Koovagam Festival: ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?

ತಮಿಳುನಾಡಿನ ಕೂವಾಗಂನಲ್ಲಿ ಅರವಾನ್‌ ಎಂಬ ಮಂಗಳಮುಖಿಯರ ವರ್ಷದ ಏಕೈಕ ಧಾರ್ಮಿಕ ವಿಶೇಷ ಆಚರಣೆ ನಡೆಯುತ್ತೆ. ಈ ಹಬ್ಬ ಹಿಂದೆ 18 ದಿನಗಳ ಕಾಲ ನಡೆಯುತ್ತಿತ್ತು. ಆದರೆ ಈಗ ಮೂರು ದಿನಕ್ಕೆ ಸೀಮಿತವಾಗಿದೆ. ಈ ಹಬ್ಬದ ಆಚರಣೆಯ ಕೊನೆಯ ದಿನ ಮಂಗಳಮುಖಿಯರಿಗೆ ಪೂಜಾರಿ ತಾಳಿ ಕಟ್ಟುತ್ತಾರೆ. ಅದೇ ದಿನ ಸಂಜೆ ತಾಳಿಯನ್ನು ತೆಗೆದು ವಿಧವೆ ಮಾಡಲಾಗುತ್ತೆ. ಈ ಹಬ್ಬದಲ್ಲಿ ಭಾಗವಹಿಸಲು ದೇಶ-ವಿದೇಶದಿಂದ ಮಂಗಳಮುಖಿಯರ ದಂಡೇ ಇಲ್ಲಿಗೆ ಹರಿದುಬರುತ್ತೆ.

Koovagam Festival: ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?
ಮದುವೆಯಾಗಿ ಅದೇ ದಿನ ವಿಧವೆಯರಾಗ್ತಾರೆ ಈ ಮಂಗಳಮುಖಿಯರು, ಏನಿದು ಸಂಪ್ರದಾಯ?
Follow us
ಆಯೇಷಾ ಬಾನು
|

Updated on: May 12, 2024 | 11:41 AM

ಇತ್ತ ಸಂಪೂರ್ಣ ಪುರುಷರೂ ಅಲ್ಲದೆ, ಸ್ತ್ರೀಯೂ ಅಲ್ಲದೆ ಅವಮಾನ, ತಿರಸ್ಕಾರ, ಸಮಾಜದಿಂದಲೇ ಪ್ರತ್ಯೇಕವಾಗಿ ಬದುಕುತ್ತಿರುವ ಮಂಗಳಮುಖಿಯರ ಜೀವನದ ಬಗ್ಗೆ ಯಾರೂ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆಚಾರ-ವಿಚಾರಗಳಲ್ಲಿ ಬಹಳಷ್ಟು ನಿಗೂಢತೆಯನ್ನು ಕಾಪಾಡಿಕೊಂಡು ಬಂದಿರುವ ಇವರ ಬಗ್ಗೆ ಜನರಲ್ಲಿ ಅನೇಕ ಗೊಂದಲ, ಕುತೂಹಲಗಳಿವೆ. ಸಾಕ್ಷಾತ್ ಪರಶಿವನ ಅವತಾರ ಎನ್ನಲಾಗುವ ಮಂಗಳಮುಖಿಯರನ್ನು ಸಮಾಜ ತೀರಾ ಹೀನಾಯವಾಗಿ ನಡೆಸಿಕೊಳ್ಳುತ್ತೆ. ನಪುಂಸಕ, ಚಕ್ಕ, ಕೋಜಾ, ಹಿಜ್ರಾ, ದ್ವಿಲಿಂಗಿ, ಶಿಖಂಡಿ ಹೀಗೆ ನಾನಾ ಹೆಸರುಗಳಿಂದ ಕರೆದು ಅವಮಾನಿಸುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಂದು ಸ್ಥಳದಲ್ಲಿ ಮಾತ್ರ ಮಂಗಳಮುಖಿಯರಿಗೆ ಯಾವುದೇ ನಿರ್ಬಂಧನೆಗಳು, ಕಟ್ಟುಪಾಡುಗಳಿರುವುದಿಲ್ಲ. ಹೆಣ್ಮಕ್ಕಳನ್ನೇ ಮೀರಿಸುವಂತೆ ಅಲಂಕಾರ ಮಾಡಿಕೊಂಡು ಜಪ್ಪಾಳೆ ತಟ್ಟುತ್ತ, ಹಾಡು ಹಾಡುತ್ತ ನಲಿದು ಕುಪ್ಪಳಿಸುತ್ತಾರೆ. ಮಾಂಗಲ್ಯ ಕಟ್ಟಿಸಿಕೊಂಡು ಮದುವೆಯಾಗಿ ಸಂಭ್ರಮಿಸುತ್ತಾರೆ. ಆದರೆ ಅದೇ ದಿನ ತಾಳಿ ಕಿತ್ತು ವಿಧವೆಯರಾಗಿ ಶೋಕದಲ್ಲಿ ಮುಳುಗಿ ಮಿಂದೇಳುತ್ತಾರೆ.

ಇಡೀ ಊರಲ್ಲಿ ಜಾತ್ರೆಯ ವಾತಾವರಣ ಕಳೆಗಟ್ಟಿರುತ್ತೆ. ತಮಟೆ, ವಾಲಗದ ಸದ್ದು ಮೇಲೈಸುತ್ತಿರುತ್ತೆ. ಬಣ್ಣ ಬಣ್ಣದ ಸೀರೆ ತೊಟ್ಟು ಡಜನ್ ಗಟ್ಟಲೆ ಬಳೆ, ಹೂ ಮುಡಿದು, ಕಣ್ಣನ್ನು ಕುಕ್ಕುವಂತೆ ಆಭರಣ ಧರಿಸಿ, ಕಣ್ಣಿಗೆ ಗೂಲಿಂಗ್ ಕ್ಲಾಸ್ ಹಾಕಿಕೊಂಡು ನಡು ಬೀದಿಯಲ್ಲೇ ಚಪ್ಪಾಳೆ ತಟ್ಟುತ್ತ ಹೆಜ್ಜೆ ಹಾಕುವ ಮಂಗಳಮುಖಿಯರು. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಈ ರೀತಿಯ ದೃಶ್ಯ ಕಾಣಲು ಸಿಗೋದು ತಮಿಳುನಾಡಿನ ಕೂವಾಗಂನಲ್ಲಿ.

koovagam Koothandavar Festival transgender get married and widow tamil nadu

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ 25 ಕಿ.ಮೀ ದೂರದಲ್ಲಿರುವ ಚಿಕ್ಕ ಗ್ರಾಮ ಕೂವಾಗಂ. ಈ ಗ್ರಾಮವನ್ನು ನಿದ್ದೆಯ ಊರು ಎಂದು ಕರೆಯಲಾಗುತ್ತೆ. ಈ ಗ್ರಾಮಕ್ಕೆ ಜೀವಕಳೆ ಬರುವುದೇ ಮಂಗಳಮುಖಿಯರ ಅರವಾನ್ ಹಬ್ಬ ಶುರುವಾದಾಗ. ಇಲ್ಲಿ ಮಂಗಳಮುಖಿಯರು ವರ್ಷದ ಏಕೈಕ ಧಾರ್ಮಿಕ ಹಬ್ಬ ಎನ್ನಲಾಗುವ ಅರವಾನ್‌ ಹಬ್ಬವನ್ನು ಆಚರಿಸುತ್ತಾರೆ. ಪ್ರತಿ ವರ್ಷ ತಮಿಳು ಕ್ಯಾಲೆಂಡರ್‌ನ ಚಿತಿರೈ (ಚಿತ್ರ) ತಿಂಗಳ ಹುಣ್ಣಿಮೆಯಂದು ಈ ಹಬ್ಬ ನಡೆಯುತ್ತೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೂತಂಡವರ್ ದೇವಸ್ಥಾನದಲ್ಲಿ ಮಂಗಳಮುಖಿ ಸಮುದಾಯದವರು ಒಟ್ಟಾಗಿ ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ.

ಈ ವರ್ಷ, ಏಪ್ರಿಲ್ 9 ರಂದು ಈ ಉತ್ಸವವನ್ನು ಆಚರಿಸಲಾಯಿತು. ಮುಂಬೈ, ದೆಹಲಿ, ಸಿಂಗಾಪುರ, ಮಲೇಷ್ಯಾ, ಅಮೆರಿಕಾ ಸೇರಿದಂತೆ ದೇಶ-ವಿದೇಶದಲ್ಲಿರುವ ಮಂಗಳಮುಖಿಯರು ವರ್ಷಕ್ಕೆ ಒಮ್ಮೆ ಈ ಉತ್ಸವದಲ್ಲಿ ಭಾಗಿಯಾಗಿ ಎಲ್ಲರೂ ಒಂದು ಕುಟುಂಬದಂತೆ ಬೆರೆತು ಸಂಭ್ರಮಿಸುತ್ತಾರೆ. ಈ ಹಿಂದೆ ಈ ಹಬ್ಬವನ್ನು 18 ದಿನಗಳ ಕಾಲ ಆಚರಿಸಲಾಗುತ್ತಿತ್ತು. ಆದರೆ ಈಗ ಕೇವಲ ಮೂರು ದಿನಕ್ಕೆ ಈ ಉತ್ಸವ ಸೀಮಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿರುವ ಅವ್ಯವಸ್ಥೆ. ಈ ಉತ್ಸವದ ವೇಳೆ ನಾನಾ ಭಾಗಗಳಿಂದ ಸಾವಿರಾರು ಮಂಗಳಮುಖಿಯರು ಕೂವಾಗಂ ಗ್ರಾಮಕ್ಕೆ ಬರುತ್ತಾರೆ. ಆದ್ರೆ ಇಲ್ಲಿ ಉಳಿದುಕೊಳ್ಳಲು ಸೂಕ್ತ ಸ್ಥಳ ಇಲ್ಲ. ಮೂಲಸೌಕರ್ಯವೇ ಇಲ್ಲ. ಹಾಗೂ ಅನೇಕ ಸಮಸ್ಯೆಗಳಿಂದಾಗಿ ಈ ಹಬ್ಬ ಮೂರು ದಿನಕ್ಕೆ ಸೀಮಿತವಾಗಿದೆ. 18 ದಿನಗಳ ಕಾಲ ಹಬ್ಬ ನಡೆದರೂ ಮೂರು ದಿನಗಳು ಮಾತ್ರ ವಿಜೃಂಬಣೆಯಿಂದ ನಡೆಯುತ್ತೆ.

View this post on Instagram

A post shared by Jayakumar (@rj_blossom)

ವರ್ಷ ಪೂರ್ತಿ ದುಡಿದು ಅರವಾನ್ ಹಬ್ಬದಲ್ಲಿ ಸಂಭ್ರಮಿಸುವ ಮಂಗಳಮುಖಿಯರು

ವರ್ಷ ಪೂರ್ತಿ ಟ್ರಾಫಿಕ್‌ನ ರೆಡ್‌ ಸಿಗ್ನಲ್, ಮೆಜೆಸ್ಟಿಕ್ ಬಸ್ ಸ್ಟಾಪ್​ಗಳಲ್ಲಿ ಕಾಣಸಿಗುವ ಮಂಗಳಮುಖಿಯರು ಅರವಾನ್ ಹಬ್ಬದ ಸಮಯದಲ್ಲಿ ತಮಿಳುನಾಡಿನತ್ತ ತೆರಳುತ್ತಾರೆ. ಹಬ್ಬಕ್ಕೆ ತೆರಳುವ ವಾರದ ಹಿಂದೆ ತಮ್ಮ ಇಡೀ ವರ್ಷದ ದುಡಿಮೆಯಲ್ಲಿ ಉಳಿದ ಬಂದಷ್ಟು ಭಾಗವನ್ನು ಅಲಂಕಾರ ವಸ್ತುಗಳಿಗೆ ಖರ್ಚು ಮಾಡುತ್ತಾರೆ. ಲೇಟೆಸ್ಟ್‌ ಟ್ರೆಂಡಿನ ಬಟ್ಟೆ, ಆಭರಣಗಳನ್ನು ಖರೀದಿಸುತ್ತಾರೆ.

koovagam Koothandavar Festival transgender get married and widow tamil nadu

ಬೆಳಗ್ಗೆ ಮದುವೆ ಸಂಜೆ ವಿಧವೆ

ಕೊವಾಗಂ ಹಬ್ಬದಲ್ಲಿ ಮಂಗಳಮುಖಿಯರು ತಮ್ಮ ಆರಾಧ್ಯ ದೇವರಾದ ಅರವಾನ್​ನನ್ನು ಮದುವೆಯಾಗುತ್ತಾರೆ. ಅರವಾನ್ ಹೆಸರಲ್ಲಿ ದೇವಸ್ಥಾನದ ಪೂಜಾರಿ ಮಂಗಳಮುಖಿಯರಿಗೆ ತಾಳಿ ಕಟ್ಟುತ್ತಾರೆ. ಈ ಹಬ್ಬದ 17ನೇ ದಿನ ಬಂದಷ್ಟು ಮಂಗಳಮುಖಿಯರು ಮದುಮಗಳಂತೆ ಅಲಂಕಾರ ಮಾಡಿಕೊಂಡು ಕೂತಂಡವರ್ ದೇವಾಲಯದ ಪೂಜಾರಿಯ ಕೈಯಿಂದ ತಾಳಿ ಕಟ್ಟಿಸಿಕೊಳ್ಳುತ್ತಾರೆ. ಬಳಿಕ ದೊಡ್ಡ ಮಟ್ಟದಲ್ಲಿ ಅರವಾನ್ ದೇವರ ಮೆರವಣಿಗೆ ಮಾಡಲಾಗುತ್ತೆ. ಸಿಹಿ ಊಟ, ನೃತ್ಯ ಸೇರಿದಂತೆ ಮದುವೆಯ ಸಂಭ್ರಮದಲ್ಲಿ  ಇಡೀ ಊರು ಸಂಭ್ರಮಿಸುತ್ತೆ. ಈ ಮೇಳೆ ಸೆಕ್ಸ್ ವರ್ಕ್ ಕೂಡ ನಡೆಯುತ್ತೆ. ಕೆಲವು ಎನ್​ಜಿಒಗಳು ಹೆಚ್‌ಐವಿ, ಏಡ್ಸ್‌ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಆಯೋಜಿಸುತ್ತವೆ.

koovagam Koothandavar Festival transgender get married and widow tamil nadu

ಬೆಳಗ್ಗೆ ಮದುವೆಯ ಸಂಭ್ರಮದಲ್ಲಿ ಮಿಂದೇಳುವ ಮಂಗಳಮುಖಿಯರಿಗೆ ಸಂಜೆ ಆಗುತ್ತಿದ್ದಂತೆ ಸೂತಕದ ಛಾಯೆ ಆವರಿಸುತ್ತೆ. ಸಂಜೆ ಮಂಗಳಮುಖಿಯರ ತಾಳಿಯನ್ನು ಕಿತ್ತು, ಕುಂಕುಮ ಅಳಿಸಿ, ಬಳೆಗಳನ್ನು ಒಡೆದು ಹಾಕಲಾಗುತ್ತೆ. ಮಂಗಳಮುಖಿಯರು ತಮ್ಮ ಗಂಡ ಸತ್ತನೆಂದು ಕಣ್ಣೀರು ಹಾಕುತ್ತಾ ವಿಧವೆಯರಾಗುತ್ತಾರೆ. ಶೋಕದಲ್ಲಿ ಮುಳುಗುತ್ತಾರೆ. ಸಾಕೆನ್ನಿಸುವಷ್ಟು ಕಣ್ಣೀರು ಸುರಿಸಿ ಹಗುರಾಗುತ್ತಾರೆ. ಒಬ್ಬರನೊಬ್ಬರು ಸಮಾಧಾನ ಮಾಡಿಕೊಂಡು ಇವತ್ತು ನನ್ನ ಈ ವರ್ಷದ ಸಂಭ್ರಮ ಮುಗೀತು. ಇನ್ನು ನಾನು ಮತ್ತೆ ಅದೇ ಹೀನಾಯ ಬದುಕು ನಡೆಸಬೇಕೆಂದು ಕಣ್ಣೀರು ಸುರಿಸಿ ಹಬ್ಬದ ಸಂಭ್ರಮಕ್ಕೆ ತೆರೆ ಎಳೆಯುತ್ತಾರೆ.

ಯಾರು ಈ ಅರವಾನ್?

ಅರ್ಜುನ ಮತ್ತು ನಾಗಕನ್ಯೆ ಚಿತ್ರಾಂಗದಾಗೆ ಜನಿಸಿದವನು ಅರವಾನ್‌. ಕುರುಕ್ಷೇತ್ರ ಯುದ್ಧವನ್ನು ಗೆಲ್ಲಲು ಪಾಂಡವರು ಕಾಳಿ ಮಾತೆಗೆ ಅರವಾನ್‌ನನ್ನು ಬಲಿ ಕೊಡಲು ನಿರ್ಧರಿಸುತ್ತಾರೆ. ಆದರೆ, ‘ಬ್ರಹ್ಮಚಾರಿಯಾಗಿ, ಆಸೆಗಳನ್ನು ಎದೆಯಲ್ಲಿಟ್ಟುಕೊಂಡು ಜೀವ ತ್ಯಾಗ ಮಾಡಲಾರೆ’ ಎಂದು ಅರವಾನ್‌ ತನ್ನ ಮನದ ಬಯಕೆಯನ್ನು ಹೊರ ಹಾಕುತ್ತಾನೆ. ಇದಕ್ಕೆ ಏನು ಪರಿಹಾರ ಎಂದು ತಲೆ ಕೆಡಿಸಿಕೊಂಡ ಪಾಂಡವರಿಗೆ, ನಾನು ಶಾಸ್ತ್ರಕ್ಕೆ ಅಂತ ಒಂದು ಮದುವೆ ಆಗಬೇಕು. ಒಂದು ರಾತ್ರಿ ಹೆಣ್ಣಿನೊಂದಿಗೆ ಸುಖಿಸಬೇಕು ಎಂದು ಅರವಾನ್ ಹೇಳುತ್ತಾನೆ.

koovagam Koothandavar Festival transgender get married and widow tamil nadu

ಅರವಾನ್ ಬಯಕೆಯನ್ನು ಈಡೇರಿಸಲು ಮುಂದಾದ ಪಾಂಡವರಿಗೆ ಮದುವೆ ಹೆಣ್ಣು ಸಿಗುವುದಿಲ್ಲ. ನಾಳೆಯೇ ಸಾಯುತ್ತಾನೆ ಎಂದಾದರೆ ಆತನನ್ನು ಯಾವ ಹೆಣ್ಣಾದರೂ ಮದುವೆಯಾಗುತ್ತಾಳಾ? ಒಂದು ರಾತ್ರಿಯ ಸುಖಕ್ಕಾಗಿ ಬಾಳನ್ನೇ ಸಮರ್ಪಿಸುವ ಹೆಣ್ಣು ಇದ್ದಾಳಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಅದರಂತೆಯೇ ಅರವಾನ್​ನನ್ನು ಮದುವೆಯಾಗಲು ಯಾವ ಹೆಣ್ಣು ಕೂಡ ಮುಂದೆ ಬರುವುದಿಲ್ಲ. ಆದರೆ, ಅರವಾನ್‌ನ ಮನಸ್ಸಿಗೆ ಬೇಸರಪಡಿಸಲು ಅರ್ಜುನನಿಗೆ ಇಷ್ಟವಿರಲಿಲ್ಲ. ಹೀಗಾಗಿ ಸ್ವತಃ ಅರ್ಜುನನು ಸ್ತ್ರೀ ಅವತಾರ ತಾಳಿ, ಅರವಾನ್‌ನನ್ನು ಮದುವೆ ಆಗುತ್ತಾನೆ. ರಾತ್ರಿಯಿಡೀ ಅವನನ್ನು ಸುಖಿಸುತ್ತಾನೆ. ಮರುದಿನ ಅರವಾನ್‌ನ ಶಿರಚ್ಛೇದವಾಗುತ್ತೆ. ಈ ಪುರಾಣ ಕತೆಯಂತೆ ಅರವಾನ್ ಮಂಗಳಮುಖಿಯರ ಮೂಲಪುರುಷ.

‘ಮದುವೆ ಒಂದು ತಪಸ್ಸು. ಅದು ಮೋಕ್ಷಕ್ಕೆ ಇರುವ ಮಾರ್ಗ’ ಎನ್ನುವುದು ಅರವಾನ್‌ನ ಕೊನೆಯ ಮಾತು. ಇಲ್ಲಿಗೆ ಬರುವ ಲಕ್ಷ ಲಕ್ಷ ಮಂಗಳಮುಖಿಯರ ಕಿವಿಯಲ್ಲಿ ಇದೇ ಮೊಳಗುತ್ತಿರುತ್ತದೆ. ಬರುವ ಎಲ್ಲರೂ ಮದುವೆ ಮಂಟಪಕ್ಕೆ ಕಾಲಿಡುವ ವಧುವಿನಂತೆ ಸಿಂಗಾರ ಮಾಡಿಕೊಂಡು ಬಂದಿರುತ್ತಾರೆ. ಒಂದು ದಿನದ ಮಟ್ಟಿಗೆ ಮದುವೆ ಆಗುತ್ತಾರೆ. ಪತಿ ಕಳೆದುಕೊಂಡ ಸ್ತ್ರೀರೂಪಿ ಅರ್ಜುನ, ಹೇಗೆ ವಿಧವೆ ಪಟ್ಟ ಹೊತ್ತು, ಸಂಪ್ರದಾಯ ಆಚರಿಸಿಕೊಳ್ಳುವನೋ ಅದೇ ರೀತಿ ಇಲ್ಲಿ ಮಂಗಳಮುಖಿಯರು ಬಿಳಿ ಸೀರೆ ಉಟ್ಟು ದುಃಖದ ಮಡುವಿನಲ್ಲಿ ಮರಗುತ್ತಾರೆ. ಮಂಗಳಮುಖಿ ಆದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಕನಿಷ್ಠ ಒಮ್ಮೆಯಾದರೂ ಆಚರಿಸಿಕೊಳ್ಳಬೇಕಾದ ಪದ್ಧತಿ ಇದು.

ಇಲ್ಲಿ ನಡೆಯುತ್ತೆ ಮಿಸ್ ಕೂವಾಗಂ ಟ್ರಾನ್ಸ್‌ಜೆಂಡರ್ ಸ್ಪರ್ಧೆ

ಇನ್ನು ಮೂರು ದಿನಗಳ ಕಾಲ ನಡೆಯುವ ಈ ಹಬ್ಬದ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಮಿಸ್ ಕೂವಾಗಂ ಟ್ರಾನ್ಸ್‌ಜೆಂಡರ್ ಸೌಂದರ್ಯ ಸ್ಪರ್ಧೆ, ಫ್ಯಾಶನ್‌ ಶೋ, ಮನರಂಜನಾ ಕಾರ್ಯಕ್ರಮಗಳು ನಡೆಯುತ್ತವೆ. ರಾಜಕಾರಣಿಗಳು, ಗಣ್ಯರನ್ನು ಆಹ್ವಾನಿಸಲಾಗುತ್ತೆ. ಆಕರ್ಷಕ ರೂಪರಾಶಿ ಇದ್ದ ಒಬ್ಬರನ್ನು ಆರಿಸಿ, ಮಿಸ್‌ ಕೂವಗಂ’ ಕಿರೀಟ ತೊಡಿಸಲಾಗುತ್ತೆ.

ತಮಿಳುನಾಡು ಸಮಾಜ ಕಲ್ಯಾಣ ನಿರ್ದೇಶನಾಲಯದೊಂದಿಗೆ ಸೌತ್ ಇಂಡಿಯಾ ಟ್ರಾನ್ಸ್‌ಜೆಂಡರ್ಸ್ ಫೆಡರೇಶನ್ ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತೆ. ಈ ಸೌಂದರ್ಯ ಸ್ಪರ್ಧೆಗೆ ದೇಶದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಮಂಗಳಮುಖಿಯರು ಹೆಸರನ್ನು ನೊಂದಾಯಿಸಿ ಭಾಗವಹಿಸುತ್ತಾರೆ. ಈ ವರ್ಷ ರಿಯಾ ಎಂಬುವವರು ಮಿಸ್‌ ಕೂವಗಂನ ವಿಜೇತರಾಗಿದ್ದಾರೆ. ಕೊಯಮತ್ತೂರಿನ ಮೇಘಾ ಎರಡನೇ ಸ್ಥಾನ ಪಡೆದ್ರು. ಇನ್ನು ಚೆನ್ನೈನ ಇವಾಂಜೆಲಿನ್ ಜಾನ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ವಿಜೇತರಿಗೆ ಸೌತ್ ಇಂಡಿಯಾ ಟ್ರಾನ್ಸ್‌ಜೆಂಡರ್ಸ್ ಫೆಡರೇಶನ್ ಅಧ್ಯಕ್ಷ ಪಿ ಮೋಹನಾಂಬಾಳ್ ಕಿರೀಟ ತೊಡಿಸಿದ್ದಾರೆ.

koovagam Koothandavar Festival transgender get married and widow tamil nadu

ಎಲ್ಲಾ ತೃತೀಯಲಿಂಗಿಗಳು ಶಿಕ್ಷಣ ಪಡೆಯಬೇಕು. ಚೆನ್ನಾಗಿ ಓದಿದರೆ ಒಳ್ಳೆಯ ಕೆಲಸ ಸಿಗಬಹುದು. ಎಲ್ಲಾ ಜನರು ತೃತೀಯಲಿಂಗಿಗಳನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಮಂಗಳಮುಖಿ ಸಾಕ್ಷಿ ತಮ್ಮ ಅಭಿಲಾಷೆಯನ್ನು ಹಂಚಿಕೊಂಡಿದ್ದಾರೆ.

ಕೂವಾಗಂ ಎನ್ನುವುದು ನಮ್ಮ ಪಾಲಿಗೆ ಸ್ವರ್ಗ. ಇಲ್ಲಿ ನಮಗೆ ಸ್ವಾತಂತ್ರ ಇರುತ್ತೆ. ಇಷ್ಟ ಬಂದ ಸೀರೆ ಉಟ್ಟರೆ ಯಾರೂ ಆಡಿಕೊಳ್ಳುವುದಿಲ್ಲ. ಮೇಕಪ್‌ ಮಾಡಿಕೊಂಡರೆ, ಬೇರಾರೂ ಮುಸಿಮುಸಿ ನಕ್ಕು ಗೇಲಿ ಮಾಡುವುದಿಲ್ಲ. ಬಯಸಿದ ಜ್ಯುವೆಲ್‌ ಧರಿಸಿ, ರೂಪಾಲಂಕಾರದಿಂದ ಮಿನುಗಬಹುದು. ಆದರೆ, ನಮ್ಮ ಪಾಲಿಗೆ ಬೇರೆ ದಿನಗಳು ಹೀಗಿರುವುದಿಲ್ಲ. ನಾವು ಸಿಟಿ ಪ್ರದೇಶಗಳಲ್ಲಿ ಓಡಾಡುವಾಗ ಪೊಲೀಸರು ಕಿರಿಕಿರಿ ಮಾಡ್ತಾರೆ. ಜನ ನಮ್ಮನ್ನು ಬೇರೆ ರೀತಿಯೇ ನೋಡ್ತಾರೆ. ಮನಸ್ಸಿಗೆ ಹಿಡಿಸಿದಂತೆ ಅಂದಚೆಂದ ಪ್ರದರ್ಶಿಸಲಾಗದು. ನಮ್ಮವರೊಟ್ಟಿಗೆ ಕಾಲ ಕಳೆಯಲೂ ಆಗದು. ಭಾವನೆಗಳನ್ನು ತೋರಿಸಿಕೊಳ್ಳುವುದಂತೂ ಅಸಾಧ್ಯದ ಮಾತು ಎಂದು ಬೆಂಗಳೂರಿನ ಮಂಗಳಮುಖಿ ಸುಮನಾ ತಿಳಿಸಿದರು.

ಮಂಗಳಮುಖಿಯರು ನಮ್ಮೆಲ್ಲರಂತೆ ಮನುಷ್ಯರು. ಆದರೆ ಅವರಿಗೆ ಈ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸೂಕ್ತವಾದ ಸ್ಥಾನಮಾನ ಸಿಗುತ್ತಿಲ್ಲ. ಜ್ಞಾನದ ಕೊರತೆ, ಕೆಲಸದ ಸ್ಥಳಗಳಲ್ಲಿ ಎದುರಾಗುವ ಅವಮಾನ, ಕೆಟ್ಟ ದೃಷ್ಟಿಯಲ್ಲಿ ನೋಡುವುದರಿಂದಾಗಿ ಮಂಗಳಮುಖಿಯರು ಎಲ್ಲರೊಂದಿಗೆ ಬೆರೆತು ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಮನೆಯಲ್ಲಿ ಮಗನಾಗಿ ಅಥವಾ ಮಗಳಾಗಿ ಜನಿಸುವ ಇವರು ಪ್ರಾಯಕ್ಕೆ ಬರುತ್ತಿದ್ದಂತೆ ತಮ್ಮಲ್ಲಿ ಕಾಣುವ ಬದಲಾವಣೆಯಿಂದಾಗಿ ಮನೆಯಲ್ಲಿ, ಸಮಾಜದಲ್ಲಿ ಇವರ ಭಾವನೆಗಳಿಗೆ ಸೂಕ್ತ ಮನ್ನಣೆ ಸಿಗದೇ ಇವರು ತಮ್ಮದೇ ಗುಂಪು ಸೇರಿಕೊಳ್ಳುತ್ತಾರೆ. ಎಷ್ಟೋ ಕುಟುಂಬಗಳು ಇವರನ್ನು ತಮ್ಮ ಮಕ್ಕಳಾಗಿ ಒಪ್ಪಿಕೊಳ್ಳುವುದೇ ಇಲ್ಲ, ಹೀಗೆ ತಮ್ಮದೇ ಸಮುದಾಯಕ್ಕೆ ಸೇರಿಕೊಳ್ಳುವ ಇವರು ಅಲ್ಲಿ ತಮ್ಮದೇ ಆದ ಆಚಾರ-ವಿಚಾರ, ಪದ್ಧತಿಗಳನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ. ಇನ್ನು ಕೆಲವು ಕಡೆ ಮಂಗಳಮುಖಿಯರನ್ನು ಮದುವೆಯಂತಹ ಶುಭ ಸಮಾರಂಭಗಳಿಗೆ ಕರೆದು ದೃಷ್ಟಿ ಕಾಣಿಕೆ ನೀಡುವ ಪದ್ಧತಿಯನ್ನೂ ನಾವು ನೋಡಬಹುದು.

ಮಂಗಳಮುಖಿಯರು ಸತ್ತರೆ ಗೌಪ್ಯವಾಗಿ ಶವಸಂಸ್ಕಾರ ಮಾಡ್ತಾರೆ

ಮಂಗಳಮುಖಿಯರು ಮೃತಪಟ್ಟರೆ ಅವರನ್ನು ಮಧ್ಯರಾತ್ರಿಯಲ್ಲಿ ಗೌಪ್ಯವಾಗಿ ಅಂದರೆ ಯಾರ ಕಣ್ಣೂ ಬೀಳದಂತೆ ಶವಸಂಸ್ಕಾರ ಮಾಡಲಾಗುತ್ತೆ. ಯಾಕೆಂದರೆ ತೀರಿಹೋದ ಮಂಗಳಮುಖಿ ಶವವನ್ನು ಸಾಮಾನ್ಯ ಜನರು ನೋಡಿದರೆ ಮುಂದಿನ ಜನ್ಮ ಕೂಡ ಅವರು ಮಂಗಳಮುಖಿಯರಾಗಿಯೇ ಹುಟ್ಟುತ್ತಾರೆ ಎಂಬ ನಂಬಿಕೆಯಿದೆ. ಇನ್ನು ಮತ್ತೊಂದೆಡೆ ಮಂಗಳಮುಖಿಯರು ತೀರಿ ಹೋದಾಗ ಅವರ ಮುಖಕ್ಕೆ ಚಪ್ಪಲಿಗಳಿಂದ ಹೊಡೆಯುವ ಪದ್ಧತಿ ಇದೆ. ಈ ರೀತಿ ಮಾಡುವುದರಿಂದ ಅವರಿಗೆ ಅಂಟಿದ್ದ ಪಾಪಗಳು ಹೋಗುತ್ತವೆ ಹಾಗು ಮುಂದಿನ ಜನ್ಮದಲ್ಲಿ ಸುಖವಾಗಿ, ಒಳ್ಳೆಯ ಜೀವನ ನಡೆಸುತ್ತಾರೆ ಎಂಬ ನಂಬಿಕೆ ಇದೆ. ಮಂಗಳಮುಖಿಯರ ಶಾಪ ಬಹಳ ಕೆಟ್ಟದ್ದು, ಅದೇ ರೀತಿ ಅವರು ಆಶೀರ್ವಾದ ಮಾಡಿದರೆ ಒಳ್ಳೇದಾಗುತ್ತೆ ಎನ್ನಲಾಗುತ್ತೆ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್