- Kannada News Photo gallery Cricket photos Wanindu Hasaranga Out of IPL 2026: LSG Faces Setback, Seeks Replacement
IPL 2026: ಗೆಲುವಿನ ಸಂತಸದಲ್ಲಿದ್ದ ಲಕ್ನೋ ತಂಡಕ್ಕೆ ಆಘಾತ; ಸ್ಟಾರ್ ಆಲ್‌ರೌಂಡರ್ ಐಪಿಎಲ್‌ನಿಂದ ಔಟ್
Wanindu Hasaranga Out of IPL 2026: ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ IPL 2026 ರಲ್ಲಿ ಆಘಾತ ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಗಾಯ ಮತ್ತು ಫಿಟ್ನೆಸ್ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ NOC ಇಲ್ಲದೆ ಆಡಲು ಸಾಧ್ಯವಿಲ್ಲ. ಹೀಗಾಗಿ, ಲಕ್ನೋ ತಂಡ ಬದಲಿ ಆಟಗಾರರ ಹುಡುಕಾಟದಲ್ಲಿದ್ದು, ದಕ್ಷಿಣ ಆಫ್ರಿಕಾದ ಜಾರ್ಜ್ ಲಿಂಡಾ ಹೆಸರು ಮುಂಚೂಣಿಯಲ್ಲಿದೆ. ಮುಂದಿನ 2-3 ದಿನಗಳಲ್ಲಿ LSG ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
Updated on: Apr 10, 2026 | 2:25 PM

2026 ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ತಂಡ ಸೋತರೂ, ಮುಂದಿನ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮೂರನೇ ಪಂದ್ಯವನ್ನು ಅತ್ಯಂತ ರೋಚಕವಾಗಿ ಗೆದ್ದುಕೊಂಡಿದ್ದ ಲಕ್ನೋ ತಂಡ ಸಂತಸದ ಅಲೆಯಲ್ಲಿ ತೇಲುತ್ತಿತ್ತು. ಇದರ ನಡುವೆ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ನರ್ ಶ್ರೀಲಂಕಾದ ವನಿಂದು ಹಸರಂಗ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಲಕ್ನೋ ತಂಡದ ನಿರ್ದೇಶಕ ಟಾಮ್ ಮೂಡಿ, ಲಂಕಾ ಆಲ್‌ರೌಂಡರ್ ವನಿಂದು ಹಸರಂಗ ಈ ಸೀಸನ್ನಲ್ಲಿ ತಂಡದ ಪರ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ 2-3 ದಿನಗಳಲ್ಲಿ ಫ್ರಾಂಚೈಸಿ ಅವರ ಬದಲಿ ಆಟಗಾರನನ್ನು ಘೋಷಿಸಲಿದೆ ಎಂದಿದ್ದಾರೆ. ಹರಾಜಿನಲ್ಲಿ ಹಸರಂಗಾ ಅವರನ್ನು 2 ಕೋಟಿ ಮೂಲ ಬೆಲೆಗೆ ಲಕ್ನೋ ಖರೀದಿ ಮಾಡಿತ್ತು.

ವಾಸ್ತವವಾಗಿ 2026 ರ ಟಿ20 ವಿಶ್ವಕಪ್ನ ಆರಂಭಿಕ ಪಂದ್ಯದಲ್ಲೇ ಹಸರಂಗಾ ಗಾಯಗೊಂಡಿದ್ದರು. ಹೀಗಾಗಿ ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಅಂದಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಹಸರಂಗಾ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಐಪಿಎಲ್ ಆರಂಭವಾಗಿ ಎರಡು ವಾರ ಕಳೆದರೂ ಹಸರಂಗಾ ಇನ್ನು ಸಂಪೂರ್ಣವಾಗಿ ಫಿಟ್ ಆಗಿಲ್ಲ.

ಹೀಗಾಗಿ ಸಂಪೂರ್ಣವಾಗಿ ಫಿಟ್ ಇರದ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಆಡಲು ಎನ್ಒಸಿ ನೀಡಲು ಸಾಧ್ಯವಿಲ್ಲ ಎಂಬ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆದೇಶ ಹಸರಂಗಾಗೆ ಮುಳುವಾಗಿದೆ. ಹಸರಂಗಾ ಐಪಿಎಲ್‌ನಲ್ಲಿ ಆಡಬೇಕಾದರೆ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಮಾಡಬೇಕು. ಹಾಗಾದರೆ ಮಾತ್ರ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಇಎಸ್‌ಪಿಎನ್-ಕ್ರಿಕ್‌ಇನ್ಫೋ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾರ್ಜ್ ಲಿಂಡಾ ಲಕ್ನೋದಲ್ಲಿ ಹಸರಂಗ ಬದಲಿಗೆ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡಾ ಇನ್ನೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿಲ್ಲ. ಆದಾಗ್ಯೂ, ಅವರು ಇತ್ತೀಚೆಗೆ ಟಿ20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.




