AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ: ರನ್‌ವೇ ಸ್ಥಗಿತ, ನೂರಾರು ವಿಮಾನಗಳ ಸಂಚಾರ ವ್ಯತ್ಯಯ!

ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನವೊಂದರ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿ ರನ್‌ವೇ ಸ್ಥಗಿತಗೊಂಡಿತ್ತು. ಈ ಘಟನೆಯಿಂದ ನೂರಾರು ವಿಮಾನಗಳ ಹಾರಾಟ ರದ್ದುಗೊಂಡು ತೀವ್ರ ಸಂಚಾರ ವ್ಯತ್ಯಯ ಉಂಟಾಯಿತು. ಅದೃಷ್ಟವಶಾತ್ ಪೈಲಟ್‌ಗಳು ಸುರಕ್ಷಿತವಾಗಿದ್ದು, ಹಲವು ಗಂಟೆಗಳ ನಂತರ ರನ್‌ವೇ ಪುನರ್ ಆರಂಭಗೊಂಡಿದೆ.

ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ: ರನ್‌ವೇ ಸ್ಥಗಿತ, ನೂರಾರು ವಿಮಾನಗಳ ಸಂಚಾರ ವ್ಯತ್ಯಯ!
ಪುಣೆ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನ ತುರ್ತು ಭೂಸ್ಪರ್ಶ
ಭಾವನಾ ಹೆಗಡೆ
|

Updated on:Apr 18, 2026 | 10:35 AM

Share

ಪುಣೆ, ಏಪ್ರಿಲ್ 18: ಮಹಾರಾಷ್ಟ್ರದ ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pune) ಶುಕ್ರವಾರ ತಡರಾತ್ರಿ ಭಾರತೀಯ ವಾಯುಪಡೆಯ ಯುದ್ಧ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ರನ್‌ವೇ ಮೇಲೆ ತುರ್ತು ಭೂ ಸ್ಪರ್ಷ ಮಾಡಿದ್ದು, ದೇಶೀಯ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು.

ಏನಿದು ಘಟನೆ?

ಶುಕ್ರವಾರ ರಾತ್ರಿ ಸುಮಾರು 10:25ರ ಸುಮಾರಿಗೆ ವಾಯುಪಡೆಯ ಯುದ್ಧ ವಿಮಾನವೊಂದು ವಾಡಿಕೆಯ ತರಬೇತಿ ಹಾರಾಟದ ನಂತರ ಭೂಸ್ಪರ್ಶ ಮಾಡುವಾಗ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದ ಅಡಿಭಾಗದ ಚಕ್ರಗಳ ವ್ಯವಸ್ಥೆಯಲ್ಲಿ (Undercarriage) ತಾಂತ್ರಿಕ ವೈಫಲ್ಯ ಉಂಟಾದ ಪರಿಣಾಮ ಅದು ರನ್‌ವೇ ಮೇಲೆಯೇ ನಿಂತುಬಿಟ್ಟಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪೈಲಟ್‌ಗಳು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.

ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ ವಾಯುಪಡೆ, ವಿಮಾನದಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯಾವುದೇ ಹಾನಿಯಾಗಿಲ್ಲ. ವಿಮಾನಯಾನವನ್ನು ಪುನಃ ಕಾರ್ಯಾಚರಣೆಗೆ ತರುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿತು. ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಅಗತ್ಯ ಭದ್ರತಾ ಪರಿಶೀಲನೆಗಳ ನಂತರ ರನ್‌ವೇ ಮತ್ತೆ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಘೋಷಿಸಿತು.

ಪುಣೆ ವಿಮಾನ ನಿಲ್ದಾಣದಲ್ಲಿ  ಲೋಹಗಾಂವ್ ವಾಯುಪಡೆ ಕೇಂದ್ರದೊಂದಿಗೆ ನಾಗರಿಕ ವಿಮಾನಗಳೂ ಕಾರ್ಯನಿರ್ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದ ತಕ್ಷಣ ಸುರಕ್ಷತಾ ಕ್ರಮವಾಗಿ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ರನ್‌ವೇ ಕ್ಲಿಯರ್ ಮಾಡಲು 4 ರಿಂದ 6 ಗಂಟೆಗಳ ಕಾಲ ಹಿಡಿಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದರು.

ವಿಮಾನಯಾನದ ಮೇಲೆ ಭಾರಿ ಹೊಡೆತ

ಈ ಅವಧಿಯಲ್ಲಿ ಅನೇಕ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದುಪಡಿಸಲಾಯಿತು. ಇಂಡಿಗೋ 31 ಆಗಮನ ಮತ್ತು 34 ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದರೆ, ಏರ್ ಇಂಡಿಯಾ ಮೂರು ಆಗಮನ ಮತ್ತು ಮೂರು ನಿರ್ಗಮನ ವಿಮಾನಗಳನ್ನು ರದ್ದುಪಡಿಸಿದೆ. ಸ್ಪೈಸ್ ಜೆಟ್ ಹಾಗೂ ಆಕಾಶ ಏರ್ ತಲಾ ಎರಡು ಆಗಮನ ಮತ್ತು ಮೂರು ನಿರ್ಗಮನಗಳನ್ನು ರದ್ದುಪಡಿಸಿದವು. ಏರ್ ಇಂಡಿಯಾ ಎಕ್ಸ್​ಪ್ರೆಸ್ ಐದು ಆಗಮನ ಮತ್ತು ಐದು ನಿರ್ಗಮನಗಳನ್ನು ರದ್ದುಪಡಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಇಂಡಿಗೋ ವಿಮಾನ ಸಂಸ್ಥೆ ಪ್ರಯಾಣ ಸಲಹೆ ಹೊರಡಿಸಿದ್ದು, ವಿಮಾನ ಸ್ಥಿತಿ ಪರಿಶೀಲಿಸಿ ಬಳಿಕವೇ ವಿಮಾನ ನಿಲ್ದಾಣಕ್ಕೆ ಬರಲು ಮನವಿ ಮಾಡಿದೆ. ಪರ್ಯಾಯ ಬುಕ್ಕಿಂಗ್ ಅಥವಾ ಸಂಪೂರ್ಣ ಹಣ ಮರುಪಾವತಿ ಆಯ್ಕೆಯನ್ನೂ ನೀಡಲಾಗಿದೆ.

ಇದನ್ನೂ ಓದಿ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?

ಸಚಿವರ ಭರವಸೆ

ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದರು. ಯುದ್ಧ ವಿಮಾನವನ್ನು ತೆರವುಗೊಳಿಸಿ, ರನ್‌ವೇ ಪರೀಕ್ಷೆ ನಡೆಸಿದ ನಂತರ ಶನಿವಾರ ಬೆಳಗಿನ ಜಾವದ ವೇಳೆಗೆ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ವಾಯುಪಡೆ ಟ್ವೀಟ್ ಮೂಲಕ ತಿಳಿಸಿದೆ.

ಪ್ರಯಾಣಿಕರಿಗೆ ಸೂಚನೆ

ವಿಮಾನ ರದ್ದತಿಯಿಂದ ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಇಂಡಿಗೋ ಸಂಸ್ಥೆಯು ‘ಪ್ಲಾನ್ ಬಿ’ ಅಡಿಯಲ್ಲಿ ಪೂರ್ಣ ಹಣ ಮರುಪಾವತಿ ಅಥವಾ ಪರ್ಯಾಯ ವಿಮಾನದ ವ್ಯವಸ್ಥೆ ಕಲ್ಪಿಸುವುದಾಗಿ ಘೋಷಿಸಿದೆ. ಹವಾಮಾನ ಅಥವಾ ಇಂತಹ ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Sat, 18 April 26

Follow Us