Kargil Vijay Diwas 2022: ಭಾರತದ ಭದ್ರತೆಗೆ ಏಕೀಕೃತ ಮಿಲಿಟರಿ ಕಮಾಂಡ್ ಏಕೆ ಅತ್ಯಗತ್ಯ: ಇಲ್ಲಿದೆ ವಿಸ್ತೃತ ಮಾಹಿತಿ
ಪಾಕಿಸ್ತಾನ ಮತ್ತು ಚೀನಾದಿಂದ ಇರುವ ಅಪಾಯ ಮತ್ತು ಭವಿಷ್ಯದಲ್ಲಿ ಬದಲಾಗಬಹುದಾದ ಯುದ್ಧತಂತ್ರಗಳ ಅರಿತಿರುವ ಭಾರತ ಸರ್ಕಾರವು ಇದೀಗ ಏಕೀಕೃತ ಮಿಲಿಟರಿ ಕಮಾಂಡ್ ರಚನೆ ಪ್ರಕ್ರಿಯೆಗೆ ವೇಗ ನೀಡಲು ಯತ್ನಿಸುತ್ತಿದೆ.
ಭಾರತದಲ್ಲಿ ಏಕೀಕೃತ ಮಿಲಿಟರಿ ಕಮಾಂಡ್ (Integrated Theatre Command) ಸ್ಥಾಪನೆಯಾಗಿ, ಹಾಲಿ ಅಸ್ತಿತ್ವದಲ್ಲಿರುವ ಪ್ರತ್ಯೇಕ ಕಮಾಂಡ್ ವ್ಯವಸ್ಥೆ ಕೊನೆಯಾಗಬೇಕು ಎಂಬ ಮಾತು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಕಾರ್ಗಿಲ್ ಯುದ್ಧದ (Kargil War) ನಂತರ ಸರ್ಕಾರಕ್ಕೆ ಸಲ್ಲಿಕೆಯಾದ ಹಲವು ವರದಿಗಳಲ್ಲಿ ಈ ಅಂಶವು ಮುಖ್ಯವಾಗಿ ಪ್ರಸ್ತಾಪವಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಮಿಲಿಟರಿಯ ಆಧುನೀಕರಣ ಮತ್ತು ಸುಧಾರಣೆಯ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಭಾರತದ ಮೊದಲ ಸಶಸ್ತ್ರಪಡೆಗಳ ಸಿಬ್ಬಂದಿ ಮುಖ್ಯಸ್ಥರಾಗಿ (Chief of Defence Staff – CDS) ನೇಮಕವಾದ ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದ ಆರ್ಥಿಕ ಹಿಂಜರಿತ ಮತ್ತು ಭಾರತದ ಮುರೂ ಸಶಸ್ತ್ರಪಡೆಗಳಲ್ಲಿರುವ ಕೆಲ ಅಭಿಪ್ರಾಯ ಭೇದಗಳು ಈ ಹಿನ್ನಡೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಸೇನಾ ಸುಧಾರಣೆಗೆ ಆಗಲೇಬೇಕಿರುವ ಅತ್ಯಗತ್ಯ ಕಾರ್ಯಗಳಲ್ಲಿ ಅತಿಪ್ರಮುಖವಾದ ಏಕೀಕೃತ ಮಿಲಿಟರಿ ಕಮಾಂಡ್ನ ಅನಿವಾರ್ಯತೆಯನ್ನು ವಿವರಿಸುವ ಪ್ರಯತ್ನ ಈ ಲೇಖನದಲ್ಲಿದೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ (CDS General Bipin Rawat) ಅವರನ್ನು ಸಶಸ್ತ್ರಪಡೆಗಳ ಸಿಬ್ಬಂದಿ ಮುಖ್ಯಸ್ಥರ (Chief of Defence Staff – CDS) ಹುದ್ದೆಗೆ ತಂದಿದ್ದು ಭಾರತದ ಮಿಲಿಟರಿ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಭಾರತದ ಭದ್ರತೆಗೆ ಹೊರಗಿನ ಶಕ್ತಿಗಳಿಂದ ಭವಿಷ್ಯದಲ್ಲಿ ಇರುವ ಆತಂಕಗಳ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದ ಸಿಡಿಎಸ್ ಬಿಪಿನ್ ರಾವತ್ ಏಕೀಕೃತ ಕಮಾಂಡ್ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಅವರು 8ನೇ ಡಿಸೆಂಬರ್ 2021ರಂದು ತಮಿಳುನಾಡಿನ ಕುನೂರು ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟರು. ಈವರೆಗೆ ಸಿಡಿಎಸ್ ಸ್ಥಾನಕ್ಕೆ ಯಾರನ್ನು ತರುವುದು ಎನ್ನುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ಮೂರೂ ಸಶಸ್ತ್ರ ಪಡೆಗಳನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಹುದ್ದೆ ಖಾಲಿ ಇರುವುದರಿಂದ ಸಹಜವಾಗಿಯೇ ಏಕೀಕೃತ ಮಿಲಿಟರಿ ಕಮಾಂಡ್ ರೂಪಿಸುವ ಪ್ರಕ್ರಿಯೆಗೂ ಹಿನ್ನಡೆಯಾಗಿದೆ.
ದಿನದಿಂದ ದಿನಕ್ಕೆ ರಕ್ಷಣಾ ವಿದ್ಯಮಾನ ಬದಲಾಗುತ್ತಿದ್ದು, ಲಡಾಖ್ನ ಗಾಲ್ವಾನ್ ಕಣಿವೆ ವಿಷಯದಲ್ಲಿ ಚೀನಾ ಹಟಮಾರಿ ಧೋರಣೆ ಮುಂದುವರಿಸಿದೆ. ಸೇನಾ ಕಮಾಂಡರ್ಗಳ ಮಟ್ಟದ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗುತ್ತಿಲ್ಲ. ಭಾರತದ ಗಡಿಯಲ್ಲಿ ಅಭಿವೃದ್ಧಿ ಕಾಮಗಾರಿಯ ನೆಪದಲ್ಲಿ ಚೀನಾ ಮಿಲಿಟರಿಗೆ ನಿಯೋಜನೆಗೆ ಬೇಕಿರುವ ವ್ಯವಸ್ಥೆ ರೂಪಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ದೇಶದ ಗಡಿಗೆ ಉತ್ತರ ಮತ್ತು ಈಶಾನ್ಯ ವಲಯದಲ್ಲಿ ಬಲಿಷ್ಠ ಚೀನಾದಿಂದ ಸಂಭಾವ್ಯ ಅಪಾಯದ ಮುನ್ಸೂಚನೆ ಸ್ಪಷ್ಟವಾಗಿ ಸಿಗುತ್ತಿದೆ.
ಅಜರ್ಬೈಜಾನ್ ಮತ್ತು ಅರ್ಮೇನಿಯಾ ಯುದ್ಧದ ನಂತರ ಸೋಲುಗೆಲುವಿನ ವ್ಯಾಖ್ಯಾನವೇ ಬದಲಾಯಿತು. ಸಣ್ಣ ದೇಶವೂ ಅತ್ಯುತ್ತಮ ಮತ್ತು ನಿಖರ ಗುರಿಯ ಶಸ್ತ್ರ ಹೊಂದಿದ್ದರೆ ಶತ್ರುವನ್ನು ಮಣಿಸಲು ಸಾಧ್ಯ ಎಂದು ಅರ್ಮೇನಿಯಾ ಸಾಬೀತುಪಡಿಸಿತು. ಇದೀಗ ನಡೆಯುತ್ತಿರುವ ಉಕ್ರೇನ್-ರಷ್ಯಾ ಸಂಘರ್ಷವೂ ಏಕೀಕೃತ ಕಮಾಂಡ್ ಸ್ಥಾಪನೆಯ ಅಗತ್ಯವನ್ನು ಸಾರಿ ಹೇಳಿದೆ. ಪಾರಂಪರಿಕ ಸೇನಾ ವ್ಯವಸ್ಥೆಯು ಕಾಲಕ್ಕೆ ತಕ್ಕಂತೆ ಬದಲಾಗದಿದ್ದರೆ ಹಿನ್ನಡೆ ಅನುಭವಿಸಬೇಕಾದೀತು ಎಂದು ರಷ್ಯಾ ಸೇನೆಯ ಆಂತರಿಕ ವಿದ್ಯಮಾನವನ್ನು ಗಮನಿಸುತ್ತಿರುವ ಹಲವು ಮಿಲಿಟರಿ ವಿಶ್ಲೇಷಕರು ಭಾರತ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಚೀನಾದಿಂದ ಇರುವ ಅಪಾಯ ಮತ್ತು ಭವಿಷ್ಯದಲ್ಲಿ ಬದಲಾಗಬಹುದಾದ ಯುದ್ಧತಂತ್ರಗಳ ಅರಿತಿರುವ ಭಾರತ ಸರ್ಕಾರವು ಇದೀಗ ಏಕೀಕೃತ ಮಿಲಿಟರಿ ಕಮಾಂಡ್ ರಚನೆ ಪ್ರಕ್ರಿಯೆಗೆ ವೇಗ ನೀಡಲು ಯತ್ನಿಸುತ್ತಿದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾಷಣದಲ್ಲಿ ಸುಳಿವು ಸಿಗುತ್ತಿದೆ.
ರಕ್ಷಣಾ ಸಚಿವರ ಸ್ಪಷ್ಟ ನುಡಿ
ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಜಮ್ಮುವಿನಲ್ಲಿ ನಿನ್ನೆಯಷ್ಟೇ (ಜುಲೈ 24) ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭಾಷಣದಲ್ಲಿ ಭಾರತ ಸರ್ಕಾರದ ಇರಾದೆ ವ್ಯಕ್ತವಾಗಿತ್ತು.
‘ಭವಿಷ್ಯದಲ್ಲಿ ನಡೆಸಬೇಕಾಗುವ ಜಂಟಿ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಜಂಟಿ ಥಿಯೇಟರ್ ಕಮಾಂಡ್‌ಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ. ಈವರೆಗೆ ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಆಮದುದಾರ ಆಗಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಭಾರತವು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ಅಗ್ರ 25 ರಾಷ್ಟ್ರಗಳಲ್ಲಿ ಒಂದಾಗಿದೆ’ ಎಂದು ರಕ್ಷಣಾ ಸಚಿವರು ಹೇಳಿದ್ದರು.
ರಕ್ಷಣಾ ಸಚಿವರು ಏಕೀಕೃತ ಮಿಲಿಟರಿ ಕಮಾಂಡ್ ಕುರಿತು ಮಾತನಾಡಿದ ನಂತರ ಈ ಪ್ರಕ್ರಿಯೆ ಬಗ್ಗೆ ಮತ್ತೆ ದೇಶದಲ್ಲಿ ಕುತೂಹಲ ಗರಿಗೆದರಿದೆ. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಸಂಘಟನೆ ಮತ್ತು ವ್ಯವಸ್ಥೆಗಳನ್ನು ಪುನರ್ ನವೀಕರಣಗೊಳಿಸುವ ಪ್ರಕ್ರಿಯೆಗೆ ಕನಿಷ್ಠ 5 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ವಾಯವ್ಯ ಮತ್ತು ಪಶ್ಚಿಮ ಭಾಗದಲ್ಲಿ ಪಾಕಿಸ್ತಾನ, ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಚೀನಾ ಒಮ್ಮೆಲೆ ದಾಳಿ ಮಾಡಿದರೂ ಅದನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕೆ ಇರಬೇಕು ಎನ್ನುವ ಉದ್ದೇಶದೊಂದಿಗೆ ಮಿಲಿಟರಿ ವ್ಯವಸ್ಥೆಯ ಪುನರ್ ಸಂಘಟನೆ ಪ್ರಯತ್ನಗಳು ನಡೆಯುತ್ತಿವೆ.
ಏನಿದು ಏಕೀಕೃತ ಮಿಲಿಟರಿ ಕಮಾಂಡ್?
ಸರಳವಾಗಿ ಹೇಳುವುದಾದರೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಮಗ್ರ ಸಂಪನ್ಮೂಲಗಳನ್ನು ಒಂದೆಡೆ ಕ್ರೋಡೀಕರಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ತಂತ್ರವಿದು. ಯುದ್ಧೋಪಕರಣ ಮತ್ತು ಮಾನವ ಸಂಪನ್ಮೂಲವೂ ಇದರಲ್ಲಿ ಅಂತರ್ಗತವಾಗಿರುತ್ತದೆ. ಭದ್ರತೆಗೆ ಇರುವ ಆತಂಕಗಳನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಇತರ ಯುದ್ಧೋಪರಣಗಳನ್ನು ನಿಯೋಜಿಸಲಾಗುತ್ತದೆ. ಈ ಕಮಾಂಡ್‌ಗಳನ್ನು ರೂಪಿಸುವಾಗ ಭೌಗೋಳಿಕವಾಗಿ ಅಥವಾ ನಿರ್ದಿಷ್ಟ ಉದ್ದೇಶಗಳನ್ನು ಗಮನದಲ್ಲಿರಿಸಿಕೊಳ್ಳುತ್ತಾರೆ. ಉದಾಹರಣೆಗೆ.. ಒಂದು ದೇಶದ ಗಡಿಯಲ್ಲಿ ಇರುವ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ಒಂದು ಕಮಾಂಡ್ (ಜಿಯೊಗ್ರಾಫಿಕಲ್ ಕಮಾಂಡ್) ರೂಪಿಸಬಹುದು. ಸಾಗರದಿಂದ ಇರುವ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷ ಕಮಾಂಡ್ (ಥಿಮಾಟಿಕ್) ರೂಪಿಸಬಹುದು.
ಥಿಯೇಟರ್ ಕಮಾಂಡ್ ಎನ್ನುವುದು ಹೊಸ ಪರಿಕಲ್ಪನೆಯೇ?
ಇದೇನು ಹೊಸ ಪರಿಕಲ್ಪನೆ ಅಲ್ಲ. ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಈಗಾಗಲೇ ಥಿಯೇಟರ್ ಕಮಾಂಡ್ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿದೆ. ಪಾಕಿಸ್ತಾನದಲ್ಲಿಯೂ ಇಂಥ ಪ್ರಯತ್ನಗಳು ಆರಂಭವಾಗಿವೆ. ಭಾರತದಲ್ಲಿಯೂ ಕಾರ್ಗಿಲ್ ಸಂಘರ್ಷದ ನಂತರ ಥಿಯೇಟರ್ ಕಮಾಂಡ್ ಮಾದರಿಯಲ್ಲಿ ಸಶಸ್ತ್ರಪಡೆಗಳ ಪುನರ್ ಸಂಘಟನೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ಹಂತಗಳ ಸಮಿತಿಗಳು ಈ ಮಾದರಿಯ ಸೇನಾ ಸಂಘಟನೆಗೆ ಶಿಫಾರಸು ಮಾಡಿದ್ದವು.
ಜನವರಿ 2020ರಲ್ಲಿ ಜನರಲ್ ಬಿಪಿನ್ ರಾವತ್ ಅವರನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ ನೇಮಿಸಿದ ನಂತರ ಅವರಿಗೆ ಈ ಸಂಬಂಧ ಮಹತ್ವದ ನಿರ್ದಿಷ್ಟ ಜವಾಬ್ದಾರಿಯೊಂದನ್ನು ನೀಡಲಾಗಿತ್ತು. ‘ಅಧಿಕಾರ ಸ್ವೀಕರಿಸಿದ ಮೂರು ವರ್ಷಗಳ ಒಳಗೆ ಇಂಥ ಕಮಾಂಡ್‌ಗಳನ್ನು ರೂಪಿಸಬೇಕು’ ಎಂದು ಸೂಚಿಸುವ ಮೂಲಕ ಭಾರತ ಸರ್ಕಾರವು ಕೊನೆಗೂ ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿತು. ಅಧಿಕಾರ ಸ್ವೀಕರಿಸಿದ ನಂತರ ಥಿಯೇಟರ್ ಕಮಾಂಡ್ ರೂಪಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಜನರಲ್ ರಾವತ್ ಆದೇಶ ನೀಡಿದ್ದರು. ಕಮಾಂಡ್‌ಗಳನ್ನು ಸಶಸ್ತ್ರಪಡೆಗಳ ಉಪಮುಖ್ಯಸ್ಥರು (ಲೆಫ್ಟಿನೆಂಟ್ ಜನರಲ್ ದರ್ಜೆಯ ಅಧಿಕಾರಿ) ಮುನ್ನಡೆಸಬೇಕು ಎನ್ನುವುದು ಅವರ ಆಶಯವಾಗಿತ್ತು.
ಭಾರತಕ್ಕೆ ಎಷ್ಟು ಕಮಾಂಡ್ ಅಗತ್ಯವಿದೆ?
ಭಾರತದಲ್ಲಿ ನಾಲ್ಕರಿಂದ ಐದು ಏಕೀಕೃತ ಮಿಲಿಟರಿ ಕಮಾಂಡ್ ಅಗತ್ಯವಿದೆ. ಪ್ರತಿ ಕಮಾಂಡ್ ಒಬ್ಬೊಬ್ಬ ಉನ್ನತ ಅಧಿಕಾರಿಯ ನಿಗಾವಣೆಯಲ್ಲಿ ಇರುತ್ತದೆ. ಈ ಥಿಯೇಟರ್ ಕಮಾಂಡರ್ಗಳು ನೇರವಾಗಿ ಚೀಫ್ಸ್ ಆಫ್ ಸ್ಟಾಫ್ ಕಮಿಟಿಗೆ (COSC) ವರದಿ ಮಾಡಿಕೊಳ್ಳುತ್ತಾರೆ. ಈ ಸಮಿತಿಯಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಇರುತ್ತಾರೆ. ಈ ಸಮಿತಿಯ ಶಾಶ್ವತ ಅಧ್ಯಕ್ಷರಾಗಿ ಸಿಡಿಎಸ್ ಕಾರ್ಯನಿರ್ವಹಿಸುತ್ತಾರೆ.
ಇದು ಥಿಯೇಟರ್ ಕಮಾಂಡ್ ಪರಿಕಲ್ಪನೆಯಿಂದ ಆಗುವ ಪ್ರಮುಖ ಬದಲಾವಣೆ. ಪ್ರಸ್ತುತ ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರಿಗೆ ತಮ್ಮ ಪಡೆಗಳ ಕಾರ್ಯಾಚರಣೆಯ ಮೇಲೆ ಸಂಪೂರ್ಣ ನಿಯಂತ್ರಣವಿದೆ. ಥಿಯೇಟರ್ ಕಮಾಂಡ್ ಜಾರಿಗೆ ಬಂದ ನಂತರ ಈ ಅಧಿಕಾರವು ಸಿಒಎಸ್ಸಿಗೆ ಸೇರುತ್ತದೆ. ಪ್ರತಿ ಕಮಾಂಡ್ನಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಮೂರೂ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಯುದ್ಧೋಪಕರಣಗಳು ಹಂಚಿಕೆಯಾಗುತ್ತವೆ. ಈ ಸಂಪನ್ಮೂಲಗಳ ಮೇಲಿನ ಕಾರ್ಯನಿರ್ವಹಣಾ ನಿಯಂತ್ರಣವು ಥಿಯೇಟರ್ ಕಮಾಂಡರ್ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.
ಪ್ರಸ್ತಾಪಿತ ಕಮಾಂಡ್ಗಳು ಯಾವುವು?
ನೌಕಾಪಡೆ ಥಿಯೇಟರ್ ಕಮಾಂಡ್: ದೇಶದ ಸಾಗರ ಸುರಕ್ಷೆಗೆ ಸಂಬಂಧಿಸಿದ ಜವಾಬ್ದಾರಿ ಈ ಕಮಾಂಡ್ಗೆ ಸೇರಿರುತ್ತದೆ. ಪೂರ್ವ ಮತ್ತು ಪಶ್ಚಿಮ ಸಾಗರಗಳಲ್ಲಿ ಪ್ರಸ್ತುತ ಇರುವ ನೌಕಾಪಡೆಯ ಸಂಪನ್ಮೂಲಗಳ ಜೊತೆಗೆ ವಾಯದಾಳಿ ಮತ್ತು ಭೂಸೇನೆಯ ಸಂಪನ್ಮೂಲಗಳನ್ನೂ ಈ ಕಮಾಂಡ್ಗೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ.
ಏರ್ ಡಿಫೆನ್ಸ್ ಕಮಾಂಡ್: ದೇಶದ ಉದ್ದಗಲದ ವಾಯುಗಡಿಯ ರಕ್ಷಣೆ ಏರ್ ಡಿಫೆನ್ಸ್ ಕಮಾಂಡ್ನ ಜವಾಬ್ದಾರಿ. ಫೈಟರ್ ಜೆಟ್ ಮತ್ತು ಸರ್ವೇಕ್ಷಣಾ ವಿಮಾನಗಳ ನಿರ್ವಹಣೆ ಏರ್ ಡಿಫೆನ್ಸ್ ಕಮಾಂಡ್ನ ಉಸ್ತುವಾರಿಯಲ್ಲಿರುತ್ತವೆ.
ಭೌಗೋಳಿಕ ಅಗತ್ಯಕ್ಕೆ ತಕ್ಕ ಕಮಾಂಡ್: ದೇಶದ ಭೂಗಡಿಯ ಕಾವಲು ಮತ್ತು ಭದ್ರತೆಗಾಗಿ ಎರಡು ಅಥವಾ ಮೂರು ಭೂ ಆಧರಿತ ಕಮಾಂಡ್ ರೂಪಿಸಲು ಉದ್ದೇಶಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿ ನಿರ್ವಹಣೆ ಈ ಕಮಾಂಡ್ನ ಮುಖ್ಯ ಉದ್ದೇಶವಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನಲ್ಲಿ ಭದ್ರತಾ ಉಸ್ತುವಾರಿಗೆಂದೇ ಮತ್ತೊಂದು ವಿಶೇಷ ಕಮಾಂಡ್ ರೂಪಿಸುವ ಆಲೋಚನೆಯೂ ರಕ್ಷಣಾ ಇಲಾಖೆಗೆ ಇದೆ. ಈ ಸಂಬಂಧ ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಬೇಕಿದೆ.
ಈ ಥಿಯೇಟರ್ ಕಮಾಂಡ್ಗಳ ಜೊತೆಗೆ ಮೂರೂ ಸಶಸ್ತ್ರ ಪಡೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂಥ ಎರಡು ಪ್ರತ್ಯೇಕ ಟ್ರೈ ಸರ್ವೀಸ್ ಕಮಾಂಡ್ ರೂಪಿಸುವ ಆಲೋಚನೆಯೂ ಇದೆ ಎಂದು ಜನರಲ್ ಬಿಪಿನ್ ರಾವತ್ 2020ರಲ್ಲಿ ಹೇಳಿದ್ದರು. ಇದರ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಸುವ ಲಾಜಿಸ್ಟಿಕ್ ಕಮಾಂಡ್, ತರಬೇತಿ ಕಮಾಂಡ್ಗಳನ್ನೂ ರೂಪಿಸುವ ಸಾಧ್ಯತೆಯಿದೆ.
ಏಕೀಕೃತ ಕಮಾಂಡ್ ಸ್ಥಾಪನೆಯ ನಂತರ ಸಶಸ್ತ್ರಪಡೆಗಳ ಜವಾಬ್ದಾರಿ ಬದಲಾಗುತ್ತದೆಯೇ?
ಒಂದು ನಿರ್ದಿಷ್ಟ ಕಾರ್ಯಾಚರಣೆ ನಡೆಸಬೇಕೆಂದಾಗ ಮೂರೂ ಸಶಸ್ತ್ರ ಪಡೆಗಳು ಪರಸ್ಪರ ಸಮಾಲೋಚಿಸಿ, ನಿರ್ದಿಷ್ಟ ಕಾರ್ಯಾಚರಣೆ ನಡೆಸಬೇಕಿದ್ದರೆ ಪರಸ್ಪರ ಸುಪರ್ದಿಯಲ್ಲಿರುವ ಸಂಪನ್ಮೂಲಗಳನ್ನು ಬಳಸಬೇಕಿದೆ. ಈಗಿರುವ ಪ್ರಸ್ತಾವದಂತೆ ಥಿಯೇಟರ್ ಕಮಾಂಡರ್ ಎಂಬ ಹೊಸಹುದ್ದೆ ರಚನೆಯಾದರೆ ಕಮಾಂಡ್ನ ಅಧೀನದಲ್ಲಿರುವ ಎಲ್ಲ ಸಂಪನ್ಮೂಲಗಳೂ ಈ ಅಧಿಕಾರಿಯ ಸುಪರ್ದಿಯಲ್ಲಿರುತ್ತದೆ. ಇದರಿಂದ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸುವುದು ಸುಲಭವಾಗುತ್ತದೆ. ಒಂದೇ ಕೆಲಸವನ್ನು ಹಲವರು ಮಾಡುವ ಗೋಜಲೂ ಪರಿಹಾರವಾಗುತ್ತದೆ.
ಆದರೆ ಇದರಿಂದ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ತಮ್ಮ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಮೇಲಿರುವ ನೇರ ನಿಯಂತ್ರಣ ಕೈತಪ್ಪುತ್ತದೆ. ಇದರರ್ಥ ಅವರ ಪಾತ್ರ ಅಪ್ರಸ್ತುತವಾಗುತ್ತದೆ ಎಂದಲ್ಲ. ಮುಂದಿನ ದಿನಗಳಲ್ಲಿ ಮುಖ್ಯಸ್ಥರು ಕಾರ್ಯಾಚರಣೆಗಳನ್ನು ರೂಪಿಸುವುದು, ಹೊಸಹೊಸ ಘಟಕಗಳನ್ನು ಬೆಳೆಸುವುದು, ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ತರಬೇತಿ ವ್ಯವಸ್ಥೆ ರೂಪಿಸುವುದು ಮತ್ತು ಯೋಧರ ಹೋರಾಟದ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ಮುಖ್ಯ ಜವಾಬ್ದಾರಿಯಾಗುತ್ತದೆ. ಎಲ್ಲ ಮುಖ್ಯಸ್ಥರೂ ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಸದಸ್ಯರಾಗಿರುತ್ತಾರೆ. ತಮ್ಮ ವಿಭಾಗಗಳಲ್ಲಿ ಪರಿಣಿತರೂ ಆಗಿರುತ್ತಾರೆ. ಹೀಗಾಗಿ ಯಾವುದೇ ಮಹತ್ವದ ಕಾರ್ಯಾಚರಣೆಯಲ್ಲಿ ಇವರ ಪ್ರತಿಕ್ರಿಯೆ ಅತ್ಯಗತ್ಯ ಮತ್ತು ಮೌಲಿಕವಾಗಿರುತ್ತದೆ.
ಚಿಂತನೆ ಬಗ್ಗೆ ಒಮ್ಮತ ಮೂಡಿದೆಯೇ?
ಥಿಯೇಟರ್ ಕಮಾಂಡ್ ರೂಪಿಸುವುದು ಸದ್ಯದ ಅಗತ್ಯ ಎನ್ನುವ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ ಭೂಸೇನೆ ಮತ್ತು ನೌಕಾಪಡೆಗಳು ಈ ಚಿಂತನೆಯ ಬಗ್ಗೆ ಸಹಮತ ವ್ಯಕ್ತಪಡಿಸಿವೆ. ಆದರೆ ವಾಯುಪಡೆ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದೆ.
ವಾಯುಸೇನೆಯ ಸಂಪನ್ಮೂಲಗಳ ಮೇಲೆ ವಾಯುಪಡೆ ಮುಖ್ಯಸ್ಥರಿಗೆ ಇರುವ ಕಾರ್ಯಾಚರಣೆಯ ನಿಯಂತ್ರಣ ಕೈತಪ್ಪಿದಂತೆ ಆಗಬಾರದು ಎಂದು ವಾಯುಪಡೆ ಪ್ರತಿಪಾದಿಸುತ್ತಿದೆ. ಈ ಏಕೀಕೃತ ಥಿಯೇಟರ್ ಕಮಾಂಡ್ಗಳಲ್ಲಿ ವಾಯುಪಡೆಯ ಎಲ್ಲ ಸಂಪನ್ಮೂಲಗಳೂ ಹಂಚಿಕೆಯಾಗಿಬಿಡಬಹುದು ಎಂದು ವಾಯುಸೇನೆ ಅನುಮಾನ ವ್ಯಕ್ತಪಡಿಸುತ್ತಿದೆ.
ಇಂಥ ಅಭಿಪ್ರಾಯಭೇದಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿ ಸಹಮತ ಮೂಡಿಸಲೆಂದೇ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರಿರುವ ಸಮಿತಿಯನ್ನು ರೂಪಿಸಿ, ಆರು ತಿಂಗಳ ಒಳಗೆ ಪ್ರತಿಕ್ರಿಯಿಸಬೇಕು ಎಂದು ನವೆಂಬರ್ 2021ರಲ್ಲಿ ಸೂಚಿಸಲಾಗಿತ್ತು. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಹೇಗೆ ಪ್ರತಿಕ್ರಿಯಿಸಿವೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಸ್ತುತ ಭಾರತದಲ್ಲಿ ಈಗ ಎಷ್ಟು ಕಮಾಂಡ್ಗಳಿವೆ?
ಭಾರತದಲ್ಲಿ ಪ್ರಸ್ತುತ 17 ಕಮಾಂಡ್ಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಭೂಸೇನೆಯು ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ, ಮಧ್ಯಮ, ವಾಯವ್ಯ ಮತ್ತು ಸೇನಾ ತರಬೇತಿ ಕಮಾಂಡ್ ಸೇರಿ ಏಳು ಕಮಾಂಡ್‌ಗಳನ್ನು ನಿರ್ವಹಿಸುತ್ತಿದೆ. ವಾಯುಪಡೆಯು ಏಳು ಕಮಾಂಡ್‌ಗಳನ್ನು ನಿರ್ವಹಿಸುತ್ತಿವೆ. ಪಶ್ಚಿಮ, ಪೂರ್ವ, ದಕ್ಷಿಣ, ವಾಯವ್ಯ, ಕೇಂದ್ರ, ತರಬೇತಿ ಮತ್ತು ನಿರ್ವಹಣಾ ಕಮಾಂಡ್ಗಳು ಇದರಲ್ಲಿ ಸೇರಿವೆ. ನೌಕಾಪಡೆಯು ಮೂರು ಕಮಾಂಡ್‌ಗಳನ್ನು ನಿರ್ವಹಿಸುತ್ತಿದೆ. ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಕಮಾಂಡ್ಗಳು ನೌಕಾಪಡೆಯ ಸುಪರ್ದಿಯಲ್ಲಿವೆ. ಈ ಕಮಾಂಡ್ಗಳು ಒಂದೇ ಪ್ರದೇಶದಲ್ಲಿದ್ದರೂ ಅವು ಜೊತೆಜೊತೆಗೆ ಕೆಲಸ ಮಾಡುತ್ತಿಲ್ಲ. ಅವುಗಳ ಕಾರ್ಯಾಚರಣೆ ಜವಾಬ್ದಾರಿಯು ಸಮಾನವಾಗಿಲ್ಲ ಎನ್ನುವುದು ಉಲ್ಲೇಖಾರ್ಹ ಸಂಗತಿ.
ಪ್ರಸ್ತುತ ನಮ್ಮ ದೇಶದಲ್ಲಿ ಎರಡು ಟ್ರೈ-ಸರ್ವೀಸ್ ಕಮಾಂಡ್ಗಳಿವೆ. ಮೂರೂ ಸಶಸ್ತ್ರ ಪಡೆಗಳ ಅಧಿಕಾರಿಗಳು ಒಬ್ಬರ ನಂತರ ಒಬ್ಬರಂತೆ ಉಸ್ತುವಾರಿ ಜವಾಬ್ದಾರಿ ಹಂಚಿಕೊಳ್ಳುವ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ಎಎನ್ಸಿ) ಟ್ರೈ-ಸರ್ವೀಸ್ ಕಮಾಂಡ್ ಆಶಯದಂತೆ ರೂಪುಗೊಂಡಿದೆ. ಇದರ ಜೊತೆಗೆ ದೇಶದ ಅಣ್ವಸ್ತ್ರಗಳ ನಿರ್ವಹಣೆ ಜವಾಬ್ದಾರಿ ಹೊಂದಿರುವ ಸ್ಟ್ರಾಟಜಿಕ್ ಫೋರ್ಸ್ ಕಮಾಂಡ್ ಸಹ ಟ್ರೈ-ಸರ್ವೀಸ್ ಕಮಾಂಡ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.
Published On - 6:32 am, Tue, 26 July 22