Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ; ಏಕಿಷ್ಟು ಪ್ರಾಮುಖ್ಯತೆ? ಈಗೇಕೆ ಸುದ್ದಿಯಲ್ಲಿದೆ?

ಗೋದಾವರಿ ನದಿಯು ಸಮುದ್ರ ಮಟ್ಟಕ್ಕಿಂದ 100 ಮೀಟರ್ ಕೆಳಗೆ ಹರಿಯುತ್ತದೆ. ಆದರೆ ತೆಲಂಗಾಣದಲ್ಲಿ ಈ ಯೋಜನೆಯಿಂದ ನೀರು ಹರಿಸಬೇಕಾದ ಸ್ಥಳಗಳು ಸಮುದ್ರಮಟ್ಟದಿಂದ 300ರಿಂದ 650 ಮೀಟರ್ ಎತ್ತರದಲ್ಲಿವೆ. ಈ ಸವಾಲು ಎದುರಿಸುವ ಪ್ರಯತ್ನದಲ್ಲಿ ವಿಶ್ವದ ಎಂಜಿನಿಯರಿಂಗ್ ಅದ್ಭುತವೊಂದು ಸಾಕಾರಗೊಂಡಿತು.

Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ; ಏಕಿಷ್ಟು ಪ್ರಾಮುಖ್ಯತೆ? ಈಗೇಕೆ ಸುದ್ದಿಯಲ್ಲಿದೆ?
ಕಾಳೇಶ್ವರಂ ಪ್ರಾಜೆಕ್ಟ್​ನ ವಿಹಂಗಮ ನೋಟ
Follow us
|

Updated on:Jun 20, 2021 | 8:31 PM

ತೆಲಂಗಾಣದ ಕಾಳೇಶ್ವರಂ ಏತ ನೀರಾವರಿ ಯೋಜನೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಜೂನ್ 25ರಂದು ಈ ಯೋಜನೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಸಾಕ್ಷ್ಯಚಿತ್ರದ ಬಗ್ಗೆ ತೆಲಂಗಾಣದಲ್ಲಿ ಕುತೂಹಲ ಬೆಳೆದಿದೆ. ಈ ಸಾಕ್ಷ್ಯಚಿತ್ರದ ಪ್ರೊಮೊ ವೈರಲ್ ಸಹ ಆಗಿದೆ. ಈ ವೈರಲ್ ವಿದ್ಯಮಾನವನ್ನು ಒಂದು ನೆಪವಾಗಿಸಿಕೊಂಡು ಭಾರತದ ಮಹತ್ವದ ನೀರಾವರಿ ಯೋಜನೆಯನ್ನು ಪರಿಚಯ ಮಾಡಿಕೊಡಲು ಈ ಬರಹದಲ್ಲಿ ಯತ್ನಿಸಲಾಗಿದೆ.

ವಿಶ್ವದ ಅತಿದೊಡ್ಡ ಏತ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆ ಯೋಜನೆಯಾಗಿರುವ ಕಾಳೇಶ್ವರಂ ವಿವಿಧೋದ್ದೇಶ ಏತ ನೀರಾವರಿ ಯೋಜನೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಜೂನ್ 21, 2019ರಂದು ಲೋಕಾರ್ಪಣೆ ಮಾಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್​ ಮೋಹನ್ ರೆಡ್ಡಿ ಸಹ ಪಾಲ್ಗೊಂಡಿದ್ದರು. ಹೈದರಾಬಾದ್-ಸಿಕಂದರಾಬಾದ್ ನಗರಗಳಿಗೆ ಕುಡಿಯುವ ನೀರು ಪೂರೈಸುವ ಜೊತೆಗೆ ಸುಮಾರು 45 ಲಕ್ಷ ಎಕರೆಗೆ ವ್ಯವಸಾಯಕ್ಕಾಗಿ ನೀರು ಒದಗಿಸುವ ಮಹತ್ವದ ಯೋಜನೆಯಿದು. ಯೋಜನೆಯು ಪೂರ್ಣಪ್ರಮಾಣದಲ್ಲಿ ಕಾರ್ಯರಂಭ ಮಾಡಿದಾಗ ತೆಲಂಗಾಣದ 31 ಜಿಲ್ಲೆಗಳ ಪೈಕಿ 20 ಜಿಲ್ಲೆಗಳ ಕೃಷಿಭೂಮಿಗೆ ನೀರು ಸಿಗಲಿದೆ. ಆರಂಭದಲ್ಲಿ ಈ ಯೋಜನೆಯ ಅಂದಾಜು ವೆಚ್ಚ ₹ 80 ಸಾವಿರ ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ಯೋಜನೆಯ ವೆಚ್ಚ ₹ 1.2 ಲಕ್ಷ ಕೋಟಿ ಸಮೀಪಿಸಿತ್ತು.

ಈ ಯೋಜನೆಯನ್ನು ಜಗತ್ತಿನ ಎಂಜಿನಿಯರಿಂಗ್​ ಅದ್ಭುತ ಎಂದು ಪರಿಗಣಿಸಲಾಗಿದೆ. ಈ ಯೋಜನೆಯ ಗಾತ್ರ ಮತ್ತು ಸವಾಲು ಅದಕ್ಕೆ ಮುಖ್ಯ ಕಾರಣ. ಗೋದಾವರಿ ಮತ್ತು ಅದರ ಉಪನದಿ ಪ್ರಾಣಹಿತ ಸಂಗಮಿಸುವ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮೇದಿಗಡ್ಡದಲ್ಲಿ ಈ ಯೋಜನೆಗಾಗಿ ಬೃಹತ್ ಬ್ಯಾರೇಜ್ ನಿರ್ಮಾಣವಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ಗೋದಾವರಿ ನದಿಗೆ ಮತ್ತೆ ಪಂಪ್ ಮಾಡಿ, ಅಲ್ಲಿಂದ ಅದನ್ನು ಮೇಲೆತ್ತಿ ಹಲವು ಜಲಾಶಯಗಳ ವ್ಯವಸ್ಥೆಯ ಮೂಲಕ ಹರಿಸಲಾಗುತ್ತದೆ. ಇದಕ್ಕಾಗಿ ನೀರಾವರಿ ಕಾಲುವೆಗಳು, ಪೈಪ್​ಲೈನ್​ಗಳು ಮತ್ತು ಕಾಲುವೆಗಳ ಜಾಲ ವಿಸ್ತಾರವಾದ ಜಾಲವನ್ನೇ ನಿರ್ಮಿಸಲಾಗಿದೆ.

ಈ ಯೋಜನೆಗಾಗಿ ವಿಶ್ವದ ಅತಿಉದ್ದದ ನೀರಾವರಿ ಕಾಲುವೆಗಳು, ಬೃಹತ್ ಮೇಲುದೊಣೆ (aqua ducts), ಭೂಗತ ಜಲಾಶಯಗಳು ಮತ್ತು ಬೃಹತ್​ ಪಂಪ್​ಗಳನ್ನು ಅಳವಡಿಸಲಾಗಿದೆ. ಗೆಜ್ವಾಲ್ ಜಿಲ್ಲೆಯಲ್ಲಿರುವ ಕೊಂಡಪೊಚಮ್ಮ ಸಾಗರ ಈ ಯೋಜನೆಯ ಜಲಾಶಯ ಸರಪಳಿಯಲ್ಲಿರುವ ಕೊನೆಯ ಜಲಾಶಯ. ಅದು ಕಾಳೇಶ್ವರಂ ಯೋಜನೆ ಆರಂಭವಾಗುವ ಸ್ಥಳಕ್ಕೆ 227 ಕಿಮೀ ದೂರದಲ್ಲಿದೆ. ಮೇದಿಗಡ್ಡದಲ್ಲಿ ಗೋದಾವರಿ ನದಿಯಿಂದ ನೀರನ್ನು 618 ಮೀಟರ್​ಗಳಷ್ಟು ಎತ್ತರಕ್ಕೆ ಎತ್ತುವಳಿ ಮಾಡಲಾಗುತ್ತದೆ. ಕಾಲೇಶ್ವರಂ ಯೋಜನೆಯ ಕಾಲುವೆಗಳ ಒಟ್ಟು ಉದ್ದ 1,832 ಕಿಮೀ. ಈ ಪೈಕಿ 1,531 ಕಿಮೀ ಅಂತರಕ್ಕೆ ನೀರನ್ನು ಗುರುತ್ವಾಕರ್ಷಣೆ ಬಲದಿಂದಲೇ ಹರಿಸಲಾಗುತ್ತದೆ. 203 ಕಿಮೀ ಅಂತರದ ಕಾಲುವೆಗಳು ಸುರಂಗ ರೂಪದಲ್ಲಿವೆ. 20 ಕಡೆ ನೀರನ್ನು ಮೇಲೆತ್ತಲಾಗುತ್ತದೆ. ಇದಕ್ಕಾಗಿ 19 ಪಂಪ್​ಹೌಸ್​ಗಳನ್ನು ಸ್ಥಾಪಿಸಲಾಗಿದೆ. ಯೋಜನೆಗಾಗಿ 145 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ 20 ಜಲಾಶಯಗಳನ್ನು ತೆಲಂಗಾಣದ 13 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಏಳು ಮುಖ್ಯ ಕೊಂಡಿಗಳು ಮತ್ತು 28 ಪ್ಯಾಕೇಜ್​ಗಳಾಗಿ ಯೋಜನೆಯನ್ನು ವಿಂಗಡಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣದ ಕಾಳೇಶ್ವರಂ ಪ್ರಾಜೆಕ್ಟ್​ ಕುರಿತು ಜೂನ್ 25ಕ್ಕೆ ಡಿಸ್ಕವರಿ ಚಾನೆಲ್ ಸಾಕ್ಷ್ಯಚಿತ್ರ

Kaleshwaram-Project

ತೆಲಂಗಾಣದ ಕಾಳೇಶ್ವರಂ ಏತ ನೀರಾವರಿ ಯೋಜನೆಯ ವಿಹಂಗಮ ನೋಟ.

ಜಲಾಶಯಗಳು ಪರಸ್ಪರ ಸುಮಾರು 330 ಕಿಮೀ ಉದ್ದನೆಯ ವಿವಿಧ ಸುರಂಗಗಳ ಸಂಪರ್ಕ ಹೊಂದಿವೆ. ಯೆಲ್ಲಂಪಲ್ಲಿ ಜಲಾಶಯದಿಂದ ಮೇದರಮ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ 21 ಕಿಮೀ ಅಂತರದ ಸುರಂಗ ಕಾಲುವೆ ಈ ಯೋಜನೆಯ ಅತಿದೊಡ್ಡ ಸುರಂಗ ಕಾಲುವೆ ಎನಿಸಿದೆ. ರೈತರ ಕೃಷಿಭೂಮಿಗೆ ನೀರು ಒದಗಿಸುವ ಸಂಪರ್ಕ ಕಾಲುವೆಗಳ ಒಟ್ಟು ಅಂತರ 1832 ಕಿಮೀ. ನೀರು ಹರಿಸುವ ಮೊದಲ ಬಿಂದುವಿನಿಂದ ಕೊನೆಯಬಿಂದು, ಅಂದರೆ ನಲ್ಗೊಂಡ ಜಿಲ್ಲೆಯಲ್ಲಿರುವ ನಾರ್ಕೆಟ್​ಪಲ್ಲಿ ಗ್ರಾಮದ ಕೃಷಿಭೂಮಿ 500 ಕಿಮೀ ದೂರದಲ್ಲಿದೆ.

ಗೋದಾವರಿ ನದಿಯು ಸಮುದ್ರ ಮಟ್ಟಕ್ಕಿಂದ 100 ಮೀಟರ್ ಕೆಳಗೆ ಹರಿಯುತ್ತದೆ. ಆದರೆ ತೆಲಂಗಾಣದಲ್ಲಿ ಈ ಯೋಜನೆಯಿಂದ ನೀರು ಹರಿಸಬೇಕಾದ ಸ್ಥಳಗಳು ಸಮುದ್ರಮಟ್ಟದಿಂದ 300ರಿಂದ 650 ಮೀಟರ್ ಎತ್ತರದಲ್ಲಿವೆ. ನೀರನ್ನು ಅಚ್ಚರಿ ಎನಿಸುವಷ್ಟು ಸಾಮರ್ಥ್ಯದ ದೊಡ್ಡ ಪಂಪ್​ಗಳ ಮೂಲಕ ಮೇಲೆತ್ತಿ ಹರಿಸುವುದು ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಈ ಸವಾಲು ಎದುರಿಸುವ ಪ್ರಯತ್ನದಲ್ಲಿ ವಿಶ್ವದ ಎಂಜಿನಿಯರಿಂಗ್ ಅದ್ಭುತವೊಂದು ಸಾಕಾರಗೊಂಡಿತು.

2019ರ ಜುಲೈ ತಿಂಗಳಿಂದ 139 ಮೆಗಾವಾಟ್ ಸಾಮರ್ಥ್ಯದ ಏಳು ಬೃಹತ್​ ಪಂಪ್​ಗಳು ನೆಲಮಟ್ಟದಿಂದ 330 ಮೀಟರ್​ ಕೆಳಗೆ ಸ್ಥಾಪಿಸಲಾದ ಪಂಪ್​ಹೌಸ್​ನಲ್ಲಿ ಕಾರ್ಯಾರಂಭ ಮಾಡಿ ಮೇದಿಗಡ್ಡ ಬ್ಯಾರೇಜ್​ನಿಂದ ದಿನಕ್ಕೆ 2 ಟಿಎಂಸಿಯಷ್ಟು ನೀರು ಎತ್ತಲು ಆರಂಭಿಸಿದವು. ನೀರು ಹರಿಸಲೆಂದು ನಿರ್ಮಿಸಿದ 14.09 ಕಿಮೀ ಅಂತರದ ಸುರಂಗವು ವಿಶ್ವದ ಅತಿಉದ್ದದ ಕೃಷಿ ನೀರಾವರಿ ಸುರಂಗ ಎಂದು ಹೆಸರುಪಡೆದಿದೆ. ನೆಲದಡಿ ಕಾರ್ಯನಿರ್ವಹಿಸುವ ಈ ಪಂಪ್​ಗಳಲ್ಲಿ ಒತ್ತಡ ಇದ್ದಕ್ಕಿದ್ದಂತೆ ಹೆಚ್ಚಾದರೆ ಅದನ್ನು ತಡೆದುಕೊಳ್ಳಲೆಂದು 2 ಕೋಟಿ ಲೀಟರ್​ನಷ್ಟು ನೀರು ಸಂಗ್ರಹಿಸಿಕೊಳ್ಳಬಲ್ಲ ಸರ್ಜ್​ ಪೂಲ್​ಗಳನ್ನು ರೂಪಿಸಲಾಗಿದೆ.

ನೀರು ಹಂಚಿಕೆ ಒಪ್ಪಂದ ಈ ಯೋಜನೆಗಾಗಿ ತೆಲಂಗಾಣ, ಮಹಾರಾಷ್ಟ್ರ ಮತ್ತು ಅಂಧ್ರ ಪ್ರದೇಶ ಸರ್ಕಾರಗಳ ನಡುವೆ ನೀರು ಹಂಚಿಕೆ ಕುರಿತು ಮಹತ್ವದ ಒಪ್ಪಂದ ಆಗಿದೆ. ಇಂಥ ಒಪ್ಪಂದ ಊರ್ಜಿತದಲ್ಲಿರಲಿಲ್ಲ ಎನ್ನುವ ಕಾರಣಕ್ಕೆ ತೆಲಂಗಾಣದಲ್ಲಿ ನೀರಾವರಿ ಯೋಜನೆಗಾಗಿ ಜಲಾಶಯ ಅಥವಾ ಬ್ಯಾರೇಜ್ ಕಟ್ಟಲು 40 ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಮಾರ್ಚ್ 8, 2016ರಂದು ತೆಲಂಗಾಣ ಸರ್ಕಾರವು ಈ ಸಂಬಂಧ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹಲವು ದಶಕಗಳ ವಿವಾದ ಮತ್ತು ಭಿನ್ನಾಭಿಪ್ರಾಯ ಇದರಿಂದ ಶಮನಗೊಂಡಿದೆ. ಇಂಥದ್ದೊಂದು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾದ ಕಾರಣದಿಂದಲೇ ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆಯ ಮೇದಿಗಡ್ಡದಲ್ಲಿ ಕಾಲೇಶ್ವರಂ ಯೋಜನೆಯ ಬ್ಯಾರೇಜ್ ರೂಪಿಸಲು ಅವಕಾಶ ಸಿಕ್ಕಿದೆ.

ಬೃಹತ್ತು ಮತ್ತು ಮಹತ್ತು ಕಾಳೇಶ್ವರಂ ಯೋಜನೆಗಾಗಿ ಗೋದಾವರಿ ನದಿಯಿಂದ 2 ಟಿಎಂಸಿ ನೀರನ್ನು ಮೇಲೆತ್ತಲು 4,999.47 ಮೆಗಾವಾಟ್ ವಿದ್ಯುತ್ ಬೇಕಿದೆ. 3 ಟಿಎಂಸಿ ನೀರು ಮೇಲೆತ್ತಲು 7,152 ಮೆಗಾವಾಟ್ ವಿದ್ಯುತ್ ಬೇಕಾಗುತ್ತದೆ. ಈ ಯೋಜನೆಯ 8ನೇ ಘಟ್ಟದಲ್ಲಿ ನೀರೆತ್ತಲು 139 ಮೆಗಾವಾಟ್ ಸಾಮರ್ಥ್ಯದ ಪಂಪ್​ಗಳನ್ನು ಬಳಸಲು ತೆಲಂಗಾಣ ರಾಜ್ಯ ವಿದ್ಯುತ್ ಮಂಡಳಿ ನಿರ್ಧರಿಸಿದೆ. ನಮ್ಮ ದೇಶದ ಇತಿಹಾಸದಲ್ಲಿ ಇಷ್ಟುದೊಡ್ಡ ಪಂಪ್​ಗಳನ್ನು ಬಳಸುತ್ತಿರುವುದು ಇದೇ ಮೊದಲು. 139 ಮೆಗಾವಾಟ್ ಸಾಮರ್ಥ್ಯದ 20 ಪಂಪ್​ಗಳು ಕಾರ್ಯನಿರ್ವಹಿಸುವ ವಿಶ್ವದ ಅತಿದೊಡ್ಡ ಭೂಗತ ಪಂಪ್​ಹೌಸ್​​ ಅನ್ನು ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ಟಕ್ಚರ್ ಲಿಮಿಟೆಡ್ ಸ್ಥಾಪಿಸಿದೆ. ಈ ಬೃಹತ್ ಯೋಜನೆಗೆ ಸಂಬಂಧಿಸಿದ ಎಲ್ಲ ಮುಖ್ಯ ಪಂಪ್​ಹೌಸ್​ಗಳು ಮತ್ತು ಇತರ ಅಗತ್ಯ ಮೂಲಸೌಕರ್ಯಗಳನ್ನು ಇದೇ ಕಂಪನಿ ನಿರ್ಮಿಸಿದೆ.

ಗೋದಾವರಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಆಗಸ್ಟ್​ನಿಂದ ಅಕ್ಟೋಬರ್​ ನಡುವಣ 90 ದಿನಗಳಲ್ಲಿ ಈ ಯೋಜನೆಯ ಮೂಲಕ 141ರಿಂದ 180 ಟಿಎಂಸಿ ನೀರನ್ನು ಹರಿಸಿಕೊಳ್ಳಲಾಗುತ್ತದೆ. ಒಮ್ಮೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದ ನಂತರ ತೆಲಂಗಾಣ ರಾಜ್ಯವು ದೇಶದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಪ್ರವಾಸೋದ್ಯಮ, ನೀರಾವರಿ ಸಾಹಸಗಳ ಜೊತೆಗೆ ಮತ್ಸೋದ್ಯಮವೂ ದೊಡ್ಡಮಟ್ಟದಲ್ಲಿ ಬೆಳೆಯುವ ಸಾಧ್ಯತೆಯಿದೆ.

(Telangana Kaleshwaram water project considered as Engineering Marvel Documentary on this project will be aired on Discovery Channel)

ಇದನ್ನೂ ಓದಿ: IT Act Section 79 explainer: ಈಗ ಚರ್ಚೆಯಲ್ಲಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 79 ಅಂದರೇನು?

ಇದನ್ನೂ ಓದಿ: Explainer: ಹಲವು ಟ್ವಿಟರ್​ ಖಾತೆಗಳ ಫಾಲೊವರ್ಸ್ ಸಂಖ್ಯೆ​ ಇಳಿಯುತ್ತಿದೆ ಏಕೆ?

Published On - 7:55 pm, Sun, 20 June 21