ದೆಹಲಿಯಲ್ಲಿ ನ. 7, 8ರಂದು ಮಾತ್ರ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ; ದೀಪಾವಳಿ ಬಳಿಕ ಮತ್ತೆ ನಿಷೇಧ
ದೀಪಾವಳಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ನವೆಂಬರ್ 7 ಮತ್ತು 8ರಂದು ದೆಹಲಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ (ಎನ್‌ಸಿಆರ್) ಹಸಿರು ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್ ಇಂದು ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಈ ಸಡಿಲಿಕೆಯು ಕೇವಲ ನಿಯಮಿತ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ದ್ವಿಪೀಠವು ಈ ಆದೇಶವನ್ನು ಹೊರಡಿಸಿದೆ. ಈ 2 ದಿನಗಳಲ್ಲಿ ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ ಮತ್ತು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ನವೆಂಬರ್ 9 ರಿಂದ ಹಸಿರು ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವು ಪುನಃ ಜಾರಿಗೆ ಬರಲಿದೆ.

ನವದೆಹಲಿ, ನವೆಂಬರ್ 2: ದೀಪಾವಳಿ ಹಬ್ಬದ ಸಂಭ್ರಮಾಚರಣೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನವೆಂಬರ್ 7 ಮತ್ತು 8ರಂದು ಪ್ರಮಾಣೀಕೃತ ‘ಹಸಿರು ಪಟಾಕಿಗಳನ್ನು’ ಸಿಡಿಸಲು ಸುಪ್ರೀಂ ಕೋರ್ಟ್ ತಾತ್ಕಾಲಿಕ ಅನುಮತಿ ನೀಡಿದೆ. ಆದರೆ, ಈ ಆದೇಶ ಕೇವಲ ದೀಪಾವಳಿಯ 2 ದಿನಗಳಿಗೆ ಮಾತ್ರ ಅನ್ವಯಿಸಲಿದ್ದು, ನವೆಂಬರ್ 9ರಿಂದ ಪಟಾಕಿ ಮೇಲಿನ ಸಂಪೂರ್ಣ ನಿಷೇಧವನ್ನು ಪುನಃ ಜಾರಿಗೆ ತರಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, ಮಾಲಿನ್ಯ ನಿಯಂತ್ರಣ ಮತ್ತು ಹಬ್ಬದ ಆಚರಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಈ ನಿರ್ಧಾರ ಕೈಗೊಂಡಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಮುಖ ಮುಖ್ಯಾಂಶಗಳು:
ನವೆಂಬರ್ 7 ಮತ್ತು 8ರಂದು ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ, ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ದೀಪಾವಳಿ ಮುಗಿದ ತಕ್ಷಣ ಅಂದರೆ ನವೆಂಬರ್ 9ರಿಂದ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಹಾಗೂ ಸಿಡಿಸುವುದರ ಮೇಲಿನ ಸಂಪೂರ್ಣ ನಿಷೇಧ ಹೇರಲಾಗುವುದು. ಹಾಗೇ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಶಾಂತ ವಲಯಗಳ ಸುತ್ತಮುತ್ತಲಿನ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಟಾಕಿ ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
#BREAKING: The Supreme Court has permitted the use of green firecrackers in Delhi-NCR on November 7 and 8, between 6 am and 7 am and 8 pm and 10 pm https://t.co/dwDaph29rV
— IANS (@ians_india) November 2, 2026
ಇದನ್ನೂ ಓದಿ: ‘ಯಾರ ಭಾವನೆಗಳಿಗೂ ಧಕ್ಕೆ ತರಲು ಇಷ್ಟವಿಲ್ಲ’; ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧಕ್ಕೆ ಒಪ್ಪದ ಸುಪ್ರೀಂ ಕೋರ್ಟ್
ಅಧಿಕೃತ ಮಳಿಗೆಗಳಲ್ಲಿ ಮಾತ್ರ ಮಾರಾಟ:
CSIR-NEERI ಮತ್ತು PESO ನಿಗದಿಪಡಿಸಿದ ಕ್ಯೂಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳನ್ನು ಸರ್ಕಾರ ಗುರುತಿಸಿದ ಅಧಿಕೃತ ಮಳಿಗೆಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ಆನ್‌ಲೈನ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ಮಾರಾಟಗಾರರ ಲೈಸೆನ್ಸ್ ಅನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ಕೋರ್ಟ್ ನಿರ್ದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




