ಅಕ್ಟೋಬರ್ 22, 1947: ‘ಆಪರೇಷನ್ ಗುಲ್ಮಾರ್ಗ್’ ಕಾಶ್ಮೀರದ ಇತಿಹಾಸದಲ್ಲಿನ ಒಂದು ಕರಾಳ ದಿನ

ಅಕ್ಟೋಬರ್ 22, 1947: 'ಆಪರೇಷನ್ ಗುಲ್ಮಾರ್ಗ್' ಕಾಶ್ಮೀರದ ಇತಿಹಾಸದಲ್ಲಿನ ಒಂದು ಕರಾಳ ದಿನ
ಪ್ರಾತಿನಿಧಿಕ ಚಿತ್ರ

Operation Gulmarg ಜನರಲ್ ಅಕ್ಬರ್ ಖಾನ್ ಜೊತೆಗೆ, ಆಪರೇಷನ್ ಗುಲ್ಮಾರ್ಗ್ ಅನ್ನು ಯೋಜಿಸಿದ ಮತ್ತು ಕಾರ್ಯಗತಗೊಳಿಸಿದ ಇತರ ಜನರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಆಪ್ತ ಸಹಾಯಕ ಶೌಕತ್ ಹಯಾತ್ ಖಾನ್ ಕೂಡ ಇದ್ದರು

TV9kannada Web Team

| Edited By: Rashmi Kallakatta

Oct 22, 2021 | 1:50 PM

ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಕರಾಳ ದಿನವೆಂದರೆ ಅಕ್ಟೋಬರ್ 21-22, 1947. ಅಂದು ಮಧ್ಯರಾತ್ರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮೇಜರ್ ಜನರಲ್ ಅಕ್ಬರ್ ಖಾನ್ ನೇತೃತ್ವದಲ್ಲಿ ಗುಲ್ಮಾರ್ಗ್ ಕಾರ್ಯಾಚರಣೆ ಆರಂಭಿಸಲಾಯಿತು. ಹಾಗಾಗಿ ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಅಕ್ಟೋಬರ್ 22 ಅನ್ನು ಕಪ್ಪು ದಿನವಾಗಿ ಆಚರಿಸಲಾಗುತ್ತದೆ.

ಅಕ್ಟೋಬರ್ 22, 1947ರಂದು ನಡೆದದ್ದೇನು? ಭಾರತವು ಸ್ವಾತಂತ್ರ್ಯವನ್ನು ಪಡೆದು ಆಗಸ್ಟ್ 1947 ರಲ್ಲಿ ಪಾಕಿಸ್ತಾನವನ್ನು ರಚಿಸಲು ವಿಭಜನೆಯಾದಾಗ, ಜಮ್ಮು ಮತ್ತು ಕಾಶ್ಮೀರವು ಮಹಾರಾಜ ಹರಿ ಸಿಂಗ್ ಆಳ್ವಿಕೆಯ ರಾಜ್ಯವಾಗಿತ್ತು. ಅಕ್ಟೋಬರ್ 20-21, 1947 ರಂದು, ಸುಮಾರು 20,000 ಬುಡಕಟ್ಟು ಜನರು ಮುಜಫರಾಬಾದ್ ಮತ್ತು ಅಬ್ಬೋತ್ತಾಬಾದ್ (ಈಗ, ಪಾಕ್ ಆಕ್ರಮಿತ ಕಾಶ್ಮೀರ) ಸಂಪರ್ಕಿಸುವ ಹಜಾರಾ ರಸ್ತೆಯಲ್ಲಿ ನೀಲಂ ನದಿಗೆ ಅಡ್ಡಲಾಗಿರುವ ಸೇತುವೆಗಳನ್ನು ವಶಪಡಿಸಿಕೊಂಡರು. ಅಕ್ಟೋಬರ್ 21 ರ ವೇಳೆಗೆ ಮೊದಲ ಪ್ರಮುಖ ಪಟ್ಟಣವಾದ ಮುಜಫರಾಬಾದ್ ಅನ್ನು ಆಕ್ರಮಿಸಿಕೊಂಡರು, ಮತ್ತು ನಂತರ ಉರಿ ಕಡೆಗೆ ತೆರಳಿದರು. ಆ ದಿನ ಮೊದಲ ಭಾರತ-ಪಾಕಿಸ್ತಾನ ಯುದ್ಧ ಔಪಚಾರಿಕವಾಗಿ ಆರಂಭವಾಗಿತ್ತು. ದಾಳಿಗಳನ್ನು ಸಂಘಟಿಸಿದ ಪಾಕಿಸ್ತಾನ ಸೇನೆಯ ಮೇಜರ್ ಜನರಲ್ ಅಕ್ಬರ್ ಖಾನ್, ನಂತರ ಕರಾಚಿಯಲ್ಲಿ ಪ್ರಕಟವಾದ ‘ರೈಡರ್ಸ್ ಇನ್ ಕಾಶ್ಮೀರ’ (‘Raiders in Kashmir) ಪುಸ್ತಕದಲ್ಲಿ ತನ್ನ ಸಾಧನೆಯನ್ನು ವಿವರಿಸಿದ್ದಾರೆ

ಜನರಲ್ ಅಕ್ಬರ್ ಖಾನ್ ಜೊತೆಗೆ, ಆಪರೇಷನ್ ಗುಲ್ಮಾರ್ಗ್ ಅನ್ನು ಯೋಜಿಸಿದ ಮತ್ತು ಕಾರ್ಯಗತಗೊಳಿಸಿದ ಇತರ ಜನರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಆಪ್ತ ಸಹಾಯಕ ಶೌಕತ್ ಹಯಾತ್ ಖಾನ್ ಕೂಡ ಇದ್ದರು. ರಾಜ್ಯಾಡಳಿತವು ಅಕ್ಟೋಬರ್ 22, 1947 ಅನ್ನು ದಾಳಿಯ ದಿನಾಂಕವಾಗಿ ಆಯ್ಕೆ ಮಾಡಿತು. ಶೌಕತ್ ಖಾನ್ ತನ್ನ ‘ದಿ ನೇಷನ್ ದಟ್ ಲಾಸ್ಟ್ ಇಟ್ಸ್ ಇಟ್ ಸೋಲ್ ’ (‘The Nation That Lost its Soul’) ಪುಸ್ತಕದಲ್ಲಿ ತಾನು ಕಾಶ್ಮೀರ ಕಾರ್ಯಾಚರಣೆಯ ಮೇಲ್ವಿಚಾರಕನಾಗಿ ನೇಮಕಗೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.

ದಾಳಿಕೋರರ ಮೊದಲ ಗುರಿ ಮುಜಫರಾಬಾದ್ ಮತ್ತು ಮೀರ್‌ಪುರ್​​. ಅಕ್ಟೋಬರ್ 22, 1947 ರಂದು ಮೀರ್‌ಪುರ್​​ ಮತ್ತು ಮುಜಾಫರಾಬಾದ್ ಮೇಲೆ ದಾಳಿ ನಡೆಸಲಾಯಿತು. “ಕಲಿಮಾ” ಪಠಿಸಲು ಸಾಧ್ಯವಾಗದವರನ್ನು ಕೊಲ್ಲಲಾಯಿತು (ಅವರ ಧರ್ಮದ ಆಧಾರದ ಮೇಲೆ), ಅವರ ವಸ್ತುಗಳನ್ನು ದಾಳಿಕೋರರು ಲೂಟಿ ಮಾಡಿದರು. ಅಲ್ಪಸಂಖ್ಯಾತರು (ಹಿಂದುಗಳು ಮತ್ತು ಸಿಖ್ಖರು) ಎರಡು ಆಯ್ಕೆಗಳನ್ನು ಹೊಂದಿದ್ದರು -ಒಂದೋ ಸಾಯುವುದು ಅಥವಾ ಜಮ್ಮುವಿಗೆ ತಪ್ಪಿಸಿಕೊಳ್ಳುವುದು. ದಾಳಿಕೋರರು ಮೀರ್‌ಪುರ ಮತ್ತು ಮುಜಾಫರಾಬಾದ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಂಡರು, ಇದನ್ನು ಪಾಕಿಸ್ತಾನದ ಮಹಾನ್ ವಿಜಯವೆಂದು ಪರಿಗಣಿಸಲಾಗಿದೆ.

ನಂತರ ಮುಜಫ್ಫರಾಬಾದ್‌ಗೆ ಸಮೀಪವಿರುವ ಬಾರಾಮುಲ್ಲಾ ಜಿಲ್ಲೆಗೆ ಹೋಗುವ ಮಾರ್ಗದಲ್ಲಿ ಶ್ರೀನಗರವನ್ನು ವಶಪಡಿಸಿಕೊಳ್ಳುವುದು ಅವರ ಯೋಜನೆಯಾಗಿತ್ತು. ಅಕ್ಟೋಬರ್ 24 ರಂದು ಬಾರಾಮುಲ್ಲಾ ಮೇಲೆ ದಾಳಿ ಆರಂಭವಾಯಿತು. ಬಾರಾಮುಲ್ಲಾ ಮತ್ತು ಶ್ರೀನಗರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಸೇನೆಯು 20,000 ಕಬಾಲಿಗಳಿಗೆ (ಪಾಕಿಸ್ತಾನದ ಬುಡಕಟ್ಟು ಜನಾಂಗದವರಿಗೆ) ನಾಗರಿಕರ ಸೋಗಿನಲ್ಲಿ ಹೋಗುವಂತೆ ಸಹಾಯ ಮಾಡಿತು. ಬುಡಕಟ್ಟು ಜನರು ತಮ್ಮ ದಾರಿಯಲ್ಲಿ ಬಂದ ಎಲ್ಲವನ್ನೂ ನಾಶಪಡಿಸಿದರು.  ದಾಳಿಕೋರರು ಬಾರಾಮುಲ್ಲಾದ ಸೇಂಟ್ ಜೋಸೆಫ್ ಆಸ್ಪತ್ರೆಯನ್ನು ಕೂಡಾ ಬಿಡಲಿಲ್ಲ. ಅವರು ರೋಗಿಗಳನ್ನು, ವೈದ್ಯಕೀಯ ಸಿಬ್ಬಂದಿಯನ್ನು ಕೊಂದರು ಮತ್ತು ಆಸ್ಪತ್ರೆಯ ಕಟ್ಟಡವನ್ನು ಸುಟ್ಟುಹಾಕಿದರು. ಆಸ್ಪತ್ರೆಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರನ್ನು (Nun) ನಾಗರಿಕರ ವೇಷಭೂಷಣದಲ್ಲಿದ್ದ ಪಾಕಿಸ್ತಾನದ ಸೇನೆ ಅತ್ಯಾಚಾರ ಮಾಡಿ ಕೊಂದಿತು. ಅವರು ಆಸ್ಪತ್ರೆಯಲ್ಲಿ ಅನಾರೋಗ್ಯ, ಗಾಯಗೊಂಡ ರೋಗಿಗಳನ್ನು ಸಹ ಬಿಡಲಿಲ್ಲ.

ಅವರು ಯುವತಿಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿದರು. ಎಲ್ಲಾ ವಯಸ್ಸಿನ ಮಕ್ಕಳು, ವೃದ್ಧರು ಮತ್ತು ಪುರುಷರನ್ನು ಕೊಂದರು. ಈ ದಾಳಿಯು ಎಷ್ಟು ಮಾರಕವಾಗಿದೆಯೆಂದರೆ ಒಟ್ಟು 14,000 ಜನಸಂಖ್ಯೆಯಲ್ಲಿ ಕೇವಲ 3,000 ನಾಗರಿಕರು ಮಾತ್ರ ಬದುಕುಳಿದರು ಎಂದು ಹೇಳಲಾಗಿದೆ. ದಾಳಿಯ ಪ್ರಮುಖ ಅಪರಾಧಿ ಮೇಜರ್ ಜನರಲ್ ಅಕ್ಬರ್ ಖಾನ್ ತನ್ನ ಪುಸ್ತಕದಲ್ಲಿ ‘ರೈಡರ್ಸ್ ಇನ್ ಕಾಶ್ಮೀರ’ (‘Raiders in Kashmir)ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ದಾಳಿಕೋರರು ಮೀರ್‌ಪುರ, ಮುಜಾಫರಾಬಾದ್, ಉರಿ ಮತ್ತು ಬಾರಾಮುಲ್ಲಾವನ್ನು ಜಮ್ಮು ಮತ್ತು ಕಾಶ್ಮೀರ ಪಡೆಗಳಿಂದ ಕನಿಷ್ಠ ಪ್ರತಿರೋಧದೊಂದಿಗೆ ವಶಪಡಿಸಿಕೊಂಡಾಗ, ಶ್ರೀನಗರದ ಪತನ ಸನ್ನಿಹಿತವಾಗಿತ್ತು. ಅಕ್ಟೋಬರ್ 24 ರಂದು, ಮಹಾರಾಜ ಹರಿ ಸಿಂಗ್ ಆಕ್ರಮಣವನ್ನು ನಿಲ್ಲಿಸಲು ಮಿಲಿಟರಿ ಸಹಾಯಕ್ಕಾಗಿ ಭಾರತಕ್ಕೆ ಮನವಿ ಮಾಡಿದರು. ಅವರು ಶ್ರೀನಗರವನ್ನು ಕಳೆದುಕೊಳ್ಳುವ ಭಯದಲ್ಲಿದ್ದರು. ಅವರ ವಿನಂತಿಯನ್ನು ಅಕ್ಟೋಬರ್ 25 ರಂದು ಮೌಂಟ್ ಬ್ಯಾಟನ್ ನೇತೃತ್ವದಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್, ಬಲದೇವ್ ಸಿಂಗ್, ಖಾತೆಯಿಲ್ಲದ ಸಚಿವ ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಸೇನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ , ವಾಯುಪಡೆ ಮತ್ತು ನೌಕಾಪಡೆ ಸೇರಿದ ಭಾರತದ ರಕ್ಷಣಾ ಸಮಿತಿಯ ಸಭೆಯಲ್ಲಿ ಪರಿಗಣಿಸಲಾಯಿತು.

ಸಮಿತಿಯು “ಕಾಶ್ಮೀರ ಸರ್ಕಾರವು ಈಗಾಗಲೇ ವಿನಂತಿಸಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊರದಬ್ಬುವುದು ಅತ್ಯಂತ ಅಗತ್ಯವಾಗಿದೆ, ಇದು ಶ್ರೀನಗರದ ಸ್ಥಳೀಯ ಜನರಿಗೆ ದಾಳಿಕೋರರ ವಿರುದ್ಧ ಕೆಲವು ರಕ್ಷಣೆಯನ್ನು ನೀಡಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿತ್ತು ಎಂಬುದಾಗಿ ಲೆಫ್ಟಿನೆಂಟ್ ಜನರಲ್ ಕೆ. ನಂದಾ ಅವರ ಪುಸ್ತಕ ವಾರ್ ವಿದ್ ನೋ ಗೈನ್ಸ್ ನಲ್ಲಿ(‘War with No Gains’) ಹೇಳಿದೆ.

ಆದಾಗ್ಯೂ, ಜ್ಯೋತಿ ಭೂಷಣ್ ದಾಸ್ ಗುಪ್ತಾ ಅವರ ‘ಜಮ್ಮು ಮತ್ತು ಕಾಶ್ಮೀರ’  (‘Jammu and Kashmir’) ಪುಸ್ತಕದ ಪ್ರಕಾರ, ಮೌಂಟ್‌ಬ್ಯಾಟನ್ “ಕಾಶ್ಮೀರವು ಮೊದಲು ಸೇರಿಕೊಳ್ಳಲು ಮುಂದಾಗದಿದ್ದರೆ ಯಾವುದೇ ಸೈನ್ಯವನ್ನು ಕಳುಹಿಸುವುದು ಅಪಾಯಕಾರಿ” ಎಂದು ಎಚ್ಚರಿಸಿದರು, ಇದು ಭಾರತ-ಪಾಕಿಸ್ತಾನ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದರು. ಪ್ರವೇಶವನ್ನು ತಾತ್ಕಾಲಿಕ ಎಂದು ಪರಿಗಣಿಸಬೇಕು ಮತ್ತು “ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃ ಸ್ಥಾಪಿಸಿದಾಗ, ಕಾಶ್ಮೀರದ ಭವಿಷ್ಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಬೇಕು” ಎಂದು ಅವರು ಸಲಹೆ ನೀಡಿದರು.

ರಕ್ಷಣಾ ಸಮಿತಿಯು ರಾಜ್ಯ ಸಚಿವಾಲಯದ ಕಾರ್ಯದರ್ಶಿ ವಿ.ಪಿ. ಮೆನನ್ ಅವರನ್ನು ಶ್ರೀನಗರಕ್ಕೆ ಕಳುಹಿಸಿ ದಿನ “ಸ್ಥಳದಲ್ಲೇ ಅಧ್ಯಯನ” ಮಾಡಲು ಹೇಳಿತು. ಅವರು ತಮ್ಮ ಅನಿಸಿಕೆಗಳೊಂದಿಗೆ ಮರುದಿನ ನವದೆಹಲಿಗೆ ಮರಳಿ ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸಲು ಸೂಚಿಸಿದರು, “ಕಾಶ್ಮೀರವನ್ನು ದಾಳಿಕೋರರಿಂದ ರಕ್ಷಿಸುವ ಅತ್ಯುನ್ನತ ಅಗತ್ಯ” ವನ್ನು ಅವರು ಸೂಚಿಸಿದ್ದರು.

ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಹೊಸ ಪ್ರಧಾನಮಂತ್ರಿ ಮೆಹರ್ ಚಂದ್ ಮಹಾಜನ್ “ನಮಗೆ ವಿಮಾನ ಸಿಕ್ಕಿದರೆ ನಾವು 25ನೇ ತಾರೀಖು ಸಂಜೆ ಭಾರತಕ್ಕೆ ಹೋಗುತ್ತೇವೆ ಇಲ್ಲವಾದರೆ ಪಾಕಿಸ್ತಾನಕ್ಕೆ ಶರಣಾಗಲು ನಿರ್ಧರಿಸಿದ್ದೇನೆ ಎಂದು ಎಚ್ಚರಿಸಿದ್ದರು.

ಮೆನನ್ ಅವರನ್ನು ಸರ್ಕಾರದ ದೃಷ್ಟಿಕೋನದ ಬಗ್ಗೆ ಮಹಾರಾಜರಿಗೆ ಸಲಹೆ ನೀಡಲು ಜಮ್ಮುವಿಗೆ ಕರೆದೊಯ್ಯಲಾಯಿತು. ಆಗ ಮಹಾರಾಜರು ಅಂತಿಮವಾಗಿ ಅಕ್ಟೋಬರ್ 26 ಕ್ಕೆ ಜಮ್ಮು ಕಾಶ್ಮೀರ ಒಪ್ಪಂದಕ್ಕೆ (Instrument of Accession ) ಸಹಿ ಹಾಕಿದರು. ಮೆನನ್ ಮಹಾಜನ್ ರೊಂದಿಗೆ ದೆಹಲಿಗೆ ಮರಳಿದರು. ರಕ್ಷಣಾ, ಸಂವಹನ ಮತ್ತು ವಿದೇಶಿ ವ್ಯವಹಾರಗಳ ವಿಷಯಗಳಲ್ಲಿನ ಒಪ್ಪಂದಕ್ಕೆ ಈ ಮೂಲಕ ಸಹಿ ಮಾಡಲಾಗಿದೆ.

ಬಾರಮುಲ್ಲಾದ ಸಿಂಹ: ಕಾಶ್ಮೀರವನ್ನು ದಾಳಿಕೋರರಿಂದ ರಕ್ಷಿಸಿದ ಮಕ್ಬೂಲ್ ಶೆರ್ವಾನಿ ಕಾಶ್ಮೀರದ ಸಿಂಹ ಮಕ್ಬೂಲ್ ಶೇರ್ವಾನಿ ನ್ಯಾಷನಲ್ ಕಾನ್ಫರೆನ್ಸ್ ಜತೆ ಸಂಬಂಧ ಹೊಂದಿದ್ದಾರೆ. ಶ್ರೀನಗರಕ್ಕೆ ಹೋಗುವ ರಸ್ತೆಯ ಬಗ್ಗೆ ಕೇಳಿದಾಗ ಅವರು ದಾಳಿಕೋರರನ್ನು ದಾರಿ ತಪ್ಪಿಸಿದರು. ಶ್ರೀನಗರ ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳುವುದು ಪಾಕಿಸ್ತಾನದ ಯೋಜನೆಯಾಗಿತ್ತು. ಏಕೆಂದರೆ ತಕ್ಷಣದ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಯನ್ನು ನಿಯೋಜಿಸಲು ಇದು ಏಕೈಕ ಆಯ್ಕೆಯಾಗಿದೆ. ಶ್ರೀನಗರ ವಿಮಾನ ನಿಲ್ದಾಣವನ್ನು ನಿಯಂತ್ರಿಸುವುದು ಎಂದರೆ ಭಾರತದ ಇತರ ಭಾಗಗಳಿಂದ ಕಣಿವೆಯನ್ನು ಬೇರ್ಪಡಿಸುವುದಾಗಿದೆ.

ಆದಾಗ್ಯೂ, ಮಕ್ಬೂಲ್ ಶೆರ್ವಾನಿ ದಾಳಿಕೋರರನ್ನು ದಾರಿ ತಪ್ಪಿಸಿದರು ಮತ್ತು ಅವರನ್ನು ದಾರಿ ತಪ್ಪಿಸುವುದಕ್ಕಾಗಿ ತಪ್ಪು ಮಾರ್ಗವನ್ನು ಸೂಚಿಸಿದರು. ಆದಾಗ್ಯೂ, ಸ್ವಲ್ಪ ಸಮಯ ತಪ್ಪು ದಾರಿಯಲ್ಲಿ ಅಲೆದಾಡಿದ್ದರಿಂದ ಮತ್ತು ತಾವು ದಾರಿ ತಪ್ಪಿದ್ದನ್ನು ಅರಿತುಕೊಂಡ ನಂತರ, ದಾಳಿಕೋರರು ಶೇರ್ವಾನಿಯನ್ನು ಹುಡುಕಿ ಶಿಕ್ಷಿಸುವುದಕ್ಕಾಗಿ ಹಿಂತಿರುಗಿದರು. ಅವರು ಬಾರಾಮುಲ್ಲಾದಿಂದ 35 ಕಿಲೋಮೀಟರ್ ದೂರದಲ್ಲಿರುವ ಸುಂಬಲ್ ಬಂಡಿಪೋರಾದಲ್ಲಿ ಆತನನ್ನು ಪತ್ತೆ ಹಚ್ಚಿದರು. ಭಾರತೀಯ ದೇಶಭಕ್ತರಿಗೆ ಪಾಠವಾಗಲಿ ಎಂದು ದಾಳಿಕೋರರು ಆತನ ಎದೆಗೆ 14 ಗುಂಡುಗಳನ್ನು ಹಾರಿಸಿದ್ದರು.

ಒಪ್ಪಂದದ ನಂತರ ಭಾರತವು ಲೆಫ್ಟಿನೆಂಟ್ ಕರ್ನಲ್ ದಿವಾನ್ ರಂಜಿತ್ ರಾಯ್ ನೇತೃತ್ವದಲ್ಲಿ ಶ್ರೀನಗರಕ್ಕೆ ಸೇನಾಪಡೆಗಳನ್ನು ಮತ್ತು ಉಪಕರಣಗಳನ್ನು ಏರ್ ಲಿಫ್ಟ್ ಮಾಡಿತು, ಅಲ್ಲಿ ಅವರು ರಾಜಪ್ರಭುತ್ವದ ಪಡೆಗಳನ್ನು ಬಲಪಡಿಸಿದರು, ರಕ್ಷಣಾ ಪರಿಧಿಯನ್ನು ಸ್ಥಾಪಿಸಿದರು ಮತ್ತು ನಗರದ ಹೊರವಲಯದಲ್ಲಿ (ಶಾಲ್ಟೆಂಗ್) ಆಕ್ರಮಣಕಾರರನ್ನು ಸೋಲಿಸಿದರು. ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬುಡ್ಗಾಮ್‌ನಲ್ಲಿಯೂ ಯುದ್ಧ ನಡೆಯಿತು. ನವೆಂಬರ್ 8 ರ ಹೊತ್ತಿಗೆ, ಭಾರತೀಯ ಸೇನೆಯು ಶ್ರೀನಗರದ ಮೇಲೆ, ನವೆಂಬರ್ 9 ರಂದು ಬಾರಾಮುಲ್ಲಾ ಮತ್ತು ನವೆಂಬರ್ 13 ರ ಹೊತ್ತಿಗೆ ಉರಿಯ ಮೇಲೆ ಹಿಡಿತ ಸಾಧಿಸಿತು. ಆದಾಗ್ಯೂ, ಬುಡಕಟ್ಟು ಜನರಿಗೆ ಬೆಂಬಲವಾಗಿ ಪಾಕಿಸ್ತಾನದ ಪಡೆಗಳು ಔಪಚಾರಿಕವಾಗಿ ಯುದ್ಧಭೂಮಿಗೆ ಪ್ರವೇಶಿಸುವುದರೊಂದಿಗೆ, ಯುದ್ಧವು ಒಂದು ವರ್ಷಕ್ಕೂ ಹೆಚ್ಚು ಕಾಲ ಮುಂದುವರಿಯುತ್ತತ್ತು. ಡಿಸೆಂಬರ್ 31, 1948 ರ ರಾತ್ರಿ ಕದನ ವಿರಾಮವನ್ನು ಘೋಷಿಸಿದ್ದು ಕದನವಿರಾಮದ ನಿಯಮಗಳನ್ನು 1949ಜನವರಿ 5 ರಂದು ಅಂಗೀಕರಿಸಲಾಯಿತು.

ಪಾಕಿಸ್ತಾನವು ಕಾಶ್ಮೀರ ಪ್ರದೇಶದಲ್ಲಿ ಮುಸ್ಲಿಮರು, ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ಸಾವಿರಾರು ಕಾಶ್ಮೀರಿಗಳನ್ನು ಕೊಲ್ಲುವ ಮೂಲಕ ಹಿಂಸಾಚಾರ ಆರಂಭಿಸಿತು. ಸಾವಿರಾರು ಹಿಂದು/ಸಿಖ್ ಮಹಿಳೆಯರು ಇನ್ನೂ ಪತ್ತೆಯಾಗಿಲ್ಲ.

ಪಾಕಿಸ್ತಾನ ಮತ್ತು ಕಣಿವೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚೋದಿಸುವಲ್ಲಿ ಅದರ ಪಾತ್ರವನ್ನು ವಿರೋಧಿಸಲು ಭಾರತವು ಪ್ರತಿ ವರ್ಷ ಅಕ್ಟೋಬರ್ 22 ನ್ನು ‘ಕರಾಳ ದಿನ’ವಾಗಿ ಆಚರಿಸುತ್ತದೆ. ಅಕ್ಟೋಬರ್ 22, 1947 ರಂದು ಪಾಕಿಸ್ತಾನದ ದಾಳಿಕೋರರು ಲೂಟಿ ಮಾಡಿದ್ದು ಐತಿಹಾಸಿಕ ಪ್ರಮಾದವೆಸಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಬೆಚ್ಚಿಬೀಳಿಸಿದರು. ಈ ಹೊತ್ತಲ್ಲಿ ಭಾರತೀಯ ಸೇನೆಯು ಅವರ ರಕ್ಷಣೆಗೆ ಬಂದು ಆಕ್ರಮಣಕಾರರನ್ನು ಓಡಿಸಿತು.

ಲೇಖಕರು: ಸಾಜಿದ್ ಯೂಸಫ್ ಶಾ ವಕೀಲರು, ಕಾರ್ಯಕರ್ತರು ಮತ್ತು ಆಲ್ ಜೆಕೆ ಯುವ ಸಮಾಜದ ಅಧ್ಯಕ್ಷರು. ಇವರನ್ನು @TSKandar ಮೂಲಕ ತಲುಪಬಹುದು.

Disclaimer: ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ. ಲೇಖನದಲ್ಲಿ ಕಂಡುಬರುವ ಸತ್ಯಗಳು , ಅಭಿಪ್ರಾಯಗಳು Tv9 ಸಂಸ್ಥೆಯ ನಿಲುವುಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು Tv9 ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಹೊಂದುವುದಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada