AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ವಿರುದ್ಧ ಸಮರಕ್ಕೆ ಬಿಜೆಪಿ-ಜೆಡಿಎಸ್ ಸಜ್ಜು: ಸಮನ್ವಯ ಸಭೆ ಮೂಲಕ ಶಕ್ತಿ ಪ್ರದರ್ಶನ; ದೋಸ್ತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು?

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಸಮನ್ವಯ ಸಮಿತಿ ಸಭೆ ನಡೆಯಿತು. 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸ್ಪಷ್ಟ ಗುರಿಯೊಂದಿಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸುತ್ತಿದೆ. ಬಳ್ಳಾರಿ ಚಲೋ ಪಾದಯಾತ್ರೆಯ ಯಶಸ್ಸಿನ ಬಳಿಕ ಅಕ್ಟೋಬರ್ 1ರಿಂದ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಕೇಸರಿ ಪಡೆ ಸಜ್ಜಾಗಿದ್ದು, ಜೆಡಿಎಸ್ ಕೂಡ ತನ್ನದೇ ಆದ ಹೋರಾಟಕ್ಕೆ ಮುಂದಾಗಿದೆ.

ಕಾಂಗ್ರೆಸ್​ ವಿರುದ್ಧ ಸಮರಕ್ಕೆ ಬಿಜೆಪಿ-ಜೆಡಿಎಸ್ ಸಜ್ಜು: ಸಮನ್ವಯ ಸಭೆ ಮೂಲಕ ಶಕ್ತಿ ಪ್ರದರ್ಶನ; ದೋಸ್ತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು?
ಬಿಜೆಪಿ, ಜೆಡಿಎಸ್​ ಸಮನ್ವಯ ಸಭೆImage Credit source: x/JoshiPralhad
ಸುನಿಲ್​ ಎಮ್​ ಹೆಚ್​
| Edited By: |

Updated on:Sep 26, 2026 | 7:45 PM

Share

ಬೆಂಗಳೂರು, ಸೆಪ್ಟೆಂಬರ್​​ 26: ರಾಜ್ಯದಲ್ಲಿರುವ ಕಾಂಗ್ರೆಸ್​ ಪಕ್ಷವನ್ನ ಸೋಲಿಸೋಕೆ ಬಿಜೆಪಿ, ಜೆಡಿಎಸ್​ ಮೈತ್ರಿ ತನ್ನದೇ ಲೆಕ್ಕಾಚಾರದ ಮೂಲಕ ಸದ್ದಿಲ್ಲದೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿ ಬೆನ್ನಲ್ಲೇ ಅಕ್ಟೋಬರ್ 1ರಿಂದ ಬೂತ್ ಮಟ್ಟದಲ್ಲಿ ಮತಬೇಟೆ ಗಿಳಿಯೋಕೆ ಕೇಸರಿ ಪಡೆ ಸರ್ವಸನ್ನದ್ಧ ಆಗಿದೆ. JDS ಕೂಡ ಪ್ರತ್ಯೇಕ ಹೋರಾಟ ಮಾಡ್ತಿದೆ. ಇದೀಗ 2028ರ ಚುನಾವಣೆ ದೃಷ್ಟಿಯಿಂದ ಸಮನ್ವಯ ಸಮಿತಿ ಸಭೆ ಮೂಲಕ ಮೈತ್ರಿ ಶಕ್ತಿ ಪ್ರದರ್ಶನ ಮಾಡಿದೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ, ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಘಟಾನುಘಟಿ ನಾಯಕರೇ ಭಾಗಿಯಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್​.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹೆಚ್​ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

ದೋಸ್ತಿ ಸಭೆಯಲ್ಲಿ ಪ್ರಮುಖವಾಗಿ ಏನೆಲ್ಲಾ ನಿರ್ಧಾರ ಕೈಗೊಳ್ಳಲಾಯ್ತು?

ಮುಂದಿನ ಎಲ್ಲ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಒಟ್ಟಾಗಿ ಎಲ್ಲಾ ಚುನಾವಣೆ ಎದುರಿಸಿ ಗೆಲ್ಲಲು ಮೈತ್ರಿ ನಾಯಕರು ಪಣ ತೊಟ್ಟಿದ್ದಾರೆ. ಇನ್ನು ಮುಂದಿನ‌ ಯಾವುದೇ ಚುನಾವಣೆ ಆದರೂ ಎನ್​ಡಿಎ ಅಭ್ಯರ್ಥಿಯ ಚುನಾವಣೆ ಆಗ್ಬೇಕು, ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿ ಚುನಾವಣೆ ಅಂತ ಬಿಂಬಿಸಬಾರದು ಅಂತಾ ಎನ್​ಡಿಎ ನಾಯಕರ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಆರ್. ಪಾಟೀಲ್ ಗರಂ: ಪ್ರಣಾಳಿಕೆ ಭರವಸೆ ಈಡೇರದ್ದಕ್ಕೆ ಆಕ್ರೋಶ

ಇದಷ್ಟೇ ಅಲ್ಲ, ಪರಿಷತ್, ಅಸೆಂಬ್ಲಿ, ಸಹಕಾರ ಚುನಾವಣೆಗೆ ದೋಸ್ತಿ ಜಂಟಿ‌‌ ಹೋರಾಟ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಪ್ರಮುಖ ವಿಚಾರ ಏನು ಅಂದರೆ ಮುಂದಿನ ಚುನಾವಣೆಯಲ್ಲಿ 150ರಿಂದ 180 ಸ್ಥಾನ ಗೆಲ್ಲಲು ಟಾಸ್ಕ್ ಕೊಡಲಾಗಿದೆ. ಬಿಜೆಪಿ-ಜೆಡಿಎಸ್ ಸರ್ಕಾರ ರಚಿಸುವ ಬಗ್ಗೆ ಮೈತ್ರಿ ನಾಯಕರು ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LIVE TV

ಬಿಜೆಪಿ, ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರದ ವೈಫಲ್ಯ ಮತದಾರರಿಗೆ ಮನವರಿಕೆ ಮಾಡಿಕೊಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂ ಡಿಕೆ ಶಿವಕುಮಾರ್​ ಹಣದ ಮೇಲೆ ಚುನಾವಣೆ ಮಾಡುತ್ತಾರೆ. ನಾವು ಜಂಟಿ ಆಗಿದರೆ ಮಾತ್ರ ಕಾಂಗ್ರೆಸ್​ ಮಣಿಸೋಕೆ ಸುಲಭ ಅಂತಾ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ನಾಲ್ಕು ಸ್ಥಾನ ಗೆಲ್ಲಲೇಬೇಕು: ಟಾಸ್ಕ್ ನೀಡಿದ ಪ್ರಲ್ಹಾದ್ ಜೋಶಿ

ಪರಿಷತ್​​​ನ 4 ಸ್ಥಾನಗಳ ಚುನಾವಣೆ ನಡೆಸುವ ಕುರಿತು ಪ್ರಸ್ತಾಪಿಸಿದ ಜೋಶಿ ಟಾಸ್ಕ್ ಕೊಟ್ಟಿದ್ದಾರೆ. ‘ನಮ್ಮ ಸಾಂಪ್ರದಾಯಿಕ ಮತಗಳು ಚದುರದಂತೆ ನೋಡಿಕೊಳ್ಳಬೇಕು, ಸರ್ಕಾರದ ಮೇಲೆ ಮುನಿಸಿಕೊಂಡಿರುವ ಮತ ಟಾರ್ಗೆಟ್ ಮಾಡಬೇಕು. ಮಾಜಿ ಶಾಸಕರು, ಹಾರ್ಡ್ ಕೋರ್ ಲೀಡರ್​​​ಗಳಿಗೆ ಜವಾಬ್ದಾರಿ ಹೆಚ್ಚು ನೀಡಬೇಕಿದೆ. ಅಂದಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು?

‘ಚುನಾವಣೆ ಬಂದಾಗ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಒಂದಾಗುತ್ತಾರೆ. ಡಿ.ಕೆ.ಶಿವಕುಮಾರ್ ಹಣದ ರಾಜಕಾರಣ ಮಾಡೋದು ನಿಶ್ಚಿತ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸೈಲೆಂಟ್ ಇದ್ದಾರೆ, ಚುನಾವಣೆ ವೇಳೆ ಸಿದ್ದರಾಮಯ್ಯ ಸಕ್ರಿಯವಾಗಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯಗೆ ಮಗನ ಭವಿಷ್ಯದ ಬಗ್ಗೆ ಯೋಚನೆ ಇದೆ, ಸಿದ್ದರಾಮಯ್ಯ ಮೌನ ತಾತ್ಕಾಲಿಕ, ಹೀಗಾಗಿಯೇ ಕಾಂಗ್ರೆಸ್ ಸೋಲಿಸಲು ಬಿಜೆಪಿ, JDS ಹೋರಾಟ ಮಾಡಬೇಕು’ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: 2028ರ ಚುನಾವಣೆ ಗೆಲ್ಲಲು ಬಿಜೆಪಿ ಭರ್ಜರಿ ಪ್ಲ್ಯಾನ್:ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಯಾತ್ರೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಮುಂದಿನ ಸಿಎಂ ಯಾರು ಅಂತಾ ಹೈಕಮಾಂಡ್ ನಿರ್ಧಾರ ಮಾಡಲಿದೆ. ಕಾರ್ಯಕರ್ತರಲ್ಲಿ ಗೊಂದಲ ಆಗೋದು ಬೇಡ’ ಅಂದಿದ್ದಾರೆ. ವಿಪಕ್ಷ ನಾಯಕ ಆರ್​.ಅಶೋಕ್ ಕೂಡ ಚುನಾವಣೆ ಗೆಲ್ಲೊದಕ್ಕೆ ಒಟ್ಟಿಗೆ ಕೆಲಸ ಮಾಡಬೇಕು ಅಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:43 pm, Sat, 26 September 26

Follow Us
ಸುನಿಲ್​ ಎಮ್​ ಹೆಚ್​
ಸುನಿಲ್​ ಎಮ್​ ಹೆಚ್​