ಕೋವಿಡ್ ಲಾಕ್​​ಡೌನ್​​ ವೇಳೆ ತಾನೇ ನಿರ್ಮಿಸಿದ್ದ ವಿಮಾನದಲ್ಲಿ ಕುಟುಂಬದ ಜತೆ ಯುರೋಪ್ ಸುತ್ತಿದ ಕೇರಳದ ವ್ಯಕ್ತಿ

ಕೇರಳದ ಆಲಪ್ಪುಳ ಜಿಲ್ಲೆಯ ಆಶೋಕ್ ನಾಲ್ಕು ಸೀಟುಗಳಿರುವ ಈ ವಿಮಾನ ನಿರ್ಮಿಸಲು ತೆಗೆದುಕೊಂಡ ಸಮಯ ಸುಮಾರು 18 ತಿಂಗಳು. ಸ್ಲಿಂಗ್ ಟಿಎಸ್ಐ ನಾಲ್ಕು ಸೀಟಿನ ಈ ವಿಮಾನದ ಮಾದರಿಗೆ ಜಿ-ದಿಯಾ ಎಂದು ಹೆಸರಿಡಲಾಗಿದೆ.

ಕೋವಿಡ್ ಲಾಕ್​​ಡೌನ್​​ ವೇಳೆ ತಾನೇ ನಿರ್ಮಿಸಿದ್ದ ವಿಮಾನದಲ್ಲಿ ಕುಟುಂಬದ ಜತೆ ಯುರೋಪ್ ಸುತ್ತಿದ ಕೇರಳದ ವ್ಯಕ್ತಿ
ಕುಟುಂಬದೊಂದಿಗೆ ಅಶೋಕ್ ಅಲಿಸೇರಿಲ್ ತಾಮರಾಕ್ಷನ್Image Credit source: Facebook
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 27, 2022 | 1:24 PM

ಲಂಡನ್: ಕೋವಿಡ್ ಸಾಂಕ್ರಾಮಿಕದ (Covid  pandemic)  ಹೊತ್ತಲ್ಲಿ ಅನುಭವಿಸಿದ ನಷ್ಟದಿಂದ ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳುತ್ತಿರುವ ಈ ಹೊತ್ತಲ್ಲಿ ಕೇರಳದ (Kerala) ವ್ಯಕ್ತಿಯೊಬ್ಬರು ತಾನೇ ನಿರ್ಮಿಸಿದ ವಿಮಾನದಲ್ಲಿ ಯುರೋಪ್ ಸುತ್ತಿದ್ದಾರೆ. ಲಂಡನ್​​ನಲ್ಲಿ ವಾಸವಾಗಿರುವ ಕೇರಳ ಮೂಲದ ಅಶೋಕ್ ಅಲಿಸೇರಿಲ್ ತಾಮರಾಕ್ಷನ್ ಎಂಬ ವ್ಯಕ್ತಿ ಕೋವಿಡ್ ಲಾಕ್​​ಡೌನ್ ಹೊತ್ತಲ್ಲಿ ಈ ವಿಮಾನ (Plane) ನಿರ್ಮಾಣ ಮಾಡಿದ್ದರು. ಕೇರಳದ ಆಲಪ್ಪುಳ ಜಿಲ್ಲೆಯ ಆಶೋಕ್ ನಾಲ್ಕು ಸೀಟುಗಳಿರುವ ಈ ವಿಮಾನ ನಿರ್ಮಿಸಲು ತೆಗೆದುಕೊಂಡ ಸಮಯ ಸುಮಾರು 18 ತಿಂಗಳು. ಸ್ಲಿಂಗ್ ಟಿಎಸ್ಐ ನಾಲ್ಕು ಸೀಟಿನ ಈ ವಿಮಾನದ ಮಾದರಿಗೆ ಜಿ-ದಿಯಾ ಎಂದು ಹೆಸರಿಡಲಾಗಿದೆ. ಅಶೋಕ್ ಅವರ ಕಿರಿ ಮಗಳ ಹೆಸರು ದಿಯಾ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಶೋಕ್ ತಾಮರಾಕ್ಷನ್ 2006ರಲ್ಲಿ ಸ್ನಾತಕೋತ್ತರ ಪದವಿ ಕಲಿಕೆಗಾಗಿ ಬ್ರಿಟನ್ ಗೆ ಹೋಗಿದ್ದು ಪ್ರಸ್ತುತ ಫೋರ್ಡ್ ಮೊಟಾರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಅಶೋಕ್ ಅಲಿಸೇರಿಲ್  ತಾಮರಾಕ್ಷನ್ ಕೇರಳದ ಮಾಜಿ ಶಾಸಕ ಎವಿ ತಾಮರಾಕ್ಷನ್ ಪುತ್ರ. ಪೈಲಟ್ ಲೈಸನ್ಸ್ ಹೊಂದಿರುವ ಅಶೋಕ್ ತಮ್ಮ ಕುಟುಂಬದೊಂದಿಗೆ ಈ ವಿಮಾನದಲ್ಲಿ ಜರ್ಮನಿ, ಆಸ್ಟ್ರಿಯಾ ಮತ್ತು ಚೆಕ್ ರಿಪಬ್ಲಿಕ್ ಸುತ್ತಿದ್ದಾರೆ. ವಿಮಾನ ನಿರ್ಮಿಸಿದ್ದರ ಬಗ್ಗೆ ಮಾತನಾಡಿದ ಆಶೋಕ್, 2018ರಲ್ಲಿ ನಾನು ಪೈಲಟ್ ಲೈಸನ್ಸ್ ಪಡೆದ ನಂತರ ನಾನು ಎರಡು ಸೀಟುಗಳಿರುವ ಲಘು ವಿಮಾನಗಳನ್ನು ಬಾಡಿಗೆಗೆ ಪಡೆಯುತ್ತಿದ್ದೆ. ನಾನು ನನ್ನ ಹೆಂಡತಿ ಇಬ್ಬರು ಮಕ್ಕಳು ಇರುವಾಗ ನನಗೆ ನಾಲ್ಕು ಸೀಟುಗಳ ವಿಮಾನ ಬೇಕಿತ್ತು. ಅದು ತುಂಬಾ ಅಪರೂಪ. ಹಾಗೊಂದು ವೇಳೆ ಸಿಕ್ಕಿದರೂ ಅವುಗಳು ಹಳೇದಾಗಿರುತ್ತವೆ. ನಾಲ್ಕು ಸೀಟಿನ ವಿಮಾನ ಸಿಗದೇ ಇದ್ದಾಗ ಈ ಬಗ್ಗೆ ನಾನು ಹೆಚ್ಚಿನ ಮಾಹಿತಿ ಹುಡುಕಲು ಶುರು ಮಾಡಿದೆ. ಲಾಕ್ ಡೌನ್ ಹೊತ್ತಲ್ಲಿ ನಾನು ವಿಮಾನ ನಿರ್ಮಿಸುವುದು ಹೇಗೆ ಎಂಬುದನ್ನು ಕಲಿತೆ  ಎಂಬುದನ್ನು ಈ ರೀತಿ ವಿವರಿಸಿದ್ದಾರೆ.

ಸ್ವಂತ ವಿಮಾನವೊಂದನ್ನು ನಿರ್ಮಿಸಲು 38ರ ಹರೆಯದ ಅಶೋಕ್ ಜೊಹಾನ್ಸ್ ಬರ್ಗ್ ಮೂಲಕ ಸ್ಲಿಂಗ್ ಏರ್ ಕ್ರಾಫ್ಟ್ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದ್ದರು. ಪ್ರಸ್ತುತ ಕಂಪನಿ 2018ರಲ್ಲಿ ಸ್ಲಿಂಗ್ ಟಿಎಸ್ ಐ ಎಂಬ ಹೊಸ ವಿಮಾನವನ್ನು ಪರಿಚಯಿಸಿತ್ತು. ಫ್ಯಾಕ್ಟರಿಗೆ ಭೇಟಿ ನೀಡಿದ ನಂತರ ಅಶೋಕ್ ಅವರು ವಿಮಾನವನ್ನು ನಿರ್ಮಿಸಲು ಬೇಕಾಗಿರುವ ಕಿಟ್ ಗೆ ಆರ್ಡರ್ ಕೊಟ್ಟಿದ್ದರು. ಕೊವಿಡ್ ಲಾಕ್ ಡೌನ್ ವೇಳೆ ಸಿಕ್ಕಿದ ಸಮಯ ಮತ್ತು ಸಂಪಾದನೆ ಮಾಡಿದ್ದ ಹಣ ಎರಡನ್ನೂ ಬಳಸಿ ಆಶೋಕ್ ತಮ್ಮ ಕನಸಿನ ಯೋಜನೆಯನ್ನು ಪೂರೈಸಿದ್ದರು. ವಿಮಾನ ನಿರ್ಮಾಣಕ್ಕೆ ತಗಲಿದ ಖರ್ಚು 1.8 ಕೋಟಿ ಎಂದು ಅಂದಾಜಿಸಲಾಗಿದೆ.