Column: ಎಲ್ರೂ ಬದುಕಬೇಕಲ್ವಾ?; ಮಾತನಾಡದೆ ಇರುವುದೂ ತಪ್ಪೇ
Lonely : ಅವಳು ನಕ್ಕಿದ್ದು ಇರಲಿ, ಮುಗುಳುನಕ್ಕಿದ್ದೂ ಕಂಡಿರಲಿಲ್ಲ. ತನ್ನ ಪಾಡಿಗೆ ತಾ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಆಕೆ, ಒಬ್ಬಳೇ ಊಟ ಮಾಡುವುದು, ಕಾಫಿಗೆ ಹೋಗುವುದು ಕಂಡು ‘ಇದೊಂದು ನಮೂನೆ, ಕಾಡು ಪಾಪ’ ಎಂದು ಬೈದುಕೊಂಡು ಸುಮ್ಮನಾಗಿದ್ದಳು.
ಎಲ್ರೂ ಬದುಕಬೇಕಲ್ವಾ? : ‘ಹಲೋ ಮ್ಯಾಮ್, ಯಾವ ಡಿಪಾರ್ಟ್ಮೆಂಟ್ ನೀವು’ ಕ್ಯಾಂಟೀನಿನಲ್ಲಿ ಕಾಫಿ ಕುಡಿಯುತ್ತಾ ನಿಂತಿದ್ದ ಹೆಂಗಸನ್ನು ಕೇಳಿದಳು ನೀತಾ. ಹೊಸದಾಗಿ ಸೇರಿದ್ದ ಅವಳಿಗೆ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುವ, ಆದಷ್ಟು ಬೇಗ ಆಫೀಸಿನವರೊಂದಿಗೆ ಬೆರೆತು ಹಳಬಳಾಗುವ ತವಕ. ಡಿಪಾರ್ಟ್ಮೆಂಟ್ ಹೆಸರು ಹೇಳಿ ಮುಖ ತಿರುಗಿಸಿದ ಆಕೆಯನ್ನು ನೋಡಿ ಬೇಸರವಾಯಿತು. ಕೊನೆ ಪಕ್ಷ ‘ನೀವು ಹೊಸಬರಾ? ಯಾವ ಡಿಪಾರ್ಟ್ಮೆಂಟ್?’ ಅಂತನಾದರೂ ಕೇಳಬಹುದಿತ್ತು. ಒಂದು ಮುಗುಳುನಗು ಕೂಡ ಬೀರದೆ ಕಾಫಿ ಕಪ್ ಇಟ್ಟು ಹೊರಟ ಆಕೆಯನ್ನೇ ನೋಡುತ್ತಾ ಪೆಚ್ಚಾಗಿ ನಿಂತಳು. ಸಮಯ ಸರಿದಂತೆ ಆಫೀಸಿಗೆ ಹಳಬಳಾದಳು ನೀತಾ. ಅವಳ ಯೌವನ, ರೂಪ, ಲವಲವಿಕೆ, ಚುರುಕುತನ ಎಲ್ಲರನ್ನೂ ಸೆಳೆದಿತ್ತು. ನೀತಾ ಎಂದರೆ ಎಲ್ಲರಿಗೂ ಖುಷಿ, ವಯಸ್ಸಾದವರಿಗೆ ಮಗಳಂತೆ, ಚಿಕ್ಕವರಿಗೆ ಒಳ್ಳೆಯ ಸ್ನೇಹಿತೆ ಹಾಗೂ ಮುಂದೆ ಬಾಳಸಂಗಾತಿ ಆಗಬಹುದು ಎನ್ನುವ ಆಸೆ. ಆಫೀಸಿನ ಟ್ರಿಪ್, ಮೀಟಿಂಗ್, ಕಾರ್ಯಕ್ರಮ ಎಲ್ಲದರಲ್ಲಿ ಅವಳ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತಿತ್ತು. ಎಲ್ಲರೂ ತನ್ನನ್ನು ಮೆಚ್ಚಿದರೂ, ಆಕೆ ಮಾತ್ರ ತನ್ನ ಕಡೆಗೂ ತಿರುಗಿ ನೋಡದೆ ಇರುತ್ತಿದ್ದು ನೀತಾಳಿಗೆ ಬಹಳ ಬೇಸರ, ಸಿಟ್ಟು ಬರುತ್ತಿತ್ತು. ಡಾ. ಸಹನಾ ಪ್ರಸಾದ್ (Dr. Sahana Prasad)
ಆಕೆಯ ಹೆಸರು ಲಕ್ಷ್ಮಿ, ಯಾರೊಡನೆಯೂ ಬೆರೆಯುವುದು, ಮಾತನಾಡುವುದು ಇಲ್ಲ. ಉದ್ದನೆಯ ತೋಳಿನ ಬ್ಲೌಸ್, ಹೊಟ್ಟೆ, ಸೊಂಟ ಯಾವುದೂ ಕಾಣದಂತೆ ಉಟ್ಟ ಗಂಜಿ ಹಾಕಿ, ಇಸ್ತ್ರಿ ಮಾಡಿದ ಕಾಟನ್ ಸೀರೆ, ಕಿವಿಗೆ ಸಣ್ಣ ಓಲೆ, ಕೈಗೆ ಹಳೆಕಾಲದ ವಾಚು, ಬೋಳು ಕತ್ತು, ಬಿಗಿಯಾಗಿ ಹೆಣೆದ ಜಡೆ, ಹಣೆಗೆ ಸಣ್ಣ ಕಪ್ಪು ಬಿಂದಿ, ಇವೇ ಅವಳ ಅಲಂಕಾರ. ಅವಳು ನಕ್ಕಿದ್ದು ಇರಲಿ, ಒಂದು ಮುಗುಳುನಗೆ ಬೀರಿದ್ದು ಕೂಡ ಯಾರೂ ಕಂಡಿರಲಿಲ್ಲ. ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದ ಆಕೆ, ಒಬ್ಬಳೇ ಊಟ ಮಾಡುವುದು, ಕಾಫಿಗೆ ಹೋಗುವುದು ಕಂಡು ‘ಇದೊಂದು ನಮೂನೆ, ಕಾಡು ಪಾಪ’ ಎಂದು ಬೈದುಕೊಂಡು ಸುಮ್ಮನಾಗಿದ್ದಳು. ಬೇರೆಯವರು ಕೂಡ ಆಕೆಯ ಬಗ್ಗೆ ಆ ರೀತಿಯ ಅಭಿಪ್ರಾಯವೇ ಹೊಂದಿದ್ದರು.
ಈ ಮಧ್ಯೆ ನೀತಾಳಿಗೆ ಮದುವೆ ಗೊತ್ತಾಯಿತು. ಹುಡುಗ ಸ್ಫುರದ್ರೂಪಿ, ಒಳ್ಳೆಯ ಆಸ್ತಿವಂತ ಹಾಗೂ ವಿದ್ಯಾವಂತ. ಎಲ್ಲರಿಗೂ ಸಿಹಿ ಹಂಚಿ ಸುದ್ದಿ ತಿಳಿಸಿದಾಗ ಲಕ್ಷ್ಮಿಯ ಮುಂದೆ ಕೂಡ ಬಾಕ್ಸ್ ಹಿಡಿದಿದ್ದಳು. ಸಣ್ಣ ಚೂರು ಮುರಿದು, ಒಳ್ಳೆಯದಾಗಲಿ ಎಂದು ಪಿಸುಗುಟ್ಟಿ, ತನ್ನ ಕಂಪ್ಯೂಟರ್ ಕಡೆ ತಿರುಗಿದಾಕೆಯನ್ನು ಗಮನಿಸಲು ಮನಸ್ಸಿರಲಿಲ್ಲ ನೀತಾಳಿಗೆ. ಕಚೇರಿಯಲ್ಲಿ ಎಲ್ಲರೂ ಅವಳನ್ನು ಅಭಿನಂದಿಸುವವರೇ. ಆ ಹುಡುಗ ಕೂಡ ಒಮ್ಮೊಮ್ಮೆ ಇವಳನ್ನು ಸಂಜೆ ಪಿಕ್ ಮಾಡಲು ಬರುತ್ತಿದ್ದ. ಹೋಟೆಲು, ಸಿನೆಮಾ, ಪಾರ್ಕ್ ಎಂದು ಸುತ್ತುತ್ತಾ ಇದ್ದದ್ದನ್ನು ನಾಚಿಕೆಯಿಂದ ಎಲ್ಲರೊಡನೆ ಹಂಚಿಕೊಂಡಿದ್ದಳು. ಮನೆಮಟ್ಟಿಗೆ ನಿಶ್ಚಿತಾರ್ಥ ಆಯಿತು, ಮದುವೆಗೆ ಎಲ್ಲರನ್ನೂ ಕರೆಯುವೆ ಎಂದು ಬೆರಳ ಉಂಗುರ ತೋರಿಸಿದ್ದಳು. ಬಹಳ ದುಬಾರಿ ಆದರೆ ಅವನೇ ಇಷ್ಟಪಟ್ಟು ಕೊಡಿಸಿ, ತೊಡಿಸಿದ ಎಂದು ಫೋಟೋ ಕೂಡ ತೋರಿಸಿದ್ದಳು.
ಇದನ್ನೂ ಓದಿ : Literature: ಅನುಸಂಧಾನ; ‘ನನ್ನ ಕತೆಗಳಲ್ಲಿ ಈ ದೇಹ ಆನಂದದ ತಾಣವಾಗುವ ಬಗೆಯನ್ನು ತೋರಿಸಲು ಬಯಸುತ್ತೇನೆ’ ಬೆಲ್ ಆಲಿಡ್
ಮದುವೆಗೆ ಇನ್ನೂ 3 ತಿಂಗಳಿತ್ತು. ಹುಷಾರಿಲ್ಲ ಎಂದು ಒಂದು ವಾರ ರಜೆ ಹಾಕಿದ ನೀತಾ ಮತ್ತೆ ಹಾಜರಾದಾಗ ಅವಳ ಮುಖ ಬಾಡಿತ್ತು, ಕಣ್ಣಿನಲ್ಲಿ ನೋವಿನ ಛಾಯೆ, ಮೊಗದಲ್ಲಿ ದುಃಖ ಮಡುಗಟ್ಟಿತ್ತು. ಬೆರಳಿನ ಉಂಗುರ ಕಾಣೆಯಾಗಿ ಕಣ್ಣಿನ ಸುತ್ತಲೂ ಕಪ್ಪು ಉಂಗುರ ಮೂಡಿತ್ತು. ಜಾಸ್ತಿ ಮಾತನಾಡದೆ ತನ್ನ ಕೆಲಸ ಮುಗಿಸಿ ಹೊರಟ ಅವಳನ್ನು ಎಲ್ಲರೂ ಪ್ರಶ್ನಾರ್ಥವಾಗಿ ನೋಡಿದ್ದರು. ಅಂದಿನಿಂದ ದುಗುಡ ತುಂಬಿದ ನೀತಾ ಸಂಪೂರ್ಣವಾಗಿ ಬದಲಾಗಿ, ಯಾರೊಡನೆಯೂ ಬೇರೆಯದೇ ತನ್ನ ಕೆಲಸ ಮುಗಿಸಿ ಹೊರಡಲು ಶುರು ಮಾಡಿದಳು. ಉತ್ಸಾಹದ ಚಿಲುಮೆಯಾಗಿದ್ದ ನೀತಾ ಬಾಡಿ ಬಸವಳಿದ ಹೂವಂತೆ ಕಾಣುತ್ತಿದ್ದು ಎಲ್ಲರಿಗೂ ನೋವಾಗಿತ್ತು. ಯಾವುದೇ ಪ್ರತಿಕ್ರಿಯೆ ತೋರದೆ ಇದ್ದದ್ದು ಲಕ್ಷ್ಮಿ ಮಾತ್ರ.
ಇದಾದ ಕೆಲವು ವಾರದ ನಂತರ ಆಫೀಸಿನಲ್ಲಿ ಗುಸುಗುಸು ಶುರುವಾಯಿತು. ನೀತಾಳ ಮೇಲೆ ಯಾರೋ ಅನಾಮಧೇಯ ಪತ್ರ ಬರೆದ ಕಾರಣ ಅವಳ ಮದುವೆ ಮುರಿದುಬಿತ್ತು ಎಂದು ಎಲ್ಲೆಡೆ ಹಬ್ಬಿತು. ಆದರೆ ಯಾರೂ ಅವಳಿಗೆ ಸಂತಾಪ ಸೂಚಿಸಿ, ಸಲಹೆ ನೀಡಿ ಬೆಂಬಲಿಸಲಿಲ್ಲ. ಚುಚ್ಚು ಮಾತುಗಳು, ಅನುಮಾನದ, ಕುಹುಕ ನೋಟಗಳು ಅವಳನ್ನು ಹಿಂಬಾಲಿಸಿದವು. ಒಂದು ಸಂಜೆ, ಇನ್ನೇನು ಎಲ್ಲರೂ ಹೊರಡಬೇಕು ಎನ್ನುವಾಗ ಬಾತ್ರೂಮಿನಿಂದ ಜೋರುಜೋರು ಮಾತುಗಳು, ಕಿರುಚಾಟ ಕೇಳಿಸಿದಾಗ, ಅದು ನೀತಾಳ ದನಿಯೇ ಎಂದರಿವಾದಾಗ ಸುಮಾರು ಜನ ಅಲ್ಲಿಗೆ ಧಾವಿಸಿದರು. ಒಳಹೊಕ್ಕ ಕೆಲವು ಹೆಂಗಸರು ಹುಚ್ಚಿಯಂತೆ ಚೀರುತ್ತಿದ್ದ ನೀತಾ, ಒಂದೂ ಮಾತನಾಡದೆ ನಿಂತಿದ್ದ ಲಕ್ಷ್ಮಿಯನ್ನು ಕಂಡು ದಂಗಾದರು. ಇವರು ಬಂದದ್ದು ಕಂಡು ಅವರಿಬ್ಬರೂ ಹೊರ ನಡೆದರು, ಜತೆಗೆ ಎಲ್ಲರೂ ಚದುರಿದರು.
ಮಾರನೆಯ ದಿನ ಬಾಸ್ ಕಾಬಿನ್ ಗೆ ನೀತಾಳಿಗೆ ಕರೆ ಬಂತು. ಖುರ್ಚಿಯಲ್ಲಿ ಕೂರಿಸಿ ನೀರಿನ ಲೋಟ ಕೈಗಿತ್ತು ಮೆಲ್ಲನೆ ಕೆಮ್ಮಿದರು ಆತ. ತನ್ನಪ್ಪನ ವಯಸ್ಸಿನ ಆತನೆದುರು ಸುಮ್ಮನೆ ಕುಳಿತಿದ್ದಳು ನೀತಾ. ‘ಹೇಗೆ ಹೇಳಬೇಕು ಎಂದು ಗೊತ್ತಾಗುತ್ತಾ ಇಲ್ಲ, ಆದರೆ ನಿನಗೆ ಅರ್ಥವಾಗಿರಬೇಕು, ಅಲ್ವಾ?’ ಅವರ ಮಾತಿಗೆ ನಿಟ್ಟುಸಿರಿಟ್ಟಳು. ‘ಲಕ್ಷ್ಮಿ ನೊಂದ ಹೆಣ್ಣು. ಅವಳ ಬಾಳಿನಲ್ಲಿ ನಡೆದ ಒಂದು ದುರ್ಘಟನೆ ಅವಳಿಗೆ ಬಲವಾದ ಆಘಾತ ನೀಡಿದೆ, ಆದರೆ ನಿನಗೆ ಕೇಡು ಬಯಸುವಂಥವಳಲ್ಲ ಆಕೆ’ ಆತ ಮಾತು ನಿಲ್ಲಿಸಿದಾಗ ಅಲ್ಲಿಂದ ಎದ್ದು ಹೊರಟಳು ನೀತಾ. ಕಣ್ಣಲ್ಲಿ ತುಂಬಿದ ನೀರನ್ನು ಒರೆಸಿಕೊಳ್ಳುತ್ತಾ ನಡೆದ ಅವಳು ಡಿಕ್ಕಿ ಹೊಡೆದದ್ದು ತನ್ನ ಮಾಜಿ ನಿಶ್ಚಿತ ವರನಿಗೆ. ಅನಾಮಧೇಯ ಪತ್ರ ಬಂದ ಮೇಲೆ ನಿಶ್ಚಿತಾರ್ಥ ಮುರಿದ ಆತ ಇಂದು ಬಂದದ್ದು ಕ್ಷಮೆಯಾಚಿಸಲು ಹಾಗೂ ತನ್ನನ್ನೇ ಮದುವೆಗಾಗು ಎಂದು ಕೋರಿಕೊಳ್ಳಲು.
ಇದನ್ನೂ ಓದಿ : ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?
ಅಂದಿನ ದಿನವಿಡೀ ಮಾತು ಕತೆ ಮುಗಿಸಿ ಮರುದಿನ ಕೆಲಸಕ್ಕೆ ಬಂದವಳು ನೀತಾ. ಲಕ್ಷ್ಮಿಯೆಡೆ ಸಾಗಿ ಮೆಲ್ಲನೆ ಕೈ ಅದುಮಿ ಹೊರನಡೆದಳು. ಇದಕ್ಕೆಲ್ಲ ಲಕ್ಷ್ಮಿ ಕಾರಣ, ಸುಖಾಸುಮ್ಮನೆ ಆಕೆಯ ಮೇಲೆ ಸಂಶಯ ಪಟ್ಟೆ, ಆದರೆ ಒಬ್ಬರೂ ಒಳ್ಳೆಯ ಮಾತು ಆಡಲಿಲ್ಲ, ಆಕೆ ಮಾತ್ರ ಬೆಂಬಲಿಸಿದರು, ತನ್ನ ಹುಡುಗನನ್ನು ಭೇಟಿ ಮಾಡಿ ಅವನ ಮನಸ್ಸನ್ನು ಪರಿವರ್ತಿಸಿದರು ಎಂಬರಿವಾದಾಗ ತನ್ನ ಬಗ್ಗೆ ಅವಳಿಗೆ ಬೇಸರವಾಯಿತು. ಇನ್ನು ಮುಂದೆ ಯಾರ ಬಗ್ಗೆಯೂ ಈ ರೀತಿ ಯೋಚಿಸುವುದಿಲ್ಲ ಎಂದು ತೀರ್ಮಾನಿಸಿದವಳ ಮೊಗದಲ್ಲಿ ಹೂವು ಅರಳಿತ್ತು. ಹಿಂದಿನದೆಲ್ಲಾ ಮರೆತು ಹೊಸ ಬದುಕು ಪ್ರಾರಂಭ ಮಾಡಿದ ನೀತಾ, ಮತ್ತೆ ಉತ್ಸಾಹ, ಲವಲವಿಕೆಯ ಚಿಲುಮೆಯಾದಳು.
ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ
Published On - 3:24 pm, Wed, 8 June 22