Kargil Vijay Diwas 2022: ಕಾರ್ಗಿಲ್ ಯುದ್ಧ ನಡೆಯಲು ಪ್ರಮುಖ ಕಾರಣವೇನು? ಇಲ್ಲಿದೆ ಕಾರ್ಗಿಲ್ ಯುದ್ಧದ ಸಂಪೂರ್ಣ ಚಿತ್ರಣ

'ಆಪರೇಷನ್ ವಿಜಯ್' ಮೂಲಕ ಮೇ ತಿಂಗಳ ಆರಂಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಪ್ರತ್ಯುತ್ತರದ ಯುದ್ಧ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು. ವಿಮಾನ, ಹೆಲಿಕಾಪ್ಟರ್​ಗಳ ಹಾರಾಟ, ಗ್ರೇನೆಡ್, ಮೊರ್ಟಾರ್ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಯಿತು.

Kargil Vijay Diwas 2022: ಕಾರ್ಗಿಲ್ ಯುದ್ಧ ನಡೆಯಲು ಪ್ರಮುಖ ಕಾರಣವೇನು? ಇಲ್ಲಿದೆ ಕಾರ್ಗಿಲ್ ಯುದ್ಧದ ಸಂಪೂರ್ಣ ಚಿತ್ರಣ
ಕಾರ್ಗಿಲ್ (ಸಂಗ್ರಹ ಚಿತ್ರ)
TV9kannada Web Team

| Edited By: Ayesha Banu

Jul 26, 2022 | 7:30 AM

ಕಾರ್ಗಿಲ್ ಯುದ್ಧ(Kargil War) ನಡೆದು ಇಂದಿಗೆ(ಜುಲೈ 26) 23 ವರ್ಷ ಕಳೆದಿದೆ. ಈ ಒಂದು ವಿಜಯದ ದಿನಕ್ಕಾಗಿ ಅದೆಷ್ಟೋ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡಿದ್ದಾರೆ. ವೀರ ಸೇನಾನಿಗಳು ತಾಯಿ ಭಾರತ ಮಾತೆಗೆ ಪ್ರಾರ್ಣಾಪಣವನ್ನು ಅರ್ಪಿಸಿದ್ದಾರೆ. ಯಾರದೋ ಮನೆಯ ನಂದಾ ದೀಪ ನಂದಿದೆ. ಅದೆಷ್ಟೂ ಮಕ್ಕಳು ಅನಾಥರಾಗಿದ್ದಾರೆ. ಬಿಳಿ ಹಿಮ ಕೆಂಪಾಗಿದೆ. ಗ್ರೇನೆಡ್, ಮದ್ದು ಗುಂಡುಗಳಿಗೆ ಭಾರತಾಂಬೆಯ ಮಕ್ಕಳ ದೇಹ ಚಿದ್ರ ಚಿದ್ರವಾಗಿದೆ. ಈ ಎಲ್ಲಾ ವೀರ ಯೋಧರ ಸಾಹಸ, ತ್ಯಾಗ, ಬಲಿದಾನದಿಂದ ನಾವಿಂದು ವಿಜಯೋತ್ಸವ(Kargil Vijay Diwas) ಆಚರಿಸುತ್ತಿದ್ದೇವೆ. ಜುಲೈ 26 ಭಾರತಿಯರೆಲ್ಲರೂ ಹೆಮ್ಮೆ ಪಡುವ ದಿನ. ಕಾರ್ಗಿಲ್ ಗಿರಿಶ್ರೇಣಿಗಳ ಮೇಲೆ ಮೋಸದಿಂದ ಕಾಲಿಟ್ಟ ಶತ್ರು ರಾಷ್ಟ್ರ ಪಾಕಿಸ್ಥಾನವನ್ನು(Pakistan) 1999 ರ ಜುಲೈ 26ರಂದು ನಮ್ಮ ಸೈನಿಕರು ಎಡೆಮುರಿ ಕಟ್ಟಿದ್ದರು. “ಅಪರೇಷನ್ ವಿಜಯ”ಮೂಲಕ ಕಾರ್ಗಿಲ್ ಯುದ್ದ ಗೆದ್ದು ಬೀಗಿದ್ದು. ಶತ್ರು ಸೇನೆ ವಿರುದ್ಧ ಹೋರಾಡಿ ನಮ್ಮ ವೀರ ಯೋಧರು ಭಾರತಾಂಬೆಗೆ ವಿಜಯದ ತಿಲಕ ಇಟ್ಟಿದ್ದು.

ಕಾರ್ಗಿಲ್ ಯುದ್ಧ ನಡೆದದ್ದು ಏಕೆ?

ಒಟ್ಟು 150 ಕಿ.ಮೀ, ವ್ಯಾಪ್ತಿಯ ಸೀಮಿತ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವೇ ಕಾರ್ಗಿಲ್ ಯುದ್ಧ. ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿ ಮೈಕೊರೆಯುವ ಚಳಿ ಇರುತ್ತೆ. ಮೈನಸ್ ಡಿಗ್ರಿ ಚಳಿಯಲ್ಲಿ ನಮ್ಮ ವೀರ ಯೋಧರು ಗಡಿ ಕಾಯಬೇಕಾಗುತ್ತೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಆಯ ಬದಿಗಳಲ್ಲಿ ಕೆಲವು ಮುಂಚೂಣಿ ಶಿಬಿರಗಳನ್ನು ತೊರೆಯುವುದು, ಅತಿಕ್ರಮೇಣಕ್ಕೆ ದಾರಿಯಾಗದಂತೆ ಗಸ್ತನ್ನು ಕುಂಠಿತಗೊಳಿಸುವುದು ಪಾಕಿಸ್ತಾನ, ಭಾರತ ಎರಡೂ ಸೇನೆಗಳ ವಾಡಿಕೆ. ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ನೀಚ ಹಾಗೂ ಶಕುನಿಯಂತಹ ಕುತಂತ್ರ ಬುದ್ಧಿ ತೋರಿಸಿ ಭಾರತದ ಗಡಿ ನಿಯಂತ್ರಣ ರೇಖೆಯ ಬದಿಯಲ್ಲಿರುವ ಶಿಬಿರಗಳ ಮೇಲೆ ಆಕ್ರಮಣಕ್ಕೆ ತನ್ನ ಪಡೆಗಳನ್ನು ಕಳಿಸಿತ್ತು. ಇದೇ ಕುತಂತ್ರ ಬುದ್ಧಿಯೇ ಭಾರತ-ಪಾಕ್ ಯುದ್ಧಕ್ಕೆ ನಾಂದಿಯಾಯಿತು.

ತನ್ನ ನರಿ ಬುದ್ದಿ ತೋರಿಸಿದ ಪಾಕಿಸ್ತಾನ

1974ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಪೋಖ್ರಾನ್ ಅಣ್ವಸ್ತ್ರ ಪ್ರಯೋಗಿಸಿ ಸೈ ಎನಿಸಿಕೊಂಡಿತ್ತು. ಇದಾದ ಕೇವಲ 15 ದಿನಗಳಲ್ಲಿ ಪಾಕಿಸ್ತಾನ ಕೂಡಾ ಪೈಪೋಟಿಗೆಂಬಂತೆ ಅಣು ಪರೀಕ್ಷೆ ನಡೆಸಿತು. ಈ ಪರಿಣಾಮ ಜಗತ್ತಿನ ಇತರೆ ರಾಷ್ಟ್ರಗಳು ಭಾರತ ಮತ್ತು ಪಾಕಿಸ್ತಾನದ ಮೇಲೆ ನಿರ್ಬಂಧ ಹೇರಿದವು. ಈ ವೇಳೆ ಭಾರತ ಹಿರಿಯಣ್ಣನಾಗಿ, ಪಾಕಿಸ್ತಾನಕ್ಕೆ ಸ್ನೇಹದ ಕೈ ಚಾಚಿತು. ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು, ಭಾರತ ಎಂದೂ ಯುದ್ಧ, ಜಗಳ, ಗಡಿ ಕ್ಯಾತೆಯನ್ನು ಪ್ರಚೋದಿಸುವುದಿಲ್ಲ ಎಂದು ಪಾಕಿಸ್ತಾನನೊಂದಿಗೆ ಸ್ನೇಹ ಬೆಳೆಸಲು ಮುಂದಾದ್ರು. ಎರಡೂ ದೇಶಗಳ ಗಡಿಯಿಂದ ಸಂಚಾರ ಶುರು ಮಾಡುವ ನಿಟ್ಟಿನಲ್ಲಿ 1999ರ ಫೆಬ್ರವರಿ 20ರಂದು ಭಾರತದಿಂದ ಪಾಕಿಸ್ತಾನಕ್ಕೆ ಬಸ್​​ನ್ನು ಕಳಿಸಲಾಯಿತು. ಎರಡೂ ದೇಶಗಳ ವೈಮನಸ್ಸು ಶಮನ ಮಾಡುವ ಐತಿಹಾಸಿಕ ನಡೆ ಇದಾಗಿತ್ತು. ಅಲ್ಲದೆ ಸ್ವತಃ ಪ್ರಧಾನಿ ವಾಜಪೇಯಿ ಪಾಕಿಸ್ತಾನಕ್ಕೆ ತೆರಳಿದರು. ಲಾಹೋರ್ ಘೋಷಣೆಗೆ ವಾಜಪೇಯಿ ಹಾಗೂ ಪಾಕಿಸ್ತಾನ ಅಧ್ಯಕ್ಷ ನವಾಜ್ ಷರೀಫ್ ಸಹಿ ಮಾಡಿದರು. ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗುವಂತೆ ಮತ್ತು ಜಮ್ಮು ಕಾಶ್ಮೀರದ ಸಮಸ್ಯೆಗಳನ್ನು ಮಾತುಕತೆ ಹಾಗೂ ಉಗ್ರರನ್ನು ಹೊರಗಿಟ್ಟು ಬಗೆಹರಿಸಿಕೊಳ್ಳುವಂತೆ ಒಬ್ಬರಿಗೊಬ್ಬರು ಭರವಸೆಯನ್ನು ನೀಡಿಕೊಂಡರು.

ಇಷ್ಟೆಲ್ಲ ಆದ ಮೇಲೂ ಪಾಕ್ ತನ್ನ ಕುತಂತ್ರ ಬುದ್ದಿಯನ್ನು ತೋರಿಸಿಯೇ ಬಿಟ್ಟಿತ್ತು. ಎರಡೂ ದೇಶಗಳು ಮಾಡಿಕೊಂಡಿದ್ದ ಒಪ್ಪಂದವನ್ನು ಗಾಳಿಗೆ ತೂರಿ ಲಾಹೋರ್ ಒಪ್ಪಂದಕ್ಕೆ ಅಂಕಿತ ಬಿದ್ದ ಐದೇ ವಾರಗಳಲ್ಲಿ ಅಂದರೆ 1999 ಮಾರ್ಚ್ 28ರ ವೇಳೆಗೆ ಕಾರ್ಗಿಲ್ ಬೆಟ್ಟಗಳತ್ತ ಪಾಕಿಸ್ತಾನಿ ಸೇನೆ ದಾಳಿಗೆಂದು ಸನ್ನದ್ಧವಾಯಿತು. 1948, 1965, 1971ರ ಮೂರು ಯುದ್ಧಗಳಲ್ಲಿ ಭಾರತದೊಂದಿಗೆ ಆದ ಸೋಲಿನ ಸೇಡು ತಿರಿಸಿಕೊಳ್ಳುವ ಸಲುವಾಗಿ ಮಾನವೀಯತೆ, ಶಾಂತಿ, ಸ್ನೇಹ ಎಲ್ಲಾ ಮರೆತು ದ್ರಾಸ್, ಕಾರ್ಗಿಲ್ ಪರ್ವತ ಶಿಖರಗಳನ್ನು ಆಕ್ರಮಿಸಲು ಆರಂಭಿಸಿತು. ಪಾಕ್ ಸೈನ್ಯ, ಉಗ್ರ ಸಂಘಟನೆ ಸೇರಿಕೊಂಡು ಯೋಜನೆಗಳನ್ನು ರೂಪಿಸಿದ್ದವು. ಅಲ್ಲದೆ ಭಾರತದ ಸೇನೆಯ ದಿಕ್ಕು ತಪ್ಪಿಸಲು ಪಾಕ್ ಆಕ್ರಮಿತ ಜಿಲ್ಲೆಗಳಾದ ಅಜ್ಜರಿ, ಪೂಂಚ್, ಗಂದರ್ಬಾಲ್, ಶ್ರೀನಗರ ಹೊರವಲಯ, ಅನಂತನಾಗ್​​ಗಳಲ್ಲಿ ಭಯೋತ್ಪಾದಕ ಕೃತ್ಯ ಆರಂಭವಾಯಿತು. ಇತ್ತ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಭಾರತ ಇದ್ದಾಗ, ಅತ್ತ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫರ್ವೇಜ್ ಮುಷರ್ರಫ್ ತಡಮಾಡದೆ ‘ಆಪರೇಷನ್ ಬಿದ್’ಗೆ ಚಾಲನೆ ನೀಡಿದರು. ಈ ವಿಚಾರ ಭಾರತಕ್ಕೆ ತಿಳಿಯುವ ಮುನ್ನ ಎತ್ತರದ ಆಯಕಟ್ಟಿನ ಶಿಖರಗಳನ್ನು ವಶಪಡಿಸಿಕೊಳ್ಳುವುದೇ ಈ ಯೋಜನೆಯ ಗುರಿಯಾಗಿತ್ತು. ಮೇ 8ರ ಹೊತ್ತಿಗೆ ಪಾಕ್ ಸೈನ್ಯ ಗುಡ್ಡಗಳನ್ನು ಆಕ್ರಮಿಸಿಕೊಂಡಿತು.

kargil

ಕಾರ್ಗಿಲ್ (ಸಂಗ್ರಹ ಚಿತ್ರ)

ಪಾಕ್ ಸೈನಿಕರು ಅಂತಾರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ನುಸುಳಿರುವ ಬಗ್ಗೆ ಸ್ಥಳೀಯ ಕುರಿಗಾಹಿಗಳು ಭಾರತೀಯ ಸೇನೆಗೆ ಮಾಹಿತಿ ನೀಡಿದರು. ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್​ಗಳ ಮುಖಾಂತರ ಸಿಯಾಚಿನ್ ಗಡಿವರೆಗೂ ನುಸುಳುವಿಕೆಗೆ ಪ್ರಯತ್ನಗಳು ಮುಂದುವರಿದವು. ಇನ್ನು ಇತ್ತ ಭಾರತೀಯ ಸೇನೆ ಜಾಟ್ ರೆಜಿಮೆಂಟ್ನ ಕ್ಯಾಪ್ಟನ್ ಸೌರಭ್ ಕಾಲಿಯಾರನ್ನು 6 ಜನರ ತಂಡದೊಂದಿಗೆ ‘ಬಜರಂಗ್’ ಪೋಸ್ಟಿನತ್ತ ಕಳಿಸಿತು. ಅಲ್ಲಿ ಶತ್ರುಗಳಿರುವುದು ಖಾತ್ರಿಯಾಗಿ ತಂಡ ಕದನಕ್ಕಿಳಿಯಿತು. ಶತ್ರುಗಳ ಸಂಖ್ಯೆಯನ್ನು ಅಂದಾಜಿಸಲು ಎಡವಿದ್ದ ನಮ್ಮ ತಂಡ ಸೆರೆ ಸಿಕ್ಕಿತು. ಪಾಕ್ ಪಾಪಿ ಸೇನೆ, ಅವರನ್ನು ಚಿತ್ರವಿಚಿತ್ರವಾಗಿ ಹಿಂಸಿಸಿ 22 ದಿನಗಳ ಸೆರೆಯ ನಂತರ ಕೊಲ್ಲಲಾಯಿತು.

ಈ ಕೃತ್ಯದ ಬಳಿಕ ಪಾಪಿ ಪಾಕ್​ಗೆ ತನ್ನ ಪಾಠ ಕಳಿಸಲೇ ಬೇಕೆಂದು ಮೇ 24ರಂದು ರಕ್ಷಣಾ ಸಚಿವರು, ವಿದೇಶಾಂಗ ಸಚಿವರು, ಐಬಿ, ಗುಪ್ತಚರ ಇಲಾಖೆ ‘ರಾ’ ಮತ್ತು ಮೂರೂ ಸೇನೆಯ ಮುಖ್ಯಸ್ಥರು ಸೇರಿಸಿ ಮಹತ್ವದ ಸಭೆ ನಡೆಸಿದ್ರು. ಆಗ ಭಾರತ ಸೇನೆಯ ಜನರಲ್ ಮಲಿಕ್ “ಮೂರೂ ವಿಭಾಗಗಳ ಸೇನೆ ಒಟ್ಟಿಗೆ ದಾಳಿ ಮಾಡಿದರಷ್ಟೇ ಪರಿಹಾರ ಸಿಗೋದು. ಅನುಮತಿ ಕೊಡಿ’ ಎಂದು ಪ್ರಧಾನಿಗೆ ಒಪ್ಪಿಸಿದರು. ಇದಕ್ಕೆ ಒಪ್ಪಿದ ಪ್ರಧಾನಿ ಸೇನೆಗೆ ಪೂರ್ಣ ಸ್ವತಂತ್ರ ನೀಡಿದ್ರು. ‘ಆಪರೇಷನ್ ವಿಜಯ್’ ಮೂಲಕ ಮೇ ತಿಂಗಳ ಆರಂಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಪ್ರತ್ಯುತ್ತರದ ಯುದ್ಧ ಶುರುವಾಯಿತು. ದಾಳಿ-ಪ್ರತಿದಾಳಿಗಳು ನಡೆದವು. ವಿಮಾನ, ಹೆಲಿಕಾಪ್ಟರ್​ಗಳ ಹಾರಾಟ, ಗ್ರೇನೆಡ್, ಮೊರ್ಟಾರ್ ಸಿಡಿತ, ರಾಷ್ಟ್ರಕ್ಕಾಗಿ ಪ್ರಾಣಕೊಡುವ ಸೈನಿಕನ ತುಡಿತ ಎಲ್ಲವೂ ಜೋರಾಯಿತು. ಭಾರತೀಯ ಸೇನೆ ಪಾಕಿಸ್ತಾನದಿಂದ ತೋಲೋಲಿಂಗ್, ಟೈಗರ್ ಹಿಲ್, ಪಾಯಿಂಟ್ 5140, 4700, 5100, ಲೋನ್ ಹಿಲ್ ಸೇರಿದಂತೆ ಹಲವಾರು ಗುಡ್ಡ ಪ್ರದೇಶಗಳನ್ನು ಜುಲೈ 15-20ರ ಹೊತ್ತಿಗೆ ವಶಪಡಿಸಿಕೊಂಡಿತು.

ಪಾಪಿ ಪಾಕಿಸ್ತಾನಕ್ಕೆ ಸೋಲುಣಿಸಿ, ವಿಜಯದ ಪತಾಕೆ ಹಾರಿಸಿದ ಭಾರತ

ಸರಿ ಸುಮಾರು 3 ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ ಸುಮಾರು 527 ಯೋಧರ ಬಲಿದಾನದ ಬಳಿಕ 1999ರ ಜುಲೈ 26ರಂದು ಇಡೀ ಭಾರತ “ಆಪರೇಷನ್ ವಿಜಯ್’ನ ಸಂಭ್ರಮಾಚರಣೆ ಮಾಡಿತು. ಎಲ್ಲಾ ಪೋಸ್ಟ್ ಹಾಗೂ ಶಿಖರಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿತು. ಇನ್ನು ಕಾರ್ಗಿಲ್ ಯುದ್ದದಲ್ಲಿ ಭಾರತೀಯ ಮಾಧ್ಯಮಗಳ ಪಾತ್ರ ಹೆಚ್ಚಿದೆ. ಆ ಕಾಲದಲ್ಲೇ ವಿಶ್ವದಲ್ಲೇ ಮೊದಲು ಎಂಬಂತೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಅಪ್ಲೇಟ್ಸ್, ನೇರ ಪ್ರಸಾರದ ದೃಶ್ಯಗಳನ್ನು ದೇಶದ ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡಿದವು. ಮೊಟ್ಟ ಮೊದಲ ಬಾರಿಗೆ ನಿಖರವಾದ ವರದಿಗಳು, ಲೈವ್ ದೂರದರ್ಶನದಲ್ಲಿ ಪ್ರಸಾರವಾಯಿತು. ಅನೇಕ ಟಿವಿ ಪತ್ರಿಕೆಗಳ ವರದಿಗಾರರು ಕಾರ್ಗಿಲ್ ಗೌಂಡ್ ರಿಪೋರ್ಟಿಂಗ್ ಮಾಡಲು ಮುಂದಾಗಿದ್ದರು.

ಕಾರ್ಗಿಲ್ ನೆನಪಿಗಾಗಿ ದ್ರಾಸ್​ನಲ್ಲಿ ಸ್ಮಾರಕ ನಿರ್ಮಾಣ

ಇನ್ನು ಯುದ್ಧದಲ್ಲಿ ಹೋರಾಡಿದ ಯೋಧರ ನೆನಪಿಗಾಗಿ ಭಾರತೀಯ ಸೇನೆ ದ್ರಾಸ್ ಪಟ್ಟಣದಲ್ಲಿ ಸ್ಮಾರಕ ನಿರ್ಮಿಸಿದೆ. ಸ್ಮಾರಕದ ಗೋಡೆಗಳನ್ನು ಗುಲಾಬಿ ಬಣ್ಣದ ಕಲ್ಲುಗಳಿಂದ ಕಟ್ಟಲಾಗಿದೆ. ಇದು ಹಿತ್ತಾಳೆ ತಟ್ಟೆ ಹೊಂದಿದ್ದು, ಇದರಲ್ಲಿ “ಆಪ ರೇಷನ್ ವಿಜಯ್ ಸಂದರ್ಭ ಹುತಾತ್ಮರಾದ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಅಲ್ಲದೆ ಮರಣೋತ್ತರ ಪರಮ ವೀರ ಚಕ್ರ ಪ್ರಶಸ್ತಿ ಪಡೆದ ಕ್ಯಾಪ್ಟನ್ ಮನೋಜ್ ಪಾಂಡೆ ಅವರ ಗ್ಯಾಲರಿಯೂ ಇಲ್ಲಿದೆ.

ದ್ರಾಸ್ ಸ್ಮಾರಕದ ಸಮೀಪವೇ ಇದೆ ಯುದ್ಧ ನೆನಪಿಸುವ ಮ್ಯೂಸಿಯಂ

ದ್ರಾಸ್ ಸ್ಮಾರಕದ ಸಮೀಪವೇ ವೀಕ್ಷಿಸಲು ಮ್ಯೂಸಿಯಂ ಮಾಡಲಾಗಿದೆ. ಅದರಲ್ಲಿ ಹುತಾತ್ಮರಾದ ಭಾರತೀಯ ಯೋಧರ ಭಾವಚಿತ್ರ, ಯುದ್ಧಕ್ಕೆ ಸಂಬಂಧ ಪಟ್ಟ ದಾಖಲೆಗಳು, ಯುದ್ಧ ಸಂದರ್ಭ ಪಾಕ್ ಪಡೆಗಳಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳನ್ನು ಸಂರಕ್ಷಿಸಿಡಲಾಗಿದೆ. ಕಾರ್ಗಿಲ್ ಕದನವನ್ನು ನಮ್ಮ ಸೇನೆ ಹೇಗೆ ಎದುರಿಸಿತು ಎನ್ನುವುದರ ಸಮಗ್ರ ಮಾಹಿತಿಯೂ ಪ್ರವಾಸಿಗರಿಗೆ ಇಲ್ಲಿ ಲಭ್ಯವಾಗುತ್ತೆ. ಹಾಗೂ ಯುದ್ಧದ ಕುರಿತಾದ ಸಾಕ್ಷ್ಯ ಚಿತ್ರವನ್ನೂ ಪ್ರದರ್ಶಿಸಲಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada