ಉಕ್ರೇನ್ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ; ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ
ಜೂನ್ 23ರಂದು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಆರಂಭವಾಗಿದ್ದು ಜುಲೈ 27ರ ವರೆಗೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ಜತೆ ಹೆತ್ತವರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ದೆಹಲಿ: ಯುದ್ಧ ಪೀಡಿತ ಉಕ್ರೇನ್ನಿಂದ ಮರಳಿ ಬಂದ ವೈದ್ಯಕೀಯ ವಿದ್ಯಾರ್ಥಿಗಳು (Medical students) ದೆಹಲಿಯಲ್ಲಿ ಐದು ದಿನಗಳ ಉಪವಾಸ ಸತ್ಯಾಗ್ರಹ (hunger strike) ನಡೆಸುತ್ತಿದ್ದಾರೆ. ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕೆಂಬುದು ಈ ವಿದ್ಯಾರ್ಥಿಗಳ ಬೇಡಿಕೆ. ಖಿನ್ನತೆ, ಉದ್ವೇಗ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿರುವ ಈ ವಿದ್ಯಾರ್ಥಿಗಳು ತಮ್ಮ ಭವಿಷ್ಯಲನ್ನು ಉಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ (Narendra Modi) ಮನವಿ ಮಾಡಿದ್ದಾರೆ. ನಮ್ಮನ್ನು ಭಾರತದ ಕಾಲೇಜುಗಳಿಗೆ ಸೇರಿಸಿಕೊಳ್ಳಿ. ಸರ್ಕಾರ ನಮಗೆ ಸಹಾಯ ಮಾಡಬೇಕು. ಪ್ರಧಾನಿ ಮೋದಿಯವರಲ್ಲಿ ನಮಗೆ ಭರವಸೆ ಇದೆ ಎಂದು ಉಕ್ರೇನ್ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಮುಹ್ಮದ್ ಅಖಿಲ್ ರಾಜಾ ಹೇಳಿದ್ದಾರೆ. ಜೂನ್ 23ರಂದು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಆರಂಭವಾಗಿದ್ದು ಜುಲೈ 27ರ ವರೆಗೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ಜತೆ ಹೆತ್ತವರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ವಿದ್ಯಾರ್ಥಿಗಳು ಎಲ್ಲವನ್ನೂ ಅಲ್ಲೇ ಬಿಟ್ಟು ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತಕ್ಕೆ ಬಂದಿದ್ದರು. ನಾವು ಅವರನ್ನು ಮತ್ತೆ ವಾಪಸ್ ಕಳಿಸುವುದಿಲ್ಲ.ಅವರಿಗೆ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ನೀಡಿ ಸಹಾಯ ಮಾಡಬೇಕು ಎಂದು ನಾನು ಸರ್ಕಾರಕ್ಕೆ ವಿನಂತಿ ಮಾಡುತ್ತಿದ್ದೇವೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.
ಇದಕ್ಕಿಂತ ಮುಂಚೆ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಉಕ್ರೇನ್ ಎಂಬಿಬಿಎಸ್ ಸ್ಟೂಡೆಂಟ್ಸ್ (PAUMS), ಒಂದಕ್ಕಿಂತ ಹೆಚ್ಚು ಪ್ರತಿಭಟನೆಗಳನ್ನು ನಾವು ನಡೆಸಿದ್ದು, ಪ್ರಧಾನಿ ಕಚೇರಿಗೂ ಪತ್ರ ಬರೆದಿದ್ದೆವು. ಆದರೆ ಏನೂ ಪ್ರಯೋಜನವಾಗಿಲ್ಲ ಎಂದಿದೆ.
ಕಳೆದ ತಿಂಗಳು ಹಲವಾರು ವಿದ್ಯಾರ್ಥಿಗಳು ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಕೂತು ತಮಗೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ನೀಡಬೇಕೆಂದು ಒತ್ತಾಯಿಸಿದ್ದರು. ನಾವು ಜಂತರ್ ಮಂತರ್ ಮೂರು ಬಾರಿ ಮತ್ತು ದ್ವಾರಕದಲ್ಲಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ ಕಚೇರಿಯಲ್ಲಿಯೂ ಎರಡು ಬಾರಿ ಪ್ರತಿಭಟನೆ ನಡೆಸಿದ್ದೆವು. ಪ್ರಧಾನಿ ಕಚೇರಿಗೆ, ಆರೋಗ್ಯ ಸಚಿವಾಲಯ, ಶಿಕ್ಷಣ ಸಚಿವಾಲಯ, ಎನ್ ಎಂಸಿ ಮತ್ತು ರಾಷ್ಟ್ರಪತಿಗಳಿಗೂ ನಾವು ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಭರವಸೆ ಸಿಕ್ಕಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಕೂರಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಸರಿಸುಮಾರು 12,000 ವಿದ್ಯಾರ್ಥಿಗಳಿದ್ದು 600 ಮೆಡಿಕಲ್ ಕಾಲೇಜುಗಳಲ್ಲಿ 20 ವಿದ್ಯಾರ್ಥಿಗಳಂತೆ ಪ್ರವೇಶ ನೀಡಬೇಕು ಎಂದು ಇವರು ಬೇಡಿಕೆಯೊಡ್ಡಿದ್ದಾರೆ.
ಉಕ್ರೇನ್ನ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ಕನಿಷ್ಠ ಪಕ್ಷ 18,000 ವಿದ್ಯಾರ್ಥಿಳು ಫೆಬ್ರುವರಿಯಲ್ಲಿ ಭಾರತಕ್ಕೆ ಮರಳಿದ್ದರು. ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಮಧ್ಯಪ್ರವೇಶ ಒತ್ತಾಯಿಸಿ ವಿದ್ಯಾರ್ಥಿಗಳ ಪೋಷಕರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು.