೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB
IPL 2026 DC vs RCB: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 75 ರನ್ಗಳಿಗೆ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6.3 ಓವರ್ಗಳಲ್ಲಿ ಪಂದ್ಯ ಮುಗಿಸಿದ್ದರು. ಈ ಭರ್ಜರಿ ಚೇಸಿಂಗ್ ಹೊರತಾಗಿಯೂ ಆರ್ಸಿಬಿ ತಂಡ ಅಮೋಘ ದಾಖಲೆ ಬರೆಯುವ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದಾರೆ.
Updated on: Apr 28, 2026 | 2:52 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಮೋಘ ಗೆಲುವು ದಾಖಲಿಸಿದೆ. ಅದು ಕೂಡ ಕೇವಲ 6.3 ಓವರ್ಗಳಲ್ಲಿ ಪಂದ್ಯ ಮುಗಿಸುವ ಮೂಲಕ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಐಪಿಎಲ್ನ ಫಾಸ್ಟೆಸ್ಟ್ ಚೇಸಿಂಗ್ ದಾಖಲೆಯನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್ಸಿಬಿ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 16.3 ಓವರ್ಗಳಲ್ಲಿ 75 ರನ್ಗಳಿಸಿ ಆಲೌಟ್ ಆಯಿತು.

ಅದರಂತೆ 76 ರನ್ಗಳ ಸುಲಭ ಗುರಿ ಬೆನ್ನತ್ತಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಇಬ್ಬರು ಮೊದಲ ವಿಕೆಟ್ಗೆ 26 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ಬಳಿಕ ಬಂದ ವಿರಾಟ್ ಕೊಹ್ಲಿ (20) ಜೊತೆಗೂಡಿದ ದೇವದತ್ ಪಡಿಕ್ಕಲ್ 13 ಎಸೆತಗಳಲ್ಲಿ 34 ರನ್ ಸಿಡಿಸಿದರು. ಈ ಮೂಲಕ ಆರ್ಸಿಬಿ ಕೇವಲ 6.3 ಓವರ್ಗಳಲ್ಲಿ 76 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ಇತ್ತ ಆರ್ಸಿಬಿ ತಂಡವು ಕೇವಲ 39 ಎಸೆತಗಳಲ್ಲಿ ಚೇಸಿಂಗ್ ಮಾಡಿದರೂ ಇದು ಐಪಿಎಲ್ ಇತಿಹಾಸದ ಅತೀ ವೇಗದ ಚೇಸಿಂಗ್ ಅಲ್ಲ ಎಂಬುದು ವಿಶೇಷ. ಅಂದರೆ ಆರ್ಸಿಬಿಗಿಂತ ವೇಗವಾಗಿ ಮುಂಬೈ ಇಂಡಿಯನ್ಸ್ ಪಂದ್ಯ ಮುಗಿಸಿ ಇತಿಹಾಸ ನಿರ್ಮಿಸಿದ್ದಾರೆ.

2008 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ರಚಂಡ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 15.2 ಓವರ್ಗಳಲ್ಲಿ 67 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 5.3 ಓವರ್ಗಳಲ್ಲಿ ಚೇಸ್ ಮಾಡಿದ್ದರು. ಅಂದರೆ ಕೇವಲ 33 ಎಸೆತಗಳಲ್ಲಿ ಪಂದ್ಯ ಮುಗಿಸಿ ದಾಖಲೆ ಬರೆದಿದ್ದರು.

ಈ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶ ಆರ್ಸಿಬಿ ತಂಡದ ಮುಂದಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ಗಳು ಹೆಚ್ಚುವರಿ 6 ಎಸೆತಗಳನ್ನು ಎದುರಿಸುವ ಮೂಲಕ 39 ಎಸೆತಗಳಲ್ಲಿ 76 ರನ್ ಬಾರಿಸಿದ್ದಾರೆ. ಈ ಮೂಲಕ ಐಪಿಎಲ್ನ ಎರಡನೇ ವೇಗದ ಚೇಸಿಂಗ್ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.




