ಕೊರೊನಾ ಲಾಕ್​ಡೌನ್​ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ; ಮುದ್ದಿನ ಸಾಕುಪ್ರಾಣಿಗಳೀಗ ಮಾಲೀಕರಿಗೆ ಭಾರ

ಎರಡನೇ ಅಲೆಯ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಕೆಲವೆಡೆ ಇಡೀ ಕುಟುಂಬವೇ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಉದ್ಭವವಾಗಿದೆ. ಇಂತಹ ಸಂದಿಗ್ಧತೆ ಏಕಾಂತ ನೀಗಿಸಲೆಂದು ಬಂದ ಸಾಕುಪ್ರಾಣಿಗಳನ್ನು ತಬ್ಬಲಿಯನ್ನಾಗಿಸುತ್ತಿದೆ.

ಕೊರೊನಾ ಲಾಕ್​ಡೌನ್​ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ; ಮುದ್ದಿನ ಸಾಕುಪ್ರಾಣಿಗಳೀಗ ಮಾಲೀಕರಿಗೆ ಭಾರ
ಸಾಂಕೇತಿಕ ಚಿತ್ರ (ಸೌಜನ್ಯ: ಟೈಮ್ಸ್​​ ಸಮೂಹ ಮಾಧ್ಯಮ)

ಬೆಂಗಳೂರು: ಕೊರೊನಾ ಸೋಂಕು ಉಂಟುಮಾಡಿರುವ ಸಮಸ್ಯೆಗಳು ಮನುಷ್ಯನ ಜೀವನದ ಮೇಲೆ ಎಷ್ಟು ದುಷ್ಪರಿಣಾಮ ಬೀರಿವೆಯೋ ಅದೇ ರೀತಿ ಪ್ರಾಣಿಗಳನ್ನೂ ಹೈರಾಣಾಗಿಸಿವೆ. ಅದರಲ್ಲೂ ಎರಡನೇ ಅಲೆ ಉಲ್ಬಣಿಸಿದ ನಂತರ ಕೆಲವೆಡೆ ಸಾಕು ಪ್ರಾಣಿಗಳ ಬದುಕು ಶೋಚನೀಯ ಎನ್ನುವ ಹಂತ ತಲುಪುತ್ತಿದ್ದು, ಅವುಗಳ ಮಾಲೀಕರಿಗಾದ ಉದ್ಯೋಗ ನಷ್ಟ ಹಾಗೂ ಆರ್ಥಿಕ ಹೊಡೆತದ ನೇರ ಪರಿಣಾಮ ಮೂಕ ಪ್ರಾಣಿಗಳ ಮೇಲಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಒಂಡಿತನ ನೀಗಿಸುವುದಕ್ಕೆ ಹಾಗೂ ಸಮಯ ಕಳೆಯುವುದಕ್ಕೆ ಪ್ರಾಣಿಗಳನ್ನು ಸಾಕುವುದು ಉತ್ತಮ ಎಂಬ ನಿಲುವಿಗೆ ಹಲವರು ಬಂದಿದ್ದರು. ಅದರಂತೆ ಬೆಕ್ಕು, ನಾಯಿ, ಹಕ್ಕಿ, ಮೀನುಗಳನ್ನು ಮನೆಗೆ ಬರಮಾಡಿಕೊಂಡಿದ್ದ ಜನ ಅವುಗಳೊಂದಿಗೆ ಕಾಲ ಕಳೆಯುತ್ತಾ ಬೇಸರ ನೀಗಿಸಿಕೊಳ್ಳುತ್ತಿದ್ದರು. ಆದರೆ, ಮೊದಲ ಅಲೆ ತಗ್ಗಿದ ನಂತರ ವ್ಯವಸ್ಥೆ ಸಮರ್ಪಕವಾಗಿ ಚೇತರಿಸಿಕೊಳ್ಳುವುದಕ್ಕೂ ಬಿಡುವು ನೀಡದೆ ಬಂದೆರಗಿದ ಎರಡನೇ ಅಲೆ ಜನರ ಆಲೋಚನೆಗಳು ಮಗ್ಗುಲು ಬದಲಿಸುವಂತೆ ಮಾಡಿದೆ.

ಎರಡನೇ ಅಲೆಯ ಸಂದರ್ಭದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಕೆಲವೆಡೆ ಇಡೀ ಕುಟುಂಬವೇ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಉದ್ಭವವಾಗಿದೆ. ಇಂತಹ ಸಂದಿಗ್ಧತೆಗಳು ಏಕಾಂತ ನೀಗಿಸಲೆಂದು ಬಂದ ಸಾಕುಪ್ರಾಣಿಗಳನ್ನು ತಬ್ಬಲಿಯನ್ನಾಗಿಸುತ್ತಿದ್ದು, ಬೆಂಗಳೂರೊಂದರಲ್ಲೇ ದಿನಕ್ಕೆ ಕನಿಷ್ಟವೆಂದರೂ 10 ಕರೆಗಳು ಇದಕ್ಕೆ ಸಂಬಂಧಪಟ್ಟ ಸಂಸ್ಥೆಗೆ ಬರುತ್ತಿದೆ ಎಂದು ಮಿರರ್ ನೌ ವರದಿ ಮಾಡಿದೆ.

ಹೆಚ್ಚಿನ ಪ್ರಾಣಿಗಳು ಅವುಗಳ ಮಾಲೀಕರು ಕೊರೊನಾದಿಂದ ಆಸ್ಪತ್ರೆಗೆ ಸೇರುತ್ತಿರುವ ಕಾರಣ ಅನಾಥವಾಗುತ್ತಿವೆ. ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟ ನಂತರ ಅನೇಕರು ಪ್ರಾಣಿಗಳ ಬಗ್ಗೆ ಕಾಳಜಿ ವಹಿಸಲು ಬಯಸುತ್ತಿಲ್ಲ. ಈಗಾಗಲೇ ಕೆಲ ನಾಯಿಗಳನ್ನು ರಕ್ಷಿಸಿ ಅವುಗಳಿಗೆ ಹೊಸ ಮನೆಯನ್ನು ಹುಡುಕಲಾಗುತ್ತಿದೆ. ಅಲ್ಲದೇ ಹಸಿವಿನಿಂದ ಒದ್ದಾಡುತ್ತಿರುವ ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಪ್ರಯತ್ನವೂ ಆಗುತ್ತಿದೆ ಎಂದು ಅನಿಮಲ್​ ಟ್ರಸ್ಟ್ ಸ್ಥಾಪಕ ವಿಕಾಶ್ ಬಫ್ನಾ ತಿಳಿಸಿದ್ದಾರೆ.

ಕಳೆದ ವರ್ಷದ ಕೊರೊನಾ ಆರಂಭವಾದಾಗ ಪ್ರಾಣಿ, ಪಕ್ಷಿಗಳಿಂದ ಸೋಂಕು ಹಬ್ಬಬಹುದು ಎಂಬ ಆತಂಕಕ್ಕೆ ಒಳಗಾಗಿದ್ದ ಅನೇಕರು ತಾವು ಸಾಕಿದ ಪ್ರಾಣಿಗಳನ್ನು ದೂರ ಮಾಡಲು ಮುಂದಾಗಿದ್ದರು. ಆದರೆ, ನಾವು ಅವರ ಮನವೊಲಿಸಿ, ಸತ್ಯ ಸಂಗತಿಯನ್ನು ವಿವರಿಸಿ ಅವುಗಳು ಅನಾಥವಾಗದಂತೆ ನೋಡಿಕೊಂಡಿದ್ದೇವೆ. ಈ ಬಾರಿ ಕೆಲವರು ಪ್ರಾಣಿಗಳನ್ನು ಕೊಡುವ ಬಗ್ಗೆ ಮಾತನಾಡಿದಾಗ ನಾವು ಅವರ ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುವ ಯತ್ನ ಮಾಡಿದ್ದೇವೆ. ಸಮಾಧಾನಕರ ಸಂಗತಿಯೆಂದರೆ ನಮ್ಮಿಂದ ಪ್ರಾಣಿಗಳನ್ನು ಕೊಂಡು ಹೋದವರು ಅವುಗಳನ್ನು ದೂರ ಮಾಡಲು ಮುಂದಾಗಿಲ್ಲ ಎಂದು ಕಂಪ್ಯಾಷನ್ ಅನ್​ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಸಿಯುಪಿಎ) ಸಂಸ್ಥೆಯ ಸಂಜನಾ ಮಾದಪ್ಪ ಮಾಹಿತಿ ನೀಡಿದ್ದಾರೆ.

ಸಿಯುಪಿಎ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಅವರು ಈ ಬಾರಿಯ ಲಾಕ್​ಡೌನ್​ನಲ್ಲಿ ಪ್ರತಿದಿನವೂ ಐದು ನಾಯಿಗಳನ್ನಾದರೂ ರಕ್ಷಣೆ ಮಾಡುತ್ತಿದ್ದು, ಇಷ್ಟು ವರ್ಷ ಸಂತಾನೋತ್ಪತ್ತಿಗಾಗಿ ನಾಯಿ ಸಾಕುತ್ತಿದ್ದವರೂ ಈಗ ಅವುಗಳಿಂದ ಪ್ರಯೋಜನವಿಲ್ಲವೆಂದು ದೂರ ಮಾಡುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ:
ಕೊರೊನಾ ಕಾಲದಲ್ಲಿ ಪ್ರಾಣಿಗಳ ನೆರವಿಗೆ ನಿಂತ ಕಾರವಾರದ ಸೇವಾ ಸಂಘ; ಹಸಿದ ಶ್ವಾನಗಳಿಗೆ ಊಟ ನೀಡಿ ಸಹಾಯ 

Viral Video: ಸಾಕಿದ ನಾಯಿಯನ್ನು ರಕ್ಷಿಸಲು ದೈತ್ಯಾಕಾರದ ಕರಡಿಯನ್ನು ತಳ್ಳುತ್ತಿರುವ ಬಾಲಕಿ; ಆಘಾತಕಾರಿ ವಿಡಿಯೋ ವೈರಲ್​