ಗಡಿ ಗಡಿಬಿಡಿಯ ನಡುವೆಯೂ ಭಾರತದಿಂದ ಚೀನಾಕ್ಕೆ ಹೆಚ್ಚಾಯ್ತು ರಫ್ತು, ಇಳಿಯಿತು ಆಮದು
2020ರಲ್ಲಿ ಭಾರತವು ಚೀನಾಕ್ಕೆ ರಫ್ತು ಮಾಡಿರುವ ವಸ್ತುಗಳ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚಾಗಿದೆ. ಚೀನಾದಿಂದ ಭಾರತ ಮಾಡಿಕೊಂಡಿರುವ ಆಮದಿನ ಪ್ರಮಾಣ ಶೇ 13ರಷ್ಟು ಕಡಿಮೆಯಾಗಿದೆ.
ದೆಹಲಿ: ಲಡಾಖ್ ಗಡಿಯಲ್ಲಿ ಮಿಲಿಟರಿ ಸಂಘರ್ಷದ ಹೊರತಾಗಿಯೂ ಭಾರತ-ಚೀನಾ ನಡುವೆ ವ್ಯಾಪಾರ ವಹಿವಾಟು ಮುಂದುವರಿದಿದೆ. 2020ರಲ್ಲಿ ಭಾರತವು ಚೀನಾಕ್ಕೆ ರಫ್ತು ಮಾಡಿರುವ ವಸ್ತುಗಳ ಪ್ರಮಾಣ ಕಳೆದ ವರ್ಷಕ್ಕಿಂತ ಶೇ 16ರಷ್ಟು ಹೆಚ್ಚಾಗಿದೆ. ಚೀನಾದಿಂದ ಭಾರತ ಮಾಡಿಕೊಂಡಿರುವ ಆಮದಿನ ಪ್ರಮಾಣ ಶೇ 13ರಷ್ಟು ಕಡಿಮೆಯಾಗಿದೆ. ಚೀನಾ ಸೋಮವಾರ ಬಹಿರಂಗಪಡಿಸಿರುವ ಅಬಕಾರಿ ಸುಂಕದ ವಿವರಗಳು ಈ ಅಂಶವನ್ನು ಎತ್ತಿತೋರಿಸಿವೆ.
ಭಾರತದಿಂದ ಚೀನಾಕ್ಕೆ ಆಮದಾಗುತ್ತಿರುವ ಉತ್ಪನ್ನಗಳ ಪ್ರಮಾಣ ಹೆಚ್ಚಾಗಿರುವುದನ್ನು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಎತ್ತಿ ತೋರಿಸಿದೆ. ಪೂರ್ವ ಲಡಾಖ್ನಲ್ಲಿ ನಡೆಯುತ್ತಿರುವ ಮಿಲಿಟರಿ ಸಂಘರ್ಷವು ರಾಜತಾಂತ್ರಿಕ ಮತ್ತು ವ್ಯಾಪಾರಿ ಸಂಬಂಧಗಳನ್ನು ಪ್ರಭಾವಿಸಲು ಚೀನಾ ಬಿಟ್ಟಿಲ್ಲ ಎಂದು ಚೀನಾ ಸರ್ಕಾರದ ಅಧೀನದಲ್ಲಿರುವ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಹೇಳಿದೆ.
ಭಾರತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರದ ದಿನಗಳಲ್ಲಿ ಜಾರಿಯಾದ ಲಾಕ್ಡೌನ್ನಿಂದಾಗಿ ದೇಶೀಯ ಆರ್ಥಿಕತೆ ಕುಸಿಯಿತು. ಭಾರತೀಯರ ಕೊಳ್ಳುವ ಶಕ್ತಿ ಕಡಿಮೆಯಾಗಿರುವ ಕಾರಣ ರಫ್ತು ಹೆಚ್ಚಾಗುತ್ತಿದೆ ಎಂದು ಚೀನಾದ ಪತ್ರಕರ್ತರು ವಿಶ್ಲೇಷಿಸಿದ್ದಾರೆ.
ಜನವರಿಯಿಂದ ನವೆಂಬರ್ವರೆಗಿನ ಅವಧಿಯಲ್ಲಿ ಭಾರತಕ್ಕೆ ಚೀನಾ ಒಟ್ಟು 59 ಶತಕೋಟಿ ರೂಪಾಯಿ ಮೊತ್ತದಷ್ಟು ಉತ್ಪನ್ನಗಳನ್ನು ರಫ್ತು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 13ರಷ್ಟು ಕಡಿಮೆ. ಇದೇ ಅವಧಿಯಲ್ಲಿ ಭಾರತದಿಂದ ಚೀನಾ ಆಮದು ಮಾಡಿಕೊಂಡ ಉತ್ಪನ್ನಗಳ ಪ್ರಮಾಣ ಶೇ 16ರಷ್ಟು ಹೆಚ್ಚಾಗಿದೆ ಎಂದು ಲೇಖನವು ಉಲ್ಲೇಖಿಸಿದೆ.
ಭಾರತ ಸರ್ಕಾರವು ಚೀನಾ ಬಗ್ಗೆ ಪೂರ್ವಗ್ರಹ ಪೀಡಿತವಾಗಿ ವರ್ತಿಸುತ್ತಿರುವುದೂ ಈ ಬೆಳವಣಿಗೆಗೆ ಕಾರಣವಿರಬಹುದು. ಚೀನಾದ ವಸ್ತುಗಳು ಭಾರತವನ್ನು ಸುಲಭವಾಗಿ ತಲುಪಲು ಸಾಧ್ಯವಾಗದಂತೆ ನಿರ್ಬಂಧಗಳನ್ನು ಹೇರಲಾಗಿದೆ. ಸುಂಕ ಹೆಚ್ಚಿಸಲಾಗಿದೆ. ಮೊದಲಿನಂತೆ ಚೀನಾ ನಿರ್ಮಿತ ಉತ್ಪನ್ನಗಳು ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ಎಂದು ಲೇಖನ ಹೇಳಿದೆ.
ಚೀನಾದಲ್ಲಿ ತಯಾರಾದ ಆರ್ಗಾನಿಕ್ ಕೆಮಿಕಲ್ಸ್, ರಾಸಾಯನಿಕ ಗೊಬ್ಬರ, ಆಂಟಿಬಯೋಟಿಕ್ ಮತ್ತು ಅಲ್ಯುಮಿನಿಯಂಗೆ ಭಾರತ ಅತಿದೊಡ್ಡ ಗ್ರಾಹಕ. ಭಾರತದಿಂದ ಚೀನಾಕ್ಕೆ ಕಬ್ಬಿಣದ ಅದಿರು, ಕಚ್ಚಾ ವಜ್ರ, ಮೀನು, ಸೀಗಡಿ, ಹತ್ತಿ, ಗ್ರಾನೈಟ್ ಶಿಲೆಗಳ ರಫ್ತು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ ಎಂದು ಬೀಜಿಂಗ್ನ ಭಾರತೀಯ ದೂತವಾಸ ಕಚೇರಿ ತಿಳಿಸಿದೆ.
ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ-ಚೀನಾ ನಡುವಣ ಆಮದು-ರಫ್ತಿನ ಅಂತರ (ಶೇ 2) ಕಡಿಮೆಯಾಗಿದೆ. 2005ರ ನಂತರ ಇದೇ ಮೊದಲ ಬಾರಿಗೆ ಇಂಥ ಬೆಳವಣಿಗೆ ಕಂಡು ಬಂದಿದೆ. 2019ರಲ್ಲಿ ಭಾರತ-ಚೀನಾ ನಡುವೆ 92.89 ಶತಕೋಟಿ ಅಮೆರಿಕ ಡಾಲರ್ನಷ್ಟು ಮೌಲ್ಯದ ವಹಿವಾಟು ನಡೆದಿತ್ತು. ಚೀನಾದ ಒಟ್ಟು ವಿದೇಶಿ ವಹಿವಾಟಿನಲ್ಲಿ ಭಾರತಕ್ಕೆ 12ನೇ ಸ್ಥಾನವಿದೆ. ಅಮೆರಿಕ, ಜಪಾನ್, ಹಾಂಗ್ಕಾಂಗ್, ದಕ್ಷಿಣ ಕೊರಿಯಾ, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ವಿಯೆಟ್ನಾಂ, ಬ್ರೆಜಿಲ್ ಮತ್ತು ರಷ್ಯಾ ಜೊತೆಗೆ ಚೀನಾ ಅತಿಹೆಚ್ಚು ವಾಣಿಜ್ಯ ಚಟುವಟಕೆ ನಡೆಸುತ್ತದೆ.
ಭಾರತದಿಂದ ದೊಡ್ಡಮಟ್ಟದಲ್ಲಿ ಅಕ್ಕಿ ಖರೀದಿಸಲು ಚೀನಾ ಈಚೆಗಷ್ಟೇ ಸಮ್ಮತಿಸಿತ್ತು. ಈ ನಡೆಯನ್ನು ಅಲ್ಲಿನ ಸರ್ಕಾರಿ ಸ್ವಾಮ್ಯದ ಪತ್ರಿಕೆಯು ಅತ್ಯಂತ ಎಚ್ಚರಿಕೆಯಿಂದ ಸ್ವಾಗತಿಸಿದೆ. ಒಂದು ಟನ್ಗೆ ₹ 300ರಂತೆ ಡಿಸೆಂಬರ್-ಫೆಬ್ರುವರಿ ನಡುವೆ 1 ಲಕ್ಷ ಟನ್ ಅಕ್ಕಿಯನ್ನು ಭಾರತದ ವ್ಯಾಪಾರಿಗಳಿಂದ ಖರೀದಿಸಲು ಚೀನಾ ಮುಂದಾಗಿದೆ.
ಇದು ಸಂಪೂರ್ಣವಾಗಿ ವ್ಯಾಪಾರಿ ಉದ್ದೇಶ ಹೊಂದಿರುವ ಕ್ರಮ. ಭಾರತದಿಂದ ಬರುತ್ತಿರುವ ಅಕ್ಕಿಯ ಧಾರಣೆಯು ಚೀನಾದ ದೇಶೀಯ ಬೆಲೆಗಿಂತ ಅತ್ಯಂತ ಕಡಿಮೆ. ಈ ಅಕ್ಕಿಯನ್ನು ಪಶುಆಹಾರಕ್ಕೆ ಬಳಸಲಾಗುತ್ತದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.