National Herald Case: ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ? ಈ ಕೇಸಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪಾತ್ರವೇನು?
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತಲೆ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿರುವ ಈ ನ್ಯಾಷನಲ್ ಹೆರಾಲ್ಡ್ ಕೇಸ್ ಯಾವುದು? ಇದಕ್ಕೂ ಗಾಂಧಿ ಕುಟುಂಬಕ್ಕೂ ಏನು ಸಂಬಂಧ? ಇಲ್ಲಿದೆ ಪೂರ್ತಿ ಮಾಹಿತಿ.
ದೇಶಾದ್ಯಂತ ಮತ್ತೆ ಚರ್ಚೆಗೊಳಗಾಗಿರುವ ನ್ಯಾಷನಲ್ ಹೆರಾಲ್ಡ್ (National Herald Case) ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನವದೆಹಲಿಯ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮೊದಲು ನೂರಾರು ಕಾಂಗ್ರೆಸ್ (Congress) ಕಾರ್ಯಕರ್ತರು, ನಾಯಕರೊಂದಿಗೆ ದೆಹಲಿಯ ಇಡಿ ಕಚೇರಿಗೆ ರಾಹುಲ್ ಗಾಂಧಿ (Rahul Gandhi) ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ ತಲೆ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿರುವ ಈ ನ್ಯಾಷನಲ್ ಹೆರಾಲ್ಡ್ ಕೇಸ್ ಯಾವುದು? ಇದಕ್ಕೂ ಗಾಂಧಿ ಕುಟುಂಬಕ್ಕೂ ಏನು ಸಂಬಂಧ? ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ವಿವರಣೆ ನೀಡಲು ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರಣದಿಂದಾಗಿ ಇಡಿ ಸೋನಿಯಾ ಗಾಂಧಿಗೆ ಜೂನ್ 23ಕ್ಕೆ ವಿಚಾರಣೆಗೆ ಹಾಜರಾಗಲು ಹೊಸ ನೋಟಿಸ್ ಜಾರಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ. ರಾಹುಲ್ ಗಾಂಧಿ ಕೇರಳದ ವಯನಾಡಿನ ಲೋಕಸಭಾ ಸದಸ್ಯ ಕೂಡ ಹೌದು. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ನಡೆದ ಆಪಾದಿತ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಈ ತನಿಖೆ ನಡೆದಿದೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿತ್ತು. ಇದು 1937ರಲ್ಲಿ 5,000 ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಅದರ ಷೇರುದಾರರಾಗಿ ಸ್ಥಾಪಿಸಿತು. ಈ ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರಿದ್ದಲ್ಲ.
ಇದನ್ನೂ ಓದಿ: Breaking ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿಗೆ ಇಡಿ ಸಮನ್ಸ್
2010ರಲ್ಲಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ 1,057 ಷೇರುದಾರರನ್ನು ಹೊಂದಿತ್ತು. ಇದು ತೀವ್ರ ನಷ್ಟವನ್ನು ಅನುಭವಿಸಿತು. ಹೀಗಾಗಿ, ಅದರ ಹಿಡುವಳಿಗಳನ್ನು 2011ರಲ್ಲಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (YIL)ಗೆ ವರ್ಗಾಯಿಸಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅದರ ನಿರ್ದೇಶಕರ ಮಂಡಳಿಯಲ್ಲಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಾಗ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ‘ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
2012ರಲ್ಲಿ ಬಿಜೆಪಿ ನಾಯಕ ಮತ್ತು ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ನಿಂದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಕೆಲವು ಕಾಂಗ್ರೆಸ್ ನಾಯಕರು ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದರು. ವೈಐಎಲ್ ನ್ಯಾಷನಲ್ ಹೆರಾಲ್ಡ್ನ ಆಸ್ತಿಯನ್ನು ‘ದುರುದ್ದೇಶಪೂರಿತ’ ರೀತಿಯಲ್ಲಿ ಸ್ವಾಧೀನಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ಸಂಕ್ಷಿಪ್ತ ಟೈಮ್ಲೈನ್ ಹೀಗಿದೆ:
2008: ಜವಾಹರಲಾಲ್ ನೆಹರು ಅವರು 1938ರಲ್ಲಿ ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು 90 ಕೋಟಿ ರೂ.ಗೂ ಅಧಿಕ ಸಾಲದೊಂದಿಗೆ ಮುಚ್ಚಲ್ಪಟ್ಟಿತು. ಅವನತಿ ಹಂತದಲ್ಲಿದ್ದ ಆ ಪತ್ರಿಕೆಯನ್ನು ಉಳಿಸಲು ಆಗಿನ ಆಡಳಿತ ಪಕ್ಷ ಕಾಂಗ್ರೆಸ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL)ಗೆ 90 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲವನ್ನು ನೀಡಿತು. ಆದರೂ ಆ ಪತ್ರಿಕೆಯನ್ನು ಮರಳಿ ಮಾರುಕಟ್ಟೆಗೆ ತರುವ ಪ್ರಯತ್ನ ವಿಫಲವಾಯಿತು. ಹಾಗೇ, ಆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ.
2010: ಯಂಗ್ ಇಂಡಿಯಾ ಲಿಮಿಟೆಡ್ (YIL) ಅನ್ನು ನವೆಂಬರ್ನಲ್ಲಿ ಸ್ಥಾಪಿಸಲಾಯಿತು. ಇದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 76%ರಷ್ಟು ಬಹುಪಾಲು ಪಾಲನ್ನು ಹೊಂದಿದ್ದರು. ಮೋತಿಲಾಲ್ ವೋರಾ 24% ಮತ್ತು ಆಸ್ಕರ್ ಫೆರ್ನಾಂಡಿಸ್ 12% ಕಂಪನಿಯ ಷೇರುಗಳನ್ನು ಹೊಂದಿದ್ದರು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ ಮೂಲತಃ ಹಣವನ್ನು ಸಾಲವಾಗಿ ನೀಡಿದ ಕಾಂಗ್ರೆಸ್ ಯಂಗ್ ಇಂಡಿಯಾ ಲಿಮಿಟೆಡ್ಗೆ ಸಾಲವನ್ನು ನಿಗದಿಪಡಿಸಿತು. ಇದರರ್ಥ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಯಂಗ್ ಇಂಡಿಯಾ ಲಿಮಿಟೆಡ್ಗೆ 90 ಕೋಟಿ ರೂ.ಗಳನ್ನು ಮರುಪಾವತಿಸಬೇಕಾಗಿತ್ತು.
ಇದನ್ನೂ ಓದಿ: National Herald Case: ರಾಹುಲ್ ಗಾಂಧಿಗೆ ಸಮನ್ಸ್: ಕಾಂಗ್ರೆಸ್ ಪ್ರತಿಭಟನೆ, ಹಲವು ಮಂದಿ ಪೊಲೀಸ್ ವಶಕ್ಕೆ
AJL ಸಾಲವನ್ನು ಮರುಪಾವತಿ ಮಾಡುವ ಸ್ಥಿತಿಯಲ್ಲಿಲ್ಲದ ಕಾರಣ, ಕಂಪನಿಯು ತನ್ನ ಷೇರುಗಳನ್ನು ಗಾಂಧಿ ಒಡೆತನದ ಯಂಗ್ ಇಂಡಿಯಾ ಲಿಮಿಟೆಡ್ಗೆ ವರ್ಗಾಯಿಸಿತು. ಇದಕ್ಕಾಗಿ ಅವರು 50 ಲಕ್ಷ ರೂ. ಕಂಪನಿಯು 2,000 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಆಸ್ತಿಯನ್ನು ಹೊಂದಿದೆ ಎಂದು ಪರಿಗಣಿಸಿ ಕೇವಲ 50 ಲಕ್ಷ ರೂ.ಗಳನ್ನು ಪಾವತಿಸಿ ಸಾರ್ವಜನಿಕವಾಗಿ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಆರೋಪವನ್ನು ಗಾಂಧಿಯವರ ಮೇಲೆ ಹೊರಿಸಲಾಗಿದೆ.
2012: ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಕಾರ್ಯನಿರ್ವಹಿಸದ ಪತ್ರಿಕೆ ನ್ಯಾಷನಲ್ ಹೆರಾಲ್ಡ್ನ ಮಾಲೀಕತ್ವವನ್ನು ಪಡೆಯುವಲ್ಲಿ ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು.
2014: ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೋಮತಿ ಮನೋಚಾ ಗಾಂಧಿಯವರೂ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಸಮನ್ಸ್ ನೀಡಿದ್ದರು. ಆಗಸ್ಟ್ನಲ್ಲಿ ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ದೃಷ್ಟಿಕೋನದ ಬಗ್ಗೆ ಇಡಿ ತನಿಖೆಯನ್ನು ಪ್ರಾರಂಭಿಸಿತ್ತು.
2015: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯನ್ನು ಇಡಿ ಪುನರಾರಂಭಿಸಿತು. ಡಿಸೆಂಬರ್ನಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
2016: ಈ ಪ್ರಕರಣದ ಎಲ್ಲಾ ಐವರು ಆರೋಪಿಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫೆರ್ನಾಂಡಿಸ್ ಮತ್ತು ಸುಮನ್ ದುಬೆ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಲಾಯಿತು. ಆದರೆ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಿಲ್ಲ.
2017: ಈ ಪ್ರಕರಣದಲ್ಲಿ ಆಪಾದಿತ ಹಣ ದುರುಪಯೋಗದ ಕುರಿತು ತನಿಖೆ ನಡೆಸಲು ದೆಹಲಿ ಹೈಕೋರ್ಟ್ ಆದಾಯ ತೆರಿಗೆ ಇಲಾಖೆಗೆ ಅನುಮತಿ ನೀಡಲಾಯಿತು.
ಇದನ್ನೂ ಓದಿ: National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಜೂ. 13ಕ್ಕೆ ವಿಚಾರಣೆಗೆ ಹಾಜರಾಗಲು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ
2019: ಎಜೆಎಲ್ಗೆ ಅಕ್ರಮವಾಗಿ ಹಂಚಲಾಗಿದೆ ಎಂದು ಅವರು ಪ್ರತಿಪಾದಿಸಿದ 64.93 ಕೋಟಿ ರೂಪಾಯಿ ಮೌಲ್ಯದ ಗುರುಗ್ರಾಮ್ ಆಸ್ತಿಯನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಡಿ ಜಪ್ತಿ ಮಾಡಿದೆ.
2020: ನ್ಯಾಷನಲ್ ಹೆರಾಲ್ಡ್ನ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸುಬ್ರಮಣ್ಯಂ ಸ್ವಾಮಿ ಅವರು ಮೊಕದ್ದಮೆ ದಾಖಲಿಸಿದ ನಂತರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಮತ್ತೆ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.
2022: ಏಪ್ರಿಲ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನಿಸಿತು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 1ರಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.
ಜೂನ್ 13: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಹುಲ್ ಗಾಂಧಿ ಇಡಿ ಮುಂದೆ ಹಾಜರಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Mon, 13 June 22