ಗಡಿಯಲ್ಲಿ ಭಾರತೀಯ ವಾಯುಪಡೆಯಿಂದ 17 ದಿನಗಳ ಬೃಹತ್ ಸಮರಾಭ್ಯಾಸ: ಪಾಕಿಸ್ತಾನದಲ್ಲಿ ಆತಂಕ, ಸೇನಾ ತುರ್ತು ಸಭೆ
ಭಾರತೀಯ ವಾಯುಪಡೆ ರಾಜಸ್ಥಾನದ ಗಡಿಯಲ್ಲಿ 17 ದಿನಗಳ ಬೃಹತ್ ಸಮರಾಭ್ಯಾಸ ನಡೆಸುತ್ತಿದೆ. ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯುವ ಈ ಯುದ್ಧ ತಾಲೀಮು ಪಾಕಿಸ್ತಾನಕ್ಕೆ ಆತಂಕ ತಂದಿದೆ. ಪಾಕ್ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದು, ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ. ಈ ಸಮರಾಭ್ಯಾಸವು 'ತರಂಗ್ ಶಕ್ತಿ 2026' ಕವಾಯತಿನೊಂದಿಗೆ ಹೊಂದಿಕೆಯಾಗಿ, ಭಾರತದ ವಾಯು ಸನ್ನದ್ಧತೆ ಪ್ರದರ್ಶಿಸಲಿದೆ.

ನವದೆಹಲಿ, ಸೆಪ್ಟೆಂಬರ್ 04: ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆ 17 ದಿನಗಳ ಬೃಹತ್ ಯುದ್ಧ ತಾಲೀಮು ನಡೆಸಲು ಸಜ್ಜಾಗಿದ್ದು, ಈ ಸಂಬಂಧ ಅಧಿಕೃತ ನೋಟಮ್ ಜಾರಿಗೊಳಿಸಿದೆ. ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಈ ಭಾರಿ ಮಿಲಿಟರಿ ಕವಾಯತಿನಿಂದ ಗಡಿಯಲ್ಲಿ ಆತಂಕಗೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವಾಲಯ ತುರ್ತು ಸಭೆ ಕರೆದಿದ್ದು, ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ.
ಕಾಯ್ದಿರಿಸಿದ ವಲಯಗಳು: ಜೈಸಲ್ಮೇರ್, ಬಾರ್ಮರ್, ಫಲೋಡಿ, ಜೋಧ್‌ಪುರ ಮತ್ತು ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯಲ್ಲಿ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಸಂಪೂರ್ಣ ಮೀಸಲಿಡಲಾಗಿದೆ.
40 ಸಾವಿರ ಅಡಿ ಎತ್ತರದಲ್ಲಿ ಹಾರಾಟ: ಸುಮಾರು 40 ಸಾವಿರ ಅಡಿ ಎತ್ತರದವರೆಗೆ ಈ ವಲಯದಲ್ಲಿ ಯುದ್ಧ ವಿಮಾನಗಳ ಚಲನವಲನಗಳಿಗೆ ಮಾತ್ರ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಮತ್ತಷ್ಟು ಓದಿ: ಎಸ್ಸಿಒ ಶೃಂಗಸಭೆಯ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿಯ ಫೋಟೋ ಕಟ್ ಮಾಡಿದ ಪಾಕಿಸ್ತಾನ!
ಗಡಿಯ ಸನಿಹ ಸಮರಾಭ್ಯಾಸ: ಗುರುತಿಸಲಾದ ವಲಯಗಳಲ್ಲಿ ಒಂದು ಭಾಗವು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿದೆ. ಇದು ಪಾಕ್ ಸೇನೆಯನ್ನು ತೀವ್ರ ಚಿಂತೆಗೀಡುಮಾಡಿದೆ.
ಪಾಕಿಸ್ತಾನದಲ್ಲಿ ತಲ್ಲಣ ಮತ್ತು ತುರ್ತು ಸಭೆ
ಸೇನಾ ಮುಖ್ಯಸ್ಥರ ಗಮನಕ್ಕೆ: ಭಾರತದ ನೋಟಾಮ್ ಬಿಡುಗಡೆಯಾಗುತ್ತಿದ್ದಂತೆ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥರ ಕಚೇರಿ ಹಾಗೂ ರಕ್ಷಣಾ ಸಚಿವಾಲಯ ತುರ್ತು ಸಮಾಲೋಚನೆ ನಡೆಸಿವೆ.
ಕಣ್ಗಾವಲು ತೀವ್ರ: ಭಾರತದ ಯುದ್ಧ ವಿಮಾನಗಳ ಯಾವುದೇ ಚಲನವಲನಗಳನ್ನು ಪತ್ತೆಹಚ್ಚಲು ಪಾಕಿಸ್ತಾನವು ತನ್ನ ರೇಡಾರ್ ಕೇಂದ್ರಗಳನ್ನು ಸಕ್ರಿಯಗೊಳಿಸಿದ್ದು, ಗಡಿಯಲ್ಲಿ ಹೆಚ್ಚಿನ ವಾಯು ರಕ್ಷಣಾ ಪಡೆಗಳನ್ನು ನಿಯೋಜಿಸಿದೆ.
ಬಹುರಾಷ್ಟ್ರೀಯ ಸಮರಾಭ್ಯಾಸ: ಈ 17 ದಿನಗಳ ಯುದ್ಧ ತಾಲೀಮು, ಜೋಧ್‌ಪುರದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 12 ರವರೆಗೆ ನಿಗದಿಯಾಗಿರುವ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ ‘ತರಂಗ್ ಶಕ್ತಿ 2026’ ಜತೆಗೆ ಹೊಂದಿಕೆಯಾಗಲಿದೆ.
ಜಾಗತಿಕ ವಾಯುಪಡೆಗಳ ಪಾಲ್ಗೊಳ್ಳುವಿಕೆ: ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ಮಿತ್ರರಾಷ್ಟ್ರಗಳ ಅತ್ಯಾಧುನಿಕ ಫೈಟರ್ ಜೆಟ್‌ಗಳು ಈ ಜಂಟಿ ಕವಾಯತಿನಲ್ಲಿ ಭಾಗವಹಿಸುವ ಸಾಧ್ಯತೆಯಿದ್ದು, ತೀವ್ರ ಸ್ವರೂಪದ ಡಾಗ್‌ಫೈಟ್ ಮತ್ತು ವಾಯು ಯುದ್ಧ ತಂತ್ರಗಳನ್ನು ಪ್ರದರ್ಶಿಸಲಿವೆ.
ನೋಟಮ್ ಎಂದರೇನು?: ಇದು ವಿಮಾನ ಪೈಲಟ್‌ಗಳು ಮತ್ತು ನಾಗರಿಕ ವಿಮಾನಯಾನ ಸಂಸ್ಥೆಗಳಿಗೆ ಅಪಾಯಕಾರಿ ವಲಯಗಳು, ಕ್ಷಿಪಣಿ ಪರೀಕ್ಷೆಗಳು ಅಥವಾ ಮಿಲಿಟರಿ ತಾಲೀಮುಗಳ ಕುರಿತು ಮುನ್ಸೂಚನೆ ನೀಡುವ ಸುರಕ್ಷತಾ ಎಚ್ಚರಿಕೆ ನೋಟಿಸ್ ಆಗಿದೆ.
ಭಾರತದ ವಾಯು ಸನ್ನದ್ಧತೆ ಪರೀಕ್ಷೆ: ರಫೇಲ್, ಸುಖೋಯ್-30 ಎಂಕ್ಯೂಐ, ಮಿರಾಜ್-2000 ಮತ್ತು ತೇಜಸ್ ಲಘು ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ನಿರಂತರ ಹಾರಾಟ ನಡೆಸಲಿದ್ದು, ವಾಸ್ತವಿಕ ಯುದ್ಧ ಸನ್ನಿವೇಶದಲ್ಲಿ ಸಂವಹನ, ಇಂಧನ ಮರುಪೂರಣ ಹಾಗೂ ರಾತ್ರಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಾಬೀತುಪಡಿಸಲಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




