ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು 19 ವರ್ಷದ ಯುವತಿಗೆ ಕೋರ್ಟ್ ಒಪ್ಪಿಗೆ
ಮಧ್ಯಪ್ರದೇಶ ಹೈಕೋರ್ಟ್ ಕೌಟುಂಬಿಕ ಕಲಹದ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. 19 ವರ್ಷದ ಯುವತಿಗೆ ಆಕೆಯ 40 ವರ್ಷದ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು ಕೋರ್ಟ್ ಅನುಮತಿ ನೀಡಿದೆ. ಈ ಮೂಲಕ 19 ವರ್ಷದ ವಿವಾಹಿತ ಯುವತಿ ತನ್ನ ಪ್ರಿಯಕರನ ಜೊತೆ ವಾಸಿಸಲು ಕಾನೂನು ಬೆಂಬಲವನ್ನು ಪಡೆದಿದ್ದಾಳೆ. ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಆಕೆಗೆ ತಾನು ಆಯ್ಕೆ ಮಾಡಿದ ಪುರುಷನೊಂದಿಗೆ ಸ್ವತಂತ್ರವಾಗಿ ಬದುಕಲು ಅವಕಾಶ ನೀಡಿದೆ. 40 ವರ್ಷದ ಗಂಡನೊಂದಿಗೆ ಬದುಕಲು ಸಾಧ್ಯವೇ ಇಲ್ಲ ಎಂದಿದ್ದ ಆ ಯುವತಿಗೆ ಕೋರ್ಟ್ ಆಯ್ಕೆಯ ಸ್ವಾತಂತ್ರ್ಯ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸಲು ಅನುಮತಿ ನೀಡಿದೆ.

ನವದೆಹಲಿ, ಏಪ್ರಿಲ್ 6: 19 ವರ್ಷದ ಯುವತಿಗೆ ತನ್ನ ಗಂಡನ ಜೊತೆ ಬದುಕುವುದು ಇಷ್ಟವಿರಲಿಲ್ಲ. ಮನೆಯಿಂದ ಬರುವಾಗ ಆಕೆಯ ಗಂಡ ಆಕೆಯ ಮನವೊಲಿಸಿ ತನ್ನ ಜೊತೆಗೆ ಇರಲು ಒಪ್ಪಿಸಿ ಕರೆತಂದಿದ್ದ. ಆದರೆ, ಆಕೆಯ ಪತಿ, ಪೋಷಕರು ಮತ್ತು ಆಕೆಯ ಪ್ರೇಮಿ ನ್ಯಾಯಾಲಯದ ಹೊರಗೆ ಕಾಯುತ್ತಿದ್ದಾಗ ಆಕೆ ಕೋರ್ಟ್ನೊಳಗೆ ನ್ಯಾಯಾಧೀಶರ ಮುಂದೆ ತಾನು ಪ್ರಿಯಕರನ ಜೊತೆಯೇ ಹೋಗುತ್ತೇನೆ ಎಂದು ನಿರ್ಧಾರ ತಿಳಿಸಿದಳು. “ನಾನು ವಯಸ್ಕಳು. ನಾನು ನನ್ನ ಸ್ವಂತ ಇಚ್ಛೆಯ ಮೇಲೆ ಬದುಕುತ್ತಿದ್ದೇನೆ. ನನ್ನ ಪತಿ ಅಥವಾ ನನ್ನ ಪೋಷಕರೊಂದಿಗೆ ಇರಲು ನಾನು ಬಯಸುವುದಿಲ್ಲ” ಎಂದು ಆಕೆ ನ್ಯಾಯಾಲಯಕ್ಕೆ (Court) ತಿಳಿಸಿದ್ದಾಳೆ. ಆಕೆಯ ನಿರ್ಧಾರವನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಒಪ್ಪಿಕೊಂಡಿತು.
ತನಗಿಂತ 2 ಪಟ್ಟು ಹೆಚ್ಚು ವಯಸ್ಸಿನವನ ಜೊತೆ ಮನೆಯವರು ಮದುವೆ ಮಾಡಿಕೊಟ್ಟಿದ್ದರಿಂದ 19 ವರ್ಷದ ಯುವತಿ ಆ ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಆಕೆಗೆ ಇನ್ನೋರ್ವ ಯುವಕನ ಮೇಲೆ ಮನಸಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಆಕೆ ತಾನು ತನ್ನ ಮನೆಯಲ್ಲಿ ವಯಸ್ಸಾದ ಗಂಡನಿಂದ ಯಾವ ರೀತಿ ದೌರ್ಜನ್ಯವನ್ನು ಸಹಿಸಿಕೊಂಡಿದ್ದೇನೆ, ತನ್ನ ತವರು ಮನೆಯವರು ಯಾವ ರೀತಿ ತನ್ನನ್ನು ದೂರ ಇಟ್ಟಿದ್ದಾರೆ, ಎರಡೂ ಕಡೆ ಆಶ್ರಯ ಸಿಗದೆ ತಾನು ಹೇಗೆ ಕಷ್ಟ ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಳು.
ಇದನ್ನೂ ಓದಿ: ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?
ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಏಪ್ರಿಲ್ 2ರಂದು ಆಕೆಯ ಪತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯನ್ನು ಇನ್ನೊಬ್ಬ ಪುರುಷ ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ತನ್ನ ಪತಿ, ಪೋಷಕರು ಮತ್ತು ಪ್ರಿಯಕರನ ಜೊತೆ ನ್ಯಾಯಾಲಯಕ್ಕೆ ಹಾಜರಾದ ಆ ಯುವತಿ ತನ್ನ ಗಂಡ ಮಾಡಿದ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ ನಂತರ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.
ನನ್ನನ್ನು ಯಾರೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ನನ್ನ ಗಂಡನ ಕಿರುಕುಳ ತಾಳಲಾರದೆ ಅಪ್ಪನ ಮನೆಗೆ ಹೋದಾಗ ಅಲ್ಲಿ ಕೂಡ ನನಗೆ ಆಶ್ರಯ ಸಿಗಲಿಲ್ಲ. ನಾನು ಪ್ರೀತಿಸುತ್ತಿರುವ ಯುವಕನ ಜೊತೆ ಹೋದ ನಂತರವೇ ನನಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು. ನನ್ನ ಸಂತೋಷ ಬಯಸದ, ನನ್ನ ಹಿತೈಷಿಗಳಲ್ಲದವರ ಜೊತೆ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಆಕೆಯ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಅಲ್ಲದೆ, ಆಕೆಯನ್ನು ಸೆರೆಯಲ್ಲಿಟ್ಟಿದ್ದ ಆರೋಪ ಹೊತ್ತಿರುವ ಆಕೆಯ ಪ್ರೇಮಿಯ ಜೊತೆಯೇ ಇರಲು ಬಯಸುವುದಾಗಿ ಆಕೆ ಹೇಳಿದ್ದಾಳೆ.
ಇದನ್ನೂ ಓದಿ: ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್
ಆಕೆಯ ಪ್ರಿಯಕರನನ್ನು ಕೂಡ ಈ ಬಗ್ಗೆ ವಿಚಾರಿಸಲಾಯಿತು. ಆತನೂ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದನು. ಅವಳ ವಿಚ್ಛೇದನದ ನಂತರ ಅವಳನ್ನು ಮದುವೆಯಾಗುವ ಉದ್ದೇಶವಿದೆ ಎಂದು ಕೂಡ ಹೇಳಿದನು. ಯಾವುದೇ ರೀತಿಯಲ್ಲಿ ಅವಳಿಗೆ ಕಿರುಕುಳ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದನು.
ಆಕೆಯ ಗಂಡನ ವಯಸ್ಸು, ಆಕೆಯ ವಯಸ್ಸು ಗಮನಿಸಿದ ನ್ಯಾಯಾಲಯವು ಆಕೆ ತನ್ನ ಸ್ವಂತ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಪ್ರೌಢಿಮೆ ಹೊಂದಿದ್ದಾಳೆ ಎಂದು ದೃಢಪಡಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




