ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದ್ರು.. ಭರ್ಜರಿ ಸ್ವಾಗತ ಸಿಕ್ತು.. ದೊಡ್ಡಣ್ಣ ಕೂಡ ನಾವು ನೀಡಿದ ಆತಿಥ್ಯಕ್ಕೆ ಮಾರುಹೋದ್ರು. ನಾವೆಲ್ಲ ನಮಸ್ತೆ ಟ್ರಂಪ್ ಅಂದದ್ದಾಯ್ತು. ಆದ್ರೆ, ಸಿಕ್ಕಿದ್ದೇನು.. ವಿಶ್ವದ ಶಕ್ತಿಶಾಲಿ ರಾಷ್ಟ್ರದ ಪವರ್ಫುಲ್ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿ ನೀಡಿ ಹಾಗೇ ಹೋಗೋಕೆ ಸಾಧ್ಯವೆ. ಇಲ್ಲ.. ಯಾಕಂದ್ರೆ ಭಾರತ ಅಮೆರಿಕ ನಡುವೆ ಮಹತ್ವದ ಒಪ್ಪಂದಗಳಾಗಿವೆ. ಈ ಒಪ್ಪಂದಿಂದ ನಮ್ಮ ಸೇನೆಗೆ ನೂರಾನೆ ಬಲ ಬಂದಿದೆ.
ಡೋನಾಲ್ಡ್ ಟ್ರಂಪ್ ಇವತ್ತು ಎರಡು ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ನಿಯೋಗ ಮಟ್ಟದ ಮಾತುಕತೆಗಳು ನಡೆದಿವೆ. ಮೂರು ಒಪ್ಪಂದಗಳಿಗೆ ಭಾರತ-ಆಮೆರಿಕಾ ಸಹಿ ಹಾಕಿವೆ. ಈ ಒಪ್ಪಂದಗಳಿಂದ ಭಾರತಕ್ಕೆ ಆಗೋ ಲಾಭವೇನು, ಟ್ರಂಪ್ ಭೇಟಿಯಿಂದ ಭಾರತಕ್ಕೆ ಎಷ್ಟು ಲಾಭವಾಯ್ತು ಅನ್ನೋದರ ರಿಪೋರ್ಟ್ ಇಲ್ಲಿದೆ.
ಭಾರತ-ಆಮೆರಿಕಾ ನಡುವೆ 3 ಒಪ್ಪಂದಗಳಿಗೆ ಸಹಿ: ಭಾರತ ಪ್ರವಾಸದಲ್ಲಿರುವ ಆಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್‌ಗೆ ನೆನ್ನೆ ಜನರಿಂದ ಭರ್ಜರಿ ಸ್ವಾಗತ ಸಿಕ್ಕಿತ್ತು. ಅಹಮದಾಬಾದ್ ಏರ್ ಪೋರ್ಟ್ ನಿಂದ ಮೊಟೆರಾ ಸ್ಟೇಡಿಯಂವರೆಗೆ ಒಂದೂವರೆ ಲಕ್ಷ ಜನರು ಸೇರಿದ್ದರು. ಇಂದು ಡೋನಾಲ್ಡ್ ಟ್ರಂಪ್ ಮೋದಿ ಜೊತೆ ಬ್ಯುಸಿನೆಸ್ ಡೀಲ್‌ಗಳಿಗೆ ಇಳಿದಿದ್ದರು.
ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಪ್ರೆಸಿಡೆಂಟ್ ಟ್ರಂಪ್ ಹಾಗೂ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಎರಡೂ ದೇಶಗಳ ನಿಯೋಗ ಮಟ್ಟದ ಮಾತುಕತೆಗಳು ನಡೆದವು. ಎರಡು ಗಂಟೆ ನಡೆದ ಮಾತುಕತೆ ವೇಳೆ 3 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಸಹಿ ಹಾಕಲಾದ ಒಪ್ಪಂದಗಳು: 1-ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಒಪ್ಪಂದ 2-ವೈದ್ಯಕೀಯ ಉಪಕರಣಗಳ ಸಂರಕ್ಷಣೆ ಒಪ್ಪಂದ 3-ಇಂಧನ ಕ್ಷೇತ್ರದ ಸಹಕಾರ ಒಪ್ಪಂದ
ಈ ಮೂರು ಒಪ್ಪಂದಗಳಲ್ಲದೇ, ಭಾರತೀಯ ನೌಕಾಪಡೆಗಾಗಿ ಭಾರತವು ಆಮೆರಿಕಾದಿಂದ ಎಂಎಚ್60 ಮಲ್ಟಿ ರೋಲ್ ಹೆಲಿಕಾಪ್ಟರ್ ಖರೀದಿಗೆ ಸಹಿ ಹಾಕಿದೆ. ಜತೆಗೇ ಅಪಾಚಿ ಹೆಲಿಕಾಪ್ಟರ್‌ಗಳನ್ನ ಭಾರತವು ಆಮೆರಿಕಾದಿಂದ ಖರೀದಿಸಲು ಸಹಿ ಹಾಕಿದೆ ಎಂದು ಆಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಲ್ಟಿ ರೋಲ್ ಹೆಲಿಕಾಪ್ಟರ್ ಖರೀದಿಗೆ ಒಪ್ಪಂದ: ಭಾರತದ ನೌಕಾಪಡೆಗೆ ಆಮೆರಿಕಾದ ಬಳಿ ಇರುವ ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳ ಅಗತ್ಯ ಇದೆ. ಎಂಎಚ್60 ಮಲ್ಟಿ ರೋಲ್ ಹೆಲಿಕಾಪ್ಟರ್‌ಗಳನ್ನು ಆಮೆರಿಕಾದಿಂದ ಖರೀದಿಸಲು ಎರಡೂ ದೇಶಗಳು ಸಹಿ ಹಾಕಿವೆ. 24 ಹೆಲಿಕಾಪ್ಟರ್‌ಗಳನ್ನು 3 ಬಿಲಿಯನ್ ಡಾಲರ್ ನೀಡಿ ಭಾರತವು ಆಮೆರಿಕಾದಿಂದ ಖರೀದಿಸಲಿದೆ.
ಅಂದ್ರೆ ರೂಪಾಯಿ ಲೆಕ್ಕದಲ್ಲಿ 21 ಸಾವಿರ ಕೋಟಿ ರೂಪಾಯಿ ಆಗಲಿದೆ. ಮುಂದಿನ 2 ವರ್ಷದಲ್ಲಿ ಆಮೆರಿಕಾವು ಈ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ನೀಡಲಿದೆ. ಲಾಕ್‌ಹೀಡ್ ಮಾರ್ಟಿನ್ ಗ್ರೂಪ್ ಕಂಪನಿಯು ಈ ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ. ಸರ್ಕಾರ-ಸರ್ಕಾರದ ಮಧ್ಯೆ ಹೆಲಿಕಾಪ್ಟರ್ ಖರೀದಿಯ ಒಪ್ಪಂದ ಏರ್ಪಟ್ಟಿದೆ.
ಆ್ಯಂಟಿ ಸಬ್‌ಮರೀನ್ ವಾರ್‌ಫೇರ್, ಆ್ಯಂಟಿ ಸರ್‌ಫೇಸ್ ವಾರ್‌ಫೇರ್ ಹಾಗೂ ಶೋಧ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತೆ. ಭಾರತದ ನೌಕಾಪಡೆಯು ಸದ್ಯ ಬ್ರಿಟನ್ ಸೀ ಕಿಂಗ್ ಹೆಲಿಕಾಪ್ಟರಗಳನ್ನು ಬಳಸುತ್ತಿದೆ. ಇವುಗಳಿಗೆ ಇನ್ನೆರೆಡು ವರ್ಷದಲ್ಲಿ ನಿವೃತ್ತಿ ನೀಡಲಾಗುತ್ತಿದೆ. ಇವುಗಳ ಬದಲು ಎಂಎಚ್60 ಮಲ್ಟಿ ರೋಲ್ ಹೆಲಿಕಾಪ್ಟರಗಳನ್ನು ಬಳಸಲು ನೌಕಾಪಡೆ ಪ್ಲ್ಯಾನ್ ಮಾಡಿದೆ.
-ಭಾರತೀಯ ನೌಕಾಪಡೆಗೆ ಒಟ್ಟು 103 ಹೆಲಿಕಾಪ್ಟರ್‌ಗಳ ಅಗತ್ಯ ಇದೆ. ಆದರೇ, ಈಗ ಬರೀ 24 ಹೆಲಿಕಾಪ್ಟರ್‌ಗಳನ್ನ ಮಾತ್ರ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 80 ಹೆಲಿಕಾಪ್ಟರ್‌ಗಳನ್ನು ಆಮೆರಿಕಾದ ಜೊತೆ ಒಪ್ಪಂದ ಮಾಡಿಕೊಂಡು ಭಾರತದಲ್ಲಿ ಉತ್ಪಾದಿಸುವ ಪ್ಲ್ಯಾನ್ ಇದೆ.
-ಇನ್ನೂ ವ್ಯಾಪಾರ-ವಾಣಿಜ್ಯ ಕ್ಷೇತ್ರದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ಎರಡೂ ದೇಶಗಳ ನಾಯಕರು ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಗಳು ಪ್ರಗತಿಯಾಗಿದ್ದು, ಸಂತೋಷ ತಂದಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
-ಡೋನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಸದ್ಯಕ್ಕೆ ಯಾವುದೇ ಆರ್ಥಿಕ ಲಾಭವಾಗುತ್ತಿಲ್ಲ. ತಮ್ಮ ರಕ್ಷಣಾ ಉತ್ಪನ್ನಗಳನ್ನು ಭಾರತಕ್ಕೆ ಟ್ರಂಪ್ ಮಾರಿದ್ದಾರೆ. ಭಾರತವು ದುಡ್ಡು ಕೊಟ್ಟು ಹೆಲಿಕಾಪ್ಟರ್ ಖರೀದಿಸುತ್ತಿದೆ. ಭಾರತಕ್ಕೆ ವ್ಯಾಪಾರ-ವಾಣಿಜ್ಯದಲ್ಲಿ ಆಮೆರಿಕಾದಿಂದ ರಿಯಾಯಿತಿ, ವಿನಾಯಿತಿ ಬೇಕು.
ಭಾರತವನ್ನು ಜನರಾಲೈಸೆಡ್ ಪ್ರಿಪರೇನ್ಸ್ ಸಿಸ್ಟಮ್ ಪಟ್ಟಿಯಿಂದ ಆಮೆರಿಕಾ ಕೈ ಬಿಟ್ಟಿದೆ. ಇದರಿಂದ ಭಾರತಕ್ಕೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟದಿಂದ ಸಿಗುತ್ತಿದ್ದ ರಿಯಾಯಿತಿ, ಸೌಲಭ್ಯಗಳು ಸಿಗಲ್ಲ. ಹೀಗಾಗಿ ಭಾರತವನ್ನ ಅಭಿವೃದ್ದಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲೇ ಮುಂದುವರೆಸಲು ಆಮೆರಿಕಾದ ಮೇಲೆ ಭಾರತ ಒತ್ತಡ ಹೇರಬೇಕಾಗಿದೆ.