EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಇವಿ ಟ್ರಾನ್ಸ್​ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ: ಭಾರತದ ರಸ್ತೆ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ

Intercity Coach EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಎಲೆಕ್ಟ್ರಾನಿಕ್ ಬಸ್​ ಸೇವೆಯನ್ನು ಇವಿ ಟ್ರಾನ್ಸ್​ ಆರಂಭಿಸಿದೆ. ಮಾಲಿನ್ಯ ರಹಿತ, ನಿಶ್ಯಬ್ದ ಮತ್ತು ಆರಾಮದಾಯಕವಾಗಿ ದೂರದ ಪ್ರಯಾಣಗಳನ್ನು ಮಾಡಲು ಇಂಥ ಸೇವೆಗಳು ಸಹಾಯಕವಾಗಲಿವೆ.

EV Trans Bus: ಪುಣೆ-ಮುಂಬೈ ಮಾರ್ಗದಲ್ಲಿ ಇವಿ ಟ್ರಾನ್ಸ್​ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ: ಭಾರತದ ರಸ್ತೆ ಸಾರಿಗೆ ಇತಿಹಾಸದಲ್ಲಿ ಹೊಸ ದಾಖಲೆ
ಎಲೆಕ್ಟ್ರಾ ನಿರ್ಮಿಸಿರುವ ಎಲೆಕ್ಟ್ರಿಕ್ ಬಸ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 13, 2021 | 9:26 PM

MEIL Intercity Coach EV Trans Buses: ಹೈದರಾಬಾದ್: ದೇಶದ ಮುಂಚೂಣಿ ಎಲೆಕ್ಟ್ರಾನಿಕ್ ಬಸ್​ ಕಾರ್ಯಾಚರಣೆ ಸಂಸ್ಥೆ ಇವಿ ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್​ ‘ಪುರಿಬಸ್’ (PuriBus) ಬ್ರಾಂಡ್​ನ ಅಡಿಯಲ್ಲಿ ಪುಣೆ-ಮುಂಬೈ ಮಾರ್ಗದಲ್ಲಿ ಬುಧವಾರ ಎಲೆಕ್ಟ್ರಾನಿಕ್ ಬಸ್​ ಸೇವೆ ಆರಂಭಿಸಿದೆ. ಮೇಘಾ ಎಂಜಿನಿಯರಿಂಗ್ ಲಿಮಿಟೆಡ್ (MEIL) ಗ್ರೂಪ್​ನ ಭಾಗವಾಗಿರುವ ಈ ಕಂಪನಿಯು ಇದೇ ಮೊದಲ ಬಾರಿಗೆ ದೇಶದಲ್ಲಿ ಎರಡು ಮುಖ್ಯ ನಗರಗಳ ನಡುವೆ ಎಲೆಕ್ಟ್ರಾನಿಕ್ ಬಸ್​ ಸೇವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ. ವಿಜಯದಶಮಿಯಿಂದ (ಅಕ್ಟೋಬರ್ 15) ಈ ಸೇವೆಯು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಮಾಲಿನ್ಯ ರಹಿತ, ನಿಶ್ಯಬ್ದ ಮತ್ತು ಆರಾಮದಾಯಕವಾಗಿ ದೂರದ ಪ್ರಯಾಣಗಳನ್ನು ಮಾಡಲು ಇಂಥ ಸೇವೆಗಳು ಸಹಾಯಕವಾಗಲಿದೆ.

ಫೇಮ್-1 ಮತ್ತು ಫೇಮ್-2 ಉಪಕ್ರಮಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸಾರಿಗೆಯಲ್ಲಿ ಎಲೆಕ್ಟ್ರಾನಿಕ್ ಬಸ್​ಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಪುರಿಬಸ್ ಸೇವೆಯ ಸೌಲಭ್ಯಗಳ ಬಗ್ಗೆ ವಿವರಿಸಿದ ಈವಿಟ್ರಾನ್ಸ್​​ನ ಪ್ರಧಾನ ವ್ಯವಸ್ಥಾಪಕ ಸಂದೀಪ್ ರೈಜಾಡಾ, ‘ಭಾರತದಲ್ಲಿ ಎರಡು ನಗರಗಳ ನಡುವೆ ಇ-ಬಸ್ ಸೇವೆ ಆರಂಭಿಸಿದ ಬಗ್ಗೆ ನಮಗೆ ಹೆಮ್ಮೆ ಮತ್ತು ವಿನಮ್ರತೆ ಇದೆ. ಒಮ್ಮೆ ಚಾರ್ಜ್ ಮಾಡಿದ ನಂತರ ಪುರಿಬಸ್ 350 ಕಿಮೀ ಅಂತರ ಕ್ರಮಿಸಬಲ್ಲದು. ಹೊಗೆ ಉಗುಳದ ಈ ವಾಹನವು ವಿವಿಧ ನಗರಗಳ ನಡುವೆ ಬಸ್ ಸೇವೆ ಒದಗಿಸುವವರಿಗೆ ಉತ್ತಮ ಆಯ್ಕೆ ಆಗಬಲ್ಲದು. ದೀರ್ಘಾವಧಿಯಲ್ಲಿ ಸಾಕಷ್ಟು ಉಳಿತಾಯದ ಲಾಭಗಳೂ ಇವೆ’ ಎಂದು ಹೇಳಿದರು.

12 ಮೀಟರ್ ಉದ್ದದ ಪುರಿಬಸ್ ಈ ಹೊಗೆ ಉಗುಳದ ಇಂಟರ್​ಸಿಟಿ ಎಲೆಕ್ಟ್ರಿಕ್ ಕೋಚ್ ಬಸ್​ನಲ್ಲಿ 45 ಪ್ರಯಾಣಿಕರು, ಚಾಲಕ, ಸಹಚಾಲಕರಿಗೆ ಕೂರುವಷ್ಟು ಸ್ಥಳಾವಕಾಶವಿದೆ. ಸುಂದರ ವಿನ್ಯಾಸದ ಬಸ್​ ಪ್ರಯಾಣಿಕರು ಸಾಕಷ್ಟು ಆರಾಮದಾಯಕ ಸೌಕರ್ಯಗಳನ್ನು ನೀಡುತ್ತದೆ. ದೂರ ಪ್ರಯಾಣಕ್ಕಾಗಿಯೇ ವಿನ್ಯಾಸ ಮಾಡಿರುವ ಈ ಹವಾನಿಯಂತ್ರಿತ ಬಸ್​ನಲ್ಲಿ ಆರಾಮದಾಯಕ ಮತ್ತು ಐಷಾರಾಮಿ ಪುಶ್​ಬ್ಯಾಕ್​ ಸೀಟ್​ಗಳಿವೆ. ಪ್ರಯಾಣದ ಖುಷಿ ಹೆಚ್ಚಿಸಲೆಂದು ಅನು ಬಸ್​ನಲ್ಲಿ ಅತ್ಯಾಧುನಿಕ ಟಿವಿ ಮತ್ತು ಇನ್​ಫೋಟೈನ್​ಮೆಂಟ್ ವ್ಯವಸ್ಥೆಯ ಜೊತೆಗೆ ವೈ-ಫೈ ಸಹ ಇದೆ. ಪ್ರತಿ ಸೀಟ್​ ಸಮೀಪ ಯುಎಸ್​ಬಿ ಚಾರ್ಜರ್ ಇರುತ್ತದೆ. ಲಗೇಜ್ ಇರಿಸಲೆಂದು ಐದು ಕ್ಯೂಬಿಕ್ ಮೀಟರ್​ನಷ್ಟು ಜಾಗವಿದೆ. ಹೀಗಾಗಿ ಲಗೇಜ್ ಸಾಗಿಸುವುದು ಸಹ ಹೆಚ್ಚು ಸಮಸ್ಯೆಯಾಗುವುದಿಲ್ಲ.

ವಿವಿಧ ನಗರಗಳ ನಡುವೆ ಬಸ್​ಗಳನ್ನು ಓಡಿಸುತ್ತಿರುವ ಬಸ್ ಆಪರೇಟರ್​ಗಳಿಗೆ ಹಲವು ಆರ್ಥಿಕ ಅನುಕೂಲಗಳನ್ನೂ ಈ ಬಸ್ ಒದಗಿಸುತ್ತದೆ. ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ, ಡೀಸೆಲ್ ಬಸ್​ಗಳಿಗೆ ಓಡಿಸಿದರೆ ಕಡಿಮೆ ಕಾರ್ಯಾಚರಣೆ ವೆಚ್ಚದ ಲಾಭಗಳೂ ಇವೆ. ಭಾರತದಲ್ಲಿ ಈ ಬಸ್​ಗಳನ್ನು ಒಲೆಕ್ಟ್ರಾ ಗ್ರೀನ್​ಟೆಕ್ ಲಿಮಿಟೆಡ್​ ನಿರ್ಮಿಸುತ್ತಿದೆ. ಲಿಯಾನ್ ಫಾಸ್ಪೇಟ್​ ಬ್ಯಾಟರಿಗಳಿಂದ ಈ ಬಸ್​ಗಳು ಸಂಚರಿಸುತ್ತವೆ.

Electra-Bus

ಎಲೆಕ್ಟ್ರಾ ಬಸ್​

ಪ್ರಯಾಣಿಕರ ಸುರಕ್ಷೆಗೆ ಆದ್ಯತೆ ಬಸ್​ನಲ್ಲಿ ಹಲವು ಸುರಕ್ಷಾ ವ್ಯವಸ್ಥೆಗಳು ಇವೆ. ಐರೋಪ್ಯ ಒಕ್ಕೂಟ ಮಾನದಂಡಕ್ಕೆ ಅನುಗುಣವಾದ ಟಿಯುವಿ ಪ್ರಮಾಣಪತ್ರದ ಎಫ್​ಡಿಎಸ್​ಎಸ್ ವ್ಯವಸ್ಥೆ, ಎಡಿಎಎಸ್ ವ್ಯವಸ್ಥೆ (Advanced Driver Assistance System – ADAS) ಮತ್ತು ಭಾರತೀಯ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ನಿಯಮಗಳಿಗೆ ಅನುಗುಣವಾದ ಐಟಿಎಸ್​​ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಅಲಾರಾಂ ಮೊಳಗಿಸುವ ಮತ್ತು ಬೆಳಕು ಹೊತ್ತಿಕೊಳ್ಳುವ ವ್ಯವಸ್ಥೆಗಳು ಬಸ್​ನಲ್ಲಿ ಇವೆ. ಸೂರತ್, ಸಿಲ್​ವಾಸಾ, ಗೋವಾ, ಹೈದರಾಬಾದ್, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಇ-ಬಸ್​ಗಳನ್ನು ಕಂಪನಿ ಓಡಿಸುತ್ತಿದೆ. ನಮ್ಮ ಕಂಪನಿಗೆ ಪೂರಿಬಸ್​ ಸೇರಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಮ್ಮ ಕಾರ್ಯಾಚರಣೆ ಸಾಮರ್ಥ್ಯವನ್ನು ನಿರೂಪಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಕಂಪನಿಯ ಬಗ್ಗೆ ಮಾಹಿತಿ ಮೆಘಾ ಎಂಜಿನಿಯರಿಂಗ್ ಲಿಮಿಟೆಡ್​ (MEIL) ಸಮೂಹ ಕಂಪನಿಗಳ ಭಾಗವಾಗಿರುವ ಇವಿ ​ಟ್ರಾನ್ಸ್​ ಪ್ರೈವೇಟ್ ಲಿಮಿಟೆಡ್ ಕಂಪನಿಯು ಎಂಇಐಎಲ್ ಹೋಲ್ಡಿಂಗ್ಸ್​ ಲಿಮಿಟೆಡ್​ನ (MEIL Holdings Limited) ಸಂಪೂರ್ಣ ಅಧೀನದಲ್ಲಿದೆ. ಇದು ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್​ಗಳ ಕಾರ್ಯಾಚರಣೆ ನಡೆಸುವ ಮತ್ತು ನಿರ್ವಹಿಸುವ ಕಂಪನಿಯಾಗಿದೆ. ಪ್ರಸ್ತುತ ದೇಶದ ವಿವಿಧೆಡೆ 400 ಬಸ್​ಗಳನ್ನು ನಿರ್ವಹಿಸುತ್ತಿದೆ. ಸಮಗ್ರ ಶುಲ್ಕ ಒಪ್ಪಂದ (Gross Cost Contract – GCC) ಆಧಾರದ ಮೇಲೆ ವಿವಿಧ ಸಾರಿಗೆ ನಿಗಮಗಳಿಗಾಗಿ ಕಂಪನಿಯು ಸ್ವತಃ ಬಸ್​ಗಳನ್ನು ಓಡಿಸುತ್ತದೆ, ಭೋಗ್ಯಕ್ಕೆ ಕೊಡುತ್ತದೆ, ನಿರ್ವಹಿಸುತ್ತದೆ. ಚಾರ್ಜಿಂಗ್​ ಸ್ಟೇಷನ್​ಗಳನ್ನೂ ಈವಿ ಅಭಿವೃದ್ಧಿಪಡಿಸುತ್ತದೆ.

ಇದನ್ನೂ ಓದಿ: ಮೇಘಾ ಕಂಪನಿಯ ಮೆಗಾ ಸಾಧನೆ! ಎಂಜಿನಿಯರಿಂಗ್​ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೆ ಸಾಕ್ಷಿ ಲಡಾಖ್​ನ ಜೋಜಿಲಾ ಸುರಂಗ ಮಾರ್ಗ ಇದನ್ನೂ ಓದಿ: Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ