ಅಯೋಧ್ಯೆ ರಾಮ ಮಂದಿರಕ್ಕೆ ಬಳಸಲ್ಲ ಉಕ್ಕು, ಸಿಮೆಂಟ್ ಬಳಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ: ನೃಪೇಂದ್ರ ಮಿಶ್ರಾ

ಶತಮಾನಗಳ ಕಾಲ ಅದು ಅಳಿಯದೆ ಉಳಿಯಬೇಕು ಎಂಬ ಉದ್ದೇಶದಿಂದ ಈ ವಸ್ತುಗಳ ಬಳಕೆ ಬೇಡ ಎಂದು ಆಲೋಚಿಸುತ್ತಿದ್ದೇವೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರಕ್ಕೆ ಬಳಸಲ್ಲ ಉಕ್ಕು, ಸಿಮೆಂಟ್ ಬಳಸುವ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ: ನೃಪೇಂದ್ರ ಮಿಶ್ರಾ
ನೃಪೇಂದ್ರ ಮಿಶ್ರಾ (ಕೃಪೆ: ವಿಕಿಪೀಡಿಯ)
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 17, 2021 | 8:56 PM

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಉಕ್ಕು, ಸಿಮೆಂಟ್ ಬಳಸುವುದಿಲ್ಲ. ಶತಮಾನಗಳ ಕಾಲ ಅದು ಅಳಿಯದೆ ಉಳಿಯಬೇಕು ಎಂಬ ಉದ್ದೇಶದಿಂದ ಈ ವಸ್ತುಗಳ ಬಳಕೆ ಬೇಡ ಎಂದು ಆಲೋಚಿಸುತ್ತಿದ್ದೇವೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಐಎಎಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ಮಿಶ್ರಾ ಸಂದರ್ಶನವೊಂದರಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶ ಕೇಡರ್​ನ 1967ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಮಿಶ್ರಾ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಲ್ಯಾಣ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಸಾಮಾನ್ಯವಾಗಿ ಮಿಶ್ರಾ ಅವರು ಯಾರಿಗೂ ಸಂದರ್ಶನ ನೀಡುವುದಿಲ್ಲ. ಆದರೆ ಇತ್ತೀಚೆಗೆ ಆರ್​ಎಸ್​ಎಸ್​ನ ಮುಖವಾಣಿ ಪಾಂಚಜನ್ಯ ವಾರ ಪತ್ರಿಕೆಯಲ್ಲಿ ಅವರ ಸುದೀರ್ಘ ಸಂದರ್ಶನ ಪ್ರಕಟವಾಗಿತ್ತು.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಂದಿರ 500-1000 ವರ್ಷಗಳ ಕಾಲ ಉಳಿಯಬೇಕು ಎಂಬುದಕ್ಕೆ ಟ್ರಸ್ಟ್ ಏನು ಮಾಡಿದೆ ಎಂದು ಕೇಳಿದಾಗ, ನಾವು ಉಕ್ಕು ಬಳಸುತ್ತಿಲ್ಲ. ಕೆಲವೊಬ್ಬರು ಸಿಮೆಂಟ್​ನ ಆಯುಷ್ಯ ಸುಮಾರು 100 ವರ್ಷಗಳು ಎಂದು ಹೇಳುತ್ತಾರೆ. ಹಾಗಾಗಿ ನಾವು ಸಿಮೆಂಟ್ ಬಳಸಬೇಕೋ ಎಂಬುದರ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಟಾಟಾ ಕನ್ಸೆಲ್ಟೆನ್ಸಿ ಸೇರಿದಂತೆ ಹಲವಾರು ಕಂಪನಿಗಳ ತಜ್ಞರ ಸಲಹೆಯನ್ನು ಆಧರಿಸಿ ಅಡಿಪಾಯಕ್ಕೆ ಮಿಶ್ರಣವನ್ನು ಬಳಸಲಾಗುವುದು. ಎಲ್​ ಆ್ಯಂಡ್ ಟಿ ಕಂಪನಿಯು ಮೆಟೀರಿಯಲ್ ಮ್ಯಾನೇಜ್​ಮೆಂಟ್​ನಲ್ಲಿ ತಜ್ಞರಾದ ಚೆನ್ನೈನ ಐಐಟಿ ಜತೆ ಒಪ್ಪಂದವನ್ನು ಮಾಡಿಕೊಂಡಿದೆ. ನಾವು ಪುರಾತನ ದೇವಾಲಯದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ನಾವು ದೇಶದಲ್ಲಿರುವ ಬೃಹತ್ ನಿರ್ಮಾಣ ಕಂಪನಿಗೆ ಈ ಜವಾಬ್ದಾರಿಯನ್ನು ನೀಡಿದ್ದೇವೆ. ಟಾಟಾ ಕನ್ಸಲ್ಟೆನ್ಸಿಯಲ್ಲಿ ಕನಿಷ್ಠ 2,000 ಇಂಜಿನಿಯರ್ ಗಳಿದ್ದಾರೆ ಎಂದಿದ್ದಾರೆ  ಮಿಶ್ರಾ.

ಮಂದಿರದ ಸುತ್ತಲೂ ಹಸಿರು ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ 70 ಎಕರೆ ಪ್ರದೇಶದ ಸುತ್ತಲೂ ಗಿಡ ಬೆಳೆಸಲಾಗುವುದು. ವಾಲ್ಮೀಕಿ ರಾಮಾಯಣ ಮತ್ತು ತುಳಸೀದಾಸರ ರಾಮಚರಿತ ಮಾನಸದಲ್ಲಿ ಉಲ್ಲೇಖವಿರುವ ನಿರ್ದಿಷ್ಟ ಗಿಡಗಳನ್ನು ಬೆಳೆಸಬೇಕು ಎಂಬ ಬೇಡಿಕೆ ಇದೆ. ಲಖನೌದಲ್ಲಿರುವ ರಾಷ್ಟ್ರೀಯ ಬೊಟಾನಿಕಲ್ ಗಾರ್ಡನ್ ಈ ಬಗ್ಗೆ ಕೆಲವು ವರ್ಷಗಳ ಹಿಂದೆ ಅಧ್ಯಯನ ನಡೆಸಿತ್ತು. ದೇಶದ ಭಾವನೆಗಳನ್ನು ಗೌರವಿಸಲು ಮತ್ತು ಅದಕ್ಕೆ ಅನುಗುಣವಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ನಮ್ಮ ಉತ್ತಮ ಪ್ರಯತ್ನ ಮಾಡುತ್ತೇವೆ ಎಂದು ಮಿಶ್ರಾ ಹೇಳಿದ್ದಾರೆ.

1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ನೀವೇನಂತೀರೀ ಎಂದು ಕೇಳಿದಾಗ ನಾನು ಆಗ ಉತ್ತರ ಪ್ರದೇಶದಲ್ಲಿ ನಾಗರಿಕ ಸೇವಾ ಅಧಿಕಾರಿ ಆಗಿದ್ದೆ. ಅದೊಂದು ಸಮರ್ಥನೀಯ ಹೆಜ್ಜೆ. ಡಿಸೆಂಬರ್​ನಲ್ಲಿ ಈ ಘಟನೆ ನಡೆಯುವುದಕ್ಕಿಂತ ಮೂರು ತಿಂಗಳ ಮುಂಚೆ ನಾನು ಗ್ರೇಟರ್ ನೋಯ್ಡಾದಲ್ಲಿ ಅಧ್ಯಕ್ಷನಾಗಿದ್ದೆ. ಈ ಘಟನೆ ನಡೆದಾಗ ನಾನು ಲಖನೌನಲ್ಲಿದ್ದೆ. ಇದಕ್ಕಿಂತ ಮುಂಚೆಯೂ ಅಯೋಧ್ಯೆಗೆ ಸಂಬಂಧಪಟ್ಟ ಘಟನೆಗಳು ನಡೆದಿದ್ದವು. ಅಲ್ಲಿ ರಾಮಮಂದಿರ ಪುನರ್ನಿಮಾಣ ಮಾಡಬೇಕು ಎಂದು ಹಲವರು ಬಯಸಿದ್ದರು. ಇದು ಸಮರ್ಥನೀಯ ಹೆಜ್ಜೆ. ಅದಕ್ಕಾಗಿಯೇ ಇದನ್ನು ಮೌಲ್ಯಮಾಪನ ಮಾಡುವವರು ದೇವಾಲಯವನ್ನು ನಿರ್ಮಿಸುವುದು ರಾಷ್ಟ್ರದ ಬಯಕೆಯಾಗಿತ್ತು ಎಂದು ಮೌಲ್ಯಮಾಪನ ಮಾಡುತ್ತಾರೆ. ಈಗ ಜನರ ಕನಸು ನನಸಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಣ ನೀಡಿ: ಅಭಿಮಾನಿಗಳ ಬಳಿ ಅಕ್ಷಯ್​ ಕುಮಾರ್ ಮನವಿ

ಸಡಿಲಗೊಂಡ ಮಣ್ಣು: ನೂತನ ತಂತ್ರಜ್ಞಾನ ಬಳಸಿ ರಾಮ ಮಂದಿರಕ್ಕೆ ಅಡಿಪಾಯ ಹಾಕಲು ಸಜ್ಜು

ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಾಮಭಕ್ತರಿಂದ ತಾಮ್ರದ ಕಾಣಿಕೆ ಆಹ್ವಾನ