನು ಗಮನಿಸಿದರೆ ಈ ಮತಗಳ್ಳತನ ಅಥವಾ ಚುನಾವಣಾ ಅಕ್ರಮ ಎನ್ನುವ ಆರೋಪ ಇದೇ ಮೊದಲೇನಲ್ಲ. ದೇಶದ ಪ್ರಜಾಪ್ರಭುತ್ವದ ವಿಕಾಸದಷ್ಟೇ ಇತಿಹಾಸ ಇದಕ್ಕಿದೆ. 1951-52ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಇತ್ತೀಚಿನ ಇವಿಎಂ (EVM) ತಂತ್ರಜ್ಞಾನದವರೆಗಿನ ಕಾಲಘಟ್ಟದಲ್ಲಿ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಕಾಲಕಾಲಕ್ಕೆ ಅಕ್ರಮಗಳ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಮತದಾರರಿಗೆ ನಗದು ಹಂಚಿಕೆ, ಉಚಿತ ಉಡುಗೊರೆಗಳು, ಮದ್ಯ ಅಥವಾ ಇತರ ವಸ್ತುಗಳನ್ನು ನೀಡಿ ಮತಗಳನ್ನು ಖರೀದಿಸುವುದು ಸೇರಿದಂತೆ ಮತದಾರರಿಗೆ ಅಥವಾ ಚುನಾವಣಾಧಿಕಾರಿಗಳಿಗೆ ಬೆದರಿಕೆ ಹಾಕುವುದು ಮತ್ತು ಗೂಂಡಾಗಳನ್ನು ಬಳಸಿ ಮತದಾನದ ಮೇಲೆ ಪ್ರಭಾವ ಬೀರುವುದನ್ನು ಚುನಾವಣಾ ಅಕ್ರಮವೆಂದು ಪರಿಗಣಿಸಲಾಗುತ್ತದೆ. ಬೇರೆಯವರ ಹೆಸರಿನಲ್ಲಿ ಮತ ಹಾಕುವುದು, ಒಂದಕ್ಕಿಂತ ಹೆಚ್ಚು ಬಾರಿ ಮತದಾನ ಮಾಡುವುದು, ಮತಯಂತ್ರ/ಮತಪತ್ರಗಳ ತಿರುಚುವಿಕೆಯನ್ನೂ ಇದು ಒಳಗೊಂಡಿದೆ.
ಇದನ್ನೂ ಓದಿ: ಎಸ್ಐಆರ್ ಬಳಿಕ 5 ರಾಜ್ಯಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಯಾವ ರಾಜ್ಯದಲ್ಲಿ ಎಷ್ಟು ಹೆಸರು ಕೈಬಿಡಲಾಗಿದೆ?
ಇಂದಿರಾ ಗಾಂಧಿ ಚುನಾವಣಾ ಅಕ್ರಮ ವಿವಾದ
1971ರ ರಾಯ್ಬರೇಲಿ ಲೋಕಸಭಾ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮತದಾರರ ಮೇಲೆ ಪ್ರಭಾವ ಬೀರಲು ಸರ್ಕಾರಿ ಯಂತ್ರಾಂಗ ಮತ್ತು ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ಅವರ ಗೆಲುವನ್ನು ರದ್ದುಗೊಳಿಸಿ, 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಿತು. ಇದು ದೇಶದಲ್ಲಿ ತುರ್ತು ಪರಿಸ್ಥಿತಿ (Emergency) ಘೋಷಣೆಗೆ ಕಾರಣವಾಯಿತು.
ಬಿಹಾರದ ಜಂಗಲ್ ರಾಜ್ ಕಾಲ
1980 ಮತ್ತು 1990ರ ದಶಕದಲ್ಲಿ ಬಿಹಾರದಲ್ಲಿ ಚುನಾವಣೆಗಳೆಂದರೆ ಕೊಲೆ, ಲೂಟಿ, ಬೆಂಕಿ ಹಚ್ಚುವಿಕೆ, ಅಪಹರಣ ಮತ್ತು ಬೆದರಿಕೆಗಳು ಸಾಮಾನ್ಯವಾಗಿದ್ದವು. ನೂರಾರು ಬೂತ್ಗಳಲ್ಲಿ ಮರುಮತದಾನ ಮಾಡಬೇಕಾದ ಪರಿಸ್ಥಿತಿ ಇರುತ್ತಿತ್ತು.1990 ರಿಂದ 2004ರ ಅವಧಿಯಲ್ಲಿ ನಡೆದ ಒಟ್ಟು 9 ಚುನಾವಣೆಗಳಲ್ಲಿ ವ್ಯಾಪಕವಾದ ಚುನಾವಣಾ ಹಿಂಸಾಚಾರ ಮತ್ತು ಅಕ್ರಮಗಳು ದಾಖಲಾಗಿವೆ. ಮೇ 7, 1996ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಕೆಲವು ಮತಗಟ್ಟೆಗಳಲ್ಲಿ ಬೂತ್ ಕ್ಯಾಪ್ಚರಿಂಗ್, ಮತದಾರರನ್ನು ಮತದಾನ ಮಾಡದಂತೆ ತಡೆಯುವುದು ಮತ್ತು ಆಡಳಿತರೂಢ ಕಾಂಗ್ರೆಸ್ ಪಕ್ಷದ ಪರವಾಗಿ ಬ್ಯಾಲೆಟ್ ಬಾಕ್ಸ್ ತುಂಬಿಸುವ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಕಾರಣದಿಂದ ಕೆಲವು ಕಡೆ ಮತದಾನವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಬಂದಿತ್ತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ ರಿಗ್ಗಿಂಗ್ ಆರೋಪ
ಮಾರ್ಚ್ 1987ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಿದ್ದ ಮುಸ್ಲಿಂ ಯುನೈಟೆಡ್ ಫ್ರಂಟ್ (MUF) ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೂ, ಫಲಿತಾಂಶವನ್ನು ಅಕ್ರಮವಾಗಿ ತಿರುಚಿ ಮೈತ್ರಿಕೂಟ ಗೆಲ್ಲುವಂತೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಮತಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳುವಿಕೆ ಮತ್ತು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಈ ಘಟನೆಯು ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿತ್ವ ಹೆಚ್ಚಾಗಲು ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗುತ್ತದೆ.
ತೆಲಂಗಾಣ ವಿಧಾನ ಪರಿಷತ್ ‘ನೋಟಿಗೆ ವೋಟು’ ಹಗರಣ
2015ರ ತೆಲಂಗಾಣ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್ಸನ್ ಅವರಿಗೆ ಟಿಡಿಪಿ (TDP) ಪರವಾಗಿ ಮತ ಚಲಾಯಿಸಲು 50 ಲಕ್ಷ ರೂ. ಲಂಚ ನೀಡುತ್ತಿದ್ದಾಗ ಅಂದಿನ ಟಿಡಿಪಿ ಶಾಸಕ ರೇವಂತ್ ರೆಡ್ಡಿ (ಪ್ರಸ್ತುತ ತೆಲಂಗಾಣ ಸಿಎಂ) ಅವರನ್ನು ಪೊಲೀಸರು ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು. ಈ ಆಡಿಯೋ ಮತ್ತು ವಿಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದವು.
2024ರ ಲೋಕಸಭಾ ಚುನಾವಣೆಯ ಮತಗಳ ವ್ಯತ್ಯಾಸದ ಆರೋಪ
2024ರ ಸಾರ್ವತ್ರಿಕ ಚುನಾವಣೆ ಮುಗಿದ ನಂತರ, ಚಲಾವಣೆಯಾದ ಒಟ್ಟು ಮತಗಳು ಮತ್ತು ಎಣಿಕೆಯಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ (Data Mismatch) ಎಂದು ವಿರೋಧ ಪಕ್ಷಗಳು ಮತ್ತು ಕೆಲವು ಸ್ವಯಂಸೇವಾ ಸಂಸ್ಥೆಗಳು ಆರೋಪಿಸಿದ್ದವು.
ಕರ್ನಾಟಕ ಮತ್ತು ಹರಿಯಾಣ ‘ಮತಗಳ್ಳತನ’ ವಿವಾದ
ಲೋಕಸಭೆಯ ಹಾಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಕರ್ನಾಟಕದ ಮಹಾದೇವಪುರ ಕ್ಷೇತ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗವು ಆಡಳಿತ ಪಕ್ಷದೊಂದಿಗೆ ಸೇರಿ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿದೆ ಹಾಗೂ “ಮತಗಳ್ಳತನ” (Vote Chori) ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.
ಈ ನಡುವೆಯೂ ಭಾರತದ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 1990ರ ದಶಕದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರು ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಬೂತ್ ಲೂಟಿ ಮತ್ತು ಅಕ್ರಮಗಳಿಗೆ ದೊಡ್ಡ ಮಟ್ಟದ ಬ್ರೇಕ್ ಹಾಕಿದ್ದರು. ಮತದಾರರ ಗುರುತಿನ ಚೀಟಿ (Voter ID) ಕಡ್ಡಾಯಗೊಳಿಸುವಿಕೆ, ಇವಿಎಂ ಬಳಕೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ವೆಚ್ಚಗಳ ಮೇಲಿನ ಕಡಿಕಾಣ್ಗಾವಲು ಸೇರಿದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳು ಅಕ್ರಮಗಳನ್ನು ಗಣನೀಯವಾಗಿ ಕಡಿಮೆ ಮಾಡಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Tue, 3 November 26